
ಬೆಂಗಳೂರು (ಫೆ.07): ರಾಜ್ಯಾದ್ಯಂತ ಪ್ರಜಾಧ್ವನಿ ಯಾತ್ರೆಗೆ ಸಿಗುತ್ತಿರುವ ಜನಸ್ಪಂದನೆಗೆ ಮಾಧ್ಯಮಗಳ ಕ್ಯಾಮೆರಾಗಳೇ ಸಾಕ್ಷಿ. ನಮಗೆ ಸಿಗುತ್ತಿರುವ ಈ ಜನ ಬೆಂಬಲದಿಂದ ಬಿಜೆಪಿ ಹಾಗೂ ಜೆಡಿಎಸ್‌ನವರಿಗೆ ಭೀತಿ ಎದುರಾಗಿದೆ. ಯಾರ ಟೈರ್ ಪಂಕ್ಚರ್ ಆಗುತ್ತದೆ ಎಂಬುದನ್ನು ಜನರೇ ನಿರ್ಧರಿಸುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಕಾಂಗ್ರೆಸ್ ಬಸ್ ಪಂಕ್ಚರ್ ಆಗಲಿದೆ ಎಂದಿದ್ದಾರೆ. ಯಾರು ಏನೇ ಹೇಳಲಿ ಅಂತಿಮವಾಗಿ ಜನರು ನಿರ್ಧರಿಸುತ್ತಾರೆ.
ಕಾಂಗ್ರೆಸ್ ಸಭೆಗಳಿಗೆ ಜನ ಸೇರುತ್ತಿರುವುದನ್ನು ನೋಡಿ ಅವರೆಲ್ಲಾ ಕಂಗಾಲಾಗಿದ್ದಾರೆ ಎಂದು ಹೇಳಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಿರಂತರ ಪ್ರವಾಸ ವೇಳಾಪಟ್ಟಿನಿಗದಿ ಮಾಡಿಕೊಂಡಿದ್ದಾರೆ. ನಾವು ಹತ್ತಿರದ ಕ್ಷೇತ್ರಗಳಿಗೆ ಬೆಂಗಳೂರಿನಿಂದ ತೆರಳುತ್ತಿದ್ದೇವೆ. ನಾವು ಎಲ್ಲೇ ಹೋದರೂ ನಮಗೆ ಜನರಿಂದ ಸಿಗುತ್ತಿರುವ ಬೆಂಬಲಕ್ಕೆ ಮಾಧ್ಯಮಗಳ ಕ್ಯಾಮೆರಾಗಳು ಸಾಕ್ಷಿ. ನಾವು ಕೊಟ್ಟಮಾತನ್ನು ಉಳಿಸಿಕೊಳ್ಳುವ ಕೆಲಸ ಮಾಡಿದ್ದೇವೆ. ಈಗಲೂ ಜನರಿಗೆ ಗ್ಯಾರಂಟಿ ಯೋಜನೆಗಳ ಭರವಸೆ ನೀಡುತ್ತಿದ್ದು, ನಮ್ಮ ಪಕ್ಷದ ಮೇಲಿನ ನಂಬಿಕೆಯಿಂದ ಜನರು ನಮ್ಮನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲರೂ ಒಗ್ಗಟಾಗಿದ್ದೇವೆ, ಮುನಿಯಪ್ಪ, ಪರಮೇಶ್ವರ್‌ಗೆ ಮುನಿಸಿಲ್ಲ: ಡಿ.ಕೆ.ಶಿವಕುಮಾರ್
ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತದೆ. ಇತ್ತೀಚೆಗೆ ಬಿಜೆಪಿ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಐದು ಸಾವಿರ ಕೋಟಿ ರು. ಘೋಷಣೆ ಮಾಡಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬಹುದಾಗಿತ್ತು. ಮೇಕೆದಾಟು ಯೋಜನೆಗೆ ಅನುಮತಿ ನೀಡಬಹುದಿತ್ತು. ರಾಜ್ಯದ ಬಗ್ಗೆ ಯಾವುದೇ ಬದ್ಧತೆಯಿಲ್ಲ ಎಂದು ಕಿಡಿಕಾರಿದರು.
ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್ ಸ್ಕ್ರೀನಿಂಗ್ ಸಮಿತಿ: ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ವೇಗ ನೀಡಿರುವ ಕಾಂಗ್ರೆಸ್, ಅಭ್ಯರ್ಥಿ ಪಟ್ಟಿಅಂತಿಮಗೊಳಿಸಲು ಎಐಸಿಸಿ ಮಟ್ಟದಲ್ಲಿ ಸ್ಕ್ರೀನಿಂಗ್ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ. ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆಪ್ತರಾಗಿರುವ, ರಾಜಸ್ಥಾನ ಮೂಲದ 73 ವರ್ಷದ ಹಿರಿಯ ರಾಜಕಾರಣಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮೋಹನ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ಸ್ಕ್ರೀನಿಂಗ್ ಸಮಿತಿಯನ್ನು ರಚಿಸಲಾಗಿದೆ.
ಉಳಿದಂತೆ ಒಡಿಶಾ ಮೂಲದ ಸಂಸದ ಸಪ್ತಗಿರಿ ಉಳಕ, ರಾಜಸ್ಥಾನದ ರಾಜ್ಯಸಭೆ ಸದಸ್ಯ ನೀರಜ್ ಡಾಂಗಿ, ಬಿಹಾರದ ಸಂಸದ ಮೊಹಮ್ಮದ್ ಜಾವೇದ್ ಅವರನ್ನು ಸಮಿತಿ ಸದಸ್ಯರನ್ನಾಗಿ ಮಾಡಲಾಗಿದೆ. ಪದನಿಮಿತ್ತ ಸದಸ್ಯರಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ರಾಜ್ಯ ಉಸ್ತುವಾರಿಯಲ್ಲಿರುವ ಎಐಸಿಸಿ ಕಾರ್ಯದರ್ಶಿಗಳನ್ನು ಸೂಚಿಸಲಾಗಿದೆ.
ಒಂದು ಪೋಡಿಗೆ 40 ಸಾವಿರ ಲಂಚ ಕೊಡಬೇಕಿದೆ: ಡಿ.ಕೆ.ಶಿವಕುಮಾರ್ ಕಿಡಿ
ಅಭ್ಯರ್ಥಿಗಳ ಪಟ್ಟಿ ಸಿದ್ಧತೆಗೆ ವೇಗ: ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ನಾಯಕರು ಎರಡು ದಿನಗಳ ಸುದೀರ್ಘ ಪ್ರಹಸನದ ಬಳಿಕ 224 ಕ್ಷೇತ್ರಗಳಿಗೂ ಸಂಭವನೀಯರ ಪಟ್ಟಿಅಂತಿಮಗೊಳಿಸಿದ್ದು, ಎಐಸಿಸಿ ಸ್ಕ್ರೀನಿಂಗ್ ಸಮಿತಿ ರಚನೆ ಬಳಿಕ ಹೈಕಮಾಂಡ್‌ಗೆ ಸಂಭವನೀಯರ ಪಟ್ಟಿರವಾನೆ ಮಾಡಲು ನಿರ್ಧರಿಸಲಾಗಿತ್ತು. ಇದೀಗ ಎಐಸಿಸಿಯು ಸ್ಕ್ರೀನಿಂಗ್ ಸಮಿತಿ ರಚಿಸಿರುವುದರಿಂದ ರಾಜ್ಯ ನಾಯಕರ ಮಟ್ಟದಲ್ಲಿ ಅಂತಿಮಗೊಂಡಿರುವ 224 ಕ್ಷೇತ್ರಗಳ ಸಂಭವನೀಯರ ಪಟ್ಟಿಅಲ್ಲಿಗೆ ರವಾನೆಯಾಗುವ ಸಾಧ್ಯತೆಯಿದೆ. ಈ ಎಲ್ಲಾ ಪ್ರಕ್ರಿಯೆ ಮುಗಿದು ಫೆ.10ರಿಂದ 15ರ ಒಳಗಾಗಿ 120 ರಿಂದ 140 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.