* ಬಿಜೆಪಿ ಶಾಸಕ ವಿಶ್ವನಾಥ್ ಹತ್ಯೆ ಸ್ಕೆಚ್ ಕೇಸ್
* ಕಾಂಗ್ರೆಸ್ ನಾಯಕನಿಂದ ಹತ್ಯೆಗೆ ಸುಪಾರಿ
* ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಿಶ್ವನಾಥ್
ಬೆಂಗಳೂರು, (ಡಿ.01): ಬಿಜೆಪಿ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ (SR Vishwanath) ಹತ್ಯೆಗೆ (Murder) ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ (Gopal Krihshna) ಸಂಚು ರೂಪಿಸಿದ್ದಾರೆ ಎನ್ನಲಾದ ವಿಡಿಯೋ ಬಹಿರಂಗವಾಗಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಎಸ್.ಆರ್. ವಿಶ್ವನಾಥ್ ಸುದ್ದಿಗೋಷ್ಠಿಯಲ್ಲಿ ನಡೆಸಿ ಪ್ರತಿಕ್ರಿಯಿಸಿದ್ದು, ನಿನ್ನೆ (ಮಂಗಳವಾರ) ಸಂಜೆ ನನಗೆ ಕ್ಷಮಾಪಣ ಪತ್ರ ಬಂದಿತ್ತು. ತಾವು ಮಾಡಿದ ತಪ್ಪಿಗೆ ಕ್ಷಮಿಸಿ ಎಂದು ಪತ್ರ ಬಂದಿತ್ತು. ನನ್ನ ಹತ್ಯೆಗೆ ಪ್ಲ್ಯಾನ್ (Murder Sketch) ಮಾಡಿದ್ದ ಬಗ್ಗೆ ಸ್ಕೆಚ್ ಹಾಕಿದ್ದರು. ಇದು ತಪ್ಪೆಂದು ತಿಳಿದು ನಾನು ಕ್ಷಮೆಯಾಚಿಸುತ್ತಿದ್ದೇನೆ ಎಂದು ಕುಳ್ಳ ದೇವರಾಜ್ ನನಗೆ ಕ್ಷಮಾಪಣಾ ಪತ್ರ ಬರೆದಿದ್ದರು. ಕೂಡಲೇ ನಾನು ಗೃಹ ಸಚಿವರಿಗೆ ಕರೆ ಮಾಡಿ ಮಾತಾಡಿದ್ದೆ ಎಂದರು.
undefined
Murder Plan: ಬಿಜೆಪಿ ಶಾಸಕ ವಿಶ್ವನಾಥ್ ಹತ್ಯೆ ಸ್ಕೆಚ್ ಕೇಸ್‌ಗೆ ಪ್ರತಿಕ್ರಿಯಿಸಿದ ಕಮಲ್ ಪಂತ್
. ರಾಜಾನುಕುಂಟೆ ಪೊಲೀಸ್ ಠಾಣೆಗೂ ದೂರು ನೀಡಿದ್ದೇನೆ. ಸಿಎಂ ಬೊಮ್ಮಾಯಿ ಜೊತೆಯೂ ನಾನು ಮಾತಾಡಿದ್ದೇನೆ. ಸುಪಾರಿ ಕೊಟ್ಟು ಕೊಲೆಗೆ ಯತ್ನಿಸಿದ್ದಾರೆ ಎಂದು ಯಲಹಂಕ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿದರು.
ಕುಳ್ಳ ದೇವರಾಜ್-ಗೋಪಾಲಕೃಷ್ಣ ಆಡಿಯೋ ಬಗ್ಗೆ ಹೇಳಿಕೆ, ಇಡೀ ಸಂಭಾಷಣೆ ನನ್ನ ಮೇಲೆ ದ್ವೇಷ ಕಾರುವಂತೆ ಇದೆ. ಆಂಧ್ರದಿಂದ ಸುಪಾರಿ ಕಿಲ್ಲರ್ಸ್ ಕರೆಸುವುದಾಗಿ ಚರ್ಚಿಸಿದ್ದಾರೆ. ಕಡಬಗೆರೆ ಶ್ರೀನಿವಾಸ್ ನನ್ನ ಜೊತೆಗೆ ಇದ್ದವರು. ಅವರನ್ನು ಎಪಿಎಂಸಿ ಅಧ್ಯಕ್ಷನಾಗಿ ಮಾಡಿದ್ದು ನಾನೇ. ಕಡಬಗೆರೆ ಶ್ರೀನಿವಾಸ್ ಮೇಲೆ ಶೂಟೌಟ್ ಆಗಿತ್ತು. ನನ್ನ ಏರಿಯಾದಲ್ಲಿ ಶೂಟೌಟ್ ನಡೆದಿತ್ತು. ಈ ಬಗ್ಗೆ ತನಿಖೆ ಮಾಡುವಂತೆ ನಾನು ಕೂಡ ಒತ್ತಾಯಿಸಿದ್ದೆ. ಆದರೆ ಈವರೆಗೆ ಇದರ ಹಿಂದೆ ಯಾರಿದ್ದಾರೆಂದು ಗೊತ್ತಿಲ್ಲ ಎಂದು ತಿಳಿಸಿದರು.
3 ತಿಂಗಳಿಂದ ಸ್ಕೆಚ್ ನಡೆದಿರಬಹುದು.
ಕೊಲೆಗೆ ಎಷ್ಟು ದಿನದಿಂದ ಸ್ಕೆಚ್ ಹಾಕಿದ್ದರೆಂದು ಗೊತ್ತಿಲ್ಲ. ಬಹುಶಃ 3 ತಿಂಗಳಿಂದ ನಡೆದಿರಬೇಕೆಂದು ಅನಿಸುತ್ತಿದೆ. ಕುಳ್ಳ ದೇವರಾಜ್ ಕ್ಷಮಾಪಣಾ ಪತ್ರವನ್ನು ಕಳುಹಿಸಿದ್ದಾನೆ. ಬೇರೆಯವರ ಕೈಯಲ್ಲಿ ನನಗೆ ಪತ್ರವನ್ನು ಕೊಟ್ಟು ಕಳಿಸಿರಬೇಕು. ನಿನ್ನೆ ಸಂಜೆ 7.30ರ ಸುಮಾರಿಗೆ ಪತ್ರದ ಬಗ್ಗೆ ಮಾಹಿತಿ ಇತ್ತು. ಇಂತಹದೊಂದು ನಡೆಯುತ್ತಿದೆ ಎಂದು ಸಣ್ಣ ಸುಳಿವು ಇತ್ತು. ನಾನು ಮೊದಲೇ ಗೃಹ ಸಚಿವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೆ. ಆದರೆ ವಿಡಿಯೋ ಇರಲಿಲ್ಲ, ಗೊತ್ತಾದ ಕೂಡಲೇ ಹೇಳಿದ್ದೇನೆ. ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ಅವರಿಗೆ ಹೇಳಿದ್ದೆ. ಗೃಹ ಸಚಿವರಿಗೆ ಹೇಳಿದ ತಕ್ಷಣ ಗೃಹ ಸಚಿವರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ಕುಳ್ಳ ದೇವರಾಜ್ ಗೋಪಾಲಕೃಷ್ಣನ ಪರಮಶಿಷ್ಯನಾಗಿದ್ದಾನೆ. ಕುಳ್ಳ ದೇವರಾಜ್ ಕ್ರಿಮಿನಲ್ ಇದ್ದಾನೆ. ಗೋಪಾಲಕೃಷ್ಣನ ಜತೆಗಿನ ವಿಡಿಯೋ ಮಾಡಿಟ್ಟಿದ್ದಾನೆ. ಒಂದಲ್ಲಾ ಒಂದು ದಿನ ಸಿಕ್ಕಿಹಾಕಿಕೊಳ್ಳುವ ಭಯದಿಂದ ವಿಡಿಯೋ ಮಾಡಿಟ್ಟುಕೊಂಡಿದ್ದಾನೆ. ಯಲಹಂಕದಲ್ಲಿ ನನ್ನನ್ನು ಸೋಲಿಸುವುದಕ್ಕೆ ಆಗುವುದಿಲ್ಲ. ಇಂತಹ ಒಂದು ಉದ್ದೇಶದಿಂದ ಸ್ಕೆಚ್ ಹಾಕಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.
ನನಗೆ ಬೆದರಿಕೆ ಇದೆ, ರಕ್ಷಣೆ ಕೊಡಿ ಎಂದು ಕೇಳಿದ್ದೇನೆ. ಪೊಲೀಸ್ ರಕ್ಷಣೆ ಬೇಕೆಂದು 4 ಬಾರಿ ಪತ್ರ ಬರೆದಿದ್ದೇನೆ. ಕಾಂಗ್ರೆಸ್ ಆಡಳಿತದಲ್ಲಿಯೂ ನನ್ನ ವಿರುದ್ಧ ಪ್ರಕರಣ ದಾಖಲು ಆಗಿತ್ತು. ಅವರು ನನ್ನ ವಿರುದ್ಧ ದ್ವೇಷದ ರಾಜಕಾರಣ ಮಾಡಿದ್ದರು. ಆದರೂ ನಾನು ಎಂದು ಕ್ಷೇತ್ರವನ್ನು ಬಿಟ್ಟು ಹೋಗಿರಲಿಲ್ಲ. ಎಲ್ಲ ಆರೋಪಗಳನ್ನು ಕ್ಷೇತ್ರದಲ್ಲೇ ಇದ್ದು ಎದುರಿಸಿದ್ದೇನೆ. ಯಾರೋ ಪ್ರಭಾವ ಬೀರಿ ಗೋಪಾಲಕೃಷ್ಣನನ್ನ ಬಿಡಿಸಿದ್ದಾರೆ. ಪ್ರಭಾವಿಗಳು ಯಾರೆಂದು ಹೇಳುವುದಕ್ಕೆ ಹೋಗುವುದಿಲ್ಲ. ಮೊದಲು ತನಿಖೆಯಾಗಲಿ, ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿ ಎಂದು ಒತ್ತಾಯಿಸಿದರು.
ಆ ವಿಡಿಯೋದಲ್ಲಿ ಮಾಡಿದ ಎಲ್ಲ ಆರೋಪಗಳ ಬಗ್ಗೆಯೂ ತನಿಖೆಯಾಗಲೇಬೇಕು. ಕಡಬಗೆರೆ ಸೀನ ಪ್ರಕರಣ ಬಂದ್ರೆ ನನ್ನ ಹೆಸರು ಬರುತ್ತೆ. ಹೀಗಾಗಿ ಎಲ್ಲ ಪ್ರಕರಣಗಳ ಬಗ್ಗೆಯೂ ತನಿಖೆಯಾಗಬೇಕು. ನನಗೆ ಯಾರಿಂದಲೂ ಬೆದರಿಕೆ ಅನ್ನೋದು ಇಲ್ಲ. ಗೋಪಾಲಕೃಷ್ಣನಿಂದಲೂ ನನಗೆ ಯಾವ ಬೆದರಿಕೆ ಇಲ್ಲ. ಗೋಪಾಲಕೃಷ್ಣ ನನಗೆ ಬೆದರಿಕೆ ಹಾಕುವಂತಹ ಸಮರ್ಥನಲ್ಲ. ಪೊಲೀಸರ ಮೇಲೆ ನನಗೆ ಈಗಲೂ ಪೂರ್ಣ ನಂಬಿಕೆ ಇದೆ. ಪೊಲೀಸರು ಈ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.