ರೈತರ ಸಾಲ 26 ಸಾವಿರ ಕೋಟಿ ರುಪಾಯಿ ಮನ್ನಾ ಮಾಡಿರುವ ಒಬ್ಬನೇ ಒಬ್ಬ ಕಾಂಗ್ರೆಸ್ ಅಥವಾ ಬಿಜೆಪಿ ಮುಖ್ಯಮಂತ್ರಿಯನ್ನು ತೋರಿಸಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸವಾಲು ಹಾಕಿದರು.
ರಾಮನಗರ (ಮೇ.9) : ರೈತರ ಸಾಲ 26 ಸಾವಿರ ಕೋಟಿ ರುಪಾಯಿ ಮನ್ನಾ ಮಾಡಿರುವ ಒಬ್ಬನೇ ಒಬ್ಬ ಕಾಂಗ್ರೆಸ್ ಅಥವಾ ಬಿಜೆಪಿ ಮುಖ್ಯಮಂತ್ರಿಯನ್ನು ತೋರಿಸಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸವಾಲು ಹಾಕಿದರು.
ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ(JDS Candidate) ಪರವಾಗಿ ರೋಡ್ ಶೋ(Roadshow) ನಡೆಸಿ ಮತಯಾಚನೆ ಮಾಡಿದ ಅವರು, ರೈತರ ಸಾಲ ಮನ್ನಾ ಮಾಡಿರುವ ಕುಮಾರಸ್ವಾಮಿ ಈ ಬಾರಿ ಮುಖ್ಯಮಂತ್ರಿಯಾಗುವುದು ನಿಶ್ಚಿತ. ಸ್ತ್ರೀಶಕ್ತಿ ಸಂಘಗಳು, ಮಹಿಳಾ ಗುಂಪುಗಳು ಮಾಡಿರುವ ಸಾಲವನ್ನು ಮನ್ನಾ ಮಾಡಲು ತಿಳಿಸಿದ್ದೇನೆ. ನಮ್ಮದು ಕುಟುಂಬ ರಾಜಕಾರಣ ಅಲ್ಲ. ಬದಲಿಗೆ ರಾಜ್ಯದ ಜನರ ಹಿತದೃಷ್ಟಿಯಿಂದ ನಮ್ಮ ಕುಟುಂಬದವರು ಸ್ಪರ್ಧೆ ಮಾಡುತ್ತಿದ್ದಾರೆ. ರಾಜಕೀಯವಾಗಿ ಹಾಸನದಲ್ಲಿ ತೊಂದರೆಯಾದಾಗ ಈ ಕ್ಷೇತ್ರದ ಜನರು ನನ್ನನ್ನು ಆಶೀರ್ವದಿಸಿ ಶಾಸಕರಾಗಿ, ಮುಖ್ಯಮಂತ್ರಿ ಹಾಗೂ ಪ್ರಧಾನಿಯ ಮಟ್ಟಕ್ಕೆ ಬೆಳೆಸಿದಿರಿ. ಈಗ ನನ್ನ ಮೊಮ್ಮಗ ನಿಖಿಲ್‌ನನ್ನು ಮೇಲೆತ್ತುವ ಕೆಲಸಕ್ಕೆ ಜಾತಿ ಧರ್ಮ ಮರೆತು ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಜೆಡಿಎಸ್ ಅಧಿಕಾರಕ್ಕೆ ತರುವುದು ನನ್ನ ಕನಸು: ಎಚ್.ಡಿ.ದೇವೇಗೌಡ
ನಾನು ಪ್ರಧಾನಿಯಾಗಿದ್ದಾಗ ಅಲ್ಪಸಂಖ್ಯಾತ ಸಮುದಾಯದವರಿಗೆ, ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದು, ಕಾಶ್ಮೀರಕ್ಕೆ 4 ಬಾರಿ ಹೋಗಿ ಬಂದಿದ್ದೇನೆ. ಫಾರೂಕ್ ಅಬ್ದುಲ್ಲಾ ಅವರನ್ನು ಸಿಎಂ ಮಾಡಿದ್ದು, ಟಿಪ್ಪು ಹೆಸರಿನಲ್ಲಿ ವಸತಿ ಶಾಲೆ ಕೊಟ್ಟಿದ್ದೆ. ಅದನ್ನು ಕಾಂಗ್ರೆಸ್ಸಿಗರು ನಾಶ ಮಾಡಿದರು ಎಂದು ಕಿಡಿಕಾರಿದ ದೇವೇಗೌಡರು, ಕುಮಾರಸ್ವಾಮಿ ಮತ್ತೊಮ್ಮೆ ಸಿಎಂ ಆಗುತ್ತಾರೆ. ಅವರ ಮೇಲೆ ದ್ವೇಷ, ಅಸೂಯೆಯಿಂದ ಸೋಲಿಸಲು ವಿರೋಧಿಗಳ ತಂತ್ರ ನಡೆಯುತ್ತಿದೆ. ಆದರೆ ಅಲ್ಲಿಯೂ ಸಹ ಜಯಭೇರಿ ಬಾರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ರಾಜ್ಯ ವಕ್ತಾರರಾದ ಬಿ.ಉಮೇಶ್, ನರಸಿಂಹಮೂರ್ತಿ, ಮುಖಂಡರಾದ ಕಂಟ್ರಾಕ್ಟರ್ ಪ್ರಕಾಶ್, ಹನುಮಂತ, ಮಳವಳ್ಳಿರಾಜು, ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಬಿಳಗುಂಬ ಮೋಹನ್, ಗೂಳಿಗೌಡ, ರೈಡ್ ನಾಗರಾಜು, ಆರೀಫ್ ಖುರೇಷಿ, ವಿಜಯ್‌ಕುಮಾರ್, ದೊರೆಸ್ವಾಮಿ, ಗೌಡಯ್ಯನದೊಡ್ಡಿ ಕೃಷ್ಣ, ಶಿವಸ್ವಾಮಿ ಮತ್ತಿತರರು ಹಾಜರಿದ್ದರು.
ನಿಖಿಲ್‌ನನ್ನು ಕ್ಷೇತ್ರದ ಜನರ ಮಡಿಲಿಗೆ ಹಾಕಿರುವೆ
ನಾನು ಸುಳ್ಳು ಹೇಳಿ ಮತ ಕೇಳುವ ಅವಶ್ಯಕತೆ ಇಲ್ಲ. ಪಂಚರತ್ನ ಯೋಜನೆ ಮೂಲಕ ರಾಜ್ಯದ ಜನರ ಮನಸ್ಸು ಗೆದ್ದಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು. ಕ್ಷೇತ್ರದ ಬಡವರಿಗೆ ಮನೆ ಕೊಡುವ ವಿಷಯದಲ್ಲಿ ನನಗೆ ನೋವಿದೆ. ಈ ವಿಷಯದಲ್ಲೂ ದೊಡ್ಡ ರಾಜಕಾರಣ ಮಾಡಿದರು. ಮುಂದಿನ ಯುಗಾದಿ ಒಳಗೆ ಬಡವರಿಗೆ ಮನೆ ಕಟ್ಟಿಕೊಡದಿದ್ದರೆ ಮತ ಕೇಳಲು ಬರುವುದಿಲ್ಲ ಎಂದರು.
ಕ್ಷೇತ್ರದ ಜನರ ಮಡಿಲಿಗೆ ನಿಖಿಲ್‌ನನ್ನು ಹಾಕಿದ್ದೇನೆ. ನನಗೆ ತೋರಿಸಿದಷ್ಟೇ ಪ್ರೀತಿಯನ್ನು ನನ್ನ ಮಗನಿಗೂ ಕೊಡುತ್ತೀರಿ ಎಂಬ ನಂಬಿಕೆ ಇದೆ. ನನ್ನ ಮೇಲೆ ಬೇಸರ ಮಾಡಿಕೊಳ್ಳಬೇಡಿ. ನಾವು ಹೊರಗಿನವರಲ್ಲ, ಇದೇ ಜಿಲ್ಲೆಗೆ ಸೇರಿದವರು. ನನ್ನ ಜೀವನದ ಕೊನೆ ಉಸಿರು ಇರುವವರೆಗೂ ನಿಮ್ಮ ಕೈ ಬಿಡುವುದಿಲ್ಲ ಎಂದು ಹೇಳಿದರು.
ಮನೆ ಕೊಡದಿದ್ದರೆ ಸ್ಪರ್ಧೆ ಮಾಡಲ್ಲ
ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ(JDS Candidate Nikhil kumaraswamy) ಮಾತನಾಡಿ, ದೇವೇಗೌಡರು (HD Devegowda)ರಾಮನಗರದಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದರು. ಅವರು ರಾಜಕಾರಣದಲ್ಲಿ ಹುಲಿ ರೀತಿ ಘರ್ಜನೆ ಮಾಡಿದ್ದಾರೆ. ದೇವೇಗೌಡ ಮತ್ತು ಕುಮಾರಸ್ವಾಮಿ(HD Kumaraswamy) ಅವರನ್ನು ಆಶೀರ್ವಾದ ಮಾಡಿದ್ದೀರಿ. ತಮಗೂ ಆಶೀರ್ವಾದ ಮಾಡುವಂತೆ ಕೋರಿದರು.
ಜೆಡಿಎಸ್ ಅಧಿಕಾರಕ್ಕೆ ತಂದು ಕಣ್ಮುಚ್ಚುವ ಆಸೆ: ದೇವೇಗೌಡರ ಭಾವನಾತ್ಮಕ ಮಾತು
ಕುಮಾರಸ್ವಾಮಿ ರಾಮನಗರವನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಿದರು. ಅಂದಿನಿಂದ ಇಲ್ಲಿವರೆಗೂ ಜಿಲ್ಲೆಯನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. ಈಗ ಶಾಶ್ವತವಾದ ಕುಡಿಯುವ ನೀರಿನ ಯೋಜನೆ ಪ್ರಾರಂಭವಾಗಿದೆ. ಕುಮಾರಸ್ವಾಮಿರವರ ಬಗ್ಗೆ ಏನೇನೊ ಮಾತನಾಡುತ್ತಾರೆ. ಅದಕ್ಕೆಲ್ಲ ಉತ್ತರ ಕೊಡಬೇಕಿದೆ. ನಗರ ಪ್ರದೇಶದಲ್ಲಿ 5100 ರುಪಾಯಿ ನೀಡಿದವರಿಗೆ ಮನೆ ಕಟ್ಟಿಸಿ ಕೊಡುತ್ತೇನೆ. ಇಲ್ಲದಿದ್ದರೆ ನಾನು 2023ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಇದು ನನ್ನ ಶಪಥ ಎಂದು ನಿಖಿಲ್ ಹೇಳಿದರು.