
ಮೇರತ್ ಲೋಕಸಭೆ ಚುನಾವಣೆ ಘೋಷಣೆ ಬಳಿಕ ಇದೇ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ಈ ವೇಳೆ ಅವರು ಇಂಡಿಯಾ ಕೂಟದ ನಾಯಕರನ್ನು ಭ್ರಷ್ಟಾಚಾರ ಹಾಗೂ ರೈತ ವಿರೋಧಿ ನೀತಿಗಳಿಗೆ ಸಂಬಂಧಿಸಿದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, 'ಕಳೆದ 10 ವರ್ಷಗಳಲ್ಲಿ ಕೇವಲ ಅಭಿವೃದಿಯ ಟ್ರೇಲರ್ ಮಾತ್ರ ನೋಡಿದ್ದೀರಿ. ಇನ್ನು 5 ವರ್ಷದಲ್ಲಿ ದೇಶವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹೊಸ ಸರ್ಕಾರದ ಮೊದಲ 100 ದಿನಗಳಲ್ಲಿ ನಾವು ಹಲವು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದೇವೆ. ಚುನಾವಣೆಗಳು ಸರ್ಕಾರವನ್ನು ಆಯ್ಕೆ ಮಾಡಲು ಅಲ್ಲ, ಆದರೆ 'ವಿಕಸಿತ ಭಾರತ' ನಿರ್ಮಾಣ ಮಾಡಲು' ಎಂದಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಪ್ರಹಾರ: ಭಾರತ ರತ್ನ ಚೌಧರಿ ಚರಣ್ ಸಿಂಗ್ ತವರು ಮೇರತ್‌ನಲ್ಲಿ ಭಾನುವಾರ ಪ್ರಚಾರ ಭಾಷಣ ಮಾಡಿದ ಅವರು, 'ಕಳೆದ 10 ವರ್ಷಗಳಲ್ಲಿ, ನಾವು ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಪ್ರಾರಂಭಿಸಿದ್ದೇವೆ ಎಂಬುದನ್ನು ದೇಶವು ನೋಡಿದೆ. ಯಾವುದೇ ಮಧ್ಯವರ್ತಿಯು ಬಡವರ ಹಣವನ್ನು ಕದಿಯಲು ಸಾಧ್ಯವಿಲ್ಲ ಎಂದು ನಾವು ಖಚಿತಪಡಿಸಿದ್ದೇವೆ. ನಾನು ಭ್ರಷ್ಟಾಚಾರದ ವಿರುದ್ದ ಹೋರಾಡುತ್ತಿದ್ದೇನೆ, ಅದಕ್ಕಾಗಿಯೇ ಭ್ರಷ್ಟರು ಇಂದು ಕಂಬಿ ಹಿಂದೆ ಬಿದ್ದಿದ್ದಾರೆ. ಅವರಿಗೆ ಸುಪ್ರೀಂಕೋರ್ಟ್‌ನಲ್ಲೂ ಜಾಮೀನು ಸಿಗುತ್ತಿಲ್ಲ' ಎಂದು ಜೈಲಿಗೆ ಹೋದ ರಾಜಕೀಯ ನಾಯಕರ ಹೆಸರೆತ್ತದೇ ಕುಟುಕಿದರು.
ಕನಿಮೋಳಿಗೆ 8ನೇ ತರಗತಿ ಓದಿದ ನಾಟಿ ವೈದ್ಯನ ಪೈಪೋಟಿ
'ಆದರೆ ನಾವು ಭ್ರಷ್ಟಾಚಾರದ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿರುವುದರಿಂದ ಕೆಲವರು ಗಲಾಟೆ ಮಾಡುತ್ತಿದ್ದಾರೆ. ಹೀಗಾಗಿ ಈ ಚುನಾವಣೆ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಎನ್‌ಡಿಎ ಮತ್ತು ಭ್ರಷ್ಟರನ್ನು ಉಳಿಸಲು ಹೋರಾಡುತ್ತಿರುವ ಇನ್ನೊಂದು ಗುಂಪಿನ ನಡುವೆ. ನನ್ನ ಮಂತ್ರ 'ಭ್ರಷ್ಟಾಚಾರ್ ಹಟಾವೋ' ಆದರೆ, ವಿಪಕ್ಷಗಳ ಮಂತ್ರ 'ಭ್ರಷ್ಟಾಚಾರಿ ಬಚಾವೋ' ಆಗಿದೆ' ಎಂದರು. ಈ ಮೂಲಕ ಭಾನುವಾರ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದ ಇಂಡಿಯಾ ಕೂಟಕ್ಕೆ ಟಾಂಗ್ ನೀಡಿದರು.
'ನಾವು ಕೇವಲ ಭ್ರಷ್ಟರ ಬಗ್ಗೆ ತನಿಖೆ ನಡೆಸುತ್ತಿಲ್ಲ, ಜನರಿಂದ ಕದ್ದ ಸಂಪತ್ತನ್ನು ಅವರಿಗೆ ಹಿಂದಿರುಗಿಸುತ್ತಿದ್ದೇವೆ. ದೇಶದ ಜನರನ್ನು ಲೂಟಿ ಮಾಡಿದವರು ಯಾರೇ ಆಗಿರಲಿ. ಜನರಿಂದ ಕದ್ದ ಸಂಪತ್ತನ್ನು ನಾನು ಜನರಿಗೇ ಹಿಂದಿರುಗಿಸುತ್ತೇನೆ' ಎಂದು ವಾಗ್ದಾನ ಮಾಡಿದರು.
ಶ್ರೀಲಂಕಾಗೆ ಸ್ನೇಹದ ಸಂಕೇತವಾಗಿ ದ್ವೀಪ ಬಿಟ್ಟು ಕೊಟ್ಟೆವು: ಕಚತೀವು ದ್ವೀಪದ ಬಗ್ಗೆ ಖರ್ಗೆ ಸಮರ್ಥನೆ
ರೈತರ ವಿಚಾರದಲ್ಲಿ ತರಾಟೆ: 'ರೈತರನ್ನು ದ್ವೇಷಿಸುವ ಇಂಡಿಯಾ ಒಕ್ಕೂಟವು ಭಾರತ ರತ್ನ ಚೌಧರಿ ಚರಣ್ ಸಿಂಗ್‌ಗೆ ಸರಿಯಾದ ಗೌರವವನ್ನೂ ನೀಡಲಿಲ್ಲ, ಸಂಸತ್ತಿನಲ್ಲಿ ಚೌಧರಿ ಚರಣ್ ಸಿಂಗ್ ಬಗ್ಗೆ ಅವರ ಮೊಮ್ಮಗೆ ಜಯಂತ ಚೌಧರಿ ಮಾತನಾಡುವಾಗ ವಿಪಕ್ಷಗಳ ಗದ್ದಲ ಹಾಕಿದವು. ಹೀಗಾಗಿ ಕಾಂಗ್ರೆಸ್ ಮತ್ತು ಎಸ್‌ಪಿ ಮನೆ ಮನೆಗೆ ತೆರಳಿ ಇದಕ್ಕಾಗಿ ಈ ಭಾಗದ ರೈತರ ಕ್ಷಮೆಯಾಚಿಸಬೇಕು ಎಂದು ಪ್ರಧಾನಿ ಆಗ್ರಹಿಸಿದರು.
18ನೇ ಲೋಕಸಭೆಗೆ ಏಪ್ರಿಲ್ 19 ರಿಂದ ಜೂನ್ 1 ರವರೆಗೆ ದೇಶಾದ್ಯಂತ ಒಟ್ಟು ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಉತ್ತರ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತ ಏಪ್ರಿಲ್ 26 (ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ಸೆಂಟ್ರಲ್), 2ನೇ ಹಂತದ ಚುನಾವಣೆ ಮೇ 7 (ಶಿವಮೊಗ್ಗ, ದಾವಣಗೆರೆ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಧಾರವಾಡ, ಕೊಪ್ಪಳ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ರಾಯಚೂರು, ಬಿಜಾಪುರ ಕಲಬುರಗಿ ಮತ್ತು ಬೀದರ್) ರಂದು ನಡೆಯಲಿದೆ. ಫಲಿತಾಂಶ ಜೂನ್ 4ಕ್ಕೆ ಪ್ರಕಟವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.