ನಾವು ಆರೋಗ್ಯಕರವಾಗಿ ಚುನಾವಣೆ ನಡೆಸುತ್ತಿದ್ದೇವೆ. ಯಾರ ಬಗ್ಗೆಯೂ ಲಘುವಾಗಿ ಮಾತನಾಡುತ್ತಿಲ್ಲ. ವಿನಾಕಾರಣ ಜೆಡಿಎಸ್‌ನವರನ್ನು ಕೆರಳಿಸಬೇಡಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ಸಿಗರಿಗೆ ಎಚ್ಚರಿಕೆ ನೀಡಿದರು.
ಶ್ರೀರಂಗಪಟ್ಟಣ (ಏ.01): ನಾವು ಆರೋಗ್ಯಕರವಾಗಿ ಚುನಾವಣೆ ನಡೆಸುತ್ತಿದ್ದೇವೆ. ಯಾರ ಬಗ್ಗೆಯೂ ಲಘುವಾಗಿ ಮಾತನಾಡುತ್ತಿಲ್ಲ. ವಿನಾಕಾರಣ ಜೆಡಿಎಸ್‌ನವರನ್ನು ಕೆರಳಿಸಬೇಡಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ಸಿಗರಿಗೆ ಎಚ್ಚರಿಕೆ ನೀಡಿದರು. ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಲೋಕಸಭಾ ಚುನಾವಣೆ ಸಂಬಂಧ ಜೆಡಿಎಸ್-ಬಿಜೆಪಿ ಸಮ್ಮಿಲನ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕುಮಾರಸ್ವಾಮಿ ಅವರಿಗೆ ಎರಡು ಬಾರಿ ಹೃದಯದ ಬೈಪಾಸ್ ಸರ್ಜರಿಯಾಗಿದೆ. ಈಗ ತಂತ್ರಜ್ಞಾನ ಬೆಳವಣಿಗೆಯಾಗಿದ್ದು ಟ್ಯಾವಿ ಎಂಬ ನೂತನ ತಂತ್ರಜ್ಞಾನದ ಮೂಲಕ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ವೈದ್ಯಕೀಯ ಜ್ಞಾನವಿಲ್ಲದೆ ಇನ್ನೊಬ್ಬರ ಆರೋಗ್ಯದ ವಿಷಯದಲ್ಲಿ ಲಘುವಾಗಿ ಮಾತನಾಡುವುದು ಬೇಡ ಶಾಸಕ ರಮೇಶ್ ಬಂಡಿಸಿದ್ದೇಗೌಡರಿಗೆ ಕಿವಿಮಾತು ಹೇಳಿದರು. ನಿಮ್ಮ ಕುಟುಂಬದ ರಾಜಕೀಯ ಬೆಳವಣಿಗೆಗೆ ಕಾರಣವಾದ ಪಕ್ಷ ಯಾವುದು, ನಾಯಕರು, ಕಾರ್ಯಕರ್ತರು ಯಾರು ಎನ್ನುವುದನ್ನು ಮರೆತು ಮಾತನಾಡುತ್ತಿದ್ದೀರಿ. ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕು. ಅಧಿಕಾರದ ದರ್ಪ, ದುರಹಂಕಾರವನ್ನು ತೋರಿಸಬಾರದು. ನಾವು ಯಾರ ಬಗ್ಗೆಯೂ ಹಗುರವಾಗಿ, ಮನಸ್ಸಿಗೆ ನೋವಾಗುವಂತೆ ಮಾತನಾಡುತ್ತಿಲ್ಲ. ವೈಯಕ್ತಿಕ ಆರೋಗ್ಯದ ಸಮಸ್ಯೆಗಳು ಅದನ್ನು ಅನುಭವಿಸಿದವರಿಗೆ ಗೊತ್ತಿರುತ್ತದೆ ಎಂದರು.
undefined
ಸುಭದ್ರ ರಾಷ್ಟ್ರ ನಿರ್ಮಾಣಕ್ಕಾಗಿ ಜೆಡಿಎಸ್-ಬಿಜೆಪಿ ಮೈತ್ರಿ: ನಿಖಿಲ್ ಕುಮಾರಸ್ವಾಮಿ
ನಮ್ಮ ಮನೆಗೆ ಗುತ್ತಿಗೆದಾರರು, ಶ್ರೀಮಂತರು, ಉದ್ಯಮಿಗಳು ಬರುವುದಿಲ್ಲ. ಬರುವವರೆಲ್ಲಾ ಸಾಮಾನ್ಯ ರೈತರು, ಶೋಷಣೆಗೆ ಒಳಗಾದವರೇ ಆಗಿರುತ್ತಾರೆ. ಕುಮಾರಸ್ವಾಮಿ ಅವರದ್ದು ಮಾತೃಹೃದಯ. ಸಂಕಷ್ಟದಲ್ಲಿರುವವರನ್ನು ಕಂಡರೆ ತಕ್ಷಣವೇ ಮಿಡಿಯುತ್ತದೆ ಎಂದ ನಿಖಿಲ್, ಈ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾ.ಸಿ.ಎನ್.ಮಂಜುನಾಥ್, ಮಂಡ್ಯದಿಂದ ಎಚ್.ಡಿ. ಕುಮಾರಸ್ವಾಮಿ ಎಂಬ ಇಬ್ಬರು ಹೃದಯವಂತರು ರಾಷ್ಟ್ರಸೇವೆಗಾಗಿ ಮೋದಿ ಜೊತೆ ಕೈಜೋಡಿಸಲು ಸಜ್ಜಾಗಿ ನಿಂತಿದ್ದಾರೆ ಎಂದರು. ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಸಮಯದಲ್ಲೂ ಜೆಡಿಎಸ್‌ಗೆ ಇಷ್ಟೇ ಸ್ಥಾನ ಕೊಡಬೇಕೆಂದು ಬೇಡಿಕೆ ಇಡಲಿಲ್ಲ. ಆದರೆ, ರಾಜ್ಯದ ೨೮ಕ್ಕೆ ೨೮ ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳನ್ನು ಒಗ್ಗಟ್ಟು ಹಾಗೂ ಒಮ್ಮತದಿಂದ ಗೆಲ್ಲಿಸುವಂತೆ ಮನವಿ ಮಾಡುತ್ತಿರುವುದಾಗಿ ತಿಳಿಸಿದರು.
ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬರಗಾಲ ಎದುರಾಗಿತ್ತು. ಆ ಸಮಯದಲ್ಲಿ ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದರು. ಕುಮಾರಸ್ವಾಮಿ ಅವರಿಗೆ ಅಧಿಕಾರವಿಲ್ಲದಿದ್ದರೂ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಹೋಗಿ ಸಾಂತ್ವನ ಹೇಳಿ, ಆರ್ಥಿಕ ನೆರವು ನೀಡಿದ್ದರು. ಸಾಲದ ಶೂಲದಿಂದ ರೈತರನ್ನು ಹೊರತರಲು ಅಂದೇ ತೀರ್ಮಾನ ಮಾಡಿದರು. ೨೦೧೮ರಲ್ಲಿ ಸಿಎಂ ಆದಾಗ ರೈತರ ಸಾಲ ಮನ್ನಾ ಮಾಡಿದರು. ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ ನಾಯಕ ಎಂದರೆ ಕುಮಾರಸ್ವಾಮಿ ಎಂದು ಬಣ್ಣಿಸಿದರು.
ಐದು ಗ್ಯಾರಂಟಿಗಳನ್ನು ಇಟ್ಟುಕೊಂಡು ಚುನಾವಣೆ ಮಾಡುತ್ತಿದ್ದಾರೆ. ಫಲಾನುಭವಿಗಳ ಸಭೆ ಮಾಡಿ ಕೋಟ್ಯಂತರ ರು. ಖರ್ಚು ಮಾಡುತ್ತಿದ್ದಾರೆ. ನುಡಿದಂತೆ ನಡೆದಿದ್ದೇವೆ ಎನ್ನುತ್ತಾರೆ. ಹೆಣ್ಣು ಮಕ್ಕಳಿಗೆ ಎರಡು ಸಾವಿರ ರು. ಕೊಟ್ಟು ಗಂಡು ಮಕ್ಕಳ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ಇದು ಇವರ ಸಾಧನೆ. ಇವರಿಗೆ ಅಭಿವೃದ್ಧಿ ಕಾಳಜಿ ಇದ್ದರೆ ಇದುವರೆಗೂ ಎಷ್ಟು ಕ್ಷೇತ್ರಗಳಿಗೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು. ಮಾಗಡಿ ಶಾಸಕ ಬಾಲಕೃಷ್ಣ ಅವರು ಕಾಂಗ್ರೆಸ್‌ಗೆ ಮತ ಹಾಕದಿದ್ದರೇ ಗ್ಯಾರಂಟಿ ಯೋಜನೆಗಳನ್ನು ಕ್ಯಾನ್ಸಲ್ ಮಾಡುತ್ತೇವೆ ಎಂದಿದ್ದಾರೆ. ಗ್ಯಾರಂಟಿಗಳನ್ನು ಜನ ಕೇಳಿರಲಿಲ್ಲ. ಅದನ್ನು ಘೋಷಣೆ ಮಾಡಿದವರು ನೀವು. ಕೊಡುವುದಕ್ಕೆ ಸಾಧ್ಯವಿಲ್ಲವೆಂದ ಮೇಲೆ ಘೋಷಣೆ ಮಾಡಿದ್ದೇಕೆ ಎಂದು ಪ್ರಶ್ನಿಸಿದರು.
ಅನುಕಂಪ ಗಿಟ್ಟಿಸಿ ಮತ ಹಾಕಿಸಿಕೊಳ್ಳುವ ಅನಿವಾರ್ಯತೆ ಇಲ್ಲ: ನಿಖಿಲ್ ಕುಮಾರಸ್ವಾಮಿ
ಸಮಾರಂಭದಲ್ಲಿ ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಕೆ.ಸಿ.ನಾರಾಯಣಗೌಡ, ಶಾಸಕ ಹೆಚ್.ಟಿ.ಮಂಜು, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಕೆ. ಸುರೇಶ್‌ಗೌಡ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್. ಇಂದ್ರೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ. ಉಮೇಶ್, ಮುಖಂಡರಾದ ಕೆ.ಎಸ್. ನಂಜುಂಡೇಗೌಡ, ಎಸ್. ಸಚ್ಚಿದಾನಂದ, ಅಶೋಕ್ ಜಯರಾಂ, ಪೈಲ್ವಾನ್ ಮುಕುಂದ, ದಶರಥ ಇತರರಿದ್ದರು.