Asianet Suvarna News Asianet Suvarna News

ಶ್ರೀಲಂಕಾಗೆ ಸ್ನೇಹದ ಸಂಕೇತವಾಗಿ ದ್ವೀಪ ಬಿಟ್ಟು ಕೊಟ್ಟೆವು: ಕಚತೀವು ದ್ವೀಪದ ಬಗ್ಗೆ ಖರ್ಗೆ ಸಮರ್ಥನೆ

ನಾವು 1974ರಲ್ಲಿ ಶ್ರೀಲಂಕೆಗೆ ನಮ್ಮ ಭೂಭಾಗವನ್ನು ಸ್ನೇಹದ ಸಂಕೇತವಾಗಿ ಬಿಟ್ಟುಕೊಟ್ಟಿದ್ದೇವೆ. ಈ ವಿಷಯವನ್ನು 10 ವರ್ಷಗಳ ಕಾಲ ಮುಚ್ಚಿಟ್ಟು ಈಗ ಬಯಲು ಮಾಡಿರುವುದು ಚುನಾವಣಾ ಲಾಭ ಪಡೆಯುವ ಉದ್ದೇಶದಿಂದ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

We left the island for Srilanka as a sign of friendship congress Leader Mallikarjun Kharge's justification for Kachateevu Island akb
Author
First Published Apr 1, 2024, 6:36 AM IST

ನವದೆಹಲಿ: ಕಚತೀವು ದ್ವೀಪವನ್ನು ಕಾಂಗ್ರೆಸ್‌ ಸರ್ಕಾರ ನಿರ್ಲಕ್ಷ್ಯದಿಂದ ಶ್ರೀಲಂಕೆಗೆ ಬಿಟ್ಟುಕೊಟ್ಟಿದೆ ಎಂಬ ಮಾಹಿತಿ ಬಹಿರಂಗವಾದ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಚುನಾವಣೆಯ ಹೊತ್ತಿನಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಆರಂಭಿಸಿವೆ. ಈ ಮೂಲಕ ಕಾಂಗ್ರೆಸ್‌ ಭಾರತವನ್ನು ರಕ್ಷಿಸಲ್ಲ ಎಂದು ಮೋದಿ ಆರೋಪಿಸಿದ್ದರೆ ಸೌಹಾರ್ದ ದೇಣಿಗೆ ಎಂಬುದಾಗಿ ಮಲ್ಲಿಕಾರ್ಜುನ ಖರ್ಗೆ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ‘ಕಚತೀವು ದ್ವೀಪದ ಕುರಿತು ಸತ್ಯಾಂಶ ಹೊರಬಂದಿದ್ದು, ಕಾಂಗ್ರೆಸ್‌ ಎಷ್ಟು ಕಠೋರ ಮನಸ್ಸಿನಿಂದ ಭಾರತದ ಭೂಭಾಗವನ್ನು ಮತ್ತೊಂದೆ ದೇಶಕ್ಕೆ ಬಿಟ್ಟುಕೊಟ್ಟಿದೆ ಎಂಬುದನ್ನು ಬಯಲು ಮಾಡಿದೆ. ಈ ಮೂಲಕ ಭಾರತದ ಏಕತೆ, ಸಮಗ್ರತೆಯನ್ನು ಕಾಂಗ್ರೆಸ್‌ ಪಕ್ಷ ಕುಂಠಿತಗೊಳಿಸುವುದೇ ತನ್ನ ಮೂಲ ಮಂತ್ರವಾಗಿರಿಸಿಕೊಂಡುತ್ತು’ ಎಂದು ಟೀಕಿಸಿದ್ದಾರೆ.

ಕಚ್ಚತೀವು ದ್ವೀಪ ಶ್ರೀಲಂಕಾಗೆ ನೀಡಿ ಭಾರತಕ್ಕೆ ದ್ರೋಹ ಬಗೆದ ಕಾಂಗ್ರೆಸ್, ಬಿಜೆಪಿ ಸುದ್ದಿಗೋಷ್ಠಿ!

ಇದಕ್ಕೆ ತಿರುಗೇಟು ನೀಡಿರುವ ಮಲ್ಲಿಕಾರ್ಜುನ ಖರ್ಗೆ, ‘ಬಿಜೆಪಿಯು 2015ರಲ್ಲಿ ಬಾಂಗ್ಲಾದೇಶದ ಜೊತೆ ಸೌಹಾರ್ದ ಗಡಿ ಒಪ್ಪಂದ ಮಾಡಿಕೊಂಡಂತೆ ನಾವು 1974ರಲ್ಲಿ ಶ್ರೀಲಂಕೆಗೆ ನಮ್ಮ ಭೂಭಾಗವನ್ನು ಸ್ನೇಹದ ಸಂಕೇತವಾಗಿ ಬಿಟ್ಟುಕೊಟ್ಟಿದ್ದೇವೆ. ಈ ವಿಷಯವನ್ನು 10 ವರ್ಷಗಳ ಕಾಲ ಮುಚ್ಚಿಟ್ಟು ಈಗ ಬಯಲು ಮಾಡಿರುವುದು ಚುನಾವಣಾ ಲಾಭ ಪಡೆಯುವ ಉದ್ದೇಶದಿಂದ ಎಂಬುದನ್ನು ಸಾಬೀತು ಮಾಡಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ.

ಆರ್‌ಟಿಐ ಅರ್ಜಿಯಿಂದ ಸತ್ಯ ಬಯಲಿಗೆ

ನವದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವೆ ಇರುವ ಪಾಕ್‌ ಜಲಸಂಧಿಯಲ್ಲಿದ್ದ ಕಚತೀವು ದ್ವೀಪವನ್ನು ಅಂದಿನ ಪಂ। ಜವಾಹರಲಾಲ್‌ ನೆಹರು ಹಾಗೂ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ಸರ್ಕಾರಗಳು ತಮ್ಮ ನಿರ್ಲಕ್ಷ್ಯದಿಂದ ಶ್ರೀಲಂಕಾಗೆ ಬಿಟ್ಟುಕೊಟ್ಟಿದ್ದವು ಎಂಬ ‘ರಹಸ್ಯ’ ವಿಷಯವೊಂದು ಮಾಹಿತಿ ಹಕ್ಕು ಅಡಿ ಕೇಳಲಾಗಿದ್ದ ಪ್ರಶ್ನೆಯೊಂದರಿಂದ ಬಯಲಾಗಿದೆ.

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸಲ್ಲಿಸಿದ್ದ ಆರ್‌ಟಿಐ ಅರ್ಜಿಯಲ್ಲಿ ಈ ವಿಷಯವನ್ನು ವಿವರವಾಗಿ ತಿಳಿಸಲಾಗಿದೆ. ‘ಭಾರತದ ಮೊದಲ ಪ್ರಧಾನಿ ಪಂ। ಜವಾಹರಲಾಲ್‌ ನೆಹರು ಕಾಲದಿಂದಲೂ ಕಚತೀವು ದ್ವೀಪದ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆಯನ್ನೇ ತಾಳುತ್ತಾ ಬಂದಿತ್ತು. 1974ರಲ್ಲಿ ಅಧಿಕೃತವಾಗಿ ಆ ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಟ್ಟಿತು’ ಎಂದು ಉಲ್ಲೇಖಿಸಲಾಗಿದೆ.

ಕಾಂಗ್ರೆಸ್‌ಗೆ ಇನ್ನಷ್ಟು ಸಂಕಷ್ಟ, 3567 ಕೋಟಿಗೆ ಏರಿದ ಆದಾಯ ತೆರಿಗೆ ಡಿಮಾಂಡ್‌ ನೋಟಿಸ್‌!

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತಮಿಳುನಾಡಿನಲ್ಲಿ ಛಾಪು ಮೂಡಿಸಲು ಯತ್ನ ನಡೆಸುತ್ತಿದೆ. ಇಂಥ ಸಂದರ್ಭದಲ್ಲಿ ಬಯಲಾದ ಈ ವಿಚಾರವು ಬಿಜೆಪಿ ಹಾಗೂ ವಿಪಕ್ಷಗಳ ನಡುವೆ ‘ಹಣಾಹಣಿ ವಿಷಯ’ವಾಗಿ ಮಾರ್ಪಾಟಾಗುವುದು ಖಚಿತವಾಗಿದೆ.

ಉತ್ತರದಲ್ಲಿ ಏನಿದೆ?:

ಕಚತೀವು ದ್ವೀಪವನ್ನು ಬ್ರಿಟಿಷರು ರಾಮನಾಥಪುರದ ರಾಜನಿಗೆ 1875ರಲ್ಲಿ ಜಮೀನ್ದಾರಿ ಕಾಯ್ದೆಯಡಿ ಆತನ ಹೆಸರಿಗೆ ಬರೆದುಕೊಟ್ಟಿದ್ದರು. ಆತ ಆಗ ಸಿಲೋನ್‌ ಎಂದು ಕರೆಯಲಾಗುತ್ತಿದ್ದ ಶ್ರೀಲಂಕಾಗೆ ಯಾವುದೇ ಕಪ್ಪಕಾಣಿಕೆಯನ್ನು ನೀಡದೆ ರಾಜ್ಯಭಾರ ಮಾಡುತ್ತಿದ್ದನು. ಆದರೆ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಭಾರತೀಯ ನೌಕಾಪಡೆಯು ಸಿಲೋನ್‌ ವಾಯುಪಡೆಯು ಕಚತೀವುನಲ್ಲಿ ಸಮರಾಭ್ಯಾಸ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಈ ವೇಳೆ ಕಚತೀವು ದ್ವೀಪದ ಮೇಲೆ ಸಿಲೋನ್‌ ತನ್ನ ಹಕ್ಕು ಸಾಧಿಸಲು ಪ್ರಾರಂಭಿಸಿತು.

‘ಬ್ರಿಟಿಷರು ಮತ್ತು ಚೀನೀಯರು ರಚಿಸಿದ ಭೂಪಟದಲ್ಲಿ ಕಚತೀವು ದ್ವೀಪ ಶ್ರೀಲಂಕಾದಲ್ಲೇ ಇದೆ. ಹೀಗಾಗಿ ಅದು ನಮಗೇ ಸೇರಬೇಕು’ ಎಂದು ಶ್ರೀಲಂಕಾ ಪ್ರತಿಪಾದಿಸಿ 1955ರ ಅಕ್ಟೋಬರ್‌ನಲ್ಲಿ ಆ ಪ್ರದೇಶದಲ್ಲಿ ಸಮರಾಭ್ಯಾಸವನ್ನೂ ನಡೆಸಿತು. ಬಳಿಕ ಪಂ। ನೆಹರು ಸಹ 1960ರಲ್ಲಿ ಲೋಕಸಭೆಯಲ್ಲಿ ಉತ್ತರ ನೀಡಿ, ‘ಕಚತೀವು ಎಂಬಂತಹ ಸಣ್ಣ ದ್ವೀಪದ ಕುರಿತು ತಕರಾರು ತೆಗೆಯಲು ನಮಗೆ ಆಸಕ್ತಿ ಇಲ್ಲ. ಭಾರತವು ಆ ಪ್ರದೇಶದ ಮೇಲೆ ಹಕ್ಕು ಸಾಧಿಸುವುದನ್ನು ಕೈಬಿಡುತ್ತದೆ’ ಎಂದು ಘೋಷಿಸಿದರು.

‘ಬಳಿಕ ಇಂದಿರಾ ಗಾಂಧಿ 1968ರಲ್ಲಿ ಪ್ರಧಾನಿಯಾಗಿದ್ದಾಗ ಅದನ್ನು ಶ್ರೀಲಂಕೆಗೆ ಹಸ್ತಾಂತರಿಸಲು ಕಾನೂನು ಪ್ರಕ್ರಿಯೆಯನ್ನು ಆರಂಭಿಸಿ ಮದ್ರಾಸ್‌ ಸರ್ಕಾರದ ಅಭಿಪ್ರಾಯ ಕೇಳಿದರು. ಆಗ ಮುಖ್ಯಮಂತ್ರಿಯಾಗಿದ್ದ ಎಂ.ಕರುಣಾನಿಧಿ ಸಮಂಜಸ ಉತ್ತರ ಕೊಟ್ಟರೂ ಸಹ ಕೇಂದ್ರ ಸರ್ಕಾರ ‘ಸಾಕ್ಷ್ಯಾಧಾರ ಕೊರತೆ’ ಎಂದು ಪರಿಗಣಿಸಿ 1974ರಲ್ಲಿ ಆ ಪ್ರದೇಶವನ್ನು ಶ್ರೀಲಂಕೆಗೆ ಅಧಿಕೃತವಾಗಿ ಹಸ್ತಾಂತರಿಸಿತು’ ಎಂದು ಆರ್‌ಟಿಐ ಉತ್ತರದಲ್ಲಿ ವಿವರಿಸಲಾಗಿದೆ.

ಎಲ್ಲಿದೆ ಕಚತೀವು ದ್ವೀಪ:

ಕಚತೀವು ದ್ವೀಪವು ಪಾಕ್‌ ಜಲಸಂಧಿಯಲ್ಲಿದ್ದು, ಸುಮಾರು 1.9 ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ. ಇದು ನಿರ್ಜನ ದ್ವೀಪವಾಗಿದ್ದು, ಕೇವಲ ಚರ್ಚ್‌ವೊಂದರ ಅವಶೇಷ ಮಾತ್ರ ಉಳಿದುಕೊಂಡಿದೆ.

Follow Us:
Download App:
  • android
  • ios