
ಚಿಕ್ಕಬಳ್ಳಾಪುರ (ಮೇ.26): ರಾಜ್ಯ ಕಾಂಗ್ರೆಸ್ ಸರ್ಕಾರ ಹೊಸಪೇಟೆಯಲ್ಲಿ ಎರಡು ವರ್ಷದ ಸಾಧನಾ ಸಮಾವೇಶ ಮಾಡುತ್ತಿದ್ದರೆ ರಾಜಧಾನಿ ಬೆಂಗಳೂರು ನೀರಿನಿಂದ ಮುಳುಗಿ ಜನತೆ ಮಳೆಯ ನೀರಿನಿಂದ ಸಾಕಷ್ಟು ತೊಂದರೆಗೆ ಒಳಗಾಗಿದ್ದರು. ಇತ್ತ ಗಮನ ಹರಿಸದ ಸರ್ಕಾರ ಸಂಭ್ರಮದಲ್ಲಿ ಮುಳುಗಿತ್ತು. ಸಾಧನೆ ಸಮಾವೇಶದ ಹೆಸರಲ್ಲಿ ಜನತೆಯ ವೇದನೆ ಸಮಾವೇಶ ಮಾಡಬಾರದು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಕಳೆದ ಎರಡು ವರ್ಷಗಳ ಕಾಂಗ್ರೆಸ್ ಆಡಳಿತ ರಾಜ್ಯವನ್ನು ಹಿಂದೆಂದೂ ಕಾಣದ ದುಸ್ಥಿತಿಗೆ ದೂಡಿದೆ. ಇದು ಆಡಳಿತ ನಡೆಸುವ ಸರ್ಕಾರವಲ್ಲ, ಕೇವಲ ‘ವಸೂಲಿ ಸರ್ಕಾರ’ವಾಗಿದೆ ಎಂದರು. ರಾಜ್ಯದ ಸಮಗ್ರ ದುಸ್ಥಿತಿಗಾಗಿ ಹೊಸಪೇಟೆಯಲ್ಲಿ ಸಾಧನ ಸಮಾವೇಶ ಮಾಡಿದೆ. ಹಾಲಿನ ದರ ಮೂರು ಬಾರಿ ಹೆಚ್ಚಿಸಿ ಜನತೆಗೆ ಹೊರೆ ಮಾಡಿದೆ. ಹೆಚ್ಚಿಸಿದ ದರವನ್ನು ರೈತರಿಗೆ ನೀಡುವುದಾಗಿ ಹೇಳಿದೆ ಆದರೆ ಇದುವರೆಗೂ ರೈತರಿಗೆ ನೀಡಿಲ್ಲ. ರಾಜ್ಯದಲ್ಲಿ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ನೀಡುತ್ತಿಲ್ಲ ಎಂದರು.
ನಾರಾಯಣಸ್ವಾಮಿಗೆ ದಿಗ್ಬಂಧನ: ಕಲಬುರಗಿ ಸುದ್ದಿಗೋಷ್ಠಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ನಾಯಿಗೆ ಹೋಲಿಕೆ ಮಾಡಿ ಹೇಳಿಕೆ ನೀಡಿದ್ದ ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಚಿತ್ತಾಪುರದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ದಿಗ್ಭಂಧನ ಹಾಕಿರುವ ಪ್ರಸಂಗ ನಡೆದಿದೆ. ಚಿತ್ತಾಪುರದಲ್ಲಿ ಆಪರೇಷನ್ ಸಿಂದೂರ ಬೆಂಬಲಿಸಿ ತಿರಂಗಾ ಯಾತ್ರೆ ನಡೆಯೋದಿತ್ತು. ಅದರಲ್ಲಿ ಪಾಲ್ಗೊಳ್ಳಲು ಛಲವಾದಿ ನಾರಾಯಣಸ್ವಾಮಿಯವರು ಚಿತ್ತಾಪುರಕ್ಕೆ ಭೇಟಿ ನೀಡಿದ್ದರು. ನಾರಾಯಣಸ್ವಾಮಿ ಚಿತ್ತಾಪುರಕ್ಕೆ ಬಂದು ಅಲ್ಲಿನ ಸರಕಾರಿ ಅತಿಥಿ ಗೃಹದಲ್ಲಿ ತಂಗಿದ್ದಾರೆಂದು ಸುದ್ದಿ ಗೊತ್ತಾಗುತ್ತಿದದಂತೆಯೇ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಗುಂಪಾಗಿ ಅಲ್ಲಿಗೆ ಹೋಗಿ ಪ್ರವಾಸಿ ಮಂದಿರ ನುಗ್ಗಲೆತ್ನಿಸಿದರು.
ಪೊಲೀಸರು ಕಾರ್ಯಕರ್ತರನ್ನು ತಡೆದು ಹೊರಗೆ ಹಾಕಿದರಾದರೂ ಅವರೆಲ್ಲರೂ ಅತಿಥಿ ಗೃಹದ ಗೇಟ್ ಮುಂದೆಯೇ ಇದ್ದು, 3 ಗಂಟೆಗೂ ಹೆಚ್ಚುಕಾಲ ಧರಣಿ ನಡೆಸಿದರಲ್ಲದೆ ಛಲವಾದಿ ನಾರಾಣಸ್ವಾಮಿಯವರು ತಿರಂಗಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಅಡಚಣೆ ಒಡ್ಡಿದರು. ನಾರಾಯಣಸ್ವಾಮಿ ಕ್ಷಮೆ ಯಾಚನೆಗೆ ಕಾಂಗ್ರೆಸ್ಸಿಗರು ಪಟ್ಟು ಹಿಡಿದು ಅತಿಥಿ ಗೃಹದ ಮುಂದೆಯೇ ಹೋರಾಟ ನಡೆಸಿದ್ದರಿಂದ ಇದು ಪಟ್ಟಣದಲ್ಲಿರುವ ಬಸ್ ನಿಲ್ದಾಣ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿತ್ತು.
ಬೆಳಗ್ಗೆ ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಛಲವಾದಿ ನಾರಾಯಣಸ್ವಾಮಿಯವರು ಮೋದಿಯವರನ್ನು ಆನೆಗೆ ಹೋಲಿಕೆ ಮಾಡಿ ಸಚಿವ ಪ್ರಿಯಾಂಕ್‌ರನ್ನು ನಾಯಿ ಎಂದು ತೆಗಳಿದ್ದರು. ಅವಕಾಶ ಸಿಕ್ಕಾಗೆಲ್ಲ ಪ್ರಧಾನಿ ಮೋದಿಯವರಿಗೆ ಟೀಕಿಸುವ ಪ್ರಿಯಾಂಕ್ ಚಾಳಿಯನ್ನು ಪ್ರಸ್ತಾಪಿಸುತ್ತ ಛಲವಾದಿ ನಾರಾಯಣಸ್ವಾಮಿ ಆನೆ ಹೋಗುವಾಗ ಶ್ವಾನ ಬೊಗಳುತ್ತದೆ ಎಂದು ಹೇಳಿದಾಗ, ಇಲ್ಲಿ ಆನೆ, ಶ್ವಾನ ಯಾರೆಂಬ ಸುದ್ದಿಗಾರರ ಪ್ರಶ್ನೆಗೆ ಈ ಹೇಳಿಕೆಯಲ್ಲಿನ ಆನೆ ಎಂದರೆ ಪ್ರಧಾನಿ ಮೋದಿಯವರಾಗಿದ್ದಾರೆ, ನಾಯಿ ಎಂದರೆ ಸಚಿವ ಪ್ರಿಯಾಂಕ್ ಖರ್ಗೆ ಎಂದು ನಿಂದಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.