
ಮಂಗಳೂರು (ಆ.11): ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ಎಸ್ಐಟಿ ಈಗಾಗಲೇ ತನಿಖೆ ಕೈಗೊಂಡಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಕುಳಿತವರು, ತನಿಖೆ ಹೇಗೆ ನಡೆಯಬೇಕು ಎಂದು ನಿರ್ದೇಶಿಸಿ, ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ಆಗುವಂತಹ ಹೇಳಿಕೆ ನೀಡಿ ಅಂತಿಮ ತೀರ್ಪು ಸಹ ಕೊಟ್ಟು ಬಿಡುತ್ತಿದ್ದಾರೆ. ಇಂತಹ ಅತಿರೇಕದ ವರ್ತನೆಗಳಿಗೆ ರಾಜ್ಯ ಸರ್ಕಾರ ಕೂಡಲೇ ಕಡಿವಾಣ ಹಾಕಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಒತ್ತಾಯಿಸಿದ್ದಾರೆ. ಕ್ಷೇತ್ರದ ಬಗ್ಗೆ ಪೂರ್ವಾಗ್ರಹ ಪೀಡಿತ ಅಜೆಂಡಾಗಳನ್ನು ಹೊಂದಿರುವವರು ಅಪಪ್ರಚಾರ ನಡೆಸುತ್ತಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿ ಭಕ್ತರು ಸಹನೆ ಕಳೆದುಕೊಳ್ಳಲು ಕಾರಣವಾಗುತ್ತಿದೆ. ಇದು ಪದೇ ಪದೇ ಪುನರಾವರ್ತನೆಯಾಗಿ ಹಿಂದೂಗಳು ಎದ್ದು ನಿಂತರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದರು.
ಈಗ ಧರ್ಮಸ್ಥಳ ಟಾರ್ಗೆಟ್: ಈ ಹಿಂದೆ ಎಡಪಂಥೀಯರು ಹಾಗೂ ಹಿಂದೂ ವಿರೋಧಿ ಶಕ್ತಿಗಳೆಲ್ಲಾ ರಾಮಸೇತು, ತಿರುಪತಿ, ಕಾಶಿ, ಶಬರಿಮಲೆ, ಈಶಾ, ಅನಂತಪದ್ಮನಾಭ, ಸೇರಿದಂತೆ ಹಿಂದೂ ಶ್ರದ್ಧಾ ಕೇಂದ್ರಗಳ ವಿರುದ್ಧ ಷಡ್ಯಂತರ ರೂಪಿಸಿದ್ದು ಇದೀಗ ಧರ್ಮಸ್ಥಳ ಅವರ ಟಾರ್ಗೆಟ್ ಆಗಿದೆ. ಎಸ್ಐಟಿ ತನಿಖೆ ಯಾವ ಹಂತಕ್ಕೆ ಬೇಕಾದರೂ ಹೋಗಲಿ. ಅಂತಿಮವಾಗಿ ಸತ್ಯಾಂಶ ಹೊರ ಬಂದು ಶ್ರೀ ಕ್ಷೇತ್ರದಲ್ಲಿ ಯಾವುದೇ ಲೋಪವಾಗಿಲ್ಲ ಎಂಬುದು ಬಹಿರಂಗವಾದರೆ, ಕ್ಷೇತ್ರದ ತೇಜೋವಧೆ ಮಾಡಿ, ಭಕ್ತರ ನಂಬಿಕೆಗಳನ್ನು ಘಾಸಿಗೊಳಿಸಿದ ದುರುಳರಿಗೆ ಯಾವ ಶಿಕ್ಷೆ ಎಂಬುದನ್ನು ಸರ್ಕಾರ ತಿಳಿಸಬೇಕು. ಕೂಡಲೇ ಈ ಎಲ್ಲ ವಿಚಾರಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿ ಭಕ್ತರು ಬೀದಿಗಿಳಿಯುವ ಮುನ್ನ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಶಾಸಕರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಎಸ್‌ಐಟಿ ಮಧ್ಯಂತರ ವರದಿ ಪ್ರಕಟಿಸಲಿ: ಧರ್ಮಸ್ಥಳದಲ್ಲಿ ಅಸ್ಥಿಪಂಜರ ಪ್ರಕರಣ ಸಂಬಂಧ ಎಸ್‌ಐಟಿ ಮಧ್ಯಂತರ ವರದಿ ಪ್ರಕಟಿಸಬೇಕು ಎಂದು ಆಗ್ರಹಿಸಿರುವ ಜೈನ ಸಮಾಜದ ಮುಖಂಡರು, ಧಾರವಾಡದಲ್ಲಿ ಆ. 11ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಅಲ್ಲದೇ ಅದೇ ದಿನ ಹಿರಿಯ ಮುಖಂಡರು, ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರನ್ನು ಭೇಟಿಯಾಗಿ ಕೆಲ ಬೇಡಿಕೆ ಈಡೇರಿಸಲು ಒತ್ತಾಯಿಸಲಿದ್ದಾರೆ. ಇಲ್ಲಿನ ವರೂರಿನಲ್ಲಿ ಜೈನಮುನಿ ಶ್ರೀ ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ರಾಜ್ಯದ ವಿವಿಧ ಪ್ರದೇಶದ ಜೈನ ಸಮಾಜದ ಮುಖಂಡರು ಸಭೆ ನಡೆಸಿ ಈ ನಿರ್ಧಾರ ಕೈಗೊಂಡರು.
ವಿಶೇಷ ತನಿಖಾ ತಂಡ ಮಧ್ಯಂತರ ವರದಿ ಪ್ರಕಟಿಸಬೇಕು. ಅನಾಮಧೇಯ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಬೇಕು. ಈತ ಗುರುತಿಸಿದ್ದ ಪಾಯಿಂಟ್‌ಗಳು ಮುಗಿದಿವೆ. ಬಾಹುಬಲಿ ಅಹಿಂಸಾ ತತ್ವದ ಪ್ರತಿಪಾದಕರು. ಅವರ ಜಾಗದಲ್ಲಿಯೇ ಅಸ್ಥಿ ಹುಡುಕಲು ಹೊರಟಿರುವುದು ಸರಿಯಲ್ಲ. ಮುಂದುವರಿಯಲು ಬಿಟ್ಟರೆ ಮಂಜುನಾಥ ಸ್ವಾಮಿ ದೇವಸ್ಥಾನವನ್ನೂ ನೆಲಸಮಗೊಳಿಸುವ ಷಡ್ಯಂತ್ರ ಇದರ ಹಿಂದಿದೆ ಎಂದು ಮುಖಂಡರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಕರಣ ಸಂಬಂಧ ಗಿರೀಶ ಮಟ್ಟಣ್ಣವರ ಕೂಡಲೇ ಕ್ಷಮೆಯಾಚಿಸಬೇಕು ಮತ್ತು ಅವರ ಮಂಪರು ಪರೀಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧಾರವಾಡದ ಕಲಾಭವನದಿಂದ ಹೊರಟು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಒಂದು ವೇಳೆ ಮುಖ್ಯಮಂತ್ರಿ, ಗೃಹ ಮಂತ್ರಿಗಳು ನಮ್ಮ ಬೇಡಿಕೆ ಈಡೇರಿಸಲು ವಿಫಲವಾದಲ್ಲಿ ಸೆ. ೧ರಂದು ಧಾರವಾಡ ಬಳಿಯ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಹೋರಾಟಕ್ಕಿಳಿಯಲಾಗುವುದು ಎಂದು ಸಭೆ ಸೇರಿದ್ದವರು ಎಚ್ಚರಿಕೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.