ಮೋದಿ ಆಯ್ತು, ಈಗ ಅಮಿತ್‌ ಶಾ ಲಿಂಗಾಯತ ದಾಳ

By Kannadaprabha News  |  First Published Mar 4, 2023, 6:14 AM IST

ನಿಜಲಿಂಗಪ್ಪರ ರಾಜಕೀಯ ಜೀವನ ಮುಗಿಸಿದ್ದು ಇಂದಿರಾ, ವೀರೇಂದ್ರ ಪಾಟೀಲ್‌ಗೆ ಅಪಮಾನಿಸಿದ್ದ ರಾಜೀವ್‌ ಗಾಂಧಿ, ಜನಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಅಮಿತ್‌ ಶಾ ವಾಗ್ದಾಳಿ. 


ಬೀದರ್‌/ದೇವನಹಳ್ಳಿ(ಮಾ.04): ಕಾಂಗ್ರೆಸ್‌ ಪಕ್ಷ ಮೊದಲಿನಿಂದಲೂ ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡುತ್ತಾ ಬಂದಿದೆ. ಕಾಂಗ್ರೆಸ್ಸಿನ ಪರಮೋಚ್ಚ ನಾಯಕಿ ಇಂದಿರಾ ಗಾಂಧಿ ಅವರು ರಾಜ್ಯದ ಪ್ರಭಾವಿ ಲಿಂಗಾಯತ ನಾಯಕ ಎಸ್‌.ನಿಜಲಿಂಗಪ್ಪ ಅವರ ರಾಜಕೀಯ ಜೀವನ ಮುಗಿಸಿದರು. ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು ರಾಜ್ಯದ ಮತ್ತೊಬ್ಬ ಲಿಂಗಾಯತ ಮುಖಂಡ ವೀರೇಂದ್ರ ಪಾಟೀಲ್‌ ಅವರನ್ನು ಅವಮಾನಿಸಿದ್ದರು. ಈಗ ರಾಹುಲ್‌ ಬಂದಿದ್ದಾರೆ, ಅವರಿಂದ ಏನು ನಿರೀಕ್ಷಿಸಬಹುದು ಹೇಳಿ ಎಂದು ಬಿಜೆಪಿ ನಂ.2 ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹರಿಹಾಯ್ದಿದ್ದಾರೆ.

ಕಳೆದ ಸೋಮವಾರ ರಾಜ್ಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಲಿಂಗಾಯತ ಸಮುದಾಯದ ಅಗ್ರಗಣ್ಯ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರ ಜನ್ಮದಿನವನ್ನು ಅಭೂತಪೂರ್ವವಾಗಿ ಆಚರಿಸಿದ್ದರು. ಅಲ್ಲದೆ ವೀರೇಂದ್ರ ಪಾಟೀಲ್‌ ಹಾಗೂ ನಿಜಲಿಂಗಪ್ಪ ಅವರಿಗೆ ಕಾಂಗ್ರೆಸ್‌ನಿಂದ ಅವಮಾನವಾಗಿದೆ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಬಿಜೆಪಿ ನಂ.2 ನಾಯಕ ಅಮಿತ್‌ ಶಾ ಅವರೂ ಅದನ್ನೇ ಪುನರುಚ್ಚರಿಸಿದ್ದಾರೆ. ತನ್ಮೂಲಕ ಲಿಂಗಾಯತರನ್ನು ಸೆಳೆಯಲು ದಾಳ ಉರುಳಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

Tap to resize

Latest Videos

ಮಸಾಲಾ ಜಯರಾಮ್‌ರಿಂದ ವೀರಶೈವ ಲಿಂಗಾಯತರ ಕಡೆಗಣನೆ: ಸೋಮಶೇಖರ್‌

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯದ ನಾಲ್ಕೂ ದಿಕ್ಕಿನಿಂದ 8000 ಕಿ.ಮೀ. ಉದ್ದದ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಂಡಿದೆ. ಈಗಾಗಲೇ ಎರಡು ದಿಕ್ಕಿನಿಂದ ಯಾತ್ರೆ ಆರಂಭವಾಗಿದ್ದು, ಉಳಿದ ಎರಡು ಯಾತ್ರೆಗಳಿಗೆ ಬೀದರ್‌ ಜಿಲ್ಲೆಯ ಬಸವ ಕಲ್ಯಾಣ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಆವತಿ ಗ್ರಾಮದಲ್ಲಿ ಅಮಿತ್‌ ಶಾ ಶುಕ್ರವಾರ ಚಾಲನೆ ನೀಡಿದರು. ಬಸವ ಕಲ್ಯಾಣದಲ್ಲಿ ಮಾತನಾಡಿದ ಅವರು, ವೀರೇಂದ್ರ ಪಾಟೀಲ್‌ ಹಾಗೂ ನಿಜಲಿಂಗಪ್ಪ ಅವರಿಗೆ ಕಾಂಗ್ರೆಸ್‌ನಿಂದ ಅನ್ಯಾಯವಾಗಿದೆ ಎಂದು ಹೇಳುವ ಮೂಲಕ ಲಿಂಗಾಯತರಿಗೆ ಹಳೆಯ ಘಟನೆಗಳನ್ನು ನೆನಪಿಸಲು ಯತ್ನಿಸಿದರು.

ಮೋದಿ ನಡೆ ಮಾದರಿ:

ಬಸವಣ್ಣನ ಕರ್ಮಭೂಮಿ, ಬಸವಕಲ್ಯಾಣದ ಥೇರ್‌ ಮೈದಾನದಲ್ಲಿ ಶುಕ್ರವಾರ ಬೆಳಗ್ಗೆ ಬಿಜೆಪಿಯ 3ನೇ ‘ವಿಜಯ ಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಿ ಮಾತನಾಡಿದ ಶಾ, ಬಿಜೆಪಿಯಲ್ಲಿ ಹಿರಿಯರನ್ನು ಮೂಲೆಗುಂಪು ಮಾಡದೆ ಗೌರವಿಸುವ ಪರಿಪಾಠವಿದೆ. ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಪಕ್ಷದ ಹಿರಿಯ ಮುಖಂಡ, ಬಿ.ಎಸ್‌.ಯಡಿಯೂರಪ್ಪ ಅವರನ್ನು ಗೌರವಿಸಿ, ಸನ್ಮಾನಿಸಿದ ಪ್ರಧಾನಿ ನರೇಂದ್ರ ಮೋದಿಯವರ ನಡೆ ಎಲ್ಲರಿಗೂ ಮಾದರಿ. ಇದನ್ನು ಇತರ ಪಕ್ಷಗಳು ನೋಡಿ ಕಲಿಯಬೇಕು ಎನ್ನುವ ಮೂಲಕ ಲಿಂಗಾಯತ ಮತ ಬ್ಯಾಂಕ್‌ ಮನವೊಲಿಸುವ ಯತ್ನ ನಡೆಸಿದರು.

ಶಾ ಮಿಂಚಿನ ಸಂಚಾರ:

ಬೆಳಗ್ಗೆ 11.10ಕ್ಕೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಬೀದರ್‌ನ ವಾಯು ನೆಲೆಗೆ ಆಗಮಿಸಿದ ಶಾ, ನೇರವಾಗಿ ಪವಿತ್ರ ಗುರುದ್ವಾರಕ್ಕೆ ಭೇಟಿ ನೀಡಿದರು. ಗುರುದ್ವಾರ ಪ್ರಬಂಧಕ ಕಮಿಟಿ ಅಧ್ಯಕ್ಷ ಸರದಾರ ಬಲಬೀರ್‌ಸಿಂಗ್‌ ಅವರು ಬಿದ್ರಿ ಕಲೆಯಲ್ಲಿ ಮಾಡಿದ ಬೀದರ್‌ ಗುರುದ್ವಾರದ ಭಾವಚಿತ್ರವನ್ನು ಕಾಣಿಕೆಯಾಗಿ ನೀಡಿ, ಶಾರನ್ನು ಸನ್ಮಾನಿಸಿದರು. ಬಳಿಕ, ಬಸವಕಲ್ಯಾಣಕ್ಕೆ ತೆರಳಿ, ಅನುಭವ ಮಂಟಪದಲ್ಲಿ ಮಠಾಧೀಶರ ಜೊತೆ ಸಂವಾದ ನಡೆಸಿದರು. ಈ ವೇಳೆ, ಏಪ್ರಿಲ್‌ 23ರಂದು ಆಚರಿಸುವ ಬಸವ ಜಯಂತಿಯನ್ನು ಕೇಂದ್ರ ಸರಕಾರದಿಂದ ಆಚರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಬಸವಕಲ್ಯಾಣ ನಗರವನ್ನು ಅಂತಾರಾಷ್ಟ್ರೀಯ ಪ್ರೇಕ್ಷಣಿಯ ಸ್ಥಳವನ್ನಾಗಿ ಘೋಷಣೆ ಮಾಡಬೇಕು ಎಂದು ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಶಾಗೆ ಮನವಿ ಮಾಡಿದರು. ಇದಕ್ಕೆ ಶಾ ಅವರು ಸಹಮತ ಸೂಚಿಸಿದರು.

ನಂತರ, ಬಸವಕಲ್ಯಾಣದ ಥೇರ್‌ ಮೈದಾನದಲ್ಲಿ 3ನೇ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದರು. ಈ ವೇಳೆ, ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು 5 ಕೆಜಿ ತೂಕದ ಬೆಳ್ಳಿಯ ಕಿರೀಟ ಹಾಗೂ ಗದೆ ನೀಡಿ ಸನ್ಮಾನಿಸಿದರು. ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ, ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಇನ್ನಿತರ ಪ್ರಮುಖರು ಈ ವೇಳೆ ಹಾಜರಿದ್ದರು.

70 ಕ್ಷೇತ್ರದ ಟಿಕೆಟ್‌ಗೆ ಕಾಂಗ್ರೆಸ್‌ ಲಿಂಗಾಯತ ನಾಯಕರ ಬೇಡಿಕೆ

ಬಳಿಕ, ಬೆಂಗಳೂರಿಗೆ ಆಗಮಿಸಿದ ಶಾ, ನಾಡಪ್ರಭು ಕೆಂಪೇಗೌಡರ ಹುಟ್ಟೂರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಆವತಿಯಲ್ಲಿ ಬಿಜೆಪಿಯ 4ನೇ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದರು. ನಂತರ, ಆವತಿ ಗ್ರಾಮದಲ್ಲಿ ರಣಬೈರೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಚೆನ್ನಕೇಶವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ, ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ನಿರ್ಭಯಾ ನಿಧಿಯಡಿ ನಗರ ಸುರಕ್ಷತಾ ಯೋಜನೆಯಡಿ ಆರಂಭಿಸಿರುವ ನೂತನ ಕಮಾಂಡ್‌ ಸೆಂಟರ್‌ ಹಾಗೂ 400ಕ್ಕೂ ಹೆಚ್ಚಿನ ಹೊಸ ಗಸ್ತು ವಾಹನಗಳ ಸೇವೆಗೆ ಹಸಿರು ನಿಶಾನೆ ತೋರಿದರು.

ಕಾಂಗ್ರೆಸ್‌ನಲ್ಲಿ ನಾಯಕ ಯಾರೆಂದು ಹೇಳಲಿ

ಕಾಂಗ್ರೆಸ್‌ ಅಧ್ಯಕ್ಷರು ಈಗ ಸಿಎಂ ರೇಸ್‌ಗೆ ಬರಲು ಆಗುವುದಿಲ್ಲ. ಹೀಗಾಗಿ ಅವರಿಗೆ ಪುತ್ರನ ಮೇಲೆ ವ್ಯಾಮೋಹ ಬಂದಿದೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರು ಸಿಎಂ ಕುರ್ಚಿಗೆ ಟವೆಲ್‌ ಹಾಕಿದ್ದಾರೆ. ಕಾಂಗ್ರೆಸ್‌ನಲ್ಲಿ ಇನ್ನೂ 10 ಜನ ಸಿಎಂ ಆಗಲು ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷ ಮೊದಲು ತನ್ನ ನಾಯಕ ಯಾರು ಎಂಬುದನ್ನು ಜನತೆಗೆ ಸ್ಪಷ್ಟಪಡಿಸಲಿ ಅಂತ ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ. 

click me!