ವರದಿ : ವಿಘ್ನೇಶ್ ಎಂ.ಭೂತನಕಾಡು
ಮಡಿಕೇರಿ(ಡಿ.01): ಕಾಫಿನಾಡು ಕೊಡಗಿನಲ್ಲಿ (Kodagu) ಬಿಜೆಪಿ (BJP) ಹಾಗೂ ಕಾಂಗ್ರೆಸ್ (Congress) ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಈ ಬಾರಿಯೂ ಗೆಲ್ಲುವ ಉತ್ಸಾಹದಲ್ಲಿದ್ದರೆ, ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ, ಶಾಸಕ ಅಪ್ಪಚ್ಚು ರಂಜನ್ (Apachu Ranjan) ಹಾಗೂ ಹಾಲಿ ಎಂಎಲ್ಸಿ ಸುನಿಲ್ ಸುಬ್ರಮಣಿ ಅವರ ಸಹೋದರ ಮಂಡೇಪಂಡ ಸುಜಾ ಕುಶಾಲಪ್ಪ (Suja kushalappa) ಅವರು ಕಾನೂನು ತೊಡಕಿದ್ದ ಹಿನ್ನೆಲೆಯಲ್ಲಿ ಕಳೆದ ಚುನಾವಣೆಯಲ್ಲಿ (Election) ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ನಿಂದ ಮಾಜಿ ಸಚಿವ ಹಾಸನದ (Hassan) ಎ.ಮಂಜು ಅವರ ಪುತ್ರ ಮಂಥರ್ ಗೌಡ ಕಣದಲ್ಲಿದ್ದಾರೆ. ಜಿಲ್ಲಾ ಜೆಡಿಎಸ್ (JDS) ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸಾಕ್ ಖಾನ್ ಜೆಡಿಎಸ್‌ನಿಂದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಇಸಾಕ್ ಖಾನ್ ಕೊನೇ ಕ್ಷಣದಲ್ಲಿ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ.
ಬಿಜೆಪಿ ಭದ್ರಕೋಟೆ: ಕೊಡಗು ಜಿಲ್ಲೆ ಬಿಜೆಪಿಯ ಭದ್ರ ಕೋಟೆಯಾಗಿದ್ದು, ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ(BJP) ಪಕ್ಷದ ಬೆಂಬಲಿಗರೇ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಬಿಜೆಪಿಯ ಸುಜಾ ಕುಶಾಲಪ್ಪ ಅವರು ಗೆಲುವು ಸಾಧಿಸುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಆದರೆ ಕಾಂಗ್ರೆಸ್‌ನ (congress) ಮಂಥರ್ ಗೌಡ ಕೂಡ ಗೆಲ್ಲಲು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದಿಂದ ಈಗಾಗಲೇ ಜನ ಸ್ವರಾಜ್ ಕಾರ್ಯಕ್ರಮ ನಡೆದಿದ್ದು, ಮಾಜಿ ಸಚಿವ ಡಿ.ವಿ. ಸದಾನಂದಗೌಡ (Sadananda Gowda), ಕೇಂದ್ರ ಸಚಿವ ಶೋಭಾ ಕರಂದ್ಲಾಜೆ, ಈಶ್ವರಪ್ಪ (Eshwarappa), ಅಂಗಾರ ಮತ್ತಿತರರು ಪಾಲ್ಗೊಂಡಿದ್ದರು. ಬಿಜೆಪಿಯು ಗ್ರಾಮ ಮಟ್ಟದಲ್ಲೇ ಸಭೆಗಳನ್ನು ನಡೆಸಿ ಮತದಾರರನ್ನು ಸೆಳೆಯಲು ಯತ್ನಿಸುತ್ತಿದೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಅವರು ಕೂಡ ಜಿಲ್ಲೆಯ ವಿವಿಧ ಕಡೆಗಳಿಗೆ ತೆರಳಿ ಮತ ಯಾಚನೆಯಲ್ಲಿ ತೊಡಗಿದ್ದು, ಜಿಲ್ಲಾ ಕಾಂಗ್ರೆಸ್ ನಾಯಕರು ಸಾಥ್ ನೀಡಿದ್ದಾರೆ.
ಶಂಕರಮೂರ್ತಿ ಪುತ್ರನ ಪರ ಬಿಎಸ್‌ವೈ , ಈಶ್ವರಪ್ಪ ಹೋರಾಟ ?
ವರದಿ: ಗೋಪಾಲ್ ಯಡಗೆರೆ
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (Yediyurappa) ಅವರಿಗೆ ಪ್ರತಿಷ್ಠೆ ಕಣವಾಗಿರುವ ಶಿವಮೊಗ್ಗ (Shivamogga) ವಿಧಾನ ಪರಿಷತ್ ಕ್ಷೇತ್ರದಲ್ಲಿ ನಿಧಾನವಾಗಿ ಚುನಾವಣೆ ಬಿಸಿಯೇರುತ್ತಿದೆ. ಕಾಂಗ್ರೆಸ್, ಬಿಜೆಪಿ ಇನ್ನಿಲ್ಲದ ಪೈಪೋಟಿಯೊಂದಿಗೆ ಕ್ಷೇತ್ರದಲ್ಲಿ ನೇರ ಹಣಾಹಣಿಗೆ ಸಿದ್ಧವಾಗಿದೆ.
ಕಾಂಗ್ರೆಸ್‌ನಿಂದ (Congress) ಹಾಲಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮತ್ತು ಬಿಜೆಪಿಯಿಂದ ಹಿರಿಯ ಮುಖಂಡ ಡಿ.ಎಚ್.ಶಂಕರಮೂರ್ತಿ ಅವರ ಪುತ್ರ ಡಿ.ಎಸ್.ಅರುಣ್ ಕಣಕ್ಕೆ ಇಳಿದಿದ್ದು, ಸದ್ಯಕ್ಕೆ ಸಮಬಲದ ಹೋರಾಟ ಕಾಣಿಸಿದೆ. ಜೆಡಿಎಸ್ ಮತಗಳೇ ನಿರ್ಣಾಯಕವಾಗಿದ್ದು, ಈವರೆಗೆ ಈ ಪಕ್ಷದ ಬೆಂಬಲ ಯಾರಿಗೆಂದು ಅಧಿಕೃತವಾಗಿ ಘೋಷಣೆಯಾಗಿಲ್ಲ. ಈ ನಡುವೆ ಬಿ.ಎಸ್.ಯಡಿಯೂರಪ್ಪ ಇಲ್ಲೇ ಹಲವು ದಿನಗಳಿಂದ ಇದ್ದು, ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ.
ತಂತ್ರ-ಪ್ರತಿತಂತ್ರ ರೂಪಿಸುತ್ತಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನಕುಮಾರ್ ಜಯಿಸಿದ್ದರೆ, ಬಿಜೆಪಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಳ್ಳುವ ಸ್ಥಿತಿ ಎದುರಾಗಿತ್ತು. ಯಾರೂ ನಿರೀಕ್ಷಿಸದ ರೀತಿ ಜೆಡಿಎಸ್ 2ನೇ ಸ್ಥಾನ ಗಳಿಸಿತ್ತು. ಈ ಬಾರಿ ಜೆಡಿಎಸ್ ಅಭ್ಯರ್ಥಿ ಇಲ್ಲ. ಸಂಯುಕ್ತ ಜನತಾದಳದಿಂದ ಬಿ.ಕೆ. ಶಶಿಕುಮಾರ್ ಅಭ್ಯರ್ಥಿ ಆಗಿದ್ದರೂ ಸದ್ಯ ಆ ಪಕ್ಷಕ್ಕೆ ಜಿಲ್ಲೆಯಲ್ಲಿ ನೆಲೆಯಿಲ್ಲ.
ಪಿ.ವೈ.ರವಿ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ (DS Arun) ಪಕ್ಷ ಮತ್ತು ಸಮಾಜದ ವಲಯದಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ. ವೈಯಕ್ತಿಕ ಜಾತಿ ಲೆಕ್ಕಾಚಾರದ ಲಾಭ ಇವರಿಗಿಲ್ಲ. ಸ್ವತಃ ಯಡಿಯೂರಪ್ಪ, ಸಂಸದ ರಾಘವೇಂದ್ರ, ಸಚಿವ ಈಶ್ವರಪ್ಪ ಮಾತ್ರವಲ್ಲದೇ, ಜಿಲ್ಲೆಯ ಉಳಿದ ಪಕ್ಷದ ನಾಲ್ಕು ಶಾಸಕರ ಜೊತೆಗೆ ಹೊನ್ನಾಳಿ ಹಾಗೂ ಚನ್ನಗಿರಿಯ ಬಿಜೆಪಿ ಶಾಸಕರು ಗೆಲ್ಲಿಸುವ ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ನಿಂದ ಆರ್.ಪ್ರಸನ್ನಕುಮಾರ್ ಮರು ಆಯ್ಕೆ ಬಯಸಿ ಟಿಕೆಟ್ ಪಡೆದಿದ್ದಾರೆ. ಯಾವುದೇ ವಿವಾದವನ್ನು ಮೈಮೇಲೆ ಎಳೆದುಕೊಂಡವರಲ್ಲ. ಪಕ್ಷದ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡಿರುವುದು ಇವರ ಪ್ಲಸ್ ಪಾಯಿಂಟ್.