
ಮಂಜುನಾಥ.ಕೆ.ಎಂ
ಬಳ್ಳಾರಿ (ಜ.24): ಜೀವದ ಗೆಳೆಯರಾಗಿದ್ದ ಗಳಸ್ಯ-ಕಂಠಸ್ಯ ಎಂದೇ ಬಿಂಬಿತರಾಗಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಹಾಗೂ ಶಾಸಕ ಜನಾರ್ದನ ರೆಡ್ಡಿ ನಡುವಿನ ಮುಸುಕಿನ ಗುದ್ದಾಟ ಈಗಿನದಲ್ಲ. ಕಳೆದ ಮೂರು ವರ್ಷಗಳಿಂದಲೂ ಇಬ್ಬರ ನಡುವೆ ಶೀತಲ ಸಮರ ನಡೆದಿದೆಯಾದರೂ ಎಲ್ಲೂ ಸ್ಫೋಟಗೊಂಡಿರಲಿಲ್ಲ. ಆದರೆ, ಸಂಡೂರು ಉಪಚುನಾವಣೆಯಲ್ಲಿ ಆಪ್ತಮಿತ್ರರ ನಡುವಿನ ಅಸಮಾಧಾನ ಹೊರ ಬಿದ್ದಿದೆ. ಇಬ್ಬರೂ ಏಕವಚನದಲ್ಲಿ ಸಂಬೋಧಿಸುವ ಮಟ್ಟಿಗೆ ಬೆಳೆದು ನಿಂತಿದೆ. ರೆಡ್ಡಿ-ರಾಮುಲು ನಡುವಿನ ರಾಜಕೀಯ ಹಿಡಿತಕ್ಕಾಗಿನ ಜಿದ್ದಾಜಿದ್ದಿ ಇತ್ತೀಚಿನ ಬೆಳವಣಿಗೆಯಾದರೂ ಈ ಹಿಂದಿನಿಂದಲೂ ಇಬ್ಬರ ನಡುವಿನ ಆಸ್ತಿ ವಿವಾದವೇ ಇಷ್ಟೆಲ್ಲ ಬೆಳವಣಿಗೆ ಕಾರಣ ಎನ್ನಲಾಗಿದೆ.
ರಾಜಕೀಯಕ್ಕಿಂತಲೂ ರಾಜಕೀಯೇತರ ಕೆಲ ಬೆಳವಣಿಗೆಗಳು ಇಬ್ಬರ ನಡುವೆ ಮನಸು ಮುರಿಯಲು ಪ್ರಮುಖ ಕಾರಣವೂ ಆಗಿದೆ. ನಗರದಲ್ಲಿನ ಸುಮಾರು 90 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ನೂತನ ಕಾಲನಿಯಲ್ಲಿ ಪಾಲುದಾರಿಕೆ ವಿಚಾರದಲ್ಲಿ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಜೊತೆ ವಿರಸ ಉಂಟಾಗಿತ್ತು. ಆದರೆ, ಈ ವಿಚಾರ ಮುನ್ನೆಲೆಗೆ ಬಂದಿರಲಿಲ್ಲ. ಈ ಬೆಳವಣಿಗೆ ಬಳಿಕ ರೆಡ್ಡಿ ಹಾಗೂ ಶ್ರೀರಾಮುಲು ಮೇಲ್ನೋಟಕ್ಕೆ ಆತ್ಮೀಯರಾಗಿದ್ದಾರೆ ಎಂದು ಕಂಡು ಬಂದರೂ ಮೊದಲಿನ ಸ್ನೇಹ ಉಳಿದಿರಲಿಲ್ಲ. ಪರಸ್ಪರ ಅವಿಶ್ವಾಸ ಉಂಟಾಗಿತ್ತು, ನಂಬಿಕೆ ಮುರಿದು ಬಿದ್ದಿತ್ತು.
ಜನಾರ್ದನ ರೆಡ್ಡಿ ಕಲ್ಯಾಣರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದಾಗ ಶ್ರೀರಾಮುಲು ಅವರು ರೆಡ್ಡಿಯನ್ನು ಹಿಂಬಾಲಿಸದೆ ಬಿಜೆಪಿಯಲ್ಲಿಯೇ ಉಳಿದರು. ಜನಾರ್ದನ ರೆಡ್ಡಿ ಸಹೋದರ ಜಿ.ಸೋಮಶೇಖರ ರೆಡ್ಡಿ ಸಹ ಸಹೋದರನ ಪಕ್ಷಕ್ಕೆ ತೆರಳದೆ ಬಿಜೆಪಿಯಲ್ಲಿಯೇ ಗುರುತಿಸಿಕೊಂಡರು. ರೆಡ್ಡಿಗೆ ಈ ಬಗ್ಗೆ ಬೇಸರವಿತ್ತು. ಶ್ರೀರಾಮುಲು ಪಕ್ಷಕ್ಕೆ ಬಂದಿದ್ದರೆ ದೊಡ್ಡ ಶಕ್ತಿಯಾಗುತ್ತಿತ್ತು ಎಂದುಕೊಂಡಿದ್ದ ರೆಡ್ಡಿಗೆ ಹಿನ್ನಡೆಯಾಯಿತು. ಬಳಿಕ, ಶ್ರೀರಾಮುಲು ಎರಡು ಚುನಾವಣೆಯಲ್ಲಿ ಸೋಲುಣ್ಣಲು ಜನಾರ್ದನ ರೆಡ್ಡಿ ನಡುವಿನ ವಿರಸ ಕಾರಣ ಎಂಬ ಮಾತು ಚಾಲ್ತಿಗೆ ಬಂತು. ಸಂಡೂರು ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದ ಶ್ರೀರಾಮುಲುಗೆ ಟಿಕೆಟ್ ಸಿಗಲಿಲ್ಲ. ಜನಾರ್ದನ ರೆಡ್ಡಿ ಬಂಗಾರು ಹನುಮಂತುಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾದರು. ಇದು ಶ್ರೀರಾಮುಲುಗೆ ತೀವ್ರ ಬೇಸರಕ್ಕೆ ಕಾರಣವಾಯಿತು. ರಾಜಕೀಯವಾಗಿ ಜಿಲ್ಲೆಯ ಹಿಡಿತ ಸಾಧಿಸುವ ಸಂಬಂಧ ಇಬ್ಬರ ನಡುವೆ ಈ ಹಿಂದೆ ಎಂದೂ ಪೈಪೋಟಿ ಏರ್ಪಟ್ಟಿಲ್ಲ. ಆದರೆ, ವ್ಯಾವಹಾರಿಕವಾಗಿ ಆಗಿರುವ ಅಸಮಾಧಾನಗಳು ರಾಜಕೀಯಕ್ಕೂ ತಂದು ನಿಲ್ಲಿಸಿದೆ.
ರೌಡಿ ರಾಮುಲುನ ರಕ್ಷಣೆ ಮಾಡಿದ್ದೇ ನಾನು ಎಸಗಿದ ದ್ರೋಹ: ರೆಡ್ಡಿ ಸಿಡಿಲು
ಜನಾರ್ದನ ರೆಡ್ಡಿಯವರ ಧೋರಣೆಯಿಂದಾಗಿಯೇ ಬಳ್ಳಾರಿಯಲ್ಲಿ ಬಿಜೆಪಿ ಈ ಪರಿಸ್ಥಿತಿಗೆ ಬಂದಿದೆ. ರೆಡ್ಡಿಯಿಂದಲೇ ಸಂಡೂರು ಉಪ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಸೋಲಾಗಿದೆ. ಕಾರ್ಯಕರ್ತರನ್ನು ಬೆಳೆಸಿ, ಬಿಜೆಪಿಯನ್ನು ಉಳಿಸುವಂತೆ ಹೈಕಮಾಂಡ್‌ಗೆ ಒತ್ತಾಯ ಮಾಡುತ್ತಿದ್ದೇನೆ.
- ಕೆ.ಎ.ರಾಮಲಿಂಗಪ್ಪ, ಬಿಜೆಪಿ ಹಿರಿಯ ಮುಖಂಡ, ಬಳ್ಳಾರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.