* ಮುಸ್ಲಿಂ ಸಮಾಜ ಕಡೆಗಣಿಸಿದರೆ ಸಹಿಸಲ್ಲವೆಂಬ ಎಚ್ಚರಿಕೆ ಸಂದೇಶ ರವಾನೆ
* ಬೆಳಗಾವಿ ವಿಭಾಗ ಮಟ್ಟದಲ್ಲಿ ವೇದಿಕೆ ಸಭೆ ನಡೆಸಲು ನಿರ್ಧಾರ
* ಸದ್ಯ ಧಾರವಾಡದಲ್ಲೊಂದು ಸಭೆ ನಡೆಸಿರುವ ವೇದಿಕೆ ಮುಖಂಡರು
ಶಿವಾನಂದ ಗೊಂಬಿ
ಹುಬ್ಬಳ್ಳಿ(ಮಾ.11): ಕಾಂಗ್ರೆಸ್(Congress) ಬೆಳವಣಿಗೆಯಲ್ಲಿ ಮುಸ್ಲಿಂ(Muslim) ಸಮುದಾಯದವರ ಪಾತ್ರ ಬಹುದೊಡ್ಡದು. ಯಾರೂ ಏನೇ ಹೇಳಿದರೂ ಮುಸ್ಲಿಮರ ಮತಗಳು ಕಡ್ಡಾಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಮೀಸಲು. ಆದರೆ ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಮರ ಕಡೆಗಣನೆ ಹೆಚ್ಚಾಗುತ್ತಿದೆ. ಇದನ್ನು ಹೋಗಲಾಡಿಸಬೇಕೆಂಬ ಉದ್ದೇಶದಿಂದ ಪಕ್ಷದಲ್ಲಿನ ಆ ಸಮುದಾಯದ ಮುಖಂಡರೇ ಸಮಾನ ಮನಸ್ಕರ ವೇದಿಕೆಯನ್ನು ಹುಟ್ಟುಹಾಕಿದ್ದಾರೆ. ಇದು ಪಕ್ಷದಲ್ಲಿನ ಭಿನ್ನಮತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದರಿಂದ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಜಗಜಾಹೀರಾದಂತಾಗಿದೆ.
ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಲ್ಲಿ ಮುಸ್ಲಿಮ ಸಮುದಾಯದವರ ಮತಗಳು ಹೆಚ್ಚು. ಆದರೆ ಇತ್ತೀಚಿಗೆ ಈ ಸಮುದಾಯದ ಕಡೆಗಣನೆ ಪಕ್ಷದಲ್ಲಿ ಜಾಸ್ತಿಯಾಗಿದೆ. ಚುನಾವಣೆಯಲ್ಲಿ(Election) ಟಿಕೆಟ್ ಕೊಡುವ ವಿಷಯಕ್ಕೆ ಇವರನ್ನು ಕಡೆಗಣನೆಗೆ ಮಾಡಲಾಗುತ್ತಿದೆ ಎಂಬ ಆರೋಪ ಸಹಜವಾಗಿ ಕೇಳಿ ಬರುವಂತಹದ್ದು. ಧಾರವಾಡ(Dharwad) ಹಾಗೂ ಹಾವೇರಿ(Haveri) ಲೋಕಸಭಾ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರಕ್ಕಾದರೂ ಟಿಕೆಟ್ ಕೊಡಿ ಎಂದು ಕೇಳಿದರೆ ಆಗಲೂ ಕೊಡಲಿಲ್ಲ. ವಿಧಾನಸಭೆ ಟಿಕೆಟ್ ಕೊಡುವಲ್ಲಿ ನಿರ್ಲಕ್ಷ್ಯ ತೋರಲಾಯಿತು. ಇದರಿಂದ ಬರೀ ಮುಸ್ಲಿಮರ ಪ್ರಾತಿನಿಧ್ಯವೇ ದೊರಕುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಉಚ್ಚಾಟನೆ ಎಂಬ ಶಿಕ್ಷೆ ಕೂಡ ನೀಡಲಾಗುತ್ತಿದೆ ಎಂಬ ಅಸಮಾಧಾನ ಕೇಳಿ ಬರುತ್ತಿದೆ.
Assembly Elections 2022 Result ಕರ್ನಾಟಕ ಕಾಂಗ್ರೆಸ್‌ಗೆ ಪಂಜಾಬ್ ಸ್ಥಿತಿ ದೂರವಿಲ್ಲ, ರಾಜ್ಯ ಕೈ ಶಾಸಕರ ಆತಂಕ!
ಬೆಳಗಾವಿ ವಿಭಾಗ:
ಇದೀಗ ಒಂದು ವರ್ಷದಲ್ಲಿ ವಿಧಾನಸಭೆ ಹಾಗೂ ಎರಡು ವರ್ಷಗಳಲ್ಲಿ ಲೋಕಸಭೆ ಚುನಾವಣೆ ಎದುರಾಗುತ್ತಿದೆ. ಇನ್ನು ಜಿಪಂ, ತಾಪಂ ಚುನಾವಣೆಗಳು ಇನ್ನೇನು ನಡೆಯಲಿಕ್ಕಿವೆ. ಈ ಚುನಾವಣೆಯಲ್ಲಿ ತಮ್ಮ ಸಮುದಾಯಕ್ಕೆ ಇಂತಿಷ್ಟುಟಿಕೆಟ್ ಕೊಡಲೇಬೇಕು ಎಂಬ ಬೇಡಿಕೆ ಇಟ್ಟುಕೊಂಡು ಬೆಳಗಾವಿ(Belagavi) ವಿಭಾಗ ಮಟ್ಟದಲ್ಲಿ ಸಮಾನ ಮನಸ್ಕರ ವೇದಿಕೆ ಹುಟ್ಟುಹಾಕಲಾಗಿದೆ.
ಸದ್ಯಕ್ಕೆ ಧಾರವಾಡ ಮಟ್ಟದ ಸಮಾನ ಮನಸ್ಕರ ಸಭೆ ನಡೆಸಲಾಗಿದೆ. ಶೀಘ್ರದಲ್ಲೇ ಬೆಳಗಾವಿ ವಿಭಾಗದ ಪ್ರತಿ ಜಿಲ್ಲೆಗಳಲ್ಲೂ ಆಯ್ದ ಸಮಾನ ಮನಸ್ಕರ ಸಭೆ ನಡೆಸಿ ಬೃಹತ್ ಶಕ್ತಿಯನ್ನಾಗಿ ಹೊರಹೊಮ್ಮಿಸಲು ಕಾಂಗ್ರೆಸ್ ಮುಸ್ಲಿಂ ಸಮಾನ ಮನಸ್ಕರು ನಿರ್ಧರಿಸಿದ್ದಾರೆ. ವೇದಿಕೆಯ ನೇತೃತ್ವವನ್ನು ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಕೆಪಿಸಿಸಿ ಕಾರ್ಯದರ್ಶಿ ಶಾಕೀರ ಸನದಿ, ಇಸ್ಮಾಯಿಲ್ ತಮಟಗಾರ ಸೇರಿದಂತೆ ಹಲವು ಮುಖಂಡರು ವಹಿಸಿದ್ದಾರೆ.
ಏನೇನು ಬೇಡಿಕೆ
ಬೆಳಗಾವಿ ವಿಭಾಗದಲ್ಲಿ ಕನಿಷ್ಠ 12-14 ಲಕ್ಷ ಮತದಾರರು ಮುಸ್ಲಿಮರಿದ್ದಾರೆ. ಇವರಾರಯರು ಕಾಂಗ್ರೆಸ್ ಬಿಟ್ಟು ಬೇರೆ ಯಾವ ಪಕ್ಷಕ್ಕೂ ಮತ ಚಲಾಯಿಸುವುದಿಲ್ಲ. ಈ ಕಾರಣದಿಂದ ಪ್ರತಿಜಿಲ್ಲೆಯಲ್ಲಿ ಕನಿಷ್ಠ 1 ಟಿಕೆಟ್‌ನ್ನಾದರೂ ಕೊಡಲೇಬೇಕು. ಲೋಕಸಭಾ ಚುನಾವಣೆಯಲ್ಲೂ(Lok Sabha Election) ಬೆಳಗಾವಿ ವಿಭಾಗದಲ್ಲಿ ನಮಗೆ ಪ್ರಾತಿನಿಧ್ಯ ಸಿಗಬೇಕು. ಜಿಪಂ, ತಾಪಂ ಚುನಾವಣೆಯಲ್ಲಂತೂ ಎಷ್ಟುಸ್ಥಾನಗಳಿಗೆ ಟಿಕೆಟ್ ನೀಡಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂಬ ಬೇಡಿಕೆ ಈ ಸಮಾನ ಮನಸ್ಕರ ವೇದಿಕೆಯದ್ದು. ಶೀಘ್ರದಲ್ಲೇ ತಾಲೂಕು ಸೇರಿದಂತೆ ಪ್ರತಿ ಜಿಲ್ಲೆಗಳಲ್ಲಿ ಸಭೆ ನಡೆಸಿ ಕೆಪಿಸಿಸಿ(KPCC) ಅಧ್ಯಕ್ಷರು ಸೇರಿದಂತೆ ಎಐಸಿಸಿಗೂ(AICC) ನಿಯೋಗವೊಂದನ್ನು ತೆಗೆದುಕೊಂಡು ಮನವಿ ಸಲ್ಲಿಸಲು ಈ ವೇದಿಕೆ ನಿರ್ಧರಿಸಿದೆ. ಇದರೊಂದಿಗೆ ಪಕ್ಷ ಸಂಘಟನೆಯಲ್ಲಿ ಸಾಕಷ್ಟುಪಾತ್ರ ನಮ್ಮದಿದೆ. ಪದಾಧಿಕಾರಿಗಳ ಹುದ್ದೆಗಳಲ್ಲೂ ನಮನ್ನು ಕಡೆಗಣಿಸುವಂತಿಲ್ಲ. ಮುಸ್ಲಿಮರಿಗೆ ಸ್ಥಾನಮಾನ ಸಿಗಬೇಕು. ಅದರಲ್ಲೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ವಿಶ್ವಾಸರ್ಹವಾಗಿರುವ, ಮುಸ್ಲಿಂ ಸಮುದಾಯದ ಪರವಾಗಿ ಧ್ವನಿ ಎತ್ತಬಲ್ಲವರನ್ನೇ ಆಯ್ಕೆ ಮಾಡಬೇಕು. ಈಗಿರುವ ಅಧ್ಯಕ್ಷರನ್ನು ಕೆಳಕ್ಕಿಳಿಸಬೇಕು ಎಂಬ ಒಕ್ಕೊರಲಿನ ಬೇಡಿಕೆ ಸಲ್ಲಿಸಲಿದ್ದಾರೆ.
ಈ ರೀತಿ ಸಮಾನ ಮನಸ್ಕರ ವೇದಿಕೆ ಸೃಷ್ಟಿಸಿಕೊಂಡು ಕಾಂಗ್ರೆಸ್ ನಮ್ಮನ್ನು ಕಡೆಗಣಿಸಿದರೆ ಸರಿ ಇರುವುದಿಲ್ಲ ಎಂಬ ಎಚ್ಚರಿಕೆ ಸಂದೇಶವನ್ನು ರವಾನಿಸಿದಂತಾಗಿರುವುದಂತೂ ಸತ್ಯ.
ಹೌದು, ಕಾಂಗ್ರೆಸ್‌ನಲ್ಲಿನ ಮುಸ್ಲಿಮ ಮುಖಂಡರೆಲ್ಲರೂ ಸೇರಿಕೊಂಡು ಸಮಾನ ಮನಸ್ಕರ ವೇದಿಕೆಯನ್ನು ಹುಟ್ಟುಹಾಕಿದ್ದೇವೆ. ಸದ್ಯ ಧಾರವಾಡದಲ್ಲಷ್ಟೇ ಸಭೆ ನಡೆಸಿದ್ದೇವೆ. ಶೀಘ್ರದಲ್ಲೇ ಬೆಳಗಾವಿ ವಿಭಾಗ ಮಟ್ಟದಲ್ಲಿ ಸಂಘಟಿಸುತ್ತೇವೆ. ನಮ್ಮ ಹಕ್ಕನ್ನು ಕೇಳುವುದಕ್ಕಾಗಿ ಈ ವೇದಿಕೆ. ಪಕ್ಷದಲ್ಲಿ ಮುಸ್ಲಿಮರ ಕಡೆಗಣನೆಯಾಗದಂತೆ ನೋಡಿಕೊಳ್ಳುವ ಉದ್ದೇಶ ನಮ್ಮದು ಅಂತ ಕೆಪಿಸಿಸಿ ಕಾರ್ಯದರ್ಶಿ ಶಾಕೀರ ಸನದಿ ತಿಳಿಸಿದ್ದಾರೆ.