ಶಾಸಕ ಜಿ.ಟಿ.ದೇವೇಗೌಡ ನೇತೃತ್ವದ ಜೆಡಿಎಸ್ ನಿಯೋಗವು ಮೈಸೂರು ಜಿಲ್ಲೆಯ ವಿವಿಧೆಡೆ ರೈತರ ಜಮೀನಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಿತು.
ಮೈಸೂರು (ನ.13): ಶಾಸಕ ಜಿ.ಟಿ.ದೇವೇಗೌಡ ನೇತೃತ್ವದ ಜೆಡಿಎಸ್ ನಿಯೋಗವು ಮೈಸೂರು ಜಿಲ್ಲೆಯ ವಿವಿಧೆಡೆ ರೈತರ ಜಮೀನಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಿತು. ಹುಣಸೂರು ತಾಲೂಕಿನ ಬಿಳಿಕೆರೆ ಸುತ್ತಮುತ್ತಲಿನ ಪ್ರದೇಶಗಳಿಗೆ ಶಾಸಕ ಜಿ.ಡಿ.ಹರೀಶ್ ಗೌಡ, ಮಾಜಿ ಸಚಿವ ಸಾ.ರಾ.ಮಹೇಶ್, ಮಾಜಿ ಶಾಸಕರಾದ ಕೆ. ಮಹದೇವ್, ಎಂ.ಅಶ್ವಿನ್ ಕುಮಾರ್, ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ ಮತ್ತಿತರ ಮುಖಂಡರೊಂದಿಗೆ ತೆರಳಿ, ಬರ ಪರಿಸ್ಥಿತಿ ಅಧ್ಯಯನ ನಡೆಸಿ, ಅವರು ಮಾತನಾಡಿದರು.
ರೈತರ ಕಷ್ಟ ಆಲಿಸದಿದ್ದರೆ ಬೆಳಗಾವಿ ಅಧಿವೇಶನಕ್ಕೆ ಜನಪ್ರತಿನಿಧಿಗಳು ಸುವರ್ಣಸೌಧಕ್ಕೆ ಹೋಗಲೂ ಬಿಡುವುದಿಲ್ಲ ಎಂದು ಎಚ್ಚರಿಸಿದ ಅವರು, ರಾಜ್ಯ ದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಬರ ಅಧ್ಯಯನ ನಡೆಸುತ್ತಿದ್ದೇವೆ. ಈ ನಡುವೆ ಜನಪರ ಹೋರಾಟವೂ ಆರಂಭವಾಗಿದೆ. ಅಧಿವೇಶನದ ವೇಳೆಯೂ ಈ ಸಂಬಂಧ ಹೋರಾಟ ನಡೆಯಲಿದೆ. ಬರ ಪರಿಹಾರಕ್ಕೆ 300 ಕೋಟಿ ರು.ಕೊಡಲಾಗಿದೆ. ಈ ಹಣ ಯಾವುದಕ್ಕೆ ಬಳಕೆ ಆಗಿದೆ? ಒಂದು ಬೋರ್‌ವೆಲ್ ಕೊರೆ ದಿಲ್ಲ. ಕುಡಿಯುವ ನೀರು ಸಮಸ್ಯೆಯೂ ಬಗೆಹರಿದಿಲ್ಲ. ರಸ್ತೆ ಗುಂಡಿಮುಚ್ಚಿಲ್ಲ. ಅಂದ ಮೇಲೆ ಈ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಅವರು ಪ್ರಶ್ನಿಸಿದರು.
ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮಾಡಿರುವುದು ಒಳ್ಳೆಯ ಬೆಳವಣಿಗೆ: ಜಿ.ಟಿ.ದೇವೇಗೌಡ
ಇನ್ನು ಇದೇ ವೇಳೆ ಮಾಜಿ ಸಚಿವ ಸಾ.ರಾ. ಮಹೇಶ್ ಮಾತನಾಡಿ, ಸರ್ಕಾರವನ್ನು ಎಚ್ಚರಿಸಲು ನಮ್ಮ ಪಕ್ಷದಿಂದ ಬರ ಅಧ್ಯಯನ ಮಾಡುತ್ತಿದ್ದೇವೆ. ಇಷ್ಟರಲ್ಲಿ ಸರ್ಕಾರ ಪರಿಹಾರ ಕೊಟ್ಟಿದ್ದರೆ ಬರುತ್ತಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ತಾಲೂಕು ಕೇಂದ್ರಗಳಿಗೆ ಅಧಿಕಾರಿಗಳನ್ನು ಕಳುಹಿಸಿ ಪರಿಸ್ಥಿತಿ ಅವಲೋಕಿಸಬೇಕು ಎಂದು ಒತ್ತಾಯಿಸಿದರು. ಬರ ಪರಿಹಾರ ವಿಷಯವಾಗಿ ಕೇಂದ್ರ ಸರ್ಕಾರದ ಮೇಲೆ ಹೊಣೆ ಹಾಕುವುದು ಬೇರೆ. ನಿಮ್ಮ ಮತ ಹಾಕಿದ ಮತದಾರರಿಗೆ ನಿಮ್ಮ ಪ್ರಯತ್ನ ಏನು? ಕೇಂದ್ರದ ಕಡೆ ಬೊಟ್ಟು ಮಾಡಿ ತಮ್ಮ ಜವಾಬ್ದಾರಿಯನ್ನು ನಿಣುಚಿಕೊಳ್ಳುವುದು ಸರಿಯಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಹುಣಸೂರು ಷಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ, ಜಿಲ್ಲೆಯಲ್ಲಿ ಬರ ವೀಕ್ಷಣೆ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ. ಮಳೆ ಇಲ್ಲದೇ ಬೆಳೆ ಹಾಳಾಗಿದೆ. ರಾಜ್ಯದ ಒಬ್ಬ ರೈತರಿಗೂ ಪರಿಹಾರ ಕೊಟ್ಟಿಲ್ಲ. ಇದು ಸರ್ಕಾರದ ದೊಡ್ಡ ವೈಫಲ್ಯ ಎಂದು ದೂರಿದರು. ರಾಜ್ಯದಲ್ಲಿ 135 ಸೀಟುಗಳೊಂದಿಗೆ ಸುಭದ್ರ ಸರ್ಕಾರ ಕೊಟ್ಟಿದ್ದಾರೆ. ಗ್ಯಾರಂಟಿ ಯೋಜನೆಗೆ 70 ಸಾವಿರ ಕೋಟಿ ಖರ್ಚು ಮಾಡುವ ಸರ್ಕಾರಕ್ಕೆ ಬರ ಪರಿಹಾರಕ್ಕೆ 30 ಸಾವಿರ ಕೋಟಿ ಕೊಡಲಾಗದೇ? ಕೇಂದ್ರ ಸರ್ಕಾರದ ಜವಾಬ್ದಾರಿಯೂ ಇದೆ. ರಾಜ್ಯ ಸರ್ಕಾರಕ್ಕೆ ಹೊಣೆಗಾರಿಕೆ ಇಲ್ಲವೇ? ಎಂದು ಅವರು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಬುರುಡೆ ಬಿಟ್ಟು ಹೋಗಿದ್ದಾರೆ: ಸಂಸದ ಮುನಿಸ್ವಾಮಿ ಟೀಕೆ
ರೈತರ ಸಂಕಷ್ಟ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. 5 ಗಂಟೆ ವಿದ್ಯುತ್ ಬದಲು 3 ಗಂಟೆ ನೀಡಲಾಗುತ್ತಿದೆ. ರಾತ್ರಿ ವೇಳೆ ವಿದ್ಯುತ್ ನೀಡಿದ್ದರಿಂದ ಹುಲಿ ಚಿರತೆ ದಾಳಿ ಮಾಡುತ್ತಿವೆ. ಹೊಸದಾಗಿ ಪಂಪ್ ಸೆಟ್ ಸಂಪರ್ಕಕಕ್ಕೆ ಸಬ್ಸಿಡಿ ರದ್ದು ಪಡಿಸಲಾಗಿದೆ. ಪೂರ್ಣ ವೆಚ್ಚ ಭರಿಸಿ ಪಂಪ್ ಸೆಟ್ ಹಾಕಿಕೊಳ್ಳುವ ಶಕ್ತಿ ರೈತರಿಗೆ ಇದೆಯೇ? ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದರು. ಮಾಜಿ ಶಾಸಕರಾದ ಪಿರಿಯಾಪಟ್ಟಣದ ಕೆ. ಮಹದೇವ್, ಟಿ. ನರಸೀಪುರದ ಎಂ. ಅಶ್ವಿನ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಎನ್. ನರಸಿಂಹಸ್ವಾಮಿ ಮೊದಲಾದವರು ಇದ್ದರು.