ಸಿಎಂ ಮನೆ ಮುಂದೆ ‘ಸಿದ್ದರಾಮೋತ್ಸವ’: ಸಿದ್ದು ಫ್ಲೆಕ್ಸ್‌ಗೆ ಹಾಲಿನ ಅಭಿಷೇಕ

By Kannadaprabha NewsFirst Published May 21, 2023, 2:40 AM IST
Highlights

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಲಿದ್ದ ಹಿನ್ನೆಲೆಯಲ್ಲಿ ಕುಮಾರ ಕೃಪಾ ರಸ್ತೆಯಲ್ಲಿರುವ ಅವರ ನಿವಾಸದ ಮುಂದೆ ಬೆಳಗ್ಗೆಯಿಂದಲೇ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. 

ಬೆಂಗಳೂರು (ಮೇ.21): ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಲಿದ್ದ ಹಿನ್ನೆಲೆಯಲ್ಲಿ ಕುಮಾರ ಕೃಪಾ ರಸ್ತೆಯಲ್ಲಿರುವ ಅವರ ನಿವಾಸದ ಮುಂದೆ ಬೆಳಗ್ಗೆಯಿಂದಲೇ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಹುಟ್ಟೂರು ಸಿದ್ದರಾಮನ ಹುಂಡಿ, ಸ್ವಕ್ಷೇತ್ರ ವರುಣ ಸೇರಿದಂತೆ ರಾಜ್ಯದ ಹಲವು ಭಾಗಗಳಿಂದ ಆಗಮಿಸಿದ್ದ ನೂರಾರು ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ಬೆಳಗ್ಗೆಯೇ ಮನೆ ಮುಂದೆ ಜಮಾಯಿಸಿ ನೆಚ್ಚಿನ ನಾಯಕನ ಪರ ಘೋಷಣೆಗಳನ್ನು ಕೂಗಿದರು. ಕೆಲವರು ತಮಟೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಇನ್ನೂ ಕೆಲವರು ಸಿದ್ದರಾಮಯ್ಯ ಅವರ ಫ್ಲೆಕ್ಸ್‌ಗೆ ಹಾಲಿನ ಅಭಿಷೇಕ ಮಾಡಿ ಅಭಿಮಾನ ಮೆರೆದರು.

ಸಿದ್ದರಾಮಯ್ಯ ಅವರ ಜೀವನ ಆಧಾರಿತ ‘ಲೀಡರ್‌ ರಾಮಯ್ಯ’ ಸಿನಿಮಾದ ಪೋಸ್ಟರ್‌ ಪ್ರದರ್ಶಿಸಿದ ಅಭಿಮಾನಿಗಳು ‘ಮುಖ್ಯಮಂತ್ರಿ ಸಿದ್ದರಾಮಯ್ಯ’ ಅವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು. ಮನೆಯ ಮುಂದೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬಹುದು ಎಂಬ ಮುಂದಾಲೋಚನೆಯಿಂದ ಸುಮಾರು 5 ಸಾವಿರ ಜನರಿಗಾಗುವಷ್ಟುಕೇಸರಿಬಾತ್‌, ಟೊಮೊಟೋ ಬಾತ್‌ ವಿತರಿಸಲಾಯಿತು. ಸಿದ್ದರಾಮಯ್ಯ ಅವರ ಭಾವಚಿತ್ರಗಳನ್ನು ಪ್ರದರ್ಶಿಸಿ ಅಭಿಮಾನಿಗಳು ನಿಷ್ಠೆ ಪ್ರದರ್ಶಿಸಿದರು. ಮನೆಯ ಮುಂದೆ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ಸಿದ್ದರಾಮಯ್ಯ ಅವರಿಗೆ ಶುಭ ಕೋರಿ ಭಾರೀ ಸಂಖ್ಯೆಯಲ್ಲಿ ಫ್ಲೆಕ್ಸ್‌ಗಳನ್ನು ಹಾಕಲಾಗಿತ್ತು.

ಶಿವಮೊಗ್ಗ ಶಾಸ​ಕ​ರ ‘ಕೈ​’ ಹಿಡಿ​ಯ​ಲಿಲ್ಲ ಸಿದ್ದ​ರಾ​ಮ​ಯ್ಯ ಸರ್ಕಾರ

ಗಣ್ಯರಿಂದ ಶುಭ ಕೋರಿಕೆ: ಪ್ರಮಾಣ ವಚನವನ್ನು ಕಣ್ತುಂಬಿಕೊಳ್ಳಲು ಸಿದ್ದರಾಮನ ಹುಂಡಿಯಿಂದ ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ ಮತ್ತು ಕುಟುಂಬಸ್ಥರು ಆಗಮಿಸಿದರು. ಶಾಸಕರಾದ ವಿನಯ್‌ ಕುಲಕರ್ಣಿ, ಶಿವಲಿಂಗೇಗೌಡ, ಹಲವು ಹಿರಿಯ ಪೊಲೀಸ್‌ ಅಧಿಕಾರಿಗಳು, ಹಲವು ಮುಖಂಡರು ಸಿದ್ದರಾಮಯ್ಯ ಅವರಿಗೆ ಹೂಗುಚ್ಛ ನೀಡಿ ಶುಭ ಕೋರಿದರು. ಬೆಳಗ್ಗೆ 11.45ಕ್ಕೆ ಸಿದ್ದರಾಮಯ್ಯ ಅವರು ಕುಟುಂಬದವರೊಂದಿಗೆ ಶಾಂಗ್ರಿಲಾ ಹೋಟೆಲ್‌ಗೆ ತೆರಳಿ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ಕಂಠೀರವ ಕ್ರೀಡಾಂಗಣಕ್ಕೆ ತೆರಳಿದರು. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ವಿಧಾನಸೌಧಕ್ಕೆ ಆಗಮಿಸಿದರು.

ಕೊಠಡಿಯಲ್ಲಿ ಪೂಜೆ: ವಿಧಾನ ಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 323 ಮತ್ತು ಸಚಿವ ಸಂಪುಟ ಸಭೆ ನಡೆಯುವ ಕೊಠಡಿಯನ್ನು ಹೂಗಳಿಂದ ಸಿಂಗಾರ ಮಾಡಲಾಗಿತ್ತು. ಮುಖ್ಯಮಂತ್ರಿಗಳ ಕೊಠಡಿಗೆ ‘ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂಬ ಹೊಸ ನಾಮಫಲಕವನ್ನು ಅಳವಡಿಸಲಾಗಿತ್ತು.

5ನೇ ಬಾರಿ ಶಾಸಕತ್ವ ಬಡವರ ಪರ ಹೋರಾಟ ಫಲ: ಆರಗ ಜ್ಞಾನೇಂದ್ರ

ವಿಧಾನಸೌಧಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು ಕೊಠಡಿಗೆ ತೆರಳಿ ಪೂಜೆ ಸಲ್ಲಿಸಿದರು. ಕ್ರೆಸೆಂಟ್‌ ರಸ್ತೆಯ ಶಕ್ತಿಗಣಪತಿ ದೇವಸ್ಥಾನದ ಶ್ರೀನಿವಾಸ ರಾಘವೇಂದ್ರ ಭಟ್ಟರ ತಂಡ ಪೂಜೆಯ ನೇತೃತ್ವ ವಹಿಸಿತ್ತು. ಬಳಿಕ ಸಿದ್ದರಾಮಯ್ಯ ಅವರು ಸಚಿವ ಸಂಪುಟ ನಡೆಯುವ ಕೊಠಡಿಗೆ ತೆರಳಿ ಪ್ರಥಮ ಸಚಿವ ಸಂಪುಟ ಸಭೆ ನಡೆಸಿದರು. ನಂತರ ಶಾಂಗ್ರಿಲಾ ಹೋಟೆಲ್‌ಗೆ ತೆರಳಿದ ಸಿದ್ದರಾಮಯ್ಯ, ರಾಹುಲ್‌ ಗಾಂಧಿ ಅವರ ಜೊತೆ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತೆರಳಿ ಬೀಳ್ಕೊಟ್ಟರು. ಬಳಿಕ ಅಲ್ಲಿಂದ ಕುಮಾರಕೃಪಾ ರಸ್ತೆಯಲ್ಲಿರುವ ನಿವಾಸಕ್ಕೆ ಹಿಂದಿರುಗಿದರು.

click me!