ಕಾಫಿನಾಡಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಟಿಕೆಟ್ ಗಾಗಿ ಜೋರಾದ ಆಣೆ- ಪ್ರಮಾಣ
ಅಮಾವಸ್ಯೆಯ ದಿನ ಓಂಕಾರೇಶ್ವರ ದೇವಸ್ಥಾನದಲ್ಲಿ ಪ್ರಮಾಣ ಮಾಡಿದ ಬಿಜೆಪಿ ಟಿಕೆಟ್ ಆಕಾಂಕ್ಷಿ
ಮೂಡಿಗೆರೆ ಶಾಸಕರ ದಾಳಿಯ ಹಿಂದೆ ತನ್ನ ಕೈವಾಡ ಇಲ್ಲವೆಂದ ದೀಪಕ್
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ನ.23): ಕಾಫಿನಾಡು ಮೂಡಿಗೆರೆಯಲ್ಲಿ ಮೊನ್ನೆ ನಡೆದ ಸ್ಥಳಿಯರು-ಶಾಸಕರ ಗಲಾಟೆ ಎಲ್ಲರಿಗೂ ಗೊತ್ತೇ ಇದೆ. ಆನೆ ದಾಳಿಯಿಂದ ಮಹಿಳೆ ಸಾವನ್ನಪ್ಪಿದ್ದರಿಂದ ರೊಚ್ವಿಗೆದ್ದ ಜನ ಶಾಸಕರ ಮೇಲೆ ಹಲ್ಲೆ ಮಾಡಿದ್ದರು. ಆದರೆ ಶಾಸಕ ಕುಮಾರಸ್ವಾಮಿ, ಈ ಹಲ್ಲೆ ರಾಜಕೀಯವಾಗಿದ್ದು, ಇದರ ಹಿಂದೆ ಬಿಜೆಪಿ ಟಿಕೆಟ್ ಆಕಾಂಕ್ಷಿ ದೀಪಕ್ ದೊಡ್ಡಯ್ಯನವರ ಕೈವಾಡ ಇದೆ ಎಂದಿದ್ದರು. ಅದಕ್ಕೆ ದೀಪಕ್ ದೊಡ್ಡಯ್ಯ ಅಮಾವಾಸ್ಯೆಯ ದಿನ ಓಂಕಾರೇಶ್ವರ ದೇವಾಲಯದಲ್ಲಿ ಪ್ರಮಾಣ ಮಾಡಿ ಇದಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ಕಾಫಿನಾಡಲ್ಲಿ ಚುನಾವಣೆ ಹೊಸ್ತಿಲಲ್ಲಿ ಟಿಕೆಟ್ ಗಾಗಿ ಪ್ರಮಾಣದ ಕಾಲ ಬಂದಿದೆ.
ದೇವಸ್ಥಾನದಲ್ಲಿ ಪ್ರಮಾಣ ಮಾಡಿದ ಆಕಾಂಕ್ಷಿ : ಮೂಡಿಗೆರೆ ತಾಲೂಕಿನಲ್ಲಿ ಕಳೆದ ಮೂರು ತಿಂಗಳಲ್ಲಿ ಆನೆ ದಾಳಿಗೆ ಮೂರು ಜನ ಪ್ರಾಣ ತೆತ್ತಿದ್ದಾರೆ. ಮೊನ್ನೆ 35 ವರ್ಷದ ಮಹಿಳೆ ಸಾವನ್ನಪ್ಪಿದ್ದರು. ಸ್ಥಳಕ್ಕೆ ಬಂದ ಶಾಸಕರಿಗೆ ಸ್ಥಳಿಯರು ಆನೆ ಹಾವಳಿ ತಡೆಯಲು ನೀವು ಏನ್ ಮಾಡಿದ್ದೀರಿ ಎಂದು ಜನರು ಪ್ರಶ್ನೆ ಮಾಡಿದ್ದರು. ಮಾತಿಗೆ-ಮಾರು ಬೆಳೆದು ಜನ ಶಾಸಕರ ಮೇಲೆ ಹಲ್ಲೆ ಮಾಡಿದ್ದರು. ಜನ ಚಪ್ಪಲಿಯಿಂದ ಹುಚ್ಚು ನಾಯಿ ರೀತಿ ಅಟ್ಟಾಡಿಸಿ ಹೊಡೆದರು ಎಂದು ಶಾಸಕರು ಹೇಳಿಕೊಂಡಿದ್ದರು. ಜೊತೆಗೆ, ಈ ಹಲ್ಲೆ ಹಿಂದೆ ಬಿಜೆಪಿ ಮೂಡಿಗೆರೆ ಬಿಜೆಪಿ ಟಿಕೆಟ್ ಆಕಾಂಕ್ಷಿ ದೀಪಕ್ ದೊಡ್ಡಯ್ಯನವರ ಕೈವಾಡ ಇದೆ ಎಂದು ಆರೋಪಿಸಿದ್ದರು. ಈ ಆರೋಪವನ್ನ ಸಂಪೂರ್ಣ ಅಲ್ಲಗೆಳೆದಿರೋ ಟಿಕೆಟ್ ಆಕಾಂಕ್ಷಿ ದೀಪಕ್ ದೊಡ್ಡಯ್ಯ ಅಮಾವಾಸ್ಯೆ ದಿನ ಓಂಕಾರೇಶ್ವರನ ಎದುರು ಪ್ರಮಾಣ ಮಾಡಿದ್ದಾರೆ.
Mudigere MLA Beaten: ಚುನಾವಣೆಗೆ ನಿಲ್ಲದಂತೆ ಸಂಚು ಮಾಡಿ ನನ್ನ ಮೇಲೆ ಹಲ್ಲೆ: ಶಾಸಕ ಕುಮಾರಸ್ವಾಮಿ
ತಪ್ಪಿತಸ್ಥರಿಗೆ ನೀನೇ ಶಿಕ್ಷೆ ಕೊಡು: ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಓಂಕಾರೇಶ್ವರ ದೇವಾಲಯದಲ್ಲಿ ಮೂಡಿಗೆರೆ ತಾಲೂಕಿನ ಹುಲ್ಲೇಮನೆ-ಕುಂದೂರು ಗ್ರಾಮದಲ್ಲಿ ನಡೆದ ಶಾಸಕ ಕುಮಾರಸ್ವಾಮಿ ಮೇಲಿನ ಹಲ್ಲೆಗೂ ನನಗೂ ಯಾವುದೇ ಸಂಬಂಧವಿಲ್ಲ. ಇದರ ಸತ್ಯಾಸತ್ಯತೆಯನ್ನೂ ದೇವರೇ ನೀನೇ ಪರಿಶೀಲನೆ ಮಾಡಿ, ತಪ್ಪಿತಸ್ಥರಿಗೆ ನ್ಯಾಯ-ನೀತಿ-ಧರ್ಮದ ಆಧಾರದಲ್ಲಿ ಶಿಕ್ಷೆ ಕೊಡು ಎಂದು ಬೇಡಿಕೊಂಡಿದ್ದಾರೆ.
ಸಣ್ಣ ಮನಸ್ಸಿನ ವ್ಯಕ್ತಿಯಲ್ಲ: ನಾನು ಒಳ್ಳೆಯ ಸಂಸ್ಕೃತಿಯಿಂದ ಬಂದವನು. ನಾನು ಅಷ್ಟು ಕೀಳುಮಟ್ಟದ ರಾಜಕಾರಣವನ್ನ ಮಾಡುವ ಸಣ್ಣ ಮನಸ್ಸಿನ ವ್ಯಕ್ತಿಯಲ್ಲ ಎಂದಿದ್ದಾರೆ. ಶಾಸಕ ಕುಮಾರಸ್ವಾಮಿ ನನ್ನ ಮೇಲಿನ ಹಲ್ಲೆಗೆ ನನಗೂ ಯಾವುದೇ ಸಂಬಂಧವಿಲ್ಲ. ನಾನು ಸಾವಿರಾರು ಮಕ್ಕಳಿಗೆ ಪಾಠ ಮಾಡಿದ್ದಾನೆ. ಜವಾಬ್ದಾರಿಯುತ ಸ್ಥಾನಗಳನ್ನ ನಿರ್ವಹಿಸಿದ್ದೇನೆ. ಅಂತಹಾ ಕೀಳು ಮನಸ್ಸಿನ ವ್ಯಕ್ತಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇವರು ನಾನು ಮಾಡಿಸಿಲ್ಲ ಎಂದು ಪ್ರಮಾಣ ಮಾಡಿದ್ದಾರೆ. ಅಲ್ಲಿ ಕುಮಾರಸ್ವಾಮಿ ಇದು ರಾಜಕೀಯ ದಾಳಿ ಅಂತಿದ್ದಾರೆ. ಹಾಗಾದ್ರೆ, ದಾಳಿ ಮಾಡಿಸಿದ್ಯಾರು ಎಂಬ ಪ್ರಶ್ನೆ ಮತ್ತೆ ಜೀವಂತವಾಗಿ ಉಳಿದಿದೆ.