ಹೊಸ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಸಿಗದಿರುವ ಬಗ್ಗೆ ತಮಗೆ ಬೇಸರ ಇಲ್ಲ ಎಂದು ನೂತನ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು (ಮೇ.21): ಹೊಸ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಸಿಗದಿರುವ ಬಗ್ಗೆ ತಮಗೆ ಬೇಸರ ಇಲ್ಲ ಎಂದು ನೂತನ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಖಾತೆ ನೀಡುತ್ತಾರೆ ಎಂಬುದು ಗೊತ್ತಿಲ್ಲ. ಖಾತೆ ಹಂಚಿಕೆ ಮುಖ್ಯಮಂತ್ರಿ ಅವರಿಗೆ ಬಿಟ್ಟ ವಿಚಾರ. ಈ ಸರ್ಕಾರದಲ್ಲಿ ಒಂದೇ ಉಪ ಮುಖ್ಯಮಂತ್ರಿ ಸ್ಥಾನ ಎಂದು ನಿರ್ಧಾರವಾಗಿದೆ. ಆ ಬಗ್ಗೆ ನನಗೆ ಬೇಸರ ಇಲ್ಲ. ಈ ಜವಾಬ್ದಾರಿ ನಮ್ಮೆಲ್ಲರಿಗೂ ಕೂಡ ಅತಿದೊಡ್ಡ ಸವಾಲು.
ರಾಜ್ಯದ ಜನ ನಮ್ಮಿಂದ ಬಹಳಷ್ಟು ನಿರೀಕ್ಷೆ ಮಾಡುತ್ತಿದ್ದಾರೆ ಎಂದರು. ಮೊದಲ ಸಚಿವ ಸಂಪುಟ ಸಭೆಯಲ್ಲೇ ಐದು ಗ್ಯಾರಂಟಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳನ್ನು ಅನುಷ್ಠಾನ ಮಾಡಲು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಸಣ್ಣಪುಟ್ಟ ವ್ಯತ್ಯಾಸಗಳನ್ನು ಬಿಟ್ಟು ಕೆಲಸ ಮಾಡಿದರೆ, ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ. ಉಚಿತ ಯೋಜನೆಗಳಿಗೆ ನಾವು ಎಲ್ಲೂ ಕಂಡಿಷನ್ ಎಂದು ಹೇಳಿಲ್ಲ. ನಾವು ಅದೇ ರೀತಿ ಯೋಜನೆ ಜಾರಿ ಮಾಡುತ್ತೇವೆ ಎಂದು ಹೇಳಿದರು.
ದೇಶ ಗೆಲ್ಲಿಸುವ ಲೋಕಸಭಾ ಚುನಾವಣೆಗೆ ಸಜ್ಜಾಗಿ: ಶಾಸಕ ಸಿ.ಸಿ.ಪಾಟೀಲ್
ನನಗೂ 50 ಶಾಸಕರ ಬೆಂಬಲವಿದೆ: ‘ಸುಮ್ಮನೇ ಇದ್ದೇನೆ ಎಂದರೆ ನಾನು ಅಸಮರ್ಥ ಎಂದು ಅರ್ಥವಲ್ಲ. ನಾನೂ 50 ಶಾಸಕರ ಗುಂಪು ಕಟ್ಟಿಕೊಂಡು ದೆಹಲಿಗೆ ಹೋಗಬಹುದು. ಶಿಸ್ತು ಮುಖ್ಯ. ಲಾಬಿ ಮಾಡಬಾರದು. ಹೈಕಮಾಂಡ್‌ಗೆ ನನ್ನ ಕೆಲಸದ ಬಗ್ಗೆ ಎಲ್ಲವೂ ತಿಳಿದಿದೆ. ಜವಾಬ್ದಾರಿ ನೀಡಿದರೆ ಒಪ್ಪಿಕೊಳ್ಳುತ್ತೇನೆ’ ಎಂದು ಚುನಾವಣಾ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
‘2013ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ನಿಮಗೆ ಅನ್ಯಾಯವಾಗಿತ್ತು. ಈ ಬಾರಿ ಹೈಕಮಾಂಡ್ ಅದನ್ನು ಸರಿಪಡಿಸಲಿದೆಯೇ?’ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದ ಅವರು, ‘ನಾನು ಪಕ್ಷದ ವರಿಷ್ಠರನ್ನು ನಂಬಿದ್ದೇನೆ. 50 ಶಾಸಕರ ಗುಂಪು ಕಟ್ಟಿಕೊಂಡು ನಾನೂ ದೆಹಲಿಗೆ ಹೋಗಬಹುದು. ಆದರೆ ಹಾಗೆ ಮಾಡುವುದಿಲ್ಲ. ನನಗೆ ಶಿಸ್ತು ಇದೆ. ಲಾಬಿ ಮಾಡಬಾರದು ಎಂದು ಸುಮ್ಮನಿದ್ದೇನೆ. ಸುಮ್ಮನಿದ್ದೇನೆ ಎಂದರೆ ಅಸಮರ್ಥನಲ್ಲ. ನಾನು ಸಮರ್ಥನಾಗಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.
‘ಹೈಕಮಾಂಡ್‌ಗೆ ನನ್ನ ಕೆಲಸದ ಬಗ್ಗೆ ಎಲ್ಲ ತಿಳಿದಿದೆ. ಜವಾಬ್ದಾರಿ ನೀಡಿದರೆ ಒಪ್ಪಿಕೊಳ್ಳುತ್ತೇನೆ. ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದಂತೆ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ. ಈಗಾಗಲೇ ಶಾಸಕರ ಅಭಿಪ್ರಾಯ ಪಡೆಯಲಾಗಿದೆ. ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಸ್ಪಷ್ಟಪಡಿಸಿದರು.
5ನೇ ಬಾರಿ ಶಾಸಕತ್ವ ಬಡವರ ಪರ ಹೋರಾಟ ಫಲ: ಆರಗ ಜ್ಞಾನೇಂದ್ರ
‘ಸಿದ್ದರಾಮಯ್ಯ ಅವರ ಜೊತೆ ಶಾಸಕರೂ ದೆಹಲಿಗೆ ತೆರಳಿರುವುದಕ್ಕೆ ಶಕ್ತಿ ಪ್ರದರ್ಶನ ಎನ್ನಬಾರದು. ಕೆಲವು ಶಾಸಕರು ಅವರ ನಾಯಕರ ಜೊತೆ ತೆರಳಿದ್ದಾರೆ. ನಾವೂ ಶಾಸಕರನ್ನು ಕರೆದುಕೊಂಡು ಹೋಗಬಹುದಿತ್ತು. ಆದರೆ ತೆರಳಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೆಪಿಸಿಸಿ ಅಧ್ಯಕ್ಷರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಇದು ಪದ್ಧತಿಯಾಗಿದೆ. ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ. ಈ ಬಾರಿ ಚುನಾವಣೆಯನ್ನು ನಾವು ಸಾಮೂಹಿಕ ನಾಯಕತ್ವದಡಿ ಎದುರಿಸಿದ್ದೆವು’ ಎಂದು ವಿವರಿಸಿದರು.