
ವಿಜಯಪುರ(ಫೆ.07): ನಾವು ಜನತಾ ಪರಿವಾರ ತೊರೆದು ಬಿಜೆಪಿ ಸೇರಿರದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ನಾನೂ ಸೇರಿದಂತೆ ಹಲವಾರು ಮಂದಿ ಜನತಾ ಪರಿವಾರದವರು ಜನತಾದಳದಲ್ಲಿಯೇ ಮುಂದುವರಿದಿದ್ದರೆ ಒಂದು ಬಾರಿ ಕಾಂಗ್ರೆಸ್, ಇನ್ನೊಂದು ಸಲ ಜನತಾದಳ ಅಧಿಕಾರಕ್ಕೆ ಬರುತ್ತಿದ್ದವು. ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ಹೇಳಿದರು.
ಬಿಜೆಪಿಯಲ್ಲಿರುವ ಹಿರಿಯರಿಗೆ ರಮೇಶ ಜಿಗಜಿಣಗಿ ಈ ಪಕ್ಷಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುವುದು ಗೊತ್ತಿದೆ. ಆದರೆ ಛೋಟಾ ಮೋಟಾ ಲೀಡರ್ ಅಂದರೆ ಸಣ್ಣ ಪುಟ್ಟ ಲೀಡರ್‌ಗಳು ಜಿಗಜಿಣಗಿ ಕೊಡುಗೆ ಏನು ಎಂದು ಕೇಳುತ್ತಿದ್ದಾರೆ. ನಾನು ನನ್ನ ಕ್ಷೇತ್ರಕ್ಕೆ 1 ಲಕ್ಷ ಕೋಟಿ ಹಣ ತಂದರೂ ಇವರ ಕೊಡುಗೆ ಏನು ಏಂದು ಕೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿರುವ ಎರಡನೇ ಹಂತದ ಹಿರಿಯ ನಾಯಕರು ರಮೇಶ ಜಿಗಜಿಣಗಿ ಕೊಡುಗೆ ಏನು ಎಂದು ಕೇಳುವುದು ಬಹಳ ಸಣ್ಣತನವಾಗುತ್ತದೆ ಎಂದರು.
ಸಂಸದರ ಆಸ್ತಿ ಮೌಲ್ಯ ಏರಿಕೆ: ರಮೇಶ್ ಜಿಗಜಿಗಣಿ ನಂ. 1, ಪಿ.ಸಿ. ಮೋಹನ್ ನಂ. 2..!
2004ರಲ್ಲಿ ರಾಮಕೃಷ್ಣ ಹೆಗಡೆ ಅವರು ತೀರಿ ಹೋದ ಮೇಲೆ ಬಿಜೆಪಿಗೆ ಬಂದ ಮೊಟ್ಟಮೊದಲ ಮನುಷ್ಯ ನಾನೇ. ಅದು ಇಡೀ ರಾಜ್ಯದ ನಮ್ಮ ದಲಿತರು ಬಿಜೆಪಿಗೆ ಯಾಕೆ ಹೋಗುತ್ತೀರಿ? ಅದು ಜಾತಿವಾದಿ ಪಕ್ಷ ಎಂದು ನನ್ನನ್ನು ತೆಗಳಿದರು. ಆದರೂ ನಾನು ಬಿಜೆಪಿ ಸೇರಿದ್ದೇನೆ. ಅಲ್ಲಿಯವರೆಗೆ ದಲಿತರಷ್ಟೇ ಅಲ್ಲ. ಯಾವ ಲಿಂಗಾಯತರು ಬಿಜೆಪಿ ಸೇರಿರಲಿಲ್ಲ. ಎಲ್ಲರೂ ನನ್ನ ಕಡೆಗೆ ನೋಡುತ್ತ ಕುಳಿತಿದ್ದರು. ಅಂದು ನಾವೆಲ್ಲ ಜನತಾ ಪರಿವಾರದಿಂದ ಬಂದವರು. ಅಂದಿನ ದಿನಗಳಲ್ಲಿ ಹೆಗಡೆ, ಪಟೇಲರ ಜೊತೆ ಶಿಷ್ಯನಾಗಿ ಬೆಳೆದವನು ಸುಮ್ಮನಿದ್ದಾನೆ. ನಾವು ಎಲ್ಲಿಗೂ ಹೋಗುವುದು ಬೇಡ ಎಂದು ಇಡೀ ನಮ್ಮ ಜನತಾ ಪರಿವಾರ ಸುಮ್ಮನಿತ್ತು. ಅಂದು ಎಲ್ಲವನ್ನು ಮೀರಿ ನಾನು ಬಿಜೆಪಿಗೆ ಸೇರಿದ್ದು, ದೊಡ್ಡ ಕೊಡುಗೆ ಅಲ್ಲವೆ ಎಂದು ಪ್ರಶ್ನಿಸಿದರು.
ಒಂದು ವೇಳೆ ನಾನು ದೇವೇಗೌಡರ ಪಕ್ಷ ಸೇರಿದ್ದರೆ ಇಂದು ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಹೆಗಡೆ, ಪಟೇಲ ಜೀವಿತಾವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ, ಅನಂತಕುಮಾರ, ಸದಾನಂದಗೌಡ, ಕೆ.ಎಸ್. ಈಶ್ವರಪ್ಪ ರಾಜ್ಯಾದ್ಯಂತ ತಿರುಗಾಡಿ ಚಪ್ಪಲಿ, ಅಂಗಿ ಹರಿದುಕೊಂಡಿದ್ದರೂ ಯಾಕೆ ಅಧಿಕಾರಕ್ಕೆ ಬರಲಿಲ್ಲ ಎಂದು ಕೇಳಿದರು. 2004ರಲ್ಲಿ ಜನತಾದ ಪರಿವಾರದವರು ನಾವು ಬಿಜೆಪಿ ಸೇರಿದಾಗ ಪಕ್ಷ ಅಧಿಕಾರಕ್ಕೆ ಬಂದಿತು ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.
Karnataka Assembly Election 2023: ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯೆ
ಸರ್ಕಾರದಿಂದ ಸ್ವಲ್ಪ ದೂರ ಇದ್ದೇನೆ:
ನಾನು ಸ್ವಲ್ಪ ಸರ್ಕಾರದಿಂದ ದೂರವಿದ್ದೇನೆ. ನನಗೆ ನನ್ನ ಪಕ್ಷದ ಬಗ್ಗೆ ಅಭಿಮಾನವಿದೆ. ಒಂದು ದಿನವೂ ಪಕ್ಷದ ಬಗ್ಗೆ ಕೆಟ್ಟಅಭಿಪ್ರಾಯ, ಕೆಟ್ಟಮಾತನ್ನು ಆಡಿಲ್ಲ. ನನ್ನ ಸಣ್ಣ ಪುಟ್ಟಯಾವುದೇ ಕೆಲಸಗಳು ಆಗಿಲ್ಲ. ಸರ್ಕಾರ ಸರಿಯಾಗಿ ನಡೆದಿಲ್ಲ ಎಂಬ ಕಾರಣಕ್ಕೆ ಸ್ವಲ್ಪ ದೂರವಿದ್ದೇನೆ ಎಂದು ತಿಳಿಸಿದರು.
ಚುನಾವಣೆ ಬಗ್ಗೆ ಏನನ್ನೂ ಹೇಳಲ್ಲ. ಆದರೆ ನನ್ನ ಮನಸು, ಅಂತರಾಳದಲ್ಲಿ ಏನಿದೆ ಅದು ಆಗುತ್ತದೆ. ಅದನ್ನು ಹೇಳಲು ಬರಲ್ಲ ಎಂದು ಒಗಟಿನ ಮೂಲಕ ಮಾತನಾಡಿದರು. ಪಕ್ಷದವರು ಹೇಳಿದರೆ ಮತ್ತೆ ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎಂದೂ ಹೇಳಲು ಮರೆಯಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.