* ಬಜರಂಗದಳ ಮುಖಂಡನಿಂದ ಕೊಲೆ ಕೇಸ್
* ಎಸ್ ಡಿಪಿಐ ಪಾದಯಾತ್ರೆಗೂ ಮುನ್ನ ಸಿದ್ದರಾಮಯ್ಯ ಭೇಟಿ..!
* ಮೃತನ ಮನೆಗೆ ಭೇಟಿ ನೀಡಲಿರುವ ಸಿದ್ದರಾಮಯ್ಯ
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು, (ಮಾ.18): ಬಜರಂಗದಳದ ಮುಖಂಡನಿಂದ ಗಂಭೀರ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದ ಬೆಳ್ತಂಗಡಿಯ ದಲಿತ ಯುವಕ, ಕಾಂಗ್ರೆಸ್ ಕಾರ್ಯಕರ್ತ ದಿನೇಶ್ ಕನ್ಯಾಡಿ ನಿವಾಸಕ್ಕೆ ನಾಳೆ(ಮಾ.19) ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ.
ಕಳೆದ ಫೆ.23ರಂದು ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಎಂಬಲ್ಲಿ ಕಾಂಗ್ರೆಸ್ ಕಾರ್ಯಕರ್ತ, ದಲಿತ ಯುವಕ ದಿನೇಶ್ ಮತ್ತು ಬಜರಂಗದಳದ ಮುಖಂಡ ಕೃಷ್ಣ ಎಂಬಾತನ ಮಧ್ಯೆ ಜಾಗದ ದಾಖಲೆ ವಿಚಾರದಲ್ಲಿ ಗಲಾಟೆ ನಡೆದಿತ್ತು. ಕಾಂಗ್ರೆಸ್ ಅವಧಿಯಲ್ಲಿ ಬೆಳ್ತಂಗಡಿ ಕ್ಷೇತ್ರದಲ್ಲಿ ವಸಂತ ಬಂಗೇರಾ ಶಾಸಕರಾಗಿದ್ದಾಗ ಬಜರಂಗದಳದ ಮುಖಂಡ ಕೃಷ್ಣನಿಗೆ ಈ ದಿನೇಶ್ ಜಾಗದ ದಾಖಲೆಯೊಂದನ್ನ ಮಾಡಿಕೊಟ್ಟಿದ್ದ ಎನ್ನಲಾಗಿದೆ.
ಅಭಿವೃದ್ಧಿ, ಹಿಂದುತ್ವ, ಯುವ ನಾಯಕತ್ವವೇ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಮಂತ್ರ
ಆದ್ರೆ ಇದೀಗ ಬಿಜೆಪಿ ಅವಧಿಯಲ್ಲೂ ದಿನೇಶ್ ಪದೇ ಪದೇ ಅದನ್ನೇ ಹೇಳಿಕೊಂಡು ತಿರುಗಾಡ್ತಿದಾನೆ ಅಂತ ಕೃಷ್ಣ ದಿನೇಶ್ ಮೇಲೆ ಯದ್ವಾತದ್ವಾ ಹಲ್ಲೆ ನಡೆಸಿದ್ದಾನೆ. ಈ ದೃಶ್ಯ ಸಿಸಿ ಟಿವಿಯಲ್ಲೂ ಸೆರೆಯಾಗಿದ್ದು, ಗಂಭೀರ ಹಲ್ಲೆಗೊಳಗಾಗಿದ್ದ ದಿನೇಶ್ ಮರುದಿನ ಸಾವನ್ನಪ್ಪಿದ್ದ. ಈ ಕೇಸ್ ನಲ್ಲಿ ಸದ್ಯ ಬಜರಂಗದಳದ ಮುಖಂಡ ದಿನೇಶ್ ಬಂಧನವಾಗಿದೆ. ಆದರೆ ಸಂಘಪರಿವಾರದ ಮುಖಂಡನಿಂದ ಕೊಲೆಯಾದ ದಿನೇಶ್ ಕಾಂಗ್ರೆಸ್ ಕಾರ್ಯಕರ್ತನಾಗಿರೋ ಕಾರಣ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರಾ ಹಾಗೂ ಕೈ ನಾಯಕರು ದಿನೇಶ್ ಸಾವಿನ ನ್ಯಾಯಕ್ಕಾಗಿ ಆಗ್ರಹಿಸಿದ್ದರು. ಅಲ್ಲದೇ ಆತನ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ನೆರವು ನೀಡಿ ಸಾಂತ್ವನ ಹೇಳಿದ್ದರು. ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿ ದಿನೇಶ್ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಕಿಡಿ ಕಾರಿದ್ದರು.
ಅಲ್ಲದೇ ಕಾಂಗ್ರೆಸ್ ದಿನೇಶ್ ಕುಟುಂಬಿಕರ ಮೂಲಕ ದ.ಕ ಕಾಂಗ್ರೆಸ್ ಕಚೇರಿಯಲ್ಲಿ ಕುಟುಂಬದ ಜೊತೆ ಸುದ್ದಿ ಗೋಷ್ಠಿ ಕೂಡ ನಡೆಸಿತ್ತು. ಅದರ ಭಾಗವಾಗಿ ನಾಳೆ ಸಿದ್ದರಾಮಯ್ಯ ಬೆಳ್ತಂಗಡಿಯ ದಿನೇಶ್ ಮನೆಗೆ ಭೇಟಿ ನೀಡಿ ಮೃತ ದಿನೇಶ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಲಿದ್ದಾರೆ.
ಸಿದ್ದು ಭೇಟಿಗೂ ಮುನ್ನ ಪಾದಯಾತ್ರೆಗೆ ಮುಂದಾಗಿದ್ದ ಎಸ್ ಡಿಪಿಐ!
ಇನ್ನು ಸಿದ್ದರಾಮಯ್ಯ ಭೇಟಿಗೂ ಮುನ್ನವೇ ದಲಿತ ಯುವಕ, ಕಾಂಗ್ರೆಸ್ ಕಾರ್ಯಕರ್ತ ದಿನೇಶ್ ಹತ್ಯೆ ಖಂಡಿಸಿ ಎಸ್ ಡಿಪಿಐ ಪಾದಯಾತ್ರೆ ಹಮ್ಮಿಕೊಂಡಿತ್ತು. ಮಾ.15, 16 ಮತ್ತು 17ರಂದು ಎಸ್ ಡಿಪಿಐ ಈ ಪಾದಯಾತ್ರೆ ನಡೆಸಲಿತ್ತಾದರೂ ಹಿಜಾಬ್ ತೀರ್ಪಿನ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೆಕ್ಷನ್ ಹಾಕಿದ ಕಾರಣಕ್ಕೆ ಅದನ್ನ ಮುಂದೂಡಲಾಗಿದೆ. ಒಬ್ಬ ಸಂಘಪರಿವಾರದ ಕಾರ್ಯಕರ್ತ, ವೈಯಕ್ತಿಕ ದ್ವೇಷದ ಕಾರಣದಿಂದ ಕೊಲೆಯಾದರೆ ಪರಿಹಾರಧನಗಳ ಮಹಾಪೂರ, ಸರಕಾರದ ಕಂಬನಿ, ಸಚಿವ,ಶಾಸಕರ ಸಾಂತ್ವನ ಭೇಟಿ ಮತ್ತು ಆರೋಪಿಗಳ ಮೇಲೆ ಕರಾಳ ಯುಎಪಿಎ ಪ್ರಕರಣ ದಾಖಲಾಗುತ್ತದೆ.
ಆದರೆ ದಲಿತನೊಬ್ಬ ಸಂಘಪರಿವಾರದ ನಾಯಕನಿಂದ ಕೊಲ್ಲಲ್ಪಟ್ಟರೆ ಸ್ಥಳೀಯ ಶಾಸಕರ ಸಾಂತ್ವನ ಭೇಟಿಯಿಲ್ಲ, ಸರಕಾರದ ಕಂಬನಿಯಿಲ್ಲ, ಒಂದಲ್ಪವೂ ಪರಿಹಾರ ಧನವಿಲ್ಲ, ಆರೋಪಿಗೆ ಕಠಿಣ ಶಿಕ್ಷೆಯೂ ಇಲ್ಲ ಎಂದು ಆರೋಪಿಸಿದ್ದ ಎಸ್ ಡಿಪಿಐ, ಸರಕಾರದ ಈ ತಾರತಮ್ಯ ನೀತಿಯನ್ನು ಖಂಡಿಸಿ "ದಿನೇಶ್ ಕನ್ಯಾಡಿಗೆ ನ್ಯಾಯ ಕೊಡಿ" ಎಂಬ ಘೋಷಣೆಯೊಂದಿಗೆ ಪಾದಯಾತ್ರೆ ಹಮ್ಮಿಕೊಂಡಿತ್ತು. ಜೊತೆಗೆ ದಿನೇಶ್ ಕುಟುಂಬಕ್ಕೆ 50ಲಕ್ಷ ಪರಿಹಾರ, ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ, ಕುಟುಂಬಕ್ಕೆ 2 ಎಕರೆ ಜಮೀನು ಮಂಜೂರು ಮಾಡಬೇಕು ಹಾಗೂ ಹತೈಯ ಹಿಂದೆ ಷಡ್ಯಂತ್ರ ರೂಪಿಸಿದ ವ್ಯಕ್ತಿಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಎಸ್ ಡಿಪಿಐ ಆಗ್ರಹಿಸಿತ್ತು.
ಎಸ್ ಡಿಪಿಐ ಪಾದಯಾತ್ರೆ ನಡೆದಿದ್ದರೆ ಕಾಂಗ್ರೆಸ್ ಗೆ ಮುಖಭಂಗ!
ಇನ್ನು ಎಸ್ ಡಿಪಿಐ ಆಯೋಜಿಸಿದ್ದ ಈ ಪಾದಯಾತ್ರೆ ನಡೆದಿದ್ದರೆ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಬೇಕಿತ್ತು. ಮೃತ ದಿನೇಶ್ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರಾ ಆಪ್ತನೂ ಆಗಿದ್ದ. ಆದರೆ ನಿಷೇಧಾಜ್ಞೆ ಕಾರಣ ಎಸ್ ಡಿಪಿಐ ಪಾದಯಾತ್ರೆ ಮುಂದೂಡಲ್ಪಟ್ಟಿರೋದು ಕಾಂಗ್ರೆಸ್ ಮುಖಭಂಗ ತಪ್ಪಿಸಿದೆ. ಹೀಗಾಗಿ ನಿಗದಿಯಂತೆ ಸಿದ್ದರಾಮಯ್ಯ ಮೃತ ದಿನೇಶ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಿದ್ದು, ಈ ಮೂಲಕ ಕಾಂಗ್ರೆಸ್ ಜಿಲ್ಲೆಯಲ್ಲಿ ಈ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಕೈಗೆತ್ತಿಕೊಳ್ಳೋ ಸಾಧ್ಯತೆಯಿದೆ. ಆದರೆ ಕಾಂಗ್ರೆಸ್ ಕಾರ್ಯಕರ್ತನ ಸಾವಿನ ವಿರುದ್ದ ಎಸ್ ಡಿಪಿಐ ಹೋರಾಟಕ್ಕೆ ಇಳಿದಿರೋದು ಭಾರೀ ಕುತುಹೂಲ ಮೂಡಿಸಿತ್ತು.