ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿ, ಶಿಕ್ಷಣ, ನೀರು ಹಾಗೂ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಹೆಚ್ಚಿನ ಆದ್ಯತೆ ನೀಡಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಪ್ರಮುಖ ಉದ್ದೇಶವಾಗಿದೆ ಎಂದು ಗುಂಡ್ಲುಪೇಟೆ ಕ್ಷೇತ್ರದ ನೂತನ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಹೇಳಿದರು.
ಚಾಮರಾಜನಗರ (ಜೂ.04): ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿ, ಶಿಕ್ಷಣ, ನೀರು ಹಾಗೂ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಹೆಚ್ಚಿನ ಆದ್ಯತೆ ನೀಡಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಪ್ರಮುಖ ಉದ್ದೇಶವಾಗಿದೆ ಎಂದು ಗುಂಡ್ಲುಪೇಟೆ ಕ್ಷೇತ್ರದ ನೂತನ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಹೇಳಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕ್ಷೇತ್ರದ ಜನ ನನ್ನ ಮೇಲೆ ಆಪಾರ ನಿರೀಕ್ಷೆ ಇಟ್ಟು ಮೊದಲ ಬಾರಿ ಸ್ಪಧಿರ್ಸಿದ್ದ ನನಗೆ ಭಾರಿ ಬಹುಮತ ನೀಡಿ ಗೆಲ್ಲಿಸಿದ್ದಾರೆ ಅವರ ನಿರೀಕ್ಷೆಗೆ ಚ್ಯುತಿ ಬರದಂತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ನಾನು ರಾಜಕೀಯಕ್ಕೆ ಬರಬೇಕೆಂದು ಅಪೇಕ್ಷೆ ಪಟ್ಟವನಲ್ಲ, ತಂದೆ ಎಚ್.ಎಸ್. ಮಹದೇವಪ್ರಸಾದ್ ಅವರ ಅಕಾಲಿಕ ಮರಣ, ತಾಯಿ ಗೀತಾ ಮಹದೇವಪ್ರಸಾದ್ ಅವರ ಅನಾರೋಗ್ಯದ ಕಾರಣ ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬರಬೇಕಾಯಿತು. ಜೊತೆಗೆ ಕ್ಷೇತ್ರದ ಮತದಾರರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದರಿಂದ, ಉದ್ಯಮಿಯಾಗಿದ್ದ ನಾನು ರಾಜಕೀಯಕ್ಕೆ ಬರಬೇಕಾಯಿತು ಎಂದರು. ಕಳೆದ ಐದು ವರ್ಷಗಳಲ್ಲಿ ಕೇತ್ರದಲ್ಲಿ ಶೇ. 40 ಕ್ಕೂ ಹೆಚ್ಚು ಭ್ರಷ್ಟಾಚಾರ ವ್ಯಾಪಕವಾಗಿ ನಡೆದಿದೆ, ಮೊದಲು ಇದನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಈಗಾಗಲೇ ಶಾಸಕನಾದ ನಂತರ 36 ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಎಚ್ಚರಿಕೆ ನೀಡಿದ್ದೇನೆ.
undefined
ಕಾಂಗ್ರೆಸ್ ಪಕ್ಷ ನೀಡಿದ್ದ ಐದು ಗ್ಯಾರಂಟಿ ಜಾರಿ: ಶಾಸಕ ಗಣೇಶ್‌ಪ್ರಸಾದ್
ಜನರಿಗೆ ತೊಂದರೆ ಕೊಡಬೇಡಿ, ಅಧಿಕೃತ ಶುಲ್ಕ ಏನಿದೆ ಅದನ್ನು ತೆಗೆದುಕೊಂಡು, ಅಲೆಸದೇ ಕೆಲಸ ಮಾಡಿಕೊಡಿ, ಭ್ರಷ್ಟಾಚಾರದಿಂದಾಗಿಯೇ ಬದಲಾವಣೆ ಬಯಸಿ ಜನ ನನ್ನನ್ನು ಗೆಲ್ಲಿಸಿದರೆ, ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ನಿಮಗೂ ಹೆಸರು ಬರುತ್ತಿದೆ ನನಗೂ ಹೆಸರು ಬರುತ್ತಿದೆ ಎಂದು ತಿಳಿಸಿದ್ದೇನೆ ಎಂದರು. ಕೇತ್ರದಲ್ಲಿ ಅಪೂರ್ಣವಾರಿ ನೀರಾವರಿ ಕಾಮಗಾರಿಗಳು, ವಿದ್ಯುತ್ ಕಾಮಗಾರಿಗಳ ಪೂರ್ಣಗೊಳಿಸುವಿಕೆ, ವಿದ್ಯುತ್ ಕಂಬಗಳ ಬದಲಾವಣೆ, ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡುತ್ತೇನೆ, ಬಂಡೀಪುರ ಮಾರ್ಗವಾಗಿ ತಮಿಳುನಾಡು ಮತ್ತು ಕೇರಳಕ್ಕೆ ಸಂಜೆ ಪ್ರಯಾಣ ನಿಷೇಧಿಸಿರುವುದರಿಂದ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ತಲೆದೂರಿದ್ದು ಇದಕ್ಕೆ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಆಘಾತ ಚಿಕಿತ್ಸಾ ಘಟಕ: ಗುಂಡ್ಲುಪೇಟೆ ಮೂಲಕ ಎರಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಹಾದು ಹೋಗಿದ್ದು, ಹೋಬಳಿ ಕೇಂದ್ರ ಬೇಗೂರಿನಲ್ಲಿ ತಕ್ಷಣ ಒಂದು ಆಘಾತ ಚಿಕಿತ್ಸಾ ಘಟಕ ಸ್ಥಾಪನೆಯಾಗಬೇಕಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚು ನಡೆಯುತ್ತಿವೆ, ಚಾಮರಾಜನಗರ, ಮೈಸೂರಿಗೆ ತಕ್ಷಣ ಹೋಗಲು ಸಾಧ್ಯವಿಲ್ಲ, ಇಲ್ಲಿ ಆಫಘಾತ ಚಿಕಿತ್ಸಾ ಘಟಕ ತೆರೆದರೆ ಪ್ರಥಮ ಚಿಕಿತ್ಸೆ ನೀಡಬಹುದು ಎಂದ ಅವರು ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಯಲ್ಲಿ ಪೊಲೀಸ್ ಚೌಕಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಚರ್ಚಿಸಲಾಗಿದೆ ಎಂದರು.
ಗಾರ್ಮೆಂಟ್ಸ್ ಕೈಗಾರಿಕೆ: ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಒಂದು ಗಾರ್ಮೆಂಟ್ಸ್ ಕೈಗಾರಿಕೆ ಜೊತೆಗೆ ಮಾನವ ಸಂಪನ್ಮೂಲ ಭರಿತ ಸಣ್ಣ ಸಣ್ಣ ಕೈಗಾರಿಕೆಗಳನ್ನು ತೆರೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗುವುದಾಗಿ ತಿಳಿಸಿದರು. ಕ್ಷೇತ್ರದಲ್ಲಿ ಎಚ್.ಎಸ್ ಮಹದೇವಪ್ರಸಾದ್ ಮಾಡಿರುವ ಶೇ. 100 ರಷ್ಷು ಅಭಿವೃದ್ಧಿ ಕೆಲಸಗಳಲ್ಲಿ ಶೇ. 65 ರಷ್ಟಾನ್ನಾದರೂ ಮಾಡಬೇಕೆಂದು ಕೊಂಡಿದ್ದೇನೆ, ಯಾವುದೇ ಆಸೆ ಆಮಿಷಗಳಿಲ್ಲದೆ, ಭ್ರಷ್ಟಾಚಾರ ರಹಿತವಾಗಿ ಕ್ಷೇತ್ರದ ಅಭಿವೃದ್ಧಿಯನ್ನು ಮಾಡುವ ಅಭಿಲಾಷೆ ಹೊಂದಿದ್ದೇನೆ.
ನಮ್ಮ ಕುಟುಂಬದವರು ಯಾವುದೇ ರಾಜಕೀಯ ಹಸ್ತಕ್ಷೇಪ ಮಾಡುವುದಿಲ್ಲ, ಚುನಾವಣಾ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ ಹೊರತು ರಾಜಕೀಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದರು. ಮಾನವ ಪ್ರಾಣಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಕಾಡಂಚಿನ ಗ್ರಾಮಗಳಿಗೆ ಕಾಡು ಪ್ರಾಣಿ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಟ್ರಂಚ್ ನಿರ್ಮಾಣ ಮಾಡಲು ಆದ್ಯತೆ ನೀಡಲಾಗುವುದು. ಕೇತ್ರದಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದು, ಅವರನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅವರು ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು ಎಂದರು.
ಯಾವುದೆ ಲಾಬಿ ಮಾಡಿಲ್ಲ: ಸಚಿವ ಸ್ಥಾನಕ್ಕಾಗಲೀ, ಮುಂದೆ ನಿಗಮಗಳ ಅಧ್ಯಕ್ಷ ಸ್ಥಾನಕ್ಕಾಗಲಿ ಯಾವುದೇ ಲಾಭಿ ಮಾಡುವುದಿಲ್ಲ, ಶಾಸಕನಾಗಿ ಕ್ಷೇತ್ರದ ಜನತೆಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ, ನನಗೆ ಅಧಿಕಾರಕ್ಕಿಂತ ಕ್ಷೇತ್ರದ ಜನತೆ ಜೊತೆ ಇದ್ದು ಕೆಲಸ ಮಾಡುವುದೇ ಮುಖ್ಯ. ಅಧಿಕಾರ ಮುಖ್ಯವಲ್ಲ. ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ, ವಸತಿ ರಹಿತರಿಗೆ ಮನೆಗಳು ನಿರ್ಮಾಣ, ಪಕ್ಷಾತೀತವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದೇ ನನ್ನ ಗುರಿ ಎಂದರು.
ಗೃಹಲಕ್ಷ್ಮೀಗಾಗಿ ಅತ್ತೆ-ಸೊಸೆ ನಡುವೆ ಪೈಪೋಟಿ: ರೇಷನ್ ಕಾರ್ಡಿಗಾಗಿ ಕುಟುಂಬಗಳು ಇಬ್ಭಾಗ
ಹಿಂದಿನ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರ ಬಗ್ಗೆ ತನಿಖೆ ನಡೆಸಲಾಗುವುದು. ಗುಂಡ್ಲುಪೇಟೆ ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆ ವಿಚಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಅದರ ಬಗ್ಗೆಯೂ ತನಿಖೆ ನಡೆಸಲಾಗುವುದು. ಒಟ್ಟಾರೆಯಾಗಿ ಗುಂಡ್ಲುಪೇಟೆ ತಾಲೂಕನ್ನು ಭ್ರಷ್ಟಾಚಾರ ಮುಕ್ತ ತಾಲೂಕನ್ನಾಗಿ ಮಾಡಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಗೌಡಹಳ್ಳಿ ಮಹೇಶ್ ಉಪಸ್ಥಿತರಿದ್ದರು.