ಎಷ್ಟು ಮುಸ್ಲಿಂರು ಜೈಲಿನಲ್ಲಿದ್ದಾರೆ ಎಂದು ಗೃಹ ಇಲಾಖೆಗೆ ಪತ್ರ ಬರೆದು ಸಿದ್ದರಾಮಯ್ಯ ಮಾಹಿತಿ ಕೇಳಿದ್ದಾರೆ
ಕಾಂಗ್ರೆಸ್‌ನ ತುಷ್ಟೀಕರಣ ಮನಸ್ಥಿತಿ ಭಾರತ ಭಯೋತ್ಪಾದನಾ ಚಟುವಟಿಕೆಗಳಿಂದ ನಲುಗುವಂತಹ ಸ್ಥಿತಿಗೆ ಕಾರಣ
ಯಾವುದೇ ಧರ್ಮ ಜಾತಿಯವರಾಗಿರಲಿ ರಾಷ್ಟ್ರೀಯತೆ ಗೌರವಿಸುವ ಪ್ರತಿಯೊಬ್ಬನೂ ಹಿಂದೂ ಎಂದ ಪಿ.ರಾಜೀವ್
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್
ಬೆಳಗಾವಿ (ನ.23): ದೇಶದಲ್ಲಿ ನಡೆಯುವ ಭಯೋತ್ಪಾದನಾ ಚಟುವಟಿಕೆಗಳು ಕಾಂಗ್ರೆಸ್‌ನ ಪಾಪದ ಕೂಸುಗಳು ಆಗಿವೆ. ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದವರನ್ನು ಸ್ವತಂತ್ರ ಮಾಡಿದ್ದರಿಂದಲೇ ಈಗ ದೇಶಕ್ಕೆ ಮುಳುವಾಗಿದೆ ಎಂದು ಬಿಜೆಪಿ ಶಾಸಕ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪಿ.ರಾಜೀವ್, ಮಂಗಳೂರಿನಲ್ಲಿ ಬಾಂಬ್ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಡೀ ದೇಶದಲ್ಲಿ ಉಗ್ರ ಚಟುವಟಿಕೆ ಹತ್ತಿಕ್ಕಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಬದ್ಧವಾಗಿದೆ. ಭಯೋತ್ಪಾದಕ ಚಟುವಟಿಕೆಗಳು ಇಷ್ಟು ದೊಡ್ಡ ಮಟ್ಟಿಗೆ ಬೆಳೆಯಲು ಕಾರಣ ಏನು ಅಂತಾ ಹಿನ್ನೆಲೆ ನೋಡಿದಾಗ ಎಲ್ಲ ಭಯೋತ್ಪಾದಕ ಚಟುವಟಿಕೆಗಳು ಕಾಂಗ್ರೆಸ್‌ನ ಪಾಪದ ಕೂಸುಗಳು ಆಗಿವೆ ಎಂದು ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಪಿಎಫ್ಐ ಮೇಲೆ ದಾಖಲಾದ 130 ಪ್ರಕರಣ ಹಿಂತೆಗೆದುಕೊಳ್ಳುವ ಮೂಲಕ 1,600ಕ್ಕೂ ಹೆಚ್ಚು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಸ್ವತಂತ್ರಗೊಳಿಸಿದರು.
ಭಯೋತ್ಪಾದನೆ ನಿಗ್ರಹಕ್ಕೆ ಪ್ರತ್ಯೇಕ ಇಲಾಖೆ ಸ್ಥಾಪಿಸಿ : ಪ್ರಭಾಕರ್ ಭಟ್ ಆಗ್ರಹ
ಇತ್ತೀಚೆಗೆ ಪುನಃ ಸಿದ್ದರಾಮಯ್ಯ ಗೃಹ ಇಲಾಖೆಗೆ ಪತ್ರ ಬರೆದು ಎಷ್ಟು ಜನ ಮುಸ್ಲಿಂರು ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದಾರೆ? ಅವರು ಎಷ್ಟು ದಿನಗಳಿಂದ ಜೈಲಿನಲ್ಲಿದ್ದಾರೆ? ಅವರ ಮೇಲೆ ಯಾವ್ಯಾವ ಪ್ರಕರಣಗಳು ದಾಖಲಾಗಿದ್ದಾವೆ ಎಂದು ಮಾಹಿತಿ ಕೇಳಿದ್ದಾರೆ. ಇದೆಲ್ಲ ಕಾಂಗ್ರೆಸ್ ತುಷ್ಟೀಕರಣ ಮನಸ್ಥಿತಿ ಆಗಿದೆ. ಕಾಂಗ್ರೆಸ್‌ನಿಂದ ಭಾರತ ಭಯೋತ್ಪಾದನಾ ಚಟುವಟಿಕೆಗಳಿಂದ ನಲುಗುವಂತಹ ಸ್ಥಿತಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ನಮ್ಮ ಪೊಲೀಸರು ಎಲ್ಲಾ ಭಯೋತ್ಪಾದಕ ಚಟುವಟಿಕೆಗಳ ನಿಗ್ರಹಿಸುವ ಪ್ರಯತ್ನ ಮಾಡುತ್ತಿರುವ ಮಧ್ಯೆಯೂ, ಶಾರೀಕ್ ಬಹಳ ದೊಡ್ಡ ದಾಳಿಗೆ ಸಂಚು ರೂಪಿಸಿದ್ದನು. ಒಂದು ವೇಳೆ ಆ ಸಂಚು ಯಶಸ್ವಿಯಾಗಿದ್ದರೆ ಕಾಂಗ್ರೆಸ್ ನವರು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದರು. ಇಂತಹ ಚಟುವಟಿಕೆ ಬಿಜೆಪಿಯವರೇ ಮಾಡಿಸಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಚರ್ಚ್‌ಗಳ ಮೇಲೆ ದಾಳಿ ನಡೆದಾಗ, ಯಾವುದೇ ಬಾಂಬ್ ಬ್ಲಾಸ್ಟ್ ಆದಾಗ, ಪುಲ್ವಾಮಾ ದಾಳಿ ನಡೆದಾಗ ಲೋಕಸಭೆ ಚುನಾವಣೆಗಾಗಿ ಪುಲ್ವಾಮಾ ದಾಳಿ ನಡೆಸಿದರು ಎಂದು ಕಾಂಗ್ರೆಸ್ ಆರೋಪ ಮಾಡಿತ್ತು ಎಂದು ತಿಳಿಸಿದರು.
ಸಿಎಂ ಮಂಗಳೂರು ಭೇಟಿ ದಿನವೇ ಸ್ಫೋಟಕ್ಕೆ ಸಂಚು..!
ಜಿಹಾದಿ ಮನಸ್ಥಿತಿ ಯಾಕೆ ಖಂಡಿಸುತ್ತಿಲ್ಲ: ಜಿಹಾದಿ ಮನಸ್ಥಿತಿ ಬೆಂಬಲಿಸುವಂತಹ ಮೌಲ್ವಿಗಳನ್ನು ಮುಸ್ಲಿಂರನ್ನು ವಿರೋಧಿಸುವಂತಹ ಎದೆಗಾರಿಕೆ, ಧೈರ್ಯ ಕಾಂಗ್ರೆಸ್ ನಾಯಕರಿಗೆ ಇದೆಯಾ? ಹಿಂದೂಗಳು ಅಶ್ಲೀಲರು ಎನ್ನುವ ನೀವು ಜಿಹಾದಿ ಮನಸ್ಥಿತಿಯನ್ನು ಇಲ್ಲಿಯವರೆಗೆ ಖಂಡಿಸಲು ನಿಮಗೆ ಏಕೆ ಆಗಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ. ದರ್ಗಾಗಳಲ್ಲಿ ಆತಂಕವಾದಿ ಬೀಜವನ್ನು ಬಿತ್ತುವಂತಹ, ಅದಕ್ಕೆ ನೀರೆರೆಯುವಂತಹ ಚಟುವಟಿಕೆಗಳು ತಪ್ಪು ಎನ್ನುವಂತಹ ನೈತಿಕತೆ ನೀವು ಏಕೆ ತೋರಿಸಿಲ್ಲ. ಬಿಜೆಪಿ ರಾಷ್ಟ್ರ ಮೊದಲು ಎಂಬ ವಿಚಾರಧಾರೆ ಮೇಲೆ ನಡೆಯುತ್ತಿದೆ. ಈ ರಾಷ್ಟ್ರೀಯತೆ ಗೌರವಿಸುವ ಪ್ರತಿಯೊಬ್ಬನೂ ಕೂಡ ಆತ ಹಿಂದೂ. ಭಾರತೀಯ ಸಂಸ್ಕೃತಿಯನ್ನು ಗೌರವಿಸುವ ಪ್ರತಿಯೊಬ್ಬ ಪ್ರಜೆ ಆತ ಹಿಂದೂ ವಿಚಾರಧಾರೆ ಇಟ್ಟುಕೊಂಡು ರಾಷ್ಟ್ರವನ್ನು ಗಟ್ಟಿ ಮಾಡಬೇಕಿದೆ ಎಂದು ಹೇಳಿದರು.