ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆಯನ್ನು ಕಾಲ ಮಿತಿಯೊಳಗೆ ಪೂರ್ಣಗೊಳಿಸಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಹೊಳಲ್ಕೆರೆ (ಮಾ.20): ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆಯನ್ನು ಕಾಲ ಮಿತಿಯೊಳಗೆ ಪೂರ್ಣಗೊಳಿಸಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಹೊಳಲ್ಕೆರೆ ಪಟ್ಟಣದಲ್ಲಿ ಭಾನುವಾರ ರಾಜ್ಯ ಸರ್ಕಾರದ ಫಲಾನುಭವಿಗಳ ಸೌಲಭ್ಯ ಮತ್ತು ಸಲಕರಣೆಗಳ ವಿತರಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕಾಮಗಾರಿ ಪೂರ್ಣಗೊಳಿಸಿ ತಕ್ಷಣ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿ.ಎಸ್.ಯಡಿಯೂರಪ್ಪ ಹಾಗೂ ನಾವೇ ಆಗಮಿಸಿ ಯೋಜನೆ ಲೋಕಾರ್ಪಣೆ ಮಾಡುವುದಾಗಿ ಹೇಳಿದರು.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ವೇಳೆ, ನಾನು ಜಲಸಂಪನ್ಮೂಲ ಸಚಿವನಾಗಿದ್ದ ಸಂದರ್ಭದಲ್ಲಿ, ಅವರು ಕೈಗೊಂಡ ದಿಟ್ಟನಿಲುವಿನಿಂದಾಗಿ, ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಭದ್ರಾ ಮೇಲ್ದಂಡೆ ಯೋಜನೆ ರೂಪಿಸಿ, ಕಾಮಗಾರಿ ಆರಂಭಿಸಲಾಯಿತು. ಕೇಂದ್ರ ಸರ್ಕಾರ ಈ ಯೋಜನೆಗೆ 5300 ಕೋಟಿಗಳ ರು. ಅನುದಾನವ ಬಜೆಟ್‌ನಲ್ಲಿ ಮೀಸಲಿರಿಸಿದೆ. ಮಧ್ಯ ಕರ್ನಾಟಕದ ಜನರ ಭೂಮಿಗೆ ನೀರು ಕೊಟ್ಟು, ಬರದ ಭೂಮಿಯನ್ನು ಹಸಿರಾಗಿಸುವ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ಕಾಫಿ ಬೆಳೆಗಾರರ 10 ಹೆಚ್‌ಪಿವರೆಗಿನ ಪಂಪ್ ಸೆಟ್ಗೆ ಉಚಿತ ವಿದ್ಯುತ್: ಸಿಎಂ ಬೊಮ್ಮಾಯಿ ಘೋಷಣೆ
ಶಾಸಕ ಎಂ.ಚಂದ್ರಪ್ಪ ಪ್ರಾಸ್ತಾವಿಕ ಮಾತನಾಡಿ, ಸರ್ಕಾರ ಪ್ರತಿಯೊಂದು ವಿಚಾರದಲ್ಲಿ ಸಾರ್ವಜನಿಕರ ಅಭಿವೃದ್ಧಿಗಾಗಿ ಕೆಲಸ ಮಾಡಿದೆ. ಈ ಹಿಂದೆ ಬರಗಾಲದಿಂದ ತಾಲೂಕು ನೀರಿನ ಸಮಸ್ಯೆಗೆ ಸಿಲುಕಿತ್ತು. ರೈತರ ತೋಟಗಳು ಒಣಗಿ ಹೋಗುತ್ತಿದ್ದವು. ಸರ್ಕಾರ ಕೆರೆ ಕಟ್ಟೆಗಳು, ಚೆಕ್‌ಡ್ಯಾಮ್, ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣದಿಂದ ಕ್ಷೇತ್ರದಲ್ಲಿ ಜಲ ಸಮೃದ್ಧಿಯಾಗಿದೆ. ಅಂರ್ತಜಲ ಮಟ್ಟದ ಹೆಚ್ಚಳದಿಂದ ರೈತರ ಬವಣೆ ದೂರವಾಗಿದೆ. ಕ್ಷೇತ್ರದಲ್ಲಿ 9 ಸಾವಿರ ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸರ್ಕಾರ ಅಸ್ತಿತ್ವದಲ್ಲಿ ಇರದ ಸೊಸೈಟಿಗಳ ಹೆಸರಿನಲ್ಲಿರುವ ಭೂಮಿಯನ್ನು ಹಿಂಪಡೆದು ಗೇಣಿದಾರಿಗೆ ನೀಡಲು ಹಾಗೂ ಹೊಳಲ್ಕೆರೆ ತಾಲೂಕಿನಲ್ಲಿ 1000 ಎಕರೆಯಲ್ಲಿ ಇಂಡಷ್ಟಿ್ರಯಲ್ ಪಾರ್ಕ್ ಸ್ಥಾಪನೆ ಮಾಡಲು ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಪರಿಷತ್ ಸದಸ್ಯ ರವಿಕುಮಾರ್ ಅವರು ಮಾತನಾಡಿದರು. ವಿಧಾನ ಪರಿಷÜತ್ ಸದಸ್ಯ ಕೆ.ಎಸ್.ನವೀನ್, ಪುರಸಭೆ ಅಧ್ಯಕ್ಷ ಆರ್.ಎ. ಅಶೋಕ್, ಜಿಲ್ಲಾಧಿಕಾರಿ ದಿವ್ಯಾಪ್ರಭು, ಜಿಪಂ. ಸಿಇಓ ಎಂ.ಎಸ್.ದಿವಾಕರ್, ಜಿಲ್ಲಾ ಪೊಲೀಸ್ ವರಿಷ್ಠಾ್ಠಧಿಕಾರಿ ಕೆ.ಪರುಶುರಾಮ್, ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಸೇರಿದಂತೆ ಮತ್ತಿತರರ ಗಣ್ಯಮಾನ್ಯರು ಇದ್ದರು. ತಹಸೀಲ್ದಾರ್ ನಾಗರಾಜ್ ಸ್ವಾಗತಿಸಿದರು.
ಇದಕ್ಕೂ ಮೊದಲು ಸಿಎಂ ಬೊಮ್ಮಾಯಿ ಅವರು ಹೊಳಲ್ಕೆರೆ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪುರಸಭೆ ಕಟ್ಟಡ, ತಾಲೂಕು ಸಾರ್ವಜನಿಕ ಆಸ್ಪತ್ರೆ ಕಟ್ಟಡದ ಉದ್ಘಾಟನೆ ಅಲ್ಲದೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 54 ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಸಮಾರಂಭ ಜರುಗಿದ ವೇದಿಕೆಯ ಬಳಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಶಾಸಕರ ಅನುದಾನದಡಿ ಕಲ್ಪಿಸಲಾಗಿರುವ ಉಚಿತ ಬಸ್‌ಗಳ ಉದ್ಘಾಟನೆ ನೆರವೇರಿಸಿದರು.
ಹೊಳಲ್ಕೆರೆಯಲ್ಲಿ ಅಭಿವೃದ್ಧಿ ಹೊಳೆ: ಹೊಳಲ್ಕೆರೆ ಪಟ್ಟಣದಲ್ಲಿ ಅಭಿವೃದ್ಧಿಯ ಹೊಳೆ ಹರಿದಿದೆ. ಕಳೆದ ನಾಲ್ಕೂ ಮುಕ್ಕಾಲು ವರ್ಷದಲ್ಲಿ 4116 ಕೋಟಿ ರು. ವೆಚ್ಚದಲ್ಲಿ ವಿವಿದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಮಾಡಲಾಗಿದೆ. ಎಂ. ಚಂದ್ರಪ್ಪ ಜನೋಪಯೋಗಿ ಶಾಸಕ, ದಣಿವರಿಯದೆ ಕೆಲಸ ಮಾಡಿದ್ದಾರೆ. ಸರ್ಕಾರಿ ಕಟ್ಟಡಗಳು ಆಧುನಿಕ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಗಿಂತಲೂ ಉತ್ತಮವಾದ ತಾಲೂಕು ಆಸ್ಪತ್ರೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಪುರಸಭೆ ಕಟ್ಟಡ, ಕ್ಷೇತ್ರದ ಎಲ್ಲೆಡೆ ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದಾರೆ ಎಂದರು.
ಸಿಎಂ ವಿರುದ್ಧ ವಿನಯ್ ಕುಲಕರ್ಣಿ ಸ್ಪರ್ಧೆ?: ತವರಲ್ಲೇ ಬೊಮ್ಮಾಯಿ ಕಟ್ಟಲು ಕಾಂಗ್ರೆಸ್ ಪ್ಲ್ಯಾನ್
ರಾಜ್ಯದ 5 ಲಕ್ಷ ಸ್ತ್ರೀ ಸಾಮರ್ಥ್ಯ ಸಂಘಗಳಿಗೆ ಸಹಾಯಧನ ನೀಡಿ, ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಯೋಜನೆ ಈಗಾಗಲೆ ಅನುಷ್ಠಾನಗೊಂಡಿದ್ದು, ಮಾ. 23 ರಂದು ಯುವಕರ ಸಂಘಗಳಿಗೆ ಸುತ್ತುನಿಧಿಯನ್ನು ನೀಡಿ, ಸುಮಾರು 5 ಲಕ್ಷ ಯುವಕರಿಗೆ ಉದ್ಯೋಗ ಕಲ್ಪಿಸುವ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದರು. ಹೊಳಲ್ಕೆರೆ ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿಯೇ ರಾಜ್ಯದ ಅಭಿವೃದ್ಧಿಗೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ 6000 ಕಿಮೀ. ಉದ್ದ ಹೆದ್ದಾರಿ ನಿರ್ಮಿಸಲಾಗಿದೆ. 7100 ಕೋಟಿ ವೆಚ್ಚದಲ್ಲಿ ರೈಲ್ವೇ ಸಂಪರ್ಕ ಅಭಿವೃದ್ಧಿ ಪಡಿಸಲಾಗುತ್ತದೆ. ರೈತರಿಗೆ ನೀರಾವರಿ ಕಲ್ಪಿಸಿಕೊಳ್ಳಲು ಸಬ್ಸಿಡಿ ನೀಡಲಾಗಿದೆ. ಎಸ್‌ಸಿ, ಎಸ್‌ಟಿ ಜನಾಂಗದವರಿಗೆ ಉಚಿತವಾಗಿ 75 ಯುನಿಟ್ ವಿದ್ಯುತ್, ಭೂ ರಹಿತರಿಗೆ ಭೂಮಿ ಖರೀದಿಗೆ ರು.20 ಲಕ್ಷ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.