ಹೋಟೆಲ್‌, ಕ್ಲಬ್‌ಗಳಲ್ಲಿ ರಾಜಕೀಯ ಮಾಡಿದರೆ ಮತ ಬರಲ್ಲ: ಸಂಸದ ಡಿ.ಕೆ.ಸುರೇಶ್‌

By Kannadaprabha NewsFirst Published Jun 4, 2023, 11:01 PM IST
Highlights

ಹೋಟೆಲ್‌, ಕ್ಲಬ್‌ನಲ್ಲಿ ಕುಳಿತು ರಾಜಕೀಯ ಮಾಡಿದರೆ ಜನರ ಮತ ಪಡೆಯಲು ಆಗುವುದಿಲ್ಲ. ಇಲ್ಲಿನ ಮುಖಂಡರ ಮನಸ್ಥಿತಿ ಸರಿ ಇಲ್ಲ. ನಿಮಗೆ ಬೇಕಾದಾಗ ಜೆಡಿಎಸ್‌, ಬಿಜೆಪಿ ಜತೆ ಹಾಗೂ ದುಡ್ಡಿನ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತೀರಾ. ಇನ್ನು ಮೇಲೆ ಇಂತದ್ದಕ್ಕೆಲ್ಲ ಅವಕಾಶವಿಲ್ಲ. 

ಚನ್ನಪಟ್ಟಣ (ಜೂ.04): ಹೋಟೆಲ್‌, ಕ್ಲಬ್‌ನಲ್ಲಿ ಕುಳಿತು ರಾಜಕೀಯ ಮಾಡಿದರೆ ಜನರ ಮತ ಪಡೆಯಲು ಆಗುವುದಿಲ್ಲ. ಇಲ್ಲಿನ ಮುಖಂಡರ ಮನಸ್ಥಿತಿ ಸರಿ ಇಲ್ಲ. ನಿಮಗೆ ಬೇಕಾದಾಗ ಜೆಡಿಎಸ್‌, ಬಿಜೆಪಿ ಜತೆ ಹಾಗೂ ದುಡ್ಡಿನ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತೀರಾ. ಇನ್ನು ಮೇಲೆ ಇಂತದ್ದಕ್ಕೆಲ್ಲ ಅವಕಾಶವಿಲ್ಲ. ಪಕ್ಷದಲ್ಲಿ ಇರುವವರು ಇರಬಹುದು, ಹೋಗುವವರು ಹೋಗಬಹುದು ಎಂದು ಸಂಸದ ಡಿ.ಕೆ.ಸುರೇಶ್‌ ತಾಲೂಕು ಕಾಂಗ್ರೆಸ್‌ ಮುಖಂಡರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಅತ್ಯಂತ ಕಡಿಮೆ ಮತಗಳು ಬಂದಿರುವುದಕ್ಕೆ ಮುಖಂಡರೇ ಕಾರಣ. 

ಈ ಹಿಂದೆ ಜಿಪಂ, ತಾಪಂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಮುಖಂಡರಿದ್ದಾರೆ. ನಗರಸಭೆಯಲ್ಲಿ 7 ಜನ ಸದಸ್ಯರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ. ಇದೆಲ್ಲವನ್ನು ಪರಿಗಣಿಸಿದರೆ ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಕನಿಷ್ಠ 35 ಸಾವಿರ ಮತಗಳಾದರೂ ಬರಬೇಕಿತ್ತು. ಆದರೆ, ಕೇವಲ ನಾಲ್ಕು ಬೂತ್‌ಗಳಲ್ಲಿ 200ಕ್ಕೂ ಹೆಚ್ಚು ಮತ, 5 ಬೂತ್‌ಗಳಲ್ಲಿ 150ಕ್ಕಿಂತ ಹೆಚ್ಚು ಮತ ಹಾಗೂ 27 ಬೂತ್‌ಗಳಲ್ಲಿ ಮಾತ್ರ 100ಕ್ಕಿಂತ ಹೆಚ್ಚು ಮತ ಬಂದಿದೆ. ಇದನ್ನು ನೋಡಿದರೆ ನಿಮ್ಮ ಗ್ರಾಮಗಳಲ್ಲಿ ನಿಮಗಿರುವ ಬೆಲೆ ಗೊತ್ತಾಗುತ್ತದೆ. ನೀವು ನಿಮ್ಮ ಮನೆಯವರ ಮತಗಳನ್ನು ಹಾಕಿಸಿದ್ದೀರೋ ಇಲ್ಲವೋ ಗೊತ್ತಿಲ್ಲ ಎಂದು ಕಿಡಿಕಾರಿದರು.

ರಾಯಚೂರಿನಲ್ಲಿ ಮುಂಗಾರು ಹಬ್ಬದ ಸಂಭ್ರಮ: ಮುನ್ನೂರು ‌ಕಾಪು ಸಮಾಜದಿಂದ ಆಯೋಜನೆ

ಇಡೀ ರಾಜ್ಯದ ಜನತೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ. ಆದರೆ, ಚನ್ನಪಟ್ಟಣದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪಕ್ಷಕ್ಕೆ ಮತ ಬಂದಿಲ್ಲ. ಇಲ್ಲಿನ ಮುಖಂಡರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ನನ್ನ ನಾಯಕತ್ವಕ್ಕೆ ಬೆಲೆ ಇಲ್ಲ ಅನ್ನಿಸುತ್ತದೆ. ಪ್ರತಿದಿನ ಆ ಕೆಲಸ, ಈ ಕೆಲಸ ಮಾಡಿಸಿಕೊಡುವಂತೆ ಬರುವ ಬಿಳಿ ಬಟ್ಟೆನಾಯಕರಿಗೆ ನಿಮ್ಮ ಪಂಚಾಯಿತಿ ಮತ ಹಾಕಿಸಲಾಗಿಲ್ಲವಾ ಎಂದು ಬೇಸರ ವ್ಯಕ್ತಪಡಿಸಿದರು.

ಅನ್ಯಾಯ ಮಾಡಬೇಡಿ: ಗಂಗಾಧರ್‌ ಕಾಂಗ್ರೆಸ್‌ ಟಿಕೆಟ್‌ಗೆ ಅರ್ಜಿಯನ್ನೇ ಸಲ್ಲಿಸಿರಲಿಲ್ಲ. ಆದರೂ ಪಕ್ಷದ ಹಿತದೃಷ್ಟಿಯಿಂದ ಅವರಿಗೆ ಟಿಕೆಟ್‌ ನೀಡಲಾಯಿತು. ಆದರೆ ಚುನಾವಣೆಯಲ್ಲಿ ಅವರನ್ನು ಸೋಲಿಸಿದಿರಿ. ಇದು ಯಾರ ಸೋಲೆಂದು ಗೊತ್ತಿಲ್ಲ. ಆದರೆ, ನೀವು ಕಾರ್ಯಕರ್ತರನ್ನು ಮಾತ್ರ ಸೋಲಿಸಿದ್ದೀರಿ ಎಂದು ಕಿಡಿಕಾರಿದ ಸುರೇಶ್‌, ಈ ಹಿಂದೆ ಟಿ.ಕೆ.ಯೋಗೇಶ್‌, ರಘುನಂದನ್‌ ರಾಮಣ್ಣ, ರೇವಣ್ಣ ಹಾಗೂ ಇದೀಗ ಗಂಗಾಧರ್‌ಗೆ ಅನ್ಯಾಯ ಮಾಡಿದ್ದೀರಿ. ಮುಂದೆ ಈ ರೀತಿ ಯಾರಿಗೂ ಅನ್ಯಾಯ ಮಾಡಬೇಡಿ ಎಂದರು. ಇನ್ನು ಮೇಲೆ ಯಾರೇ ಆದರೂ ನಿಮ್ಮ ವೈಯಕ್ತಿಕ ಕೆಲಸಗಳಿಗಾಗಿ ನಮ್ಮ ಬಳಿ ಬರಬೇಡಿ. ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಕಾರ್ಯಗಳು ಇದ್ದರೆ ಮಾತ್ರ ಬನ್ನಿ. ರಾಜ್ಯದಲ್ಲಿ ನಮ್ಮದೇ ಸರ್ಕಾರವಿರುವುದಿಂದ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಇದ್ದರೂ ಮಾಡಿಕೊಡಲು ಶ್ರಮಿಸಲಾಗುವುದು. ಅಂತಯೇ ಮುಂದಿನ ದಿನಗಳಲ್ಲಿ ಜಿಪಂ, ತಾಪಂ ಚುನಾವಣೆ ಎದುರಾಗಲಿದ್ದು, ಅದಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು.

ಆತ್ಮಾವಲೋಕನ ಮಾಡಿಕೊಳ್ಳಿ: ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಸ್‌.ಗಂಗಾಧರ್‌ ಮಾತನಾಡಿ, ಕಡೆ ಗಳಿಗೆಯಲ್ಲಿ ಅಭ್ಯರ್ಥಿಯಾದರೂ ಬಹುತೇಕ ಎಲ್ಲೆಡೆ ಕಾರ್ಯಕರ್ತರನ್ನು ಕಟ್ಟಿಕೊಂಡು ಪ್ರಚಾರ ನಡೆಸಿದೆ. ಹೋದ ಕಡೆಯಲ್ಲೆಲ್ಲ ಜನ ಸೇರುತ್ತಿದ್ದರು. ನಾಮಪತ್ರ ಸಲ್ಲಿಕೆ ವೇಳೆ ಸಹ ಸುಮಾರು 12 ಸಾವಿರ ಜನ ಸೇರಿದ್ದರು. ಸೇರಿದ್ದ ಜನ ಮತ ನೀಡಿದ್ದರೂ 40ರಿಂದ 50 ಸಾವಿರ ಮತ ಬರಬೇಕಿತ್ತು. ಆದರೆ, ಬರಲಿಲ್ಲ. ಕೆಲವರಿಗೆ ಸಿ.ಪಿ.ಯೋಗೇಶ್ವರ್‌ ಅವರನ್ನು ಗೆಲ್ಲಿಸಬೇಕು ಎಂಬುದು ಮನಸ್ಸಿನಲ್ಲಿದ್ದರೆ, ಇನ್ನು ಕೆಲವರಿಗೆ ಎಚ್‌.ಡಿ.ಕುಮಾರಸ್ವಾಮಿಯನ್ನು ಗೆಲ್ಲಿಸಬೇಕು ಎಂದಿತ್ತು. ಅದರಂತೆಯೇ ಚುನಾವಣೆ ನಡೆಯಿತು ಎಂದು ತಮ್ಮ ಸೋಲನ್ನು ವಿಶ್ಲೇಷಿಸಿದರು.ರಾಜ್ಯಾದ್ಯಂತ ಕಾಂಗ್ರೆಸ್‌ ಪರ ಅಲೆ ಇತ್ತು. ಜನ ಕಾಂಗ್ರೆಸ್‌ ಗ್ಯಾರಂಟಿಯನ್ನು ನಂಬಿದರು. ಆದರೆ, ಇಲ್ಲಿ ಯಾರು ಯಾರಿಗೆ ಕಮಿಟ್‌ ಆದರು, ಯಾರ ಜತೆ ಯಾರು ಕೈಜೋಡಿಸಿದರು ಎಂಬುದು ಗೊತ್ತಿದೆ. ಎಷ್ಟೋ ಕಡೆ ಬೂತ್‌ ಏಜೆಂಟರೇ ಇಲ್ಲದಂತಾಗಿತ್ತು. ಜವಾಬ್ದಾರಿ ತೆಗೆದುಕೊಂಡವರು ಆತ್ಮಾವಲೋಕನ ಮಾಡಿಕೊಳ್ಳಬೇಕು.

ರಾಜೀನಾಮೆ ಇಂಗಿತ: ಚುನಾವಣೆಯಲ್ಲಿ ನಾನು ಸೋತಿದ್ದರೂ ಸಹ ಮನೆಯಲ್ಲಿ ಕೂರುವುದಿಲ್ಲ. ಪಕ್ಷ ವಹಿಸಿದ ಜವಾಬ್ದಾರಿಯನ್ನು ಹೊತ್ತು ಕೆಲಸ ಮಾಡುತ್ತೇನೆ. ಈ ಚುನಾವಣೆಯಲ್ಲಿ ಆಗಿರುವ ಸೋಲಿನ ನೈತಿಕ ಹೊಣೆಯನ್ನು ನಾನೇ ಹೊರುತ್ತೇನೆ. ಪಕ್ಷದ ವರಿಷ್ಠರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ನಿರ್ಧಾರ ಮಾಡುತ್ತೇನೆ ಎಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಟಿ.ಕೆ.ಯೋಗೀಶ್‌, ಕೆಪಿಸಿಸಿ ವಕ್ತಾರ ನಿಜಾಮ್‌ ಫೌಜ್‌ದಾರ್‌, ಕೆಪಿಸಿಸಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಪ್ರಮೋದ್‌, ಸುನೀಲ್‌, ಡಿ.ಕೆ.ಕಾಂತರಾಜು, ಬೋರ್‌ವೆಲ್‌ ರಂಗನಾಥ್‌, ಎ.ಸಿ.ವೀರೇಗೌಡ, ಶಿವಮಾದು ಇತರರಿದ್ದರು.

ಹೊಂದಾಣಿಕೆ ರಾಜಕೀಯ ಗೊತ್ತಿಲ್ಲ: ರಾಮನಗರ ಹಾಗೂ ಕನಕಪುರ ಕ್ಷೇತ್ರದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲೆಡೆ ಹೊಂದಾಣಿಕೆ ರಾಜಕೀಯದ ಕೂಗು ಕೇಳಿ ಬಂತು. ಆದರೆ, ರಾಮನಗರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ಗೆಲುವು ಸಾಧಿಸಿದರು. ಹೊಂದಾಣಿಕೆ ಏನೇ ಇದ್ದರೂ ನೀವು ಮಾಡಿಕೊಳ್ಳುವುದೇ ಹೊರತು ನಮಗೆ ಹೊಂದಾಣಿಕೆ ರಾಜಕೀಯ ಗೊತ್ತಿಲ್ಲ. ಚಿಕ್ಕಬಳ್ಳಾಪುರದಲ್ಲಿ ಹೊಸ ಮುಖ ಪ್ರದೀಪ್‌ ಈಶ್ವರ್‌ ಸಚಿವರಾಗಿದ್ದ ಸುಧಾಕರ್‌ ಅವರನ್ನೇ ಸೋಲಿಸಿದರು. ಅಲ್ಲಿ ಚುನಾವಣೆ ಪೂರ್ವ ಹಾಗೂ ಚುನಾವಣೆ ವೇಳೆ ನೂರಾರು ಕೋಟಿ ಹಣ ಖರ್ಚು ಮಾಡಿದರೂ ಎದುರಾಳಿ ವಿರುದ್ಧ ನಮ್ಮ ಅಭ್ಯರ್ಥಿ ಗೆದ್ದರು. ಹಿಂದಿನಿಂದ ಬಲಿಷ್ಠವಾಗಿರುವ ಈ ಕ್ಷೇತ್ರದಲ್ಲಿ ಅದು ಏಕೆ ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್‌ ಮುಖಂಡರನ್ನು ಸಂಸದ ಸುರೇಶ್‌ ಪ್ರಶ್ನಿಸಿದರು.

ಗ್ಯಾರಂಟಿಗೆ ಲಂಚ ಕೇಳಿ​ದರೆ ಒದ್ದು ಒಳಗಾಕ್ತೀವಿ: ಡಿಸಿಎಂ ಡಿ.ಕೆ.​ಶಿ​ವ​ಕು​ಮಾರ್‌ ಎಚ್ಚ​ರಿಕೆ

ಲೋಕಸಭೆ ಚುನಾವಣೆಗೆ ಸ್ಪರ್ಧೆ ಬಗ್ಗೆ ಗೊಂದಲ!: ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದೇನೆಂದು ಸಂಸದ ಸುರೇಶ್‌ ಅಚ್ಚರಿ ಹೇಳಿಕೆ ಹೊರ ಹಾಕಿದರು. ನಾನು ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡುತ್ತಿದ್ದೇನೆ ಎಂದುಕೊಳ್ಳಬೇಡಿ. ನಿಮಗೆ ನನ್ನ ಚುನಾವಣೆಯ ಚಿಂತೆ ಬೇಡ. ನಾನು ಯಾರೋ ಗುತ್ತಿಗೆದಾರರನ್ನೋ, ನಾಯಕರನ್ನೋ ನಂಬಿಲ್ಲ. ಗ್ರಾಮಗಳಲ್ಲಿ ಇರುವ ಕಾರ್ಯಕರ್ತರನ್ನು ನಾನು ನಂಬಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿ ನಾನೇ ಇದ್ದೇನೆ ಎಂದು ಮಾರ್ಮಿಕವಾಗಿ ನುಡಿದರು.

click me!