BJP Government: ಆರೇ ತಿಂಗಳಲ್ಲಿ ಜನರ ಮನ ಗೆದ್ದ ಕಾಮನ್‌ಮ್ಯಾನ್‌ ಸಿಎಂ..!

By Kannadaprabha NewsFirst Published Jan 28, 2022, 4:31 AM IST
Highlights

*  ರಾಜ್ಯದ ಜನಮನ ಗೆದ್ದ ಕಾಮನ್‌ಮ್ಯಾನ್‌ ಸಿಎಂ
*  ಬೊಮ್ಮಾಯಿ ಸರ್ಕಾರಕ್ಕೆ ಇಂದಿಗೆ 6 ತಿಂಗಳು
*  ನಾಡದೊರೆಗೆ ಇಂದು 62ನೇ ಜನ್ಮದಿನ
 

ಬೆಂಗಳೂರು(ಜ.28):  ಜನಪ್ರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ(BS Yediyurappa) ಅವರ ನಿರ್ಗಮನದಂಥ ಕ್ಲಿಷ್ಟಕರ ಮತ್ತು ಸವಾಲಿನ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಬಸವರಾಜ ಬೊಮ್ಮಾಯಿ(Basavaraj Bommai) ಅವರು ತಮ್ಮ ಮೊದಲ ಆರು ತಿಂಗಳ ಅವಧಿಯಲ್ಲೇ ಸ್ಪಷ್ಟಭರವಸೆ ಮೂಡಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಮೊದಲ ಕೆಲ ದಿನಗಳಲ್ಲೇ ಸಿಎಂ (Chief Minister) ಎಂದರೆ ‘ಕಾಮನ್‌ ಮ್ಯಾನ್‌’(Comman Man) ಎನ್ನುವ ಮೂಲಕ ಮೆಚ್ಚುಗೆ ಗಳಿಸಿದ ಬೊಮ್ಮಾಯಿ ಅವರು ದಿನಗಳೆದಂತೆ ಆಡಳಿತದಲ್ಲಿ ತಮ್ಮದೇ ಛಾಪು ಮೂಡಿಸುವತ್ತ ಹೆಜ್ಜೆ ಇಟ್ಟಿದ್ದಾರೆ.

ನಿನ್ನೆ(ಗುರುವಾರ) ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಆರು ತಿಂಗಳು ಪೂರೈಸಿದ್ದಾರೆ. ಜತೆಗೆ ಇಂದು(ಶುಕ್ರವಾರ) ಅವರ 62ನೇ ಹುಟ್ಟು ಹಬ್ಬ ಕೂಡ ಇದೆ. ಹುಟ್ಟುಹಬ್ಬ ಆಚರಿಸಿಕೊಳ್ಳದಿದ್ದರೂ ಸರ್ಕಾರದ ಆರು ತಿಂಗಳ ಸಾಧನೆಯ ಸಂಭ್ರಮವನ್ನು ಸರಳ ಕಾರ್ಯಕ್ರಮದ ಮೂಲಕ ಆಚರಿಸಿಕೊಳ್ಳುತ್ತಿದ್ದಾರೆ.

Karnataka Budget 2022 ಬೊಮ್ಮಾಯಿ ಸರ್ಕಾರದ ಮೊದಲ ಬಜೆಟ್‌ಗೆ ಮುಹೂರ್ತ ಫಿಕ್ಸ್

ಆಸೆ ಪಡದೆ ಒಲಿದ ಪಟ್ಟ:

ಸ್ವತಃ ಮುಖ್ಯಮಂತ್ರಿಗಳ ಪುತ್ರನಾಗಿ ಆಡಳಿತವನ್ನು ಸಮೀಪದಿಂದಲೇ ನೋಡಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ತಾವೂ ಮುಖ್ಯಮಂತ್ರಿಯಾಗಬೇಕು ಎಂಬುದರ ಬಗ್ಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಯಡಿಯೂರಪ್ಪ ನಿರ್ಗಮಿಸುವುದು ನಿಶ್ಚಿತವಾದಾಗ ಪಕ್ಷದ ವರಿಷ್ಠರ ತಲೆಯಲ್ಲಿದ್ದ ಹಲವು ಮುಖಂಡರುಗಳ ಹೆಸರುಗಳಲ್ಲಿ ಬಸವರಾಜ ಬೊಮ್ಮಾಯಿ ಅವರ ಹೆಸರು ಅಗ್ರಸ್ಥಾನದಲ್ಲಿತ್ತು. ಬೊಮ್ಮಾಯಿ ಅವರ ಹೆಸರು ಹೊರಬಿದ್ದ ವೇಳೆ ಆಡಳಿತಾರೂಢ ಬಿಜೆಪಿಯಲ್ಲಿ ಅಚ್ಚರಿ ಮೂಡಿತು. ಯಡಿಯೂರಪ್ಪ ನಂತರದ ಸ್ಥಾನವನ್ನು ಬೊಮ್ಮಾಯಿ ಅವರು ಸಮರ್ಥವಾಗಿ ನಿಭಾಯಿಸುವರೆ ಎಂಬ ಅನುಮಾನವೂ ಮೂಡಿತು. ಆದರೆ, ಹುದ್ದೆ ಅಲಂಕರಿಸಿದ ಕೆಲವೇ ದಿನಗಳಲ್ಲಿ ತಮ್ಮ ಕಾರ್ಯವೈಖರಿಯಿಂದ ಆ ಎಲ್ಲ ಅನುಮಾನವನ್ನು ಹುಸಿಯಾಗಿಸುವಲ್ಲಿ ಬೊಮ್ಮಾಯಿ ಬಹುತೇಕ ಯಶಸ್ವಿಯಾದರು.

ಒಂದು ಕಡೆ ಜನರ ಆಶೋತ್ತರಗಳನ್ನು ಈಡೇರಿಸುವುದರ ಜತೆಗೆ ಮತ್ತೊಂದೆಡೆ ರಾಜಕೀಯವಾಗಿ ಪ್ರತಿಪಕ್ಷಗಳನ್ನು ಎದುರಿಸುವ ಮೂಲಕ ಸಮರ್ಥವಾಗಿ ಆಡಳಿತ ನಡೆಸುವ ಮೂಲಕ ಭೇಷ್‌ ಎನಿಸಿಕೊಂಡಿದ್ದಾರೆ. ಅತ್ಯಂತ ಅಲ್ಪಾವಧಿಯಲ್ಲೇ ಹಲವಾರು ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ಚುನಾವಣೆಗಳನ್ನೂ ಸಮರ್ಥವಾಗಿ ಎದುರಿಸಿ ತಾವು ಯಾವುದರಲ್ಲೂ ಕಡಮೆಯಿಲ್ಲ ಎಂಬುದನ್ನು ನಿರೂಪಿಸಿದ್ದಾರೆ.

ವಿವಿಧ ಸಾಧನೆಗಳು:

ಮುಖ್ಯಮಂತ್ರಿಯಾಗಿ ಏಕಾಂಗಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಮೊದಲ ಸಂಪುಟ ಸಭೆ(Cabinet Meeting0 ನಡೆಸಿ ರೈತರ ಮಕ್ಕಳಿಗೆ ಸ್ಕಾಲರ್‌ಶಿಪ್‌(Scholarship) ನೀಡುವ ವಿದ್ಯಾನಿಧಿ ಘೋಷಿಸಿದರು. ಜತೆಗೆ ವಿವಿಧ ಸಾಮಾಜಿಕ ಪಿಂಚಣಿ ಮೊತ್ತವನ್ನು ಏರಿಕೆ ಮಾಡುವ ಮೂಲಕ ತಮ್ಮ ಆದ್ಯತೆಯನ್ನು ಪ್ರದರ್ಶಿಸಿದರು. ಕೋವಿಡ್‌ ಆತಂಕದ ನಡುವೆಯೂ ಕಳೆದ ಮೂರು ವರ್ಷಗಳಿಂದ ನಡೆಯದಿದ್ದ ಉತ್ತರ ಕರ್ನಾಟಕದ(North Karnataka) ಬೆಳಗಾವಿಯಲ್ಲಿ ಅಧಿವೇಶನವನ್ನು(Belagavi Assembly Session) ನಡೆಸಿದರು.

ಸವಾಲುಗಳ ಮೆಟ್ಟಿನಿಂತ ಸಿಎಂ:

ತವರು ಜಿಲ್ಲೆಯ ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋಲುಂಡಿದ್ದು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ತುಸು ಹಿನ್ನಡೆ ಉಂಟು ಮಾಡಿತು. ಬಿಟ್‌ ಕಾಯಿನ್‌ ಹಗರಣದಲ್ಲಿ ಪ್ರತಿಪಕ್ಷಗಳು ಮುಖ್ಯಮಂತ್ರಿ ಹಾಗೂ ಸರ್ಕಾರದತ್ತ ಬೆರಳು ತೋರಿ ಆರೋಪ ಮಾಡಿದಾಗ ಅದನ್ನು ಸಮರ್ಥವಾಗಿ ಎದುರಿಸಿ ಜನರ ಮನದಲ್ಲಿದ್ದ ಶಂಕೆಯನ್ನು ನಿವಾರಿಸುವ ಪ್ರಯತ್ನ ಮಾಡಿದರು. ಜತೆಗೆ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರ ಬೇಡಿಕೆಗಳನ್ನೂ ಈಡೇರಿಸುವಲ್ಲಿ ಸಫಲರಾದರು.

ಮುಂದೆ ಇದೆ ಅಗ್ನಿಪರೀಕ್ಷೆ:

ಇದೀಗ ಮುಂಬರುವ ಬಿಬಿಎಂಪಿ ಚುನಾವಣೆ(BBMP Election) ಮತ್ತು ಜಿ.ಪಂ ಹಾಗೂ ತಾ.ಪಂ. ಚುನಾವಣೆಗಳು ಮುಖ್ಯಮಂತ್ರಿ ಬೊಮ್ಮಾಯಿ ಅವರ ಪಾಲಿಗೆ ಅಗ್ನಿಪರೀಕ್ಷೆಯಂತೆ ಎದುರಾಗುವ ಸಾಧ್ಯತೆಯಿದೆ. ಜತೆಗೆ ಈಗ ಪಕ್ಷದಲ್ಲಿ ಕೇಳಿಬರುತ್ತಿರುವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯನ್ನೂ ಸಮರ್ಥವಾಗಿ ಎದುರಿಸುವುದು ಬೊಮ್ಮಾಯಿ ಅವರ ಪಾಲಿಗೆ ಸವಾಲೇ ಸರಿ.

ಒಂದು ವಾರ ಸಾಧನೆಗಳ ಪ್ರಚಾರ

ತಮ್ಮ ನೇತೃತ್ವದ ಸರ್ಕಾರ ಆರು ತಿಂಗಳ ಆಡಳಿತ ಪೂರೈಸಿರುವ ಹಿನ್ನೆಲೆಯಲ್ಲಿ ಶುಕ್ರವಾರ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. 2023ರವರೆಗಿನ ಸರ್ಕಾರದ ಕಾರ್ಯಕ್ರಮಗಳು, ಈ ಆರು ತಿಂಗಳ ಅವಧಿಯಲ್ಲಿ ಸರ್ಕಾರದ ಪ್ರಮುಖ ಇಲಾಖೆಗಳ ಸಾಧನೆಗಳ ಬಗ್ಗೆ ಮುಂದಿನ ಒಂದು ವಾರದ ಕಾಲ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳುವ ಬಗ್ಗೆ ಸಂಬಂಧಪಟ್ಟ ಸಚಿವರು ತಮ್ಮ ಇಲಾಖೆಗಳಿಗೆ ತಿಳಿಸಲು ಸೂಚನೆ ನೀಡಲಾಗಿದೆ ಎಂದು ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.

Karnataka: ರಾಜ್ಯದ ಎಲ್ಲ ಶಾಲೆ, ಕಾಲೇಜಲ್ಲಿ ರಾಯಣ್ಣನ ಫೋಟೋ: ಸಿಎಂ ಬೊಮ್ಮಾಯಿ

ನಮ್ಮದು ಸ್ಪಂದನಾಶೀಲ ಸರ್ಕಾರ. ಸಮಸ್ಯೆಗಳು ಬಂದಾಗ ಅದಕ್ಕೆ ಸ್ಪಂದಿಸುತ್ತಾ ಹಾಗೂ ಜನರಿಗೆ ಸಹಾಯ ಮಾಡುತ್ತಾ ಬಂದಿದೆ. ಆರು ತಿಂಗಳ ಅವಧಿ ದೊಡ್ಡದಲ್ಲ. ಆದರೂ ನಮ್ಮ ಸರ್ಕಾರ ಆರು ತಿಂಗಳ ಅವಧಿಯಲ್ಲಿ ಏನೆಲ್ಲಾ ಕೆಲಸಗಳನ್ನು ಮಾಡಲಾಗಿದೆ ಎಂಬುದರ ವಿವರ ನೀಡಲು ಸಾಧನಾ ಪುಸ್ತಕ ಬಿಡುಗಡೆ ಮಾಡಲಾಗುವುದು ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.  

ಪ್ರಮುಖ ಸಾಧನೆಗಳು

1. ರೈತ ಮಕ್ಕಳಿಗೆ ಸ್ಕಾಲರ್‌ಶಿಪ್‌ ನೀಡುವ ವಿದ್ಯಾನಿಧಿ
2. 12 ಜಿಲ್ಲೆಗಳ 3026 ಗ್ರಾಪಂಗಳಲ್ಲಿ ಗ್ರಾಮ ಒನ್‌
3. ಮುಂಬೈ ಕರ್ನಾಟಕಕ್ಕೆ ‘ಕಿತ್ತೂರು ಕರ್ನಾಟಕ’ ಹೆಸರು
4. ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಉದ್ಘಾಟನೆ
5. 250 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ
6. ಆನ್‌ಲೈನ್‌ ಜೂಜು, ಬೆಟ್ಟಿಂಗ್‌ ನಿಷೇಧಕ್ಕೆ ಕಾನೂನು

ಇಂದು ಸಾಧನಾ ಪುಸ್ತಕ ಬಿಡುಗಡೆ

ಬೆಂಗಳೂರು: ತಮ್ಮ ನೇತೃತ್ವದ ಸರ್ಕಾರ ಆರು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಸರ್ಕಾರದ ಸಾಧನೆಗಳನ್ನು ಒಳಗೊಂಡ ‘ಭವ್ಯ ಭವಿಷ್ಯದ ಭರವಸೆಯ ಹೆಜ್ಜೆಗಳು’ ಎಂಬ ಶೀರ್ಷಿಕೆಯುಳ್ಳ ಸಾಧನಾ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಆಯೋಜಿಸಿರುವ ಸಭೆಯಲ್ಲಿ ಈ ಸಾಧನಾ ಪುಸ್ತಕ ಬಿಡುಗಡೆಗೊಳಿಸಿ ಮುಖ್ಯಮಂತ್ರಿಗಳು ಮಾತನಾಡಲಿದ್ದಾರೆ. ಬಹುತೇಕ ಎಲ್ಲ ಸಚಿವರೂ ಭಾಗವಹಿಸಲಿದ್ದಾರೆ.
 

click me!