
ಬೆಂಗಳೂರು (ಆ.11): ‘ಅಭಿವೃದ್ಧಿ ಮುಂಚೂಣಿಯಲ್ಲಿರುವ ಕರ್ನಾಟಕ ಎಂದಿಗೂ ಮುಂದಿದ್ದು, ತನ್ನ ಪಾರಂಪರಿಕ, ಸಾಂಸ್ಕೃತಿಕ ಸಾಹಿತ್ಯದ ಶ್ರೀಮಂತಿಕೆ ಜೊತೆಗೆ ಐಟಿಬಿಟಿ, ಎಐ ರೀತಿಯ ಆಧುನಿಕ ತಂತ್ರಜ್ಞಾನದ ಜೊತೆ ಸಮನ್ವಯ ಸಾಧಿಸಿದೆ’ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಐಐಐಟಿಯಲ್ಲಿ ಮೆಟ್ರೋ ಮೂರನೇ ಹಂತದ ಯೋಜನೆಗೆ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದರು. ‘ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತ ಇಡೀ ಹೊಸ ಜಗತ್ತನ್ನು ಭಾರತ ನಿರ್ಭೀತವಾಗಿ ಮುನ್ನಡೆಸಲು ನಿಂತಿದೆ. ಪ್ರಧಾನಿ ಮೋದಿ 12ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದ ಕಾಯಕವೇ ಕೈಲಾಸ ತತ್ವದ ಪ್ರತಿರೂಪ. ಕಾಯಕವೇ ಕೈಲಾಸ ಎಂಬುದು ಅವರ ಜೀವನದಲ್ಲಿ ಹಾಸುಹೊಕ್ಕಾದ ಮಂತ್ರ ಮಾತ್ರವಲ್ಲ, ಅದು ಆಡಳಿತ ಸೂತ್ರವೂ ಹೌದು‘ ಎಂದು ಬಣ್ಣಿಸಿದರು.
‘ವಿಕಸಿತ ಭಾರತದ ಧ್ಯೇಯ ಹೊತ್ತಿರುವ ಅವರು ವೈಯಕ್ತಿಕ ಆಸೆ ಆಕಾಂಕ್ಷೆ ಇಟ್ಟುಕೊಂಡಿಲ್ಲ. ರಾಷ್ಟ್ರಕ್ಕಾಗಿ ಜೀವನ ಸಮರ್ಪಿಸಿಕೊಂಡ ಅವರು ರಾಷ್ಟ್ರಹಿತ, ಸಮಾಜದ ಹಿತವನ್ನು ತಪಸ್ಸಿನಂತೆ ಅಚರಿಸುವ ಅವರು ಆಧುನಿಕ ಭಾರತದ ಕರ್ಮಯೋಗಿ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವುದು ಸೌಭಾಗ್ಯದ ವಿಚಾರ’ ಎಂದರು. ‘ವಿಕಸಿತ ಭಾರತದ ಸಂಕಲ್ಪದ ಹೊಣೆ ಹೊತ್ತಿರುವ ಮೋದಿ ಅವರ ನಾಯಕತ್ವದಲ್ಲಿ ಭಾರತ ಯಾರ ಎದುರು ತಲೆ ಬಾಗುವುದಿಲ್ಲ. ಭಯೋತ್ಪಾದನೆ ಹತ್ತಿಕ್ಕಲು ಸರ್ಜಿಕಲ್ ಸ್ಟ್ರೈಕ್, ಏರ್‌ಸ್ಟ್ರೈಕ್, ಈಚೆಗಿನ ಆಪರೇಷನ್ ಸಿಂದೂರ, ಜಮ್ಮು ಕಾಶ್ಮೀರದ 370ನೇ ವಿಧಿ ತೆಗೆದುಹಾಕಿರುವುದು ಅವರ ದಿಟ್ಟ ನಿರ್ಧಾರದ ಪ್ರತೀಕ’ ಎಂದು ಹೇಳಿದರು.
ಕೃಷಿಕರ ಸಮಗ್ರ ಅಭ್ಯುದಯಕ್ಕೆ ಕೇಂದ್ರ ಆದ್ಯತೆ: ಕೇಂದ್ರ ಸರ್ಕಾರ ದೇಶದ ಕೃಷಿಕರ ಸಮಗ್ರ ಅಭ್ಯುದಯವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿದ್ದು, ನಿರಂತರವಾಗಿ ರೈತಸ್ನೇಹಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದು ಹೇಳಿದರು. ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತಿನ ಹಣ ಬಿಡುಗಡೆ ಕಾರ್ಯಕ್ರಮದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯ ಮೂಲಕ ಯಾವುದೇ ಮಧ್ಯವರ್ತಿ ಹಾಗೂ ಕಡಿತಗಳಿಲ್ಲದೆ ಸಂಪೂರ್ಣ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವ ಮೂಲಕ ಪಾರದರ್ಶಕತೆಯನ್ನು ಉಳಿಸಿಕೊಂಡಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ ಎಂದು ತಿಳಿಸಿದರು.
ಪ್ರಮುಖ ಬೆಳೆಗಳಿಗೆ ಗರಿಷ್ಠ ಬೆಂಬಲ ಬೆಲೆಯನ್ನು ನಿಗದಿ ಮಾಡಿ ರೈತರ ಬೇಡಿಕೆಗಳಿಗೆ ಸ್ಪಂದಿಸಲಾಗಿದ್ದು, ಪ್ರದೇಶವಾರು ಪ್ರಮುಖ ಆಹಾರ ಮತ್ತು ವಾಣಿಜ್ಯ ಬೆಳೆಗಳನ್ನು ಈ ವ್ಯಾಪ್ತಿಗೆ ತರಲಾಗಿದೆ. ಕೃಷಿಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಬೆಸೆಯುವ ಮೂಲಕ ಅತ್ಯಾಧುನಿಕ ಆಲೋಚನೆಗಳನ್ನು ಜಾರಿಗೊಳಿಸಲಾಗಿದೆ. ಕೃಷಿ ತಂತ್ರಜ್ಞಾನ ಅಭಿವೃದ್ಧಿಗೆ ಒತ್ತು ನೀಡಿ, ಆಹಾರ ಸ್ವಾವಲಂಬನೆಯನ್ನು ಸದೃಢಗೊಳಿಸಲಾಗಿದೆ. ರೈತರನ್ನು ಆರ್ಥಿಕವಾಗಿ ಸದೃಢರಾಗಿಸುವ ಉದ್ದೇಶದಿಂದ ಬೆಳೆಸಾಲ, ವಿಮೆ ಸೇರಿದಂತೆ ವಿವಿಧ ಸವಲತ್ತುಗಳನ್ನು ಸರಳೀಕರಣಗೊಳಿಸಲಾಗಿದೆ. ಕಳೆದ ಜುಲೈ ತಿಂಗಳ ಆರಂಭದಿಂದ ದೇಶಾದ್ಯಂತ ವಿಕಸಿತ ಕೃಷಿ ಅಭಿಯಾನ ಜಾರಿಯಲ್ಲಿದ್ದು, ಬ್ಯಾಂಕ್ ಗಳ ಅಧಿಕಾರಿಗಳು ರೈತರ ಮನೆಬಾಗಿಲಿಗೆ ಯೋಜನೆಗಳನ್ನು ತಲುಪಿಸುವ ಪ್ರಯತ್ನದಲ್ಲಿದ್ದಾರೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.