ಗುಲಾಮಗಿರಿ ರಾಜಕಾರಣಕ್ಕೆ ಬಗ್ಗದೆ ಸ್ವಾಭಿಮಾನದ ರಾಜಕಾರಣ ಮಾಡಿದ ಆತ್ಮತೃಪ್ತಿ ನನಗಿದೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಸಹಿಸಿಕೊಳ್ಳದೆ ಬದುಕಿದ್ದೇನೆ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು.
ಮೈಸೂರು (ಮಾ.18): ಗುಲಾಮಗಿರಿ ರಾಜಕಾರಣಕ್ಕೆ ಬಗ್ಗದೆ ಸ್ವಾಭಿಮಾನದ ರಾಜಕಾರಣ ಮಾಡಿದ ಆತ್ಮತೃಪ್ತಿ ನನಗಿದೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಸಹಿಸಿಕೊಳ್ಳದೆ ಬದುಕಿದ್ದೇನೆ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು. ನಗರದ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಭಾನುವಾರ ನಡೆದ ತಮ್ಮ ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ನಾನೆಂದೂ ಗುಲಾಮಗಿರಿ ರಾಜಕೀಯ ಮಾಡಲಿಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಸಹಿಸಿಕೊಳ್ಳದೆ ಬದುಕಿದ್ದೇನೆ. ಆರೋಗ್ಯದ ಸಮಸ್ಯೆಯಿಂದಾಗಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುತ್ತಿದ್ದೇನೆ. ಯಾವುದೇ ಚುನಾವಣಾ ಕಾರ್ಯಕ್ರಮದಲ್ಲಿಯೂ ಭಾಗಿಯಾಗುವುದಿಲ್ಲ ಎಂದರು.
ನಾನು ಈವರೆಗೆ 14 ಚುನಾವಣೆ ಎದುರಿಸಿ, 8 ಬಾರಿ ಆಯ್ಕೆಯಾಗಿ ರಾಜ್ಯ ಮತ್ತು ಕೇಂದ್ರದಲ್ಲಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಒಂದು ಸಣ್ಣ ಕಳಂಕ ಮತ್ತು ಕುಪ್ಪು ಚುಕ್ಕೆ ಇಲ್ಲದೆ ನಿವೃತ್ತಿ ಬಯಸಿದ್ದ ನನಗೆ ಇಂದು ಸಂತೋಷವಾಗಿದೆ. ಅಭಿನಂದನಾ ಸಮಾರಂಭವನ್ನು ಕೃತಜ್ಞತಾ ಸಮಾರಂಭವಾಗಿ ಪರಿವರ್ತಿಸಲು ಕೇಳಿಕೊಂಡೆ. ಇಷ್ಟು ವರ್ಷಗಳ ಕಾಲ ಬೆಂಬಲಿಸಿದ ಮತದಾರರು, ಸ್ನೇಹಿತರು, ಆತ್ಮೀಯರಿಗೆ ಕೃತಜ್ಞತೆ ಸಲ್ಲಿಸಬೇಕಿತ್ತು. ಡಾ.ಬಿ.ಆರ್. ಅಂಬೇಡ್ಕರ್ ಹೇಳಿದಂತೆ ನಾನು ಗೌರವಯುತ ಮತ್ತು ಸ್ವಾಭಿಮಾನದಿಂದ ನಡೆದುಕೊಂಡು ಬಂದಿದ್ದೇನೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಸುಧಾರಣೆ ತರಲಿ: ಎಸ್.ಎಂ.ಕೃಷ್ಣ ಮನವಿ
ನನ್ನ ರಾಜಕೀಯ ಜೀವನದ ಕುರಿತು ಆತ್ಮಕಥನ ಬರೆಯಬೇಕು ಎಂದು ಭಾವಿಸಿದ್ದೆ. ಆದರೆ, ಸಮಯದ ಅಭಾವದಿಂದ ವಿಸ್ತೃತವಾಗಿ ಬರೆಯಲು ಸಾಧ್ಯವಾಗಿಲ್ಲ. ಹಠ ಮತ್ತು ಛಲ ಇದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದೆಂಬ ಮಾತನ್ನು ಪಾಲಿಸಿದ್ದೇನೆ. ನನಗೆ ಅಂಬೇಡ್ಕರ್ ಸ್ಫೂರ್ತಿಯಾದರು. ಅಂಬೇಡ್ಕರ್, ಸಂವಿಧಾನದ ಕುರಿತು ನೂರೆಂಟು ಚರ್ಚೆಗಳು, ಚಿಂತನ-ಮಂಥನ ನಡೆಯುತ್ತಿವೆ. ಮೊದಲು ನಾವು ಅಂಬೇಡ್ಕರ್ ಅವರನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ ಎಂದು ಅವರು ಹೇಳಿದರು. 27ನೇ ವಯಸ್ಸಿಗೆ ಸಂಸತ್ ಪ್ರವೇಶಿಸಿದ ನಾನು ವಿದ್ಯಾರ್ಥಿಯಂತೆ ಸಂಸತ್ ನಲ್ಲಿ ಕುಳಿತುಕೊಂಡು ಗ್ರಹಿಸುತ್ತಿದ್ದೆ.
ಇಂದಿರಾಗಾಂಧಿ ಅವರಿಂದ ನರೇಂದ್ರಮೋದಿ ತನಕ ಏಳು ಪ್ರಧಾನಿಗಳ ಆಡಳಿತ ನೋಡಿದ್ದೇನೆ. ಮುಂದೆ ಯಾರ್ಯಾರ ಆಡಳಿತ ಹೇಗಿತ್ತು ಎಂಬುದರ ಬಗ್ಗೆ ಬರೆಯುತ್ತೇನೆ. 1974 ರಲ್ಲಿ ಆಕಸ್ಮಿಕವಾಗಿ ಮತ್ತು ಅನಿರೀಕ್ಷಿತ ಬೆಳವಣಿಗೆಯಿಂದ ಚುನಾಣಾ ರಾಜಕೀಯಕ್ಕೆ ಬಂದೆ. ಅಶೋಕಪುರಂ ಒಂದು ರಿಪಬ್ಲಿಕ್ ಮತ್ತು ಸರ್ಕಾರದಂತೆ ಇತ್ತು. ಅಂದು ನನ್ನನ್ನು ಬೆನ್ನು ತಟ್ಟಿದ್ದರು. ಅದಕ್ಕಾಗಿಯೇ ರಲ್ಲಿ ಚಾಮರಾಜನಗರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಹೇಳಿದಾಗ ಬಿ. ರಾಚಯ್ಯ ಅವರಂತಹವರ ಮುಂದೆ ನಿಲ್ಲೋದು ಸಾಧ್ಯನಾ ಅಂತ ಹೇಳಿದ್ದೆ. ಆದರೆ, ಒಂದು ರೂಪಾಯಿ ಇಲ್ಲದೆ ಜನರೇ ಸ್ವಯಂಪ್ರೇರಣೆಯಿಂದ ಜತೆಗೆ ನಿಂತು ಗೆಲ್ಲಿಸಿದ್ದಾಗಿ ತಿಳಿಸಿದರು.
ಪ್ರತಿಯೊಂದು ಹಳ್ಳಿಗಳಿಗೂ ಹೋಗಿ ಸಂಸತ್ ಸದಸ್ಯರು ಯಾವ ರೀತಿ ಇರಬೇಕು ಎಂಬುದನ್ನು ತೋರಿಸಿಕೊಟ್ಟೆ. ಅಲ್ಲಿಯವರೆಗೂ ಸಂಸದರು ಹಳ್ಳಿಗಳತ್ತ ನೋಡುತ್ತಿರಲಿಲ್ಲ ಎಂದು ಅವರು ಹೇಳಿದರು. ಯಾವ ಪಕ್ಷಕ್ಕೂ ಹೊರೆಯಾಗಿಲ್ಲ: ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಸಹಿಸಿ ಕುಳಿತಿಲ್ಲ. ಹೊಂದಾಣಿಕೆ ಮಾಡಿಕೊಂಡಿಲ್ಲ. ಯಾವುದೇ ಪಕ್ಷದಲ್ಲಿ ಇದ್ದರೂ ಆಸ್ತಿಯಾಗಿದ್ದೇನೆ ಹೊರತು ಹೊರೆಯಾಗಿಲ್ಲ. ಯಾವುದೇ ಪಕ್ಷದಲ್ಲಿ ಪ್ರೀತಿ-ವಿಶ್ವಾಸದಿಂದ ಆಹ್ವಾನಿಸುತ್ತಾರೆ ವಿನಾ ಬೇಡ ಎನ್ನಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪರ- ವಿರೋಧ ಚರ್ಚೆಗೆ ವಿರೋಧವಿಲ್ಲ. ಆತ್ಮಸಾಕ್ಷಿಯಾಗಿ ನಡೆದುಕೊಂಡು ಬಂದಿದ್ದೇನೆ ಎಂದರು.
ಶುಭಸುದ್ದಿ: ಮುಂದಿನ 3 ದಿನಗಳಲ್ಲಿ ಕರ್ನಾಟಕದ 12ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆ ಸಂಭವ!
ಸುಟ್ಟ ಬೂದಿಯಿಂದ ಮೇಲೆದ್ದು ಬಂದಂತೆ ಮತ್ತೆ ಬಂದಿದ್ದೇನೆ. ಅಧಿಕಾರಕ್ಕಾಗಿ ರಾಜೀಯಾಗಿಲ್ಲ. 1996 ಮತ್ತು 1998ರ ಚುನಾವಣೆಯಲ್ಲಿ ನನ್ನನ್ನು ರಾಜಕೀಯವಾಗಿ ಮುಗಿಸಬೇಕೆಂದು ಯಾವ ರೀತಿ ಸಂಚು ಮಾಡಿದರು ಎಂಬುದು ನನಗೆ ಗೊತ್ತಿದೆ. ಹರಿಯುವ ನದಿಯಲ್ಲಿ ಕೊಚ್ಚೆ ಹರಿದು ಹೋಗುತ್ತದೆ. ಆದರೆ ಬಂಡೆ ಎಂದಿಗೂ ಹರಿದು ಹೋಗಲ್ಲ. ಅದೇ ರೀತಿ ಬಂಡೆಯಂತೆ ನಿಂತು ರಾಜಕಾರಣ ಮಾಡಿದ್ದೇನೆ ಎಂದು ಹೆಮ್ಮೆಯಿಂದ ಹೇಳಿದರು. ಅಧರ್ಮೀಯರಿಗೆ ನಮಸ್ಕಾರ ಮಾಡಿಲ್ಲ. ತಲೆಬಾಗಿಲ್ಲ. ಮಲಗಿದ್ದ ಹುಲಿಯ ಮೇಲೆ ಶಿಕಾರಿ ಮಾಡದೆ ಎಬ್ಬಿಸಿ ಶಿಕಾರಿ ಮಾಡಿದ್ದೇನೆ. ಇದನ್ನು ಹೆಮ್ಮೆಯಿಂದ ಹೇಳುತ್ತೇನೆ. ನನ್ನ ಮೇಲೆ ಶಿಕಾರಿ ಮಾಡಲು ಬಂದವರಿಗೆ ಯಾವ ರೀತಿ ಪಾಠ ಕಲಿಸಿದ್ದೇನೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಅವರು ಮಾರ್ಮಿಕವಾಗಿ ಹೇಳಿದರು. ನಾನು ಒಳ್ಳೆಯವರಿಗೆ ಒಳ್ಳೆಯವನೆ, ಕೆಟ್ಟವರಿಗೆ ಬಹಳ ಕೆಟ್ಟವನು. ಡಾ.ಬಿ.ಆರ್. ಅಂಬೇಡ್ಕರ್ ಬರೀ ರಾಜಕೀಯ ನಾಯಕರಲ್ಲ. ಅವರೊಬ್ಬ ಆಧ್ಯಾತ್ಮಿಕ ನಾಯಕ. ಬೆಂಕಿಯ ಜ್ವಾಲೆಯಿಂದ ಎದ್ದು ಬಂದು ದಾರಿತೋರಿದವರು ಎಂದು ಅವರು ಬಣ್ಣಿಸಿದರು.