MLC Election: ವಿಜಯೇಂದ್ರಗೆ ಪರಿಷತ್‌ ಟಿಕೆಟ್‌: ಸಿಎಂ ಶಿಫಾರಸು

By Girish GoudarFirst Published May 22, 2022, 4:20 AM IST
Highlights

*   3ನೇ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ ಒಲವು
*  ಪ್ರಕಾಶ್‌ ಶೆಟ್ಟಿಗೆ ಟಿಕೆಟ್‌ ಒಲವು
*  ಸಂಪುಟ ವಿಸ್ತರಣೆ ವೇಳೆ ವಿಜಯೇಂದ್ರಗೂ ಸಚಿವ ಸ್ಥಾನ ಸಿಗುವುದು ಖಚಿತ 

ಬೆಂಗಳೂರು(ಮೇ.22):  ರಾಜ್ಯಸಭೆ ಮತ್ತು ವಿಧಾನ ಪರಿಷತ್‌ ಚುನಾವಣೆಯ ಬಿಜೆಪಿ ಟಿಕೆಟ್‌ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವದೆಹಲಿಯಲ್ಲಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಾಜ್ಯ ಬಿಜೆಪಿ ಉಪಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ವಿಧಾನ ಪರಿಷತ್‌ ಟಿಕೆಟ್‌ ನೀಡಲು ಶಿಫಾರಸು ಮಾಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಅಂತಿಮ ತೀರ್ಮಾನವನ್ನು ಹೈಕಮಾಂಡ್‌ ನಾಯಕರಿಗೆ ಬಿಟ್ಟಿರುವುದಾಗಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಶನಿವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಫೋನ್‌ನಲ್ಲಿ ಮಾತುಕತೆ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಶನಿವಾರ ಅಮಿತ್‌ ಶಾ ಸೂಚನೆಯಂತೆ ಅರುಣ್‌ ಸಿಂಗ್‌ ಅವರನ್ನು ಭೇಟಿ ಮಾಡಿ ಮೇಲ್ಮನೆ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ನೀಡಿದ್ದರು. ವಿಧಾನ ಪರಿಷತ್‌ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿರುವ 20 ಹೆಸರುಗಳಲ್ಲಿ ಬಿ.ವೈ.ವಿಜಯೇಂದ್ರ ಹೆಸರು ಕೂಡ ಇದ್ದು, ಒಂದು ವೇಳೆ ಅವರು ವಿಧಾನ ಪರಿಷತ್‌ಗೆ ಆಯ್ಕೆಯಾದಲ್ಲಿ ಮುಂದೆ ಸಂಪುಟ ವಿಸ್ತರಣೆ ವೇಳೆ ಅವರಿಗೂ ಸಚಿವ ಸ್ಥಾನ ಸಿಗುವುದು ಖಚಿತ ಎಂದು ಮೂಲಗಳು ತಿಳಿಸಿವೆ.

ಕೋರ್ ಕಮಿಟಿಯಲ್ಲಿ ಮಹತ್ವದ ತೀರ್ಮಾನ, ವಿಜಯೇಂದ್ರಗೆ ಬಂಪರ್...!

ಪ್ರಕಾಶ್‌ ಶೆಟ್ಟಿಗೆ ಟಿಕೆಟ್‌ ಒಲವು:

ಇದೇ ವೇಳೆ ಗೋಲ್ಡ್‌ಫಿಂಚ್‌ ತಾರಾ ಹೋಟೆಲ್‌ ಮಾಲೀಕ, ಉದ್ಯಮಿ ಪ್ರಕಾಶ್‌ ಶೆಟ್ಟಿಅವರಿಗೆ ರಾಜ್ಯಸಭೆ ಟಿಕೆಟ್‌ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ. ಪ್ರಕಾಶ್‌ ಶೆಟ್ಟಿ ಅವರು ಕಳೆದ ಬಾರಿಯೂ ಸ್ಪರ್ಧಾಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್‌ ಸಿಕ್ಕಿರಲಿಲ್ಲ. ಈ ಬಾರಿ ಅವರಿಗೆ ಟಿಕೆಟ್‌ ನೀಡಲು ಬಿಜೆಪಿ ಹೈಕಮಾಂಡ್‌ ಒಲವು ವ್ಯಕ್ತಪಡಿಸಿದೆ ಎಂದು ಹೇಳಲಾಗಿದೆ.
ಇನ್ನು ರಾಜ್ಯಸಭೆಯ ಮತ್ತೊಂದು ಸ್ಥಾನಕ್ಕೆ ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಂಡು ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ರಾಜ್ಯ ಉಸ್ತುವಾರಿಯಿಂದ ಗ್ರೀನ್‌ ಸಿಗ್ನಲ್‌ ದೊರೆತಿರುವುದಾಗಿಯೂ ತಿಳಿದುಬಂದಿದೆ.
 

click me!