ರಾಜ್ಯ ಕಾಂಗ್ರೆಸ್‍ನಲ್ಲಿ ಪರಿಷತ್ ಟಿಕೆಟ್ ಗಲಾಟೆ ಜೋರಾಗಿದೆ. ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ.
ಬೆಂಗಳೂರು, (ಮೇ.21): ರಾಜ್ಯ ಕಾಂಗ್ರೆಸ್‍ನಲ್ಲಿ ಪರಿಷತ್ ಟಿಕೆಟ್ ಗಲಾಟೆ ಜೋರಾಗಿದೆ. ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ.
ಇದರಿಂದ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿದೆ. ಈ ಹಿನ್ನೆಲೆಯಲ್ಲಿ ಖುದ್ದು ಚರ್ಚೆ ಮಾಡಲು ಸಿದ್ದರಾಮಯ್ಯಗೆ ದೆಹಲಿಗೆ ಬುಲಾವ್ ನೀಡಿದೆ. ಹೈಕಮಾಂಡ್ ಕರೆಯಂತೆ ಸಿದ್ದರಾಮಯ್ಯ ಅವರು ಇಂದು(ಶನಿವಾರ) ದಿಢೀರ್ ದೆಹಲಿಗೆ ಹಾರಿದ್ದು, ಕಾಂಗ್ರೆಸ್‌ನಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ದಿಲ್ಲಿಗೆ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್: ಕಾಂಗ್ರೆಸ್ ವರಿಷ್ಠರ ಬುಲಾವ್!
ವಿಧಾನಪರಿಷತ್ತಿಗೆ ಹಿರಿಯ ನಾಯಕ ಎಸ್.ಆರ್. ಪಾಟೀಲ್ ಆಯ್ಕೆ ವಿಚಾರ ರಾಜ್ಯ ಕಾಂಗ್ರೆಸ್‌ನ ಎರಡು ಪ್ರಬಲ ಬಣಗಳ ನಡುವೆ ಕಗ್ಗಂಟು ಸೃಷ್ಟಿಸಿದ್ದು, ಈ ಸಮಸ್ಯೆ ಬಗೆಹರಿಸಲು ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ದೆಹಲಿಗೆ ಬುಲಾವ್ ನೀಡಿದೆ. ಶಿವಕುಮಾರ್ ಶುಕ್ರವಾರ ದೆಹಲಿಗೆ ತೆರಳಿದ್ದು, ಸಿದ್ದರಾಮಯ್ಯ ಶನಿವಾರ ತೆರಳಲಿದ್ದಾರೆ. ರಾಜ್ಯಸಭೆಗೆ ಜೈರಾಂ ರಮೇಶ್ ಹೆಸರನ್ನು ಹೈಕಮಾಂಡ್ ಬಹುತೇಕ ಅಂತಿಮಗೊಳಿಸಿದೆ. ಹೀಗಾಗಿ ವಿಧಾನ ಪರಿಷತ್‌ನಲ್ಲಿ ಪಕ್ಷಕ್ಕೆ ದೊರೆಯುವ ಎರಡು ಸ್ಥಾನಕ್ಕೆ ಹೆಸರು ಅಂತಿಮಗೊಳಿಸುವುದು ಬಾಕಿಯಿತ್ತು. ಈ ಬಗ್ಗೆ ರಾಜ್ಯ ನಾಯಕರೇ ಹೈಕಮಾಂಡ್‌ಗೆ ಹೆಸರು ಸೂಚಿಸಬೇಕಿತ್ತು.
ಪಾಟೀಲ್ ವಿಚಾರದಲ್ಲಿ ಜಟಾಪಟಿ: ಡಿ.ಕೆ. ಶಿವಕುಮಾರ್ ಅವರು ಉತ್ತರ ಕರ್ನಾಟಕದ ಹಿರಿಯ ನಾಯಕ ಎಸ್.ಆರ್.ಪಾಟೀಲ್ ಪರ ಲಾಬಿ ನಡೆಸಿರುವುದು ಹಾಗೂ ಪಾಟೀಲ್ ಆಯ್ಕೆಗೆ ಸಿದ್ದರಾಮಯ್ಯ ಸುತರಾಂ ಒಪ್ಪದಿರುವುದು ಕಗ್ಗಂಟು ಸೃಷ್ಟಿಸಿದೆ ಎನ್ನಲಾಗಿದೆ. ಎರಡು ಸ್ಥಾನಗಳ ಪೈಕಿ ಒಂದನ್ನು ಲಿಂಗಾಯತ ಸಮುದಾಯಕ್ಕೆ ನೀಡಬೇಕು ಎಂಬ ಬಗ್ಗೆ ಉಭಯ ನಾಯಕರಲ್ಲೂ ಭಿನ್ನಾಭಿಪ್ರಾಯ ಇಲ್ಲ. ಆದರೆ, ಸ್ಥಳೀಯ ಸಂಸ್ಥೆಯಿಂದ ಪರಿಷತ್‌ಗೆ ಟಿಕೆಟ್ ನಿರಾಕರಣೆ ನಂತರ ಎಸ್.ಆರ್.ಪಾಟೀಲ್ ಪಕ್ಷದ ವೇದಿಕೆ ಹೊರತಾಗಿ ಕೆಲ ಹೋರಾಟಗಳನ್ನು ಸಂಘಟಿಸಿದ್ದರು. ಇದು ನೇರವಾಗಿ ಸಿದ್ದರಾಮಯ್ಯ ವಿರುದ್ಧ ಎಂದು ಬಿಂಬಿಸಲಾಗಿತ್ತು. ಹೀಗಾಗಿ ಸಿದ್ದರಾಮಯ್ಯ ಅವರು ಪಾಟೀಲ್‌ಗೆ ಟಿಕೆಟ್ ಬೇಡ ಎಂದು ಹೇಳಿ ಮಲ್ಲಿಕಾರ್ಜುನ ಖರ್ಗೆ ಅವರು ಸೂಚಿಸುತ್ತಿರುವ ಅಲ್ಲಂ ವೀರಭದ್ರಪ್ಪ ಪರ ನಿಂತಿದ್ದಾರೆ ಎನ್ನಲಾಗಿದೆ.
ಮಹಿಳೆ-ಅಲ್ಪಸಂಖ್ಯಾತ ಪರ ಲಾಬಿ: ಉಳಿದ ಒಂದು ಸ್ಥಾನಕ್ಕೆ ಮೂಲಗಳ ಪ್ರಕಾರ ಮಹಿಳೆಯೊಬ್ಬರಿಗೆ ವಿಧಾನಪರಿಷತ್ತಿಗೆ ಕಳುಹಿಸಬೇಕು ಎಂದು ಹೈಕಮಾಂಡ್‌ನಿಂದಲೇ ಸೂಚಿನೆಯಿದೆ. ಅಲ್ಪಸಂಖ್ಯಾತ (ಕ್ರಿಶ್ಚಿಯನ್)ಗೂ ಅವಕಾಶ ನೀಡಬೇಕು ಎಂಬ ಅಭಿಪ್ರಾಯವಿದೆ. ಆದರೆ, ಆಕಾಂಕ್ಷಿಗಳು ಮಾತ್ರ ಒಕ್ಕಲಿಗ (ಮಾಜಿ ಶಾಸಕ ನಾರಾಯಣಸ್ವಾಮಿ, ಬಿ.ಎಲ್. ಶಂಕರ್), ಹಿಂದುಳಿದ (ಲಕ್ಷ್ಮೀನಾರಾಯಣ, ನಾಗರಾಜ್ ಜಾಧವ್, ಎಂ.ಸಿ. ವೇಣುಗೋಪಾಲ್), ಮಹಿಳೆ (ರಾಣಿ ಸತೀಶ್, ಆರತಿ ಕೃಷ್ಣ, ಪುಷ್ಪಾ ಅಮರನಾಥ್) ಹಾಗೂ ಪರಿಶಿಷ್ಟಸೇರಿದಂತೆ ಎಲ್ಲ ಜಾತಿ ಹಾಗೂ ವರ್ಗಗಳಿಂದ ಸುಮಾರು 25ಕ್ಕೂ ಹೆಚ್ಚು ಮಂದಿ ಇದ್ದಾರೆ.