
ಬೆಂಗಳೂರು (ಮೇ.21): ಮೊದಲ ಹಂತದಲ್ಲಿ ಸಚಿವನಾಗಿ ಆಯ್ಕೆ ಆಗಿರುವುದು ನನ್ನ ವರ್ಚಸ್ಸನ್ನು ಹೆಚ್ಚಿಸಿದ್ದು, ಒಳ್ಳೆಯ ಖಾತೆ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ನೂತನ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಮ್ಮ ಕೆಲಸ, ಕಾರ್ಯ ನೋಡಿ ಪಕ್ಷ ಗುರುತಿಸಿ ಮಂತ್ರಿ ಸ್ಥಾನ ಕೊಟ್ಟಿದೆ. ಇಂತಹದ್ದೇ ಖಾತೆ ಕೊಡಿ ಎಂದು ಕೇಳಿಲ್ಲ. ಒಳ್ಳೆಯ ಖಾತೆ ನೀಡುತ್ತಾರೆ ಎನ್ನುವ ವಿಶ್ವಾಸವಿದೆ.
ಮುಂದಿನ ದಿನಗಳಲ್ಲಿ ಎರಡ್ಮೂರು ಹಂತದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಬೆಳಗಾವಿಗೆ ಮೂರು ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆ ನಮ್ಮದು. ಪಕ್ಷದ ನಾಯಕರು ಜಾತಿವಾರು, ಪ್ರಾಂತ್ಯವಾರು ಆದ್ಯತೆಗಳನ್ನು ನೋಡಿ ಸಚಿವ ಸ್ಥಾನ ನೀಡಲಿದ್ದಾರೆ ಎಂದರು. ಚುನಾವಣೆ ಸಂದರ್ಭದಲ್ಲಿ ಪಕ್ಷ ನಾಡಿನ ಜನತೆಗೆ ನೀಡಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸಲು ಬದ್ಧವಾಗಿದೆ. ಮುಂದಿನ ದಿನಗಳಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
5ನೇ ಬಾರಿ ಶಾಸಕತ್ವ ಬಡವರ ಪರ ಹೋರಾಟ ಫಲ: ಆರಗ ಜ್ಞಾನೇಂದ್ರ
ಸತೀಶ್ ಜಾರಕಿಹೊಳಿ ಪರಿಚಯ: 1998ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದ ಸತೀಶ ಜಾರಕಿಹೊಳಿ, ಜಿಲ್ಲೆಯಲ್ಲಿ ಇಂದಿಗೂ ಪ್ರಭಾವಿ ಉದ್ಯಮಿ ಮತ್ತು ಜಾರಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಸ್ವಂತ ಬಲ, ವರ್ಚಸ್ಸಿನಿಂದ ರಾಜಕಾರಣಕ್ಕೆ ಎಂಟ್ರಿ ಕೊಟ್ಟಸತೀಶ ಜಾರಕಿಹೊಳಿ, 2008ರಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಯಮಕನಮರಡಿ ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಮೊದಲು ಶಾಸಕರಾಗಿ ಇಂದಿನವರೆಗೂ ಆ ಕ್ಷೇತ್ರವನ್ನೇ ಕಾಯ್ದುಕೊಂಡಿದ್ದಾರೆ.
2004-05ರಲ್ಲಿ ಧರ್ಮಸಿಂಗ್ ಸಂಪುಟದಲ್ಲಿ ಜವಳಿ ಖಾತೆ, 2013ರಿಂದ 2016ರವರೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಅಬಕಾರಿ ಮತ್ತು ಸಣ್ಣ ಕೈಗಾರಿಕೆ ಖಾತೆ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು. ಈಗ 2023ರಲ್ಲೂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. 2021ರಿಂದ ಈವರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪಕ್ಷ ಸಂಘಟಿಸುತ್ತಿರುವ ಇವರು, ಕಾಂಗ್ರೆಸ್‌ನ ಮಾಸ್ಟರ್ ಮೈಂಡ್ ಎಂದೇ ಜನಪ್ರಿಯರಾಗಿದ್ದಾರೆ.
ಬೆಂಬಲಿಗರಿಂದ ಸಂಭ್ರಮಾಚರಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ನೂತನ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಸತೀಶ ಜಾರಕಿಹೊಳಿ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಾಲ್ಕನೇ ಬಾರಿಗೆ ಸತೀಶ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಾಗಾಗಿ, ಜಿಲ್ಲೆಯಾದ್ಯಂತ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ನಗರದ ಪ್ರಮುಖ ಮಾರ್ಗಗಳಲ್ಲಿ ನೂತನ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಅಭಿನಂದನೆ ಕೋರಿರುವ ಕಟೌಟ್ ಅಳವಡಿಸಲಾಗಿದೆ. ಅಲ್ಲದೇ, ಕಾಂಗ್ರೆಸ್ ಭವನದ ಆವರಣದಲ್ಲಿ ಬೃಹತ್ ಕಟೌಟ್‌ಗಳನ್ನು ಅಳವಡಿಸಲಾಗಿದೆ.
ಕಾಂಗ್ರೆಸ್ ಗ್ಯಾರಂಟಿಯೇ ಕಮಲದ ಸೋಲಿಗೆ ಕಾರಣ: ಶಾಸಕ ಸುರೇಶ್ ಗೌಡ
ಗೋಕಾಕದಲ್ಲಿ ಅಭಿಮಾನಿಗಳ ಸಂತಸ: ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರು ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಗೋಕಾಕ ನಗರದಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. ಸತೀಶ ಜಾರಕಿಹೊಳಿ ಅವರ ನಿವಾಸ ವಿಲ್ ಗಾರ್ಡನಲ್ಲಿ ಬೆಂಬಲಿಗರು ಪರಸ್ಪರ ಗುಲಾಲು ಏರಚಿ ಸಿಹಿ ಹಂಚಿ ಸಂಭ್ರಮಿಸಿದರು. ನಗರದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜಾರಕಿಹೊಳಿ ಅಭಿಮಾನಿಗಳು ಪಟಾಕಿ ಸಿಡಿಸಿ ಸತೀಶ ಜಾರಕಿಹೊಳಿ ಪರ ಘೋಷಣೆ ಕೂಗಿ ಸಂಭ್ರಮಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.