
ಬೆಂಗಳೂರು : ಮತಗಳವು ಆರೋಪ ಸಂಬಂಧ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿ ನಡುವಿನ ಜಟಾಪಟಿ ಮುಂದುವರೆದಿದೆ. ಡಬಲ್ ಮತದಾನ ಆರೋಪ ಸಂಬಂಧ ಸೂಕ್ತ ದಾಖಲೆ ನೀಡುವಂತೆ ಕೋರಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು ಮತ್ತೆ ತಿರುಗೇಟು ನೀಡಿದ್ದಾರೆ.
ಅಲ್ಲದೆ ಕರ್ನಾಟಕ, ಹರ್ಯಾಭ ಮತ್ತು ಮಹಾರಾಷ್ಟ್ರ ಚುನಾವಣೆಯಲ್ಲಿ ಮತಕಳವಿನ ಕುರಿತ ನಿಮ್ಮ ಆರೋಪ ಸಾಬೀತುಪಡಿಸುವ ದಾಖಲೆ ನೀಡಿ ಇಲ್ಲವೇ ಸುಳ್ಳು ಆರೋಪ ಮಾಡಿದ್ದಕ್ಕೆ ದೇಶದ ಕ್ಷಮೆ ಕೇಳಿ ಎಂದು ಸೂಚಿಸಿದೆ.
ರಾಹುಲ್ ಆರೋಪ:
ಕಳೆದ ಲೋಕಸಭಾ ಚುನಾವಣೆ ವೇಳೆ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಶಕುನ್ ರಾಣಿ ಎಂಬುವವರು ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ರಾಹುಲ್ ಗಾಂಧಿ ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು.
ಇದಕ್ಕೆ ಪೂರಕವಾಗಿ ಮತದಾರರ ಪಟ್ಟಿಯಲ್ಲಿ ಎರಡು ಕಡೆ ಶಕುನ್ ರಾಣಿ ಹೆಸರಿರುವುದು ಮತ್ತು ಮತ ಚಲಾಯಿಸಿದ ಬಳಿಕ ಮತಗಟ್ಟೆ ಅಧಿಕಾರಿ ಟಿಕ್ ಮಾಡಿರುವ ದಾಖಲೆ ಬಿಡುಗಡೆಗೊಳಿಸಿದ್ದರು.ಒಮ್ಮೆ ಮಾತ್ರ ಆಕೆ ಮತ ಚಲಾವಣೆ:ಆ.7ರಂದು ತಾವು ಸುದ್ದಿಗೋಷ್ಠಿಯಲ್ಲಿ ತೋರಿಸಿದ ದಾಖಲೆಗಳು ಚುನಾವಣಾ ಆಯೋಗದಿಂದ ಬಂದಿವೆ ಎಂದು ಹೇಳಿದ್ದೀರಿ. ಇದು ಚುನಾವಣಾ ಆಯೋಗದ ಡೇಟಾ. ಮತಗಟ್ಟೆ ಅಧಿಕಾರಿ ನೀಡಿದ ದಾಖಲೆಗಳ ಪ್ರಕಾರ ಶಕುನ್ ರಾಣಿ ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ಆರೋಪಿಸಿದ್ದೀರಿ. ಈ ಸಂಬಂಧ ಶಕುನ್ ರಾಣಿ ಅವರನ್ನು ವಿಚಾರಣೆ ಮಾಡಿದಾಗ ಅವರು ಎರಡು ಬಾರಿ ಅಲ್ಲ, ಒಮ್ಮೆ ಮಾತ್ರ ಮತ ಚಲಾಯಿಸಿದ್ದಾಗಿ ಹೇಳಿದ್ದಾರೆ.
ನೀವು ತೋರಿಸಿದ ದಾಖಲೆ ಮತಗಟ್ಟೆ ಅಧಿಕಾರಿ ನೀಡಿದ ದಾಖಲೆಯಲ್ಲ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.ತಮ್ಮ ಬಳಿ ಇರುವ ದಾಖಲೆ ಸಲ್ಲಿಸಿ:ಶಕುನ್ ರಾಣಿ ಅಥವಾ ಬೇರೆ ಯಾರಾದರೂ ಎರಡು ಬಾರಿ ಮತ ಚಲಾಯಿಸಿದ್ದಲ್ಲಿ ಆ ಸಂಬಂಧ ನಿಮ್ಮ ಬಳಿ ಇರುವ ದಾಖಲೆಗಳನ್ನು ಒದಗಿಸಿ. ಇದರಿಂದ ನಾವು ವಿಸ್ತೃತ ವಿಚಾರಣೆ ನಡೆಸಲು ಅನುಕೂಲವಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರು ರಾಹುಲ್ ಗಾಂಧಿಗೆ ಬರೆದಿರುವ ಪತ್ರದಲ್ಲಿ ಸೂಚಿಸಿದ್ದಾರೆ.==
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.