
ಮೈಸೂರು (ಮಾ.1) ಮಾಜಿ ಸಚಿವ, ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯಲು ನಿರ್ಧರಿಸಿದ್ದು, ಈ ವಿಚಾರ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿನಲ್ಲಿರುವ ಅವರ ಉದಯಗಿರಿ ನಿವಾಸ ಮುಂಭಾಗ ಜಮಾಯಿಸಿದ ಅಭಿಮಾನಿಗಳು ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸಿ ಕೆಲಕಾಲ ಪ್ರತಿಭಟಿಸಿದ ಪ್ರಸಂಗ ಮಂಗಳವಾರ ನಡೆಯಿತು.
ಈ ವೇಳೆ ಅಭಿಮಾನಿಯೊಬ್ಬ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ(Suicide)ಗೆ ಯತ್ನಿಸಿದ್ದಲ್ಲದೆ, ಮತ್ತೊಬ್ಬ ಅಭಿಮಾನಿ ತನ್ವೀರ್ ಸೇಠ್(Tanveer Seth) ಮನೆ ಮೇಲೆ ಹತ್ತಿ ಧುಮುಕಲು ಯತ್ನಿಸಿದ ಘಟನೆಯೂ ನಡೆಯಿತು. ಇದರಿಂದ ಕಾರ್ಯಕರ್ತರನ್ನು ಸಮಾಧಾನಪಡಿಸಲು ಸೇಠ್ ಹರಸಾಹಸಪಡಬೇಕಾಯಿತು. ಈ ಅಭಿಮಾನ ಕಂಡು ಒಂದು ಹಂತದಲ್ಲಿ ಭಾವುಕರಾದ ಅವರು, ಅನಾರೋಗ್ಯ ಕಾರಣದಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ಆದರೂ ಈ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ. ವರಿಷ್ಠರು ಚುನಾವಣೆಗೆ ನಿಲ್ಲುವಂತೆ ಹೇಳಿದರೆ ನಿಲ್ಲುತ್ತೇನೆಂದು ಸ್ಪಷ್ಟನೆ ನೀಡಿದರು.
ಹೈಕಮಾಂಡ್ ಹೇಳಿದ್ರೆ ನಾನು ಎನ್‌ಆರ್ ಕ್ಷೇತ್ರದಲ್ಲಿ ಸ್ವರ್ಧೆ ಮಾಡಲೇಬೇಕು, ತನ್ವೀರ್ ಸೇಠ್ಗೆ ಟಾಂಗ್ ಕೊಟ್ಟ ಜಮೀರ್
ಡಿಸೆಂಬರ್ನಲ್ಲೇ ಪತ್ರ: ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆವ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದ ಸಂದರ್ಭದಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರಿಗೆ ಈ ಕುರಿತು ಪತ್ರ ಬರೆದಿದ್ದೆ. ಈ ಸಂಬಂಧ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ, ಯಾರಿಗೂ ಹೇಳದಂತೆ ಸೂಚಿಸಿದ್ದರು ಎಂದರು.
2019ರಲ್ಲಿ ಆದ ಮಾರಣಾಂತಿಕ ಹಲ್ಲೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ಇನ್ನೂ ಚೇತರಿಸಿಕೊಂಡಿಲ್ಲ. ಕಾರ್ಯಕರ್ತರು ಹಾಗೂ ಅಭಿಮಾನಿಗಳ ಒತ್ತಡ ಇದ್ದದ್ದರಿಂದ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದೆ. ಇತ್ತೀಚೆಗೆ ಛತ್ತೀಸ್‌ಗಡದ ರಾಯಪುರದಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನದಲ್ಲೂ ವರಿಷ್ಠರು ಆತುರದ ನಿರ್ಧಾರ ಕೈಗೊಳ್ಳದಂತೆ ನಿರ್ದೇಶಿಸಿದ್ದರು. ಈ ವಿಚಾರದಲ್ಲಿ ಡಿಸೆಂಬರ್‌ನಿಂದ ಗೌಪ್ಯತೆ ಕಾಯ್ದುಕೊಂಡಿದ್ದೆ. ಮಾಧ್ಯಮಗಳ ಮೂಲಕ ಇದೀಗ ಬಹಿರಂಗವಾಗಿದೆ ಎಂದರು.
ಜೊತೆಗೂಡಿ ಬದುಕಿದಾಗ ಭವ್ಯ ಭಾರತ ನಿರ್ಮಾಣ : ತನ್ವೀರ್ ಸೇಠ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.