* ಜಗತ್ತಿನ ವಿಚಾರಗಳನ್ನು ತೀರ್ಮಾನ ಮಾಡುವ ಹಂತದಲ್ಲಿ ಭಾರತ
* ಜಗತ್ತಿನ ಬೇರೆ ಬೇರೆ ರಾಷ್ಟ್ರದ ನಾಯಕರು ಮೋದಿ ಭೇಟಿಗೆ ಬರುತ್ತಿದ್ದಾರೆ
* ಈಗಾಗಲೇ ಮೋದಿ ಜತೆ ಸಮಾಲೋಚನೆ ನಡೆಸಿದ 17 ಪ್ರಮುಖ ರಾಷ್ಟ್ರದ ನಾಯಕರು
ಹೊಸಪೇಟೆ(ಏ.17): ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರುವ ಮುನ್ನ ಭಾರತ(India) ಸಾಮಾನ್ಯ ದೇಶವಾಗಿತ್ತು. ಆದರೆ ಇದೀಗ ಇಡೀ ಜಗತ್ತೇ ಭಾರತದತ್ತ ನೋಡುವಂತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್(BL Santosh) ಹೇಳಿದರು.
ಬಿಜೆಪಿ(BJP) ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಅದಕ್ಕೆ ಮೋದಿ(Narendra Modi) ನಾಯಕತ್ವ ಕಾರಣ ಎಂದರು. ಉಕ್ರೇನ್ ಮತ್ತು ರಷ್ಯಾ ಯುದ್ಧ(Russia-Ukraine War) ನಡೆಯುವಾಗ ಉಕ್ರೇನ್ ಪ್ರಧಾನಿ ಹಾಗೂ ರಷ್ಯಾ ಅಧ್ಯಕ್ಷ ಪ್ರಧಾನಿ ಮೋದಿ ಜತೆ ಮಾತನಾಡಿದರು. ಬೇರೆ ಯಾವ ರಾಷ್ಟ್ರದ ನಾಯಕರ ಜತೆಯೂ ಉಭಯ ದೇಶದ ನಾಯಕರು ಮಾತನಾಡಿಲ್ಲ. ಜಗತ್ತಿನ ವಿಚಾರಗಳನ್ನು ತೀರ್ಮಾನ ಮಾಡುವ ಹಂತದಲ್ಲಿ ಈಗ ಭಾರತ ಇದೆ ಎಂದರೆ ಭಾರತದ ಶಕ್ತಿ ಏನೆಂಬುದು ಸಾಬೀತಾಗುತ್ತದೆ ಎಂದರು.
undefined
ಬಿಜೆಪಿ ಕಾರ್ಯಕಾರಣಿ ಸಭೆಯ ಮೊದಲ ದಿನದ ಸಂಪೂರ್ಣ ಮಾಹಿತಿ
ಜಗತ್ತಿನ ಬೇರೆ ಬೇರೆ ರಾಷ್ಟ್ರದ ನಾಯಕರು ಮೋದಿ ಭೇಟಿಗೆ ಬರುತ್ತಿದ್ದಾರೆ. ಈಗಾಗಲೇ 17 ಪ್ರಮುಖ ರಾಷ್ಟ್ರದ ನಾಯಕರು ಮೋದಿ ಜತೆ ಸಮಾಲೋಚನೆ ಮಾಡಿದ್ದಾರೆ. ಇನ್ನು ಐದು ದೇಶದ ನಾಯಕರು ಸಮಯ ಕೇಳಿದ್ದಾರೆ. ಇದು ದೇಶದ ನಾಯಕತ್ವಕ್ಕೆ ಇರುವ ಗೌರವ. ಇದು ನಮ್ಮ ನೀತಿಯ ಫಲಿತಾಂಶ ಎಂದು ಕೇಂದ್ರ ಸರ್ಕಾರದ(Central Government) ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಕೆಂಪುಕೋಟೆಗೆ ಮುತ್ತಿಗೆ ಹಾಕಿ ಬೇರೆ ಬಾವುಟ ಹಾರಿಸಿದಾಗ ಯಾಕೆ ಗೋಲಿಬಾರ್ ಮಾಡಲಿಲ್ಲ ಎಂದು ನನಗೂ ಅನಿಸಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ(Amit Shah) ಗೋಲಿಬಾರ್ ಮಾಡುವ ಗೋಜಿಗೆ ಹೋಗಲಿಲ್ಲ ಎಂದರು. ಈಶಾನ್ಯ ರಾಜ್ಯಗಳಿಗೆ ಈ ಹಿಂದಿನ ಪ್ರಧಾನಿಗಳು ಹೋಗಿಯೇ ಇರಲಿಲ್ಲ. ನೆಹರು ಮಾತ್ರ ಹೋಗಿರಬಹುದು. ಆದರೆ ಮೋದಿ 57 ಬಾರಿ ಭೇಟಿ ನೀಡಿದ್ದಾರೆ. ಜೈ ಶ್ರೀರಾಮ ಘೋಷಣೆ ಕೂಗುವ ಮಟ್ಟಕ್ಕೆ ಅಲ್ಲಿನ ವಾತಾವರಣ ಬದಲಾಗಿದೆ ಎಂದರು.
ಇಂದು ಹೊಸಪೇಟೆಗೆ ಜೆ.ಪಿ.ನಡ್ಡಾ ಬಿಜೆಪಿ ರಾಜ್ಯ ಕಾರ್ಯಕಾರಣಿಯ ಸಮಾರೋಪದಲ್ಲಿ ಭಾಗಿ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda) ಅವರು ಹೊಸಪೇಟೆಯಲ್ಲಿ(Hosapete) ನಡೆಯುತ್ತಿರುವ ಪಕ್ಷದ ರಾಜ್ಯ ಕಾರ್ಯಕಾರಿಣಿಯ ಸಮಾರೋಪ ಸಮಾರಂಭದಲ್ಲಿ ಭಾನುವಾರ ಪಾಲ್ಗೊಳ್ಳಲಿದ್ದಾರೆ. ಈ ಮೊದಲು ನಡ್ಡಾ ಅವರು ಶನಿವಾರ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭಕ್ಕೆ ಆಗಮಿಸುವುದು ನಿಗದಿಯಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಬದಲಾವಣೆಯಾಗಿದೆ.
ಭಾನುವಾರ ಬೆಳಗ್ಗೆ 11.30ಕ್ಕೆ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು ಮಧ್ಯಾಹ್ನ 12.30ಕ್ಕೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯುತ್ತಿರುವ ಕಾರ್ಯಕಾರಿಣಿ ಸಭೆಯ ಸ್ಥಳ ತಲುಪಲಿದ್ದಾರೆ. ಸಮಾರೋಪ ಸಮಾರಂಭ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
Vijayanagara: ಬಿಜೆಪಿ ಕಾರ್ಯಕಾರಿಣಿಗೆ ಹಂಪಿ ಗತ ವೈಭವದ ವೇದಿಕೆ: ಕೇಸರಿಮಯವಾದ ಹೊಸಪೇಟೆ
ಸೋಮವಾರ ಹಂಪಿ ವೀಕ್ಷಣೆ:
ಮರುದಿನ ಸೋಮವಾರ ಬೆಳಗ್ಗೆ 6.30ಕ್ಕೆ ನಡ್ಡಾ ಅವರು ಹಂಪಿಯಲ್ಲಿನ(Hampi) ವಿರೂಪಾಕ್ಷೇಶ್ವರ ದೇವಾಲಯ ಮತ್ತು ಪುಷ್ಕರಣಿ, ಈಶೋಟೋಪಾಧ್ಯಾಯ ಗೋಪುರಗಳನ್ನು ವೀಕ್ಷಣೆ ಮಾಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಯಂತ್ರೋಧಾರಕ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ. ಬಳಿಕ ದೇವಾಲಯದಿಂದ ಏಳು ಕಿ.ಮೀ. ದೂರದಲ್ಲಿರುವ ಕಡಲೆಕಾಳು ಗಣಪ, ಸಾಸುವೆಕಾಳು ಗಣಪ, ಉಗ್ರ ನರಸಿಂಹ, ಬಡವಿಲಿಂಗ ಮತ್ತು ಉಗ್ರಾಣ ವೀರಭದ್ರ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.
ಶ್ರೀರಾಮನು ಆಂಜನೇಯನನ್ನು ಭೇಟಿ ಮಾಡಿದ ಸ್ಥಳವಾದ ಪ್ರಸಿದ್ಧ ಮಾಲ್ಯವಂತ ಪರ್ವತಕ್ಕೆ ತೆರಳಲಿದ್ದಾರೆ. ಪದ್ಮಾಸನಭಂಗಿಯಲ್ಲಿರುವ ವಿಶ್ವದ ಏಕೈಕ ರಾಮನ ಪ್ರತಿಮೆಯೂ ಅಲ್ಲಿದೆ. ವಿಜಯ ವಿಠ್ಠಲ ದೇವಾಲಯಕ್ಕೆ ತೆರಳಿ ದರ್ಶನ ಪಡೆಯುವುದರ ಜತೆಗೆ ಕಲ್ಲಿನ ರಥ ಮತ್ತು ವಿಸ್ಮಯಕಾರಿ ಸಂಗೀತ ಸ್ತಂಭಗಳನ್ನು ವೀಕ್ಷಿಸಲಿದ್ದಾರೆ. ಮಧ್ಯಾಹ್ನ ಕಮಲಾಪುರ ಪುರಾತತ್ವ ವಸ್ತು ಸಂಗ್ರಹಾಲಯಕ್ಕೆ ಬೇಟಿ ನೀಡಲಿದ್ದಾರೆ. ಸಂಜೆ ಮಹಾನವಮಿ ದಿಬ್ಬ, ವಿಜಯನಗರ ಅರಮನೆ, ಮೆಟ್ಟಿಲು ಬಾವಿ ಸೇರಿದಂತೆ ಇತರೆ ಗತವೈಭವದ ಸ್ಥಳಗಳಿಗೆ ತೆರಳಿ ವೀಕ್ಷಿಸಿ ವಾಪಸಾಗಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.