* ಉಭಯ ನಾಯಕ ಕಿತ್ತಾಟಕ್ಕೆ ಮುಸಿ ಮುಸಿ ನಕ್ಕ ನೆಟ್ಟಿಗರು
* ಪ್ರಿಯಾಂಕ್ ಕಾಲೆಳೆದ ಮತ್ತಿಮೂಡ
* ಮತ್ತಿಮೂಡಗೆ ಖರ್ಗೆ ತಿರುಗೇಟು
ವರದಿ: ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಲಬುರಗಿ
ಕಲಬುರಗಿ(ಮೇ.21): ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರಿಗೆ ಜನ್ಮದಿನದ ಶುಭಾಶಯ ತಿಳಿಸುವ ವಿಚಾರ ಕಲಬುರಗಿ ಜಿಲ್ಲೆಯ ಇಬ್ಬರು ಶಾಸಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಯಾರು ಆ ಶಾಸಕರು ? ಏನದು ವಾಕ್ಸಮರ? ಎನ್ನುವುದರ ವಿವರ ಇಲ್ಲಿದೆ ನೋಡಿ.
undefined
ಮೊನ್ನೆ ಮೊನ್ನೆ ಅಂದ್ರೆ ಮೇ. 18 ಕರ್ನಾಟಕದ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರ ಜನ್ಮ ದಿನ. ಅವರಿಗೆ ಹಲವರು ಖುದ್ದಾಗಿ ಶುಭ ಕೋರಿದ್ದರು. ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಕೋರಿದ್ದರು. ಮತ್ತೆ ಕೆಲವರು ಫೋನ್ ಮಾಡಿ ಶುಭ ಕೋರಿದ್ದರು. ಮತ್ತೆ ಕೆಲವರು ಸೈಲೆಂಟ್ ಆಗಿದ್ದವರೂ ಇದ್ದಾರೆ. ಆದರೆ ಮಾಜಿ ಸಚಿವ ಕಾಂಗ್ರೆಸ್ ವಕ್ತಾರ ಪ್ರಿಯಾಂಕ್ ಖರ್ಗೆ, ರಾಜ್ಯಪಾಲರ ಹುಟ್ಟುಹಬ್ಬಕ್ಕೆ ಶುಭ ಕೋರಲಿಲ್ಲ ಎನ್ನುವುದು, ಕಲಬುರಗಿ ಗ್ರಾಮೀಣ ಮತ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ ಅವರನ್ನು ಕೆರಳಿಸಿದೆ.
Kalaburagi: ಬಿಜೆಪಿಯವರು ದಲಿತ ವಿರೋಧಿ: ಸಿದ್ದರಾಮಯ್ಯ ವಾಗ್ದಾಳಿ
ಪ್ರಿಯಾಂಕ್ ಕಾಲೆಳೆದ ಮತ್ತಿಮೂಡ
ಕಲಬುರಗಿಯ ಆ್ಯಕ್ಟೀವ್ ನಾಯಕ ಎಂದೇ ಬಿಂಬಿಸಿಕೊಳ್ಳುವ ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿಷಯಗಳ ಬಗ್ಗೆ ಸುಖಾ ಸುಮ್ಮನೆ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರು ನಮ್ಮ ರಾಜ್ಯದ ರಾಜ್ಯಪಾಲರಿಗೆ ಶುಭಾಶಯ ತಿಳಿಸುವಷ್ಟು ವ್ಯವಧಾನವಿಲ್ಲವೇ? ಸಣ್ಣ ಪುಟ್ಟ ವಿಷಯಗಳಿಗೆ ಪತ್ರಿಕಾಗೋಷ್ಠಿ ನಡೆಸಿ ವಿನಾಕಾರಣ ವಿವಾದ ಸೃಷ್ಟಿಸುವ, ಎಲ್ಲದಕ್ಕೂ ಟ್ವೀಟ್ ಮಾಡಿ ಫೇಸ್‌ಬುಕ್‌ನಲ್ಲಿ ಉದ್ದುದ್ದ ಬರೆಯುವ ನಿಮಗೆ ಮತ್ತೊಬ್ಬ ದಲಿತ ನಾಯಕರನ್ನು ಸೌಜನ್ಯಕ್ಕೂ ಗೌರವಿಸಲು ಆಗಲಿಲ್ಲ. ನಿಮ್ಮ ದಲಿತವಾದ ಬೂಟಾಟಿಕೆ ಎಂದು ಬಿಜೆಪಿ ಶಾಸಕ ಬಸವರಾಜ ಮತ್ತಿಮೂಡ, ಪ್ರಿಯಾಂಕ ಖರ್ಗೆ ಅವರನ್ನ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ತಿರುಗೇಟು
ತಮ್ಮ ಕಾಲೆಳೆದ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ್ ಅವರಿಗೆ ಮಾತಿನಲ್ಲೇ ತಿರುಗೇಟು ನೀಡಿರುವ ಪ್ರಿಯಾಂಕ್ ಖರ್ಗೆ, ಯಾವುದೇ ಗಣ್ಯ ವ್ಯಕ್ತಿಗಳ ಕುರಿತು ಗೌರವ ಮತ್ತು ಅಭಿಮಾನ ಸದಾ ನನ್ನ ಹೃದಯದಲ್ಲಿ ಇರುತ್ತದೆ. ಅದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಪೋಸ್ಟ್ ಮಾತ್ರವೇ ಸಾಕ್ಷಿ ಅಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಮತ್ತಿಮೂಡ್ ಅವರ ಈ ಹೇಳಿಕೆಗೆ ಫೇಸ್‌ಬುಕ್‌ನಲ್ಲಿಯೇ ಉತ್ತರಿಸಿ ತಮ್ಮದೇ ರೀತಿಯಲ್ಲಿ ಕೌಂಟರ್ ಕೊಟ್ಟಿರುವ ಪ್ರಿಯಾಂಕ್ ಖರ್ಗೆ, ನಾನು ನಡೆಸುವ ಪತ್ರಿಕಾಗೋಷ್ಠಿಗಳನ್ನು 'ಚಿಕ್ಕ ಪುಟ್ಟ ವಿಚಾರ' ಎಂದು ಹೇಳಿದ್ದೀರಿ. ಇದು ನನ್ನ ಆಶ್ಚರ್ಯಕ್ಕೆ ಕಾರಣವಾಗಿದೆ. ನೀವು ಕೂಡ ಒಂದು ಮೀಸಲು ಕ್ಷೇತ್ರದ ಶಾಸಕರಾಗಿದ್ದೀರಿ, ನಿಮ್ಮದೇ ಕ್ಷೇತ್ರದಲ್ಲಿ 'ದಲಿತ ರೈತರು', 'ದಲಿತ ಸಮುದಾಯದವರು' ಈ ಸರ್ಕಾರದ ಜನ ವಿರೋಧಿ ನೀತಿಗಳಿಂದ ಕಣ್ಣೀರಿಡುತ್ತಿದ್ದಾರೆ. ಇದು ನಿಮ್ಮ ಕಣ್ಣಿಗೆ ಕಾಣದಾಗಿರುವುದು ವಿಷಾದನೀಯ.
ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ನಿಮ್ಮ ಬಿಜೆಪಿ ಸರ್ಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದೆ. ದಲಿತ ರೈತರಿಗೆ ನಷ್ಟವಾಗಿದೆ. ಬಡ ಜನರ ದುಡ್ಡನ್ನು ಲೂಟಿ ಮಾಡಲು ಒಂದೇ ಬೋರ್ ವೆಲ್ ಗೆ ದುಪ್ಪಟ್ಟು ಬೆಲೆ ಕಟ್ಟಿಸಲಾಗುತ್ತಿದೆ. ಇದು ನಿಮಗೆ 'ಚಿಕ್ಕ ಪುಟ್ಟ'ವಾಗಿ ವಿಚಾರವೇ? ಎಂದು ಕುಟುಕಿದ್ದಾರೆ.
ಪಿಎಸ್ಐ ಅಕ್ರಮದಿಂದ 57 ಸಾವಿರ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಈ ತಪ್ಪನ್ನು ನಿಮ್ಮದೇ ಬಿಜೆಪಿ ಸರ್ಕಾರ ಒಪ್ಪಿಕೊಂಡು ಈಗಾಗಲೇ ಪರೀಕ್ಷೆಯನ್ನು ರದ್ದು ಪಡಿಸಿ ಮರು ಪರೀಕ್ಷೆಗೆ ಆದೇಶಿಸಿದೆ. ಇದರ ಬಗ್ಗೆ ಮಾತನಾಡುವುದು ನಿಮಗೆ 'ಚಿಕ್ಕ ಪುಟ್ಟ' ವಿಚಾರವೇ? ಎಂದು ವಾಗ್ಧಾಳಿ ನಡೆಸಿದ್ದಾರೆ.
KKRDB ಯೋಜನೆಯ ಬಜೆಟ್ ಕಟ್ ಮಾಡಲಾಗಿದೆ. ವಿದ್ಯಾಸಿರಿ ಯೋಜನೆಯನ್ನು ಸ್ಥಗಿತಗೊಳಿಸಿದ್ದಾರೆ. ಕೃಷಿಹೊಂಡ ಯೋಜನೆಯನ್ನು ನಿಲ್ಲಿಸಿದ್ದಾರೆ. ಇವುಗಳ ಬಗ್ಗೆ ಮಾತನಾಡುವುದು ನಿಮಗೆ 'ಚಿಕ್ಕ ಪುಟ್ಟ' ವಿಚಾರವೇ? ನಿಮ್ಮಿಂದ ಇಂತಹ ಬಾಲಿಶ ಹೇಳಿಕೆಗಳನ್ನು ನಿರೀಕ್ಷಿಸಿರಲಿಲ್ಲ. ವಾಟ್ಸಾಪ್ ಯುನಿವರ್ಸಿಟಿ ನಿಮ್ಮನ್ನು ಬಾಚಿ ಬಿಗಿದಪ್ಪಿದಂತಿದೆ ಎಂದು ಪ್ರಿಯಾಂಕ್ ಖರ್ಗೆ ಛಾಟಿ ಬೀಸಿದ್ದಾರೆ.
ಈ ರೀತಿ ಬಾಲಿಶ ಹೇಳಿಕೆಗಳನ್ನು ಇಂದು ಕಲಬುರ್ಗಿಯ ಎಲ್ಲಾ ಬಿಜೆಪಿ ನಾಯಕರುಗಳು ಫ್ಯಾಶನ್ ಮಾಡಿಕೊಂಡಿರುವುದು ವಿಪರ್ಯಾಸದ ಸಂಗತಿ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಜನರ ಜೀವನಕ್ಕೆ ಸಂಬಂಧಪಟ್ಟ ವಿಚಾರಗಳಾವುವು? ಯಾರು ಯಾರಿಗೆ ವಿಶ್ ಮಾಡಿದ್ದಾರೆ ಎಂದು ಹುಡುಕುವ ವಿಚಾರಗಳಾವುವು? ಇವುಗಳ ನಡುವಿನ ವ್ಯತ್ಯಾಸದ ಅರಿವಿರಬೇಕು ಎಂಬುದು ನನ್ನ ವೈಯಕ್ತಿಕ ಭಾವನೆ ಎಂದು ವ್ಯಂಗ್ಯವಾಡಿದ್ದಾರೆ.
Belagavi: ಆರ್‌ಎಸ್ಎಸ್ ಮುಖ್ಯಸ್ಥ ಹೆಡ್ಗೆವಾರ್ ಬಗ್ಗೆ ಪಠ್ಯಪುಸ್ತಕದಲ್ಲಿ ಸೇರಿಸೋರೆ': ಎಂಎಲ್‌ಸಿ ರವಿಕುಮಾರ್
ಬಸವರಾಜ ಮತ್ತಿಮೂಡ್ ಅವರೇ ನಿಮಗೆ ಬಾಲಿಶ ಹೇಳಿಕೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದರೆ ನಿಮ್ಮ ಸಾಮಾಜಿಕ ಜಾಲತಾಣವನ್ನು ನಿರ್ವಹಿಸುವ ತಂಡವನ್ನಾದರೂ ಬದಲಾಯಿಸಿ. ಇದು ನಿಮ್ಮ ಅಭಿರುಚಿಗೆ ತಕ್ಕ ಹೇಳಿಕೆಗಳಲ್ಲ. ನಾನು ದಲಿತರ ಪರ ಮಾತನಾಡುವುದನ್ನ ಚಿಕ್ಕ ಪುಟ್ಟ ವಿಚಾರ ಎನ್ನುವುದು ತುಂಬಾ ತಪ್ಪಾಗುತ್ತದೆ. ಈ ರೀತಿ ಮಾತನಾಡುವುದು ತಮಗೆ ಸೂಕ್ತವಲ್ಲ ಎಂದು ಸಲಹೆ ನೀಡಿದ್ದಾರೆ.
ನಾನು ನಿಮ್ಮ ಜೊತೆಯಲ್ಲಿ ಮುಕ್ತವಾಗಿ ಚರ್ಚೆಗೆ ಬರಲು ಸಿದ್ದನಿದ್ದೇನೆ. KKRDBಗೆ ಅನುದಾನ ಸ್ಥಗಿತಗೊಳಿಸಿರುವ ಬಗ್ಗೆ ಬಿಜೆಪಿ ಸರ್ಕಾರದಲ್ಲಿ ಯಾಕಿಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಬಿಜೆಪಿ ಆಳ್ವಿಕೆಯಲ್ಲಿ ಪಿಎಸ್ಐ ಪ್ರಕರಣ ಹೇಗೆ ನಡೆಯಿತು, ಗಂಗಾ ಕಲ್ಯಾಣದಲ್ಲಿ ಹಗರಣ ನಡೆದಿದ್ಹೇಗೆ? ಏರುತ್ತಲೇ ಸಾಗುತ್ತಿರುವ ಪೆಟ್ರೋಲ್, ಡೀಸೆಲ್, LPG ಹಾಗೂ ಅಗತ್ಯ ವಸ್ತುಗಳ ಬೆಲೆಗಳು ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ಮಾಡಲು ಮತ್ತು ಜನರನ್ನು ಸಂಕಷ್ಟದಿಂದ ದೂರ ಮಾಡುವ ವಿಚಾರದ ಚರ್ಚೆಗೆ ನಾನು ಸದಾ ಸಿದ್ದನಿದ್ದೇನೆ ಎಂದು ಸವಾಲೆಸಿದಿದ್ದಾರೆ. ಒಟ್ಟಾರೆ ರಾಜ್ಯಪಾಲರ ಹುಟ್ಟುಹಬ್ಬಕ್ಕೆ ಶುಭ ಕೋರುವ ವಿಚಾರದಲ್ಲೂ ಶಾಸಕರು ಸಾಮಾಜಿಕ ಜಾಲತಾಣಗಳಲ್ಲಿ ಕಿತ್ತಾಡಿಕೊಳ್ಳುತ್ತಿರುವುದು ಕಂಡು ನೆಟ್ಟಿಗರು ಮುಸಿ ಮುಸಿ ನಗುವಂತಾಗಿದೆ.