
ಕಲಬುರಗಿ (ಮೇ.26): ಸರ್ಕಾರಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಉಚಿತ ಔಷಧಿ ಕೊಡುತ್ತೀದ್ದೇವೆ. ಹಾಗಾಗಿ ಜನೌಷಧಿ ಕೇಂದ್ರ ಯಾಕೆ ಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ। ಶರಣಪ್ರಕಾಶ ಪಾಟೀಲ್ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತಾಡಿದ ಅವರು, ನನ್ನ ಅವಧಿಯಲ್ಲಿ ಜನೌಷಧಿ ಸೇರಿದಂತೆ ಯಾವುದೇ ಮೆಡಿಕಲ್ ಸ್ಟೋರ್ ಇಡಲು ಅವಕಾಶ ಕೊಟ್ಟಿಲ್ಲ. ಯಾಕಂದರೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಔಷಧಿ ಕೊಡುತ್ತಿದ್ದೇವೆ.
ಜನೌಷಧಿ ಕೇಂದ್ರ ಇದ್ದರೆ ವೈದ್ಯರು ಪ್ರಿಸ್ಕ್ಪ್ರಿಪ್ಷನ್ ಬರೆಯುತ್ತಾರೆ, ಹಾಗಾಗಿ ಜನೌಷಧಿ ಕೇಂದ್ರ ಸೇರಿದಂತೆ ಯಾವುದೇ ಮೆಡಿಕಲ್ ಸ್ಟೋರ್‌ಗೆ ಅವಕಾಶ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ಕೇಂದ್ರ ಸರ್ಕಾರ ಬೇಕಾದರೆ ಸಂಪೂರ್ಣ ಉಚಿತವಾಗಿ ಔಷಧಿ ಕೊಟ್ಟರೆ ನಾನೇ ಸ್ಥಳಾವಕಾಶ ಕಲ್ಪಿಸಿ ಕೊಡುವೆ. ಅವರು ಉಚಿತವಾಗಿ ಕೊಡುತ್ತಿಲ್ಲ. ಕಡಿಮೆ ದರದಲ್ಲಿ ಕೊಡುತ್ತಿದ್ದಾರೆ. ಅದನ್ನು ನಾನು ಸ್ವಾಗತಿಸುವೆ ಎಂದರು. ಅವರು ಬೇರೆ ಮೆಡಿಕಲ್ ಶಾಪ್‌ಗಳ ಜೊತೆ ಸ್ಪರ್ಧೆ ಮಾಡಲಿ. ಸರಕಾರಿ ಆಸ್ಪತ್ರೆಗಳಲ್ಲಿ ನಾವು ಉಚಿತ ಔಷದಿ ಕೊಡುತ್ತಿರುವಾಗ ಜನೌಷಧಿ ಮಳಿಗೆ ಏಕೆ ಬೇಕು? ಎಂದರು.
ನರ್ಸಿಂಗ್ ಶಿಕ್ಷಣ ಇಂದು ಬೇಡಿಕೆಯ ಕ್ಷೇತ್ರವಾಗಿದೆ: ನರ್ಸಿಂಗ್ ಶಿಕ್ಷಣ ಇಂದು ಅತ್ಯಂತ ಬೇಡಿಕೆಯ ಮತ್ತು ಆದ್ಯತೆಯ ಕ್ಷೇತ್ರವಾಗಿ ಮಾರ್ಪಟ್ಟಿದೆ. ಇದರ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು. ಅವರು ಗದಗ ಹೊರವಲಯದಲ್ಲಿರುವ ಭರತ್ ಮೆಘಾ ಸಿಟಿಯಲ್ಲಿ ಸಂಕನೂರ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ನರ್ಸಿಂಗ್ ಕೋರ್ಸ್‌ಗಳಿಗೆ ಇಂದು ಬಹು ಬೇಡಿಕೆ ಇದ್ದು, ನರ್ಸಿಂಗ್ ವಿದ್ಯಾರ್ಥಿಗಳು ವಿದೇಶಿ ಭಾಷೆಗಳ ಜ್ಞಾನವನ್ನು ಹೊಂದಿದ್ದರೆ ವಿದೇಶಗಳಲ್ಲಿಯೂ ಈ ಕೋರ್ಸ್ ಪೂರ್ಣಗೊಳಿಸಿದವರಿಗೆ ಹೆಚ್ಚಿನ ಆದ್ಯತೆ ಇದೆ.
ಭಾರತೀಯ ವೈದ್ಯಕೀಯ ಶಿಕ್ಷಣ ಪಡೆದವರಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ. ಆದ್ದರಿಂದ ವಿದ್ಯಾರ್ಥಿಗಳು ನರ್ಸಿಂಗ್ ಶಿಕ್ಷಣವನ್ನು ಶೃದ್ಧೆಯಿಂದ ಅಧ್ಯಯನ ಮಾಡಬೇಕು ಎಂದರು.ನರ್ಸಿಂಗ್ ಮತ್ತು ವೈದ್ಯಕೀಯ ಕಾಲೇಜ್‌ಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ಅಂತಹ ಕಾಲೇಜಿಗಳ ಮಾನ್ಯತೆಯನ್ನು ರದ್ದುಪಡಿಸಲಾಗುವದು ಎಂದ ಸಚಿವ ಡಾ. ಶರಣಪ್ರಕಾಶ ಪಾಟೀಲ ಸಂಕನೂರ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜ್‌ನ ಅತ್ಯಾಧುನಿಕ ಮೂಲಭೂತ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಪ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಗದಗ ಪರಿಸರಕ್ಕೆ ಸಂಕನೂರ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ನೂತನ ಕಟ್ಟಡ ಮಾದರಿಯಾಗಿದ್ದು, ಇಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ವ್ಯಾಸಂಗ ಮಾಡುವ ಮೂಲಕ ತಮ್ಮ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು. ಮುಖ್ಯ ಅತಿಥಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ ಸಂಕನೂರ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜ್ ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಮಾನ್ಯತೆ ಪಡೆಯುವ ಮೂಲಕ ಮಾದರಿ ಕಾಲೇಜ್ ಆಗಿ ಮುನ್ನಡೆದಿದ್ದು, ಸಕಲ ಮೂಲಭೂತ ಸೌಲಭ್ಯಗಳೊಂದಿಗೆ ಮುಂಚೂಣಿಯಲ್ಲಿದೆ. ದೂರ ದೃಷ್ಟಿಯುಳ್ಳ ವಿಪ ಸದಸ್ಯ ಎಸ್.ವ್ಹಿ. ಸಂಕನೂರ, ಡಾ. ಪ್ರಕಾಶ ಸಂಕನೂರ ಗದಗ ಪರಿಸರಕ್ಕೆ ಒಳ್ಳೆ ಕೊಡುಗೆ ನೀಡಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.