Latest Videos

Vidhan Parishat Election: ಎಸ್‌.ಆರ್‌. ಪಾಟೀಲ್‌ಗೆ ಮೇಲ್ಮನೆ ಟಿಕೆಟ್‌ ಇಲ್ಲ?

By Girish GoudarFirst Published May 22, 2022, 4:47 AM IST
Highlights

*  ಪಟ್ಟು ಹಿಡಿದು ಟಿಕೆಟ್‌ ತಪ್ಪಿಸುವಲ್ಲಿ ಸಿದ್ದು ಯಶ
*  ಮೇಲ್ಮನೆ ಅಭ್ಯರ್ಥಿ ಆಯ್ಕೆಗೆ ಮೂಡದ ಒಮ್ಮತ
*  ರಾಜ್ಯಸಭೆ ಅಭ್ಯರ್ಥಿ ಚರ್ಚೆ ಇಲ್ಲ
 

ಬೆಂಗಳೂರು(ಮೇ.22):  ವಿಧಾನ ಪರಿಷತ್ತಿಗೆ ಕಾಂಗ್ರೆಸ್‌ ಪಾಲಿನ ಎರಡು ಸ್ಥಾನಗಳಿಗೆ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾಂಗ್ರೆಸ್‌ ಹೈಕಮಾಂಡ್‌ ನಡೆಸಿದ ಕಸರತ್ತು ವಿಫಲವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಶನಿವಾರ ಕರೆಸಿ ಸುದೀರ್ಘ ಚರ್ಚೆ ನಡೆಸಿದರೂ ಒಮ್ಮತ ಮೂಡಿಲ್ಲ. ಅಂತಿಮವಾಗಿ ಉಭಯ ನಾಯಕರು ತಮ್ಮ ಆಯ್ಕೆಯ ಕೆಲ ಹೆಸರುಗಳನ್ನು ಸೂಚಿಸಿ, ಅಂತಿಮ ತೀರ್ಮಾನ ಹೊಣೆ ಹೈಕಮಾಂಡ್‌ಗೆ ನೀಡಿ ರಾಜ್ಯಕ್ಕೆ ಹಿಂತಿರುಗಿದ್ದಾರೆ.

ಮಹತ್ವದ ಸಂಗತಿಯೆಂದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಬಲವಾಗಿ ಪಟ್ಟು ಹಿಡಿದಿದ್ದ ಎಸ್‌.ಆರ್‌. ಪಾಟೀಲ್‌ ಅವರಿಗೆ ಕೊಕ್‌ ಕೊಡಿಸುವಲ್ಲಿ ಸಿದ್ದರಾಮಯ್ಯ ಸಫಲರಾಗಿದ್ದು, ಪರಿಷತ್ತಿಗೆ ಅವರ ಹೆಸರನ್ನು ಪರಿಗಣಿಸದಿರಲು ತೀರ್ಮಾನಿಸಲಾಗಿದೆ ಉನ್ನತ ಮೂಲಗಳು ಖಚಿತಪಡಿಸಿವೆ.

MLC Election| ಅತಿ ಆತ್ಮವಿಶ್ವಾಸವೇ ಎಸ್‌.ಆರ್‌.ಪಾಟೀಲ್‌ಗೆ ಹಿನ್ನಡೆಯಾಯ್ತೆ?

ಎಸ್‌.ಆರ್‌. ಪಾಟೀಲ್‌ ಅವರನ್ನು ಅಭ್ಯರ್ಥಿ ಮಾಡಲು ಕೆಪಿಸಿಸಿ ಅಧ್ಯಕ್ಷರು ತೀವ್ರ ಲಾಬಿ ನಡೆಸಿದ್ದ ಪರಿಣಾಮ ಈ ಸ್ಥಾನಗಳಿಗೆ ಪ್ಯಾನಲ್‌ (ಅರ್ಹರ ಆಯ್ಕೆ ಪಟ್ಟಿ) ಕಳುಹಿಸುವಲ್ಲಿ ರಾಜ್ಯ ನಾಯಕತ್ವ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಹೈಕಮಾಂಡ್‌ ಬುಲಾವ್‌ ನೀಡಿದ್ದರಿಂದ ಶನಿವಾರ ಉಭಯ ನಾಯಕರು ದೆಹಲಿಗೆ ತೆರಳಿದ್ದರು. ದೆಹಲಿಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರೊಂದಿಗೆ ಉಭಯ ನಾಯಕರು ಸುದೀರ್ಘ ಚರ್ಚೆ ನಡೆಸಿದರು.

ಈ ಸಭೆಯಲ್ಲಿ ಸುರ್ಜೇವಾಲ ಅವರು ಈ ಹಿಂದೆ ಭರವಸೆ ನೀಡಿದಂತೆ ಪಾಟೀಲ್‌ ಅವರನ್ನು ಪರಿಗಣಿಸೋಣ ಎಂದು ಸಲಹೆ ನೀಡಿದ್ದು, ಇದಕ್ಕೆ ಸಿದ್ದರಾಮಯ್ಯ ಅವರು ಬಿಲ್‌ಕುಲ್‌ ಒಪ್ಪಿಲ್ಲ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಎಸ್‌.ಆರ್‌. ಪಾಟೀಲ್‌ ಅವರನ್ನು ಆಯ್ಕೆ ಮಾಡಿದರೆ ತಪ್ಪು ಸಂದೇಶ ಹೋಗುತ್ತದೆ. ಇದಕ್ಕೆ ನಮ್ಮ ಸಹಮತವಿಲ್ಲ ಎಂದು ಸ್ಪಷ್ಟವಾಗಿ ಸಿದ್ದರಾಮಯ್ಯ ತಿಳಿಸಿದ್ದರಿಂದ ಅವರ ಅನ್ಯ ದಾರಿಯಲ್ಲದೆ ಹೆಸರನ್ನು ಪಟ್ಟಿಯಿಂದ ಕೈ ಬಿಡಲು ತೀರ್ಮಾನಿಸಲಾಯಿತು ಎಂದು ಮೂಲಗಳು ಹೇಳಿವೆ.

ಇದೇ ವೇಳೆ ಉಭಯ ನಾಯಕರು ಹಲವು ಹೆಸರನ್ನು ಮಂದಿಟ್ಟಿದ್ದು, ಪರಸ್ಪರ ಒಮ್ಮತ ಮೂಡಿ ಬಂದಿಲ್ಲ. ಹೀಗಾಗಿ ಸುರ್ಜೇವಾಲ ಅವರು ನಿಮ್ಮ ಆಯ್ಕೆಯ ಹೆಸರುಗಳ ಪಟ್ಟಿನೀಡಿ ಎಂದು ಸೂಚಿಸಿದ್ದು, ಅಗ ಸಿದ್ದರಾಮಯ್ಯ ಅವರು ಮೂರು ಹೆಸರುಗಳ ಪಟ್ಟಿನೀಡಿದ್ದಾರೆ. ಅವು- ಹಿಂದುಳಿದ ವರ್ಗದಿಂದ ಎಂ.ಆರ್‌. ಸೀತಾರಾಂ, ಎಸ್‌.ಟಿ. ಸಮುದಾಯದಿಂದ ವಿ.ಎಸ್‌. ಉಗ್ರಪ್ಪ ಮತ್ತು ಅಲ್ಪಸಂಖ್ಯಾತ (ಕ್ರಿಶ್ಚಿಯನ್‌) ಸಮುದಾಯದಿಂದ ಐವಾನ್‌ ಡಿಸೋಜಾ. ಕುತೂಹಲಕಾರಿ ಸಂಗತಿಯೆಂದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಹಿರಿಯ ನಾಯಕರಾದ ಬಿ.ಎಲ್‌.ಶಂಕರ್‌, ಮುದ್ದಹನುಮೇಗೌಡ, ಪುಷ್ಪಾ ಅಮರನಾಥ್‌, ವಿ.ಆರ್‌. ಸುದರ್ಶನ್‌, ಎಂ.ಡಿ. ಲಕ್ಷ್ಮೇನಾರಾಯಣ, ಎಂ.ಸಿ. ವೇಣುಗೋಪಾಲ್‌, ನಿವೇದಿತ್‌ ಆಳ್ವಾ, ಮನ್ಸೂರ್‌ ಅಲಿಖಾನ್‌ ಸೇರಿದಂತೆ ಹತ್ತು ಹೆಸರುಗಳನ್ನು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಂತದಲ್ಲಿ ಸುರ್ಜೇವಾಲ ಅವರು, ಭಾನುವಾರ ಸಂಜೆಯೊಳಗೆ ಇಬ್ಬರು ನಾಯಕರು ಪರಸ್ಪರ ಸಹಮತದೊಂದಿಗೆ ಎರಡು ಹೆಸರು ಸೂಚಿಸಿದರೆ ಅದನ್ನು ಒಪ್ಪಲಾಗುವುದು. ಇಲ್ಲದಿದ್ದರೆ, ನೀಡಿರುವ ಪಟ್ಟಿಯಲ್ಲೇ ಎರಡು ಹೆಸರನ್ನು ಆಯ್ಕೆ ಮಾಡುವುದಾಗಿ ತಿಳಿಸುವ ಮೂಲಕ ಉಭಯ ನಾಯಕರು ಪರಸ್ಪರ ಚರ್ಚಿಸಿ ಒಮ್ಮತದಿಂದ ನೀಡಲು ಒಂದು ದಿನದ ಕಾಲಾವಕಾಶ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಪ್ಯಾನೆಲ್‌ ನೀಡಿಯಾದ ನಂತರ ಉಭಯ ನಾಯಕರು ಚರ್ಚೆ ಮಾಡುವ ಸಾಧ್ಯತೆ ಕಡಿಮೆ ಎಂದು ಮೂಲಗಳು ಹೇಳಿವೆ.

ಬಿಜೆಪಿ ಸರ್ಕಾರದಿಂದ ಜನರಿಗೆ ಅನ್ಯಾಯ: SR ಪಾಟೀಲ್‌

ಈ ನಡುವೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಈಗಾಗಲೇ ಮಾಜಿ ಶಾಸಕ ತಿಪ್ಪಣ್ಣ ಕಮಕನೂರು ಅವರ ಹೆಸರು ಹಾಗೂ ರಾಜ್ಯದ ಎಲ್ಲಾ ಮುಸ್ಲಿಂ ಶಾಸಕರು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್‌ ಜಬ್ಬಾರ್‌ ಅವರ ಹೆಸರನ್ನು ಹೈಕಮಾಂಡ್‌ಗೆ ನೇರವಾಗಿ ಸೂಚಿಸಿದ್ದಾರೆ. ಹೀಗಾಗಿ ಅಂತಿಮವಾಗಿ ಹೈಕಮಾಂಡ್‌ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

ರಾಜ್ಯಸಭೆ ಅಭ್ಯರ್ಥಿ ಚರ್ಚೆ ಇಲ್ಲ

ಶನಿವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯಸಭೆ ವಿಚಾರ ಚರ್ಚೆಗೆ ಬರಲಿಲ್ಲ. ಈಗಾಗಲೇ ಹೈಕಮಾಂಡ್‌ ಜೈರಾಂ ರಮೇಶ್‌ ಅವರ ಹೆಸರನ್ನು ಅಂತಿಮಗೊಳಿಸಿರುವ ಹಿನ್ನೆಲೆಯಲ್ಲಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯನ್ನೇ ನಡೆಸಲಿಲ್ಲ ಎಂದು ಮೂಲಗಳು ಹೇಳಿವೆ.
 

click me!