
ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಆಡ್ವಾಣಿ ಸುದೀರ್ಘ ಸೇವೆಯನ್ನು ಒಂದೇ ಒಂದು ಘಟನೆಯಿಂದ ಅಳೆದು, ಅದಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ಜೊತೆಗೆ ಆಡ್ವಾಣಿ ಪರ ಬ್ಯಾಟಿಂಗ್ ಮಾಡಲು ನೆಹರೂ ಮತ್ತು ಇಂದಿರಾ ಪ್ರಕರಣ ಉಲ್ಲೇಖಿಸಿ ಮತ್ತೆ ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡಿದ್ದಾರೆ. ಕಾಂಗ್ರೆಸ್ ಸಹಜವಾಗಿ ಇದರಿಂದ ಅಂತರ ಕಾಯ್ದುಕೊಂಡಿದೆ.
ಆಡ್ವಾಣಿಯವರ ಜನ್ಮದಿನಕ್ಕೆ ಶುಭಕೋರಿ ತರೂರ್ ಎಕ್ಸ್‌ನಲ್ಲಿ ಹಾಕಿದ್ದ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ವಕೀಲರೊಬ್ಬರು, ‘ದೇಶದಲ್ಲಿ ದ್ವೇಷ ಬೀಜವನ್ನು ಬಿತ್ತುವುದು ಸಮಾಜಸೇವೆ ಅಲ್ಲ’ ಎನ್ನುವ ಮೂಲಕ ಆಡ್ವಾಣಿ ರಾಮಜನ್ಮಭೂಮಿ ಹೋರಾಟದ ಮುಂದಾಳತ್ವ ವಹಿಸಿದ್ದನ್ನು ಉಲ್ಲೇಖಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ತರೂರ್, ‘ಒಪ್ಪುತ್ತೇನೆ. ಆ ಘಟನೆ ಮಹತ್ವಪೂರ್ಣವಾದುದಾದರೂ, ಅವರು ಅಷ್ಟು ವರ್ಷಗಳ ಕಾಲ ಮಾಡಿದ ಸಮಾಜ ಸೇವೆಯನ್ನು ಅಷ್ಟಕ್ಕೇ ಸೀಮಿತಗೊಳಿಸುವುದು ಸರಿಯಲ್ಲ’ ಎಂದಿದ್ದರು. ಜತೆಗೆ, ‘ನೆಹರು ಅವರ ಕೆಲಸವನ್ನು ಚೀನಾದೊಂದಿಗಿನ ಸಂಘರ್ಷದಲ್ಲಿ ಆದ ಹಿನ್ನಡೆಯಿಂದ ಅಥವಾ ಇಂದಿರಾ ಗಾಂಧಿ ಅವರ ಸೇವೆಯನ್ನು ತುರ್ತುಸ್ಥಿತಿ ಹೇರಿಕೆಯಿಂದ ಅಳೆಯಲು ಸಾಧ್ಯವಿಲ್ಲ. ಇದು ಆಡ್ವಾಣಿಯವರಿಗೂ ಅನ್ವಯಿಸುತ್ತದೆ’ ಎಂದು ವಿವರಿಸಿದ್ದರು.
ತರೂರ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಕಾಂಗ್ರೆಸ್, ‘ಇದು ಅವರ ವೈಯಕ್ತಿಕ ಅಭಿಪ್ರಾಯ. ಅವರು ಇತ್ತೀಚೆಗೆ ನೀಡುತ್ತಿರುವ ಹಲವು ಹೇಳಿಕೆಗಳಿಗೂ, ಪಕ್ಷಕ್ಕೂ ಸಂಬಂಧವಿಲ್ಲ’ ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.