ರೌಡಿ ರಾಮುಲುನ ರಕ್ಷಣೆ ಮಾಡಿದ್ದೇ ನಾನು ಎಸಗಿದ ದ್ರೋಹ: ರೆಡ್ಡಿ ಸಿಡಿಲು

Published : Jan 24, 2025, 05:00 AM IST
ರೌಡಿ ರಾಮುಲುನ ರಕ್ಷಣೆ ಮಾಡಿದ್ದೇ ನಾನು ಎಸಗಿದ ದ್ರೋಹ: ರೆಡ್ಡಿ ಸಿಡಿಲು

ಸಾರಾಂಶ

'ರಾಮಾಯಣ, ಮಹಾಭಾರತ, ಪುರಾಣದ ಕಥೆಗಳನ್ನು ಹೇಳಿ ಸನ್ಮಾರ್ಗದಲ್ಲಿ ಬೆಳೆಸಿ ಈ ಮಟ್ಟಕ್ಕೆ ತಂದೆವು. ಇಂಥವರನ್ನು ನೋಡಿಯೇ ಹಾಲು ಕುಡಿದ ಹೆತ್ತ ತಾಯಿ ಎದೆಗೆ ಒದೆಯೋ ಮಗ ಎಂಬ ಗಾದೆ ಮಾತು ಹುಟ್ಟಿಕೊಂಡಿದೆ ಅನಿಸುತ್ತಿದೆ' ಎಂದೂ ಅವರು ತೀಕ್ಷ್ಯವಾಗಿ ಹೇಳಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ 

ಬೆಂಗಳೂರು(ಜ.24):  'ಒಂದು ಕಾಲದಲ್ಲಿ ವಿರೋಧಿಗಳ ಕೊಲೆ ಮಾಡಲು ರೌಡಿಗಳ ಜತೆ ಸೇರಿ ಹೊರಟಿದ್ದ ಶ್ರೀರಾಮುಲುಗೆ ಬುದ್ದಿವಾದ ಹೇಳಿ ತಾಯಿ ತನ್ನ ಮಗುವನ್ನು ಬೆಳಸುವಂತೆ ಸನ್ಮಾರ್ಗದಲ್ಲಿ ಕರೆತಂದು ಈ ಮಟ್ಟಕ್ಕೆ ಬೆಳೆಸಿದ್ದೇನೆ. ಇದೇ ನಾನು ಮಾಡಿದ ದ್ರೋಹ. ಪಕ್ಷದ ಹೈಕಮಾಂಡ್‌ಗೆ ಅವರ ವಿರುದ್ಧ ಚಾಡಿ ಹೇಳುವ ಜಾಯಮಾನ ನನ್ನದಲ್ಲ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ತನ್ಮೂಲಕ ವರಿಷ್ಠರಿಗೆ ರೆಡ್ಡಿ ಚಾಡಿ ಹೇಳಿದ್ದಾರೆಂಬ ರಾಮುಲು ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

'ರಾಮಾಯಣ, ಮಹಾಭಾರತ, ಪುರಾಣದ ಕಥೆಗಳನ್ನು ಹೇಳಿ ಸನ್ಮಾರ್ಗದಲ್ಲಿ ಬೆಳೆಸಿ ಈ ಮಟ್ಟಕ್ಕೆ ತಂದೆವು. ಇಂಥವರನ್ನು ನೋಡಿಯೇ ಹಾಲು ಕುಡಿದ ಹೆತ್ತ ತಾಯಿ ಎದೆಗೆ ಒದೆಯೋ ಮಗ ಎಂಬ ಗಾದೆ ಮಾತು ಹುಟ್ಟಿಕೊಂಡಿದೆ ಅನಿಸುತ್ತಿದೆ' ಎಂದೂ ಅವರು ತೀಕ್ಷ್ಯವಾಗಿ ಹೇಳಿದ್ದಾರೆ.

ಕಾಂಗ್ರೆಸ್‌ನಲ್ಲಿ ಸತೀಶ್ ಜಾರಕಿಹೊಳಿ ಪರ್ಯಾಯವಾಗಿ ಶ್ರೀರಾಮುಲು ಬೆಳೆಸಲು ಡಿಕೆಶಿ ಸಂಚು; ಜನಾರ್ಧನ ರೆಡ್ಡಿ

ಅಲ್ಲದೆ, 'ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಮಣಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಅವರು ವಾಲ್ಮೀಕಿ ಜನಾಂಗದ ಶ್ರೀರಾಮುಲು ಅವರನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿಗಳು ಬಳ್ಳಾರಿ ಭಾಗದಲ್ಲಿ ಹರಿದಾಡುತ್ತಿವೆ' ಎಂದೂ ರೆಡ್ಡಿ ಬಾಂಬ್ ಸಿಡಿಸಿದ್ದಾರೆ. 

ಪಕ್ಷ ಬಿಡುವುದು ಅಥವಾ ಇರುವುದು ಅವರ ವೈಯಕ್ತಿಕ. ಪಕ್ಷದಿಂದ ಹೋಗುವುದಾದರೆ ಹೋಗಲಿ. ಆದರೆ, ನನ್ನ ಮೇಲೆ ಇಲ್ಲ ಸಲ್ಲದ ನಿರಾಧಾರ ಆರೋಪ ಮಾಡುವುದು ಏಕೆ? 40 ವರ್ಷದಿಂದ ನಾನು ಮಾಡಿದ ಸಹಾಯ ಮರೆತು ಮಾತನಾಡುವುದು ಎಷ್ಟು ಎಂದು ಕೇಳಿದ್ದಾರೆ. 

ಗುರುವಾರ ಸುದೀರ್ಘ ಸುದ್ದಿಗೋಷ್ಠಿ ಉದ್ದೇಶಿಸಿಮಾತನಾಡಿದ ಅವರು, ಸಂಡೂರು ವಿಧಾನಸಭೆ ಉಪಚುನಾವಣೆಯಲ್ಲಿ ಪಕ್ಷದ ನಾಯಕರು ಬಂಗಾರು ಹನುಮಂತು ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದರು. ಬಂಗಾರು ಹನುಮಂತುಗೆ ನಾನು ಟಿಕೆಟ್ ಕೊಡಿಸಿಲ್ಲ. ಪಕ್ಷದ ರಾಜ್ಯ ಹಾಗೂ ರಾಷ್ಟ್ರದ ನಾಯಕರ ಆದೇಶದ ಮೇರೆಗೆ ನಾನು ಬಂಗಾರು ಪರ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಮೂರು ದಿನಗಳ ಕಾಲ ತಡವಾಗಿ ಬಂದ ಶ್ರೀರಾಮುಲು ಸಹ ನನ್ನೊಟ್ಟಿಗೆ ಪ್ರಚಾರ ಮಾಡಿದ್ದಾರೆ ಎಂದರು.

ಬಂಗಾರು ಹನುಮಂತ ಸೋಲಿಗೆ ಹಲವು ಕಾರಣಗಳು ಇರಬಹುದು. ಮುಖ್ಯಮಂತ್ರಿಗಳೇ ಕ್ಷೇತ್ರದಲ್ಲಿ ಕುಳಿತು ಪಂಚಾಯಿತಿ ಮಟ್ಟದಲ್ಲಿ ಪ್ರಚಾರ ಮಾಡಿ, ಸಾಕಷ್ಟು ಹಣಖರ್ಚುಮಾಡಿದ್ದರ ಪರಿಣಾಮ ಬಿಜೆಪಿ ಅಭ್ಯರ್ಥಿಗೆ ಸೋಲಾಯಿತು. ಬಂಗಾರು ಹನುಮಂತು ಪಕ್ಷದ ಆಯ್ಕೆ. ಬಿಜೆಪಿ ಪಕ್ಷಕ್ಕೆ ಇಂಟೆಲಿಜೆನ್ಸ್‌ ರಿಪೋರ್ಟ್‌ ಇರು ಇದೆ. ಸೋಲಿನ ಪರಾಮರ್ಶೆಗೆ ಡಿ.ವಿ.ಸದಾನಂದಗೌಡ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಆ ಸಮಿತಿ ಕ್ಷೇತ್ರಕ್ಕೆ ತೆರಳಿ ಕಾರ್ಯಕರ್ತರ, ಮುಖಂಡರ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡಿದೆ. ಸಂಡೂರಿಗೆ ಸೋಲಿನ ಕಾರಣ ಆ ವರದಿಯಲ್ಲಿದೆ ಎಂದರು. 

ಶ್ರೀರಾಮುಲು ಸಾಕ್ಸ್‌ನಲ್ಲಿ ಚಾಕು, ಬೆನ್ನಲ್ಲಿ ಕೊಡಲಿ: ಈಗ ಶ್ರೀರಾಮುಲು ನೀಡುತ್ತಿರುವ ಹೇಳಿಕೆ ನೋಡಿದರೆ ನನಗೆ ಬಹಳ ನೋವಾಗಿದೆ. ಇದಕ್ಕೆ ಕಾರಣ ಬಹಳಷ್ಟಿದೆ. ಚಿಕ್ಕ ಹುಡುಗನಿಂದ ನಾನು ಶ್ರೀರಾಮುಲುನನ್ನು ನೋಡಿದ್ದೇನೆ. 1991ರಲ್ಲಿ ಶ್ರೀರಾಮುಲು ಅವರ ಸೋದರ ಮಾವನ ಭೀಕರ ಕೊಲೆಯಾಯಿತು. ಈ ಸಂದರ್ಭದಲ್ಲಿ ಶ್ರೀರಾಮುಲು ತಮ್ಮ ಶೂ ಸಾಕ್ಸ್‌ನಲ್ಲಿ ಎರಡು ಚಾಕು, ಕೈಗಳಲ್ಲಿ ಎರಡು ಚಾಕು, ಬೆನ್ನ ಹಿಂದೆ ಕೊಡಲಿ ಸಿಕ್ಕಿಸಿಕೊಂಡು ಸುತ್ತ 10-20 ರೌಡಿಗಳ ಗುಂಪು ಕಟ್ಟಿಕೊಂಡು ಓಡಾಡುತ್ತಿದ್ದರು. ಏಕೆಂದರೆ, ವಿರೋಧಿಗಳ ಎರಡನೇ ಟಾರ್ಗೆಟ್ ಶ್ರೀರಾಮುಲೇ ಆಗಿದ್ದರು. ಇಂತಹ ಸಂದರ್ಭದಲ್ಲಿ ಶ್ರೀರಾಮುಲು ಆಶ್ರಯ ಕೇಳಿಕೊಂಡು ನನ್ನ ಬಳಿ ಬಂದರು. ಇಬ್ಬರ ಸಾಮಾನ್ಯ ಸ್ನೇಹಿತರು ಶ್ರೀರಾಮುಲು ಅವರನ್ನು ಕಾಪಾಡುವಂತೆ ನನಗೆ ಹೇಳಿದರು ಎಂದು ರೆಡ್ಡಿ ವಿವರಿಸಿದರು. 

ಈ ವೇಳೆ ನನ್ನ ತಾಯಿ ನಿಮ್ಮನ್ನು ನಂಬಿ ಶ್ರೀರಾಮುಲು ಬಂದಿದ್ದಾನೆ. ಒಳ್ಳೆಯ ಹುಡುಗ, ನೀವು ಕೈ ಬಿಟ್ಟರೆ ಪ್ರಾಣ ಹೋಗುತ್ತದೆ. ಹೀಗಾಗಿ ಕಾಪಾಡಿಕೊಂಡು ಹೋಗಿ ಎಂದು ಹೇಳಿದ್ದರು. ಅದರಂತೆ ನಾವು ಶ್ರೀರಾಮಲು ಪರ ನಿಂತೆವು ಎಂದು ಶ್ರೀರಾಮುಲು ಸ್ನೇಹದ ಆರಂಭಿಕ ದಿನಗಳನ್ನು ನೆನೆಪಿಸಿಕೊಂಡರು. ಸನ್ಮಾರ್ಗದಲ್ಲಿ ತಂದಿದ್ದೇದ್ರೋಹ, ಅನ್ಯಾಯ ಅಲ್ಲವೇ? ಸೋದರ ಮಾವನ ಸಾಯಿಸಿದವರನ್ನು ನಾನೇ ಸಾಯಿಸುತ್ತೇನೆ ಎಂದು ಒಂದು ದಿನ ಶ್ರೀರಾಮುಲು ನನ್ನ ಬಳಿ ಬಂದಿದ್ದರು. ಈ ವೇಳೆ ನಾನು ಅಪರಾಧದಲ್ಲಿ ಒಮ್ಮೆ ಭಾಗಿಯಾದರೆ ಏನೆಲ್ಲಾ ಸಮಸ್ಯೆಗಳಾಗುತ್ತವೆ ಎಂದು ಬುದ್ದಿವಾದ ಹೇಳಿದ್ದೆ. ರಾಮಾಯಣ, ಮಹಾಭಾರತ, ಪುರಾಣದ ಕಥೆಗಳನ್ನು ಹೇಳಿ ಸನ್ಮಾರ್ಗದಲ್ಲಿ ನಡೆಯುವಂತೆ ಸೂಚಿಸಿದೆ. 

ವಿರೋಧಿಗಳ ಮುಂದೆ ಆನೆ ರೀತಿ ಬೆಳೆಯಬೇಕು ಎಂದು ಹೇಳಿದ್ದೆ. ಪಾಪ-ಕರ್ಮ ಭಗವಂತ ನೋಡಿಕೊಳ್ಳುತ್ತಾನೆ ಎಂದು ಬುದ್ಧಿವಾದ ಹೇಳಿ ಆತನನ್ನು ಸನ್ಮಾರ್ಗದಲ್ಲಿ ಬೆಳೆಸಿ ಈ ಮಟ್ಟಕ್ಕೆ ತಂದೆವು. ಇದು ನಾನು ಶ್ರೀರಾಮುಲುಗೆ ಮಾಡಿದ ದ್ರೋಹ, ಅನ್ಯಾಯ ಅಲ್ಲವೇ ಎಂದು ಜನಾರ್ದನ ರೆಡ್ಡಿ ಪ್ರಶ್ನಿಸಿದರು. 

ಮೊಳಕಾಲ್ಲೂರಿನಲ್ಲಿ ಗೆಲ್ಲಿಸಿದ್ದು ನಾನು: 

2018ರಲ್ಲಿ ನಡೆದ ಚುನಾವಣೆಯಲ್ಲಿ ಶ್ರೀರಾಮುಲು ಬಾದಾಮಿ ಮತ್ತು ಮೊಳಕಾಲ್ಲೂರು ಕ್ಷೇತ್ರದಲ್ಲಿ ಸ್ಪರ್ಧಿಸಿದರು. ಹಾಲಿ ಶಾಸಕ ತಿಪ್ಪೇಸ್ವಾಮಿಗೆ ಟಿಕೆಟ್ ತಪ್ಪಿಸಿ ಮೊಳಕಾಲ್ಲೂರಲ್ಲಿ ಶ್ರೀರಾಮುಲುಗೆ ಟಿಕೆಟ್ ನೀಡಿದ್ದರಿಂದ ಅವರ ಮೇಲೆ ದಾಳಿ ಮಾಡಿದರು. ಚಪ್ಪಲಿ, ಕಲ್ಲು ತೂರಿದರು. ವಿಚಾರ ಗೊತ್ತಾಗಿ ತಕ್ಷಣ ಮೊಳಕಾಲ್ಲೂರಿಗೆ ತೆರಳಿ ಪರಿಸ್ಥಿತಿ ನಿಯಂತ್ರಿಸಿದೆ. ಕೇವಲ ನಾಮಪತ್ರ ಸಲ್ಲಿಸಿ ಹೋದ ಶ್ರೀರಾಮುಲು ಗೆದ್ದ ಬಳಿಕ ಪ್ರಮಾಣಪತ್ರ ಪಡೆಯಲು ಚಿತ್ರದುರ್ಗಕ್ಕೆ ಬಂದರು. ನಾನು ಕ್ಷೇತ್ರದಲ್ಲಿ ಕುಳಿತು ಕೆಲಸ ಮಾಡಿ 45 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದೆ. ಇದು ನಾನು ಅವನಿಗೆ ಮಾಡಿದ ಮತ್ತೊಂದು ದ್ರೋಹ ಅಲ್ಲವೇ ಎಂದು ಮಾತಿನಿಂದ ತಿವಿದರು. 

40 ವರ್ಷದ ಜೀವನ ಆಧರಿಸಿ ವೆಬ್ ಸೀರಿಸ್: ನಾನು ಬಡ ಕುಟುಂಬದಲ್ಲೇ ಹುಟ್ಟಿ ಬೆಳೆದವನು. ಪ್ರತಿಯೊಂದು ಸ್ವಅನುಭ ವದಿಂದಲೇ ಅನುಭವ ಪಡೆದಿದ್ದೇನೆ. ನನ್ನ 40 ವರ್ಷದ ಕಥೆಯನ್ನು 40 ನಿಮಿಷ ಅಥವಾ 4 ಗಂಟೆಗಳಲ್ಲಿ ಹೇಳೋದು ಕಷ್ಟ, ಇನ್ನ ಇಡೀ ಜೀವನ ಆಧರಿಸಿ ದೊಡ್ಡ ಸಂಸ್ಥೆಯೊಂದು ವೆಟ್ ಸೀರಿಸ್ ನಿರ್ಮಿಸುತ್ತಿದೆ. ಈಗ ನನ್ನ ಜೀವನದ ಎರಡನೇ ಹಂತ ನಿರ್ಮಿಸುತ್ತಿದ್ದಾರೆ. ನನ್ನ ಜೀವನ ಹೇಳಲು ಸೀಸನ್‌ ಗಳೇ ಬೇಕು ಎಂದು ಜನಾರ್ದನ ರೆಡ್ಡಿ ಹೇಳಿದರು.

ಶ್ರೀರಾಮುಲು ವಿರುದ್ಧ ನೇರಾ ನೇರ ಕದನಕ್ಕೆ ಇಳಿದ ರೆಡ್ಡಿ! | Janardhana Reddy VS Sriramulu | Suvarna News

ಮಂತ್ರಿ ಮಾಡಿದ್ದು ದ್ರೋಹವೇ? 

ನಂತರ 2004ರ ಚುನಾವಣೆಯಲ್ಲಿ ಶ್ರೀರಾಮುಲು ಗೆದ್ದು ಶಾಸಕರಾದರು. ಸಮ್ಮಿಶ್ರ ಸರ್ಕಾರದಲ್ಲಿ ಯಡಿಯೂರಪ್ಪನೀವು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಎಂದುನನಗೆ ಹೇಳಿದರು. ಆಗ ನಾನು ವ್ಯಾಪಾರದಲ್ಲಿ ಇದ್ದೇನೆ. ಮಂತ್ರಿಯಾದರೆ ಕೆಲಸ ಮಾಡುವುದು ಕಷ್ಟ. ವಾಲ್ಮೀಕಿ ಜನಾಂಗದ ಶ್ರೀರಾಮುಲು ಅವರನ್ನು ಮಂತ್ರಿ ಮಾಡಿ. ಇದರಿಂದ ಬಿಜೆಪಿಗೆ ಅನುಕೂಲವಾಗುತ್ತದೆ ಎಂದು ಹೇಳಿ ಮಂತ್ರಿ ಮಾಡಿಸಿದ್ದೆ. ಇದು ನಾನು ಶ್ರೀರಾಮುಲುಗೆ ಮಾಡಿದ ಮತ್ತೊಂದು ದ್ರೋಹ ಅಲ್ಲವೇ ಎಂದು ಪ್ರಶ್ನಿಸಿದರು.

ಕಳೆದ 14 ವರ್ಷಗಳಲ್ಲಿ ಶ್ರೀರಾಮುಲು ತುಂಬಾ ಮೈ ಮೇಲೆ ಎಳೆದುಕೊಂಡಿದ್ದಾರೆ. ಆಸ್ತಿ ದ್ರೋಹ. ನಂಬಿಕೆ ದ್ರೋಹ, ಸ್ವಾಮಿ ದ್ರೋಹ ಮಾಡಿದ್ದಾನಾ ಎಂಬುದು ಮುಂದೆ ಗೊತ್ತಾಗಲಿದೆ. ತನಿಖಾ ಸಂಸ್ಥೆಗಳು ತನಿಖೆ ಮಾಡಿದರೆ ವರ್ಷಗಳು ಸಾಲುವುದಿಲ್ಲ. ಸಮಯ ಬಂದಾಗ ನಾನೇ ಹೇಳುವೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ತಿಳಿಸಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ