
ನವದೆಹಲಿ(ಮಾ.18): ಇತ್ತೀಚಿನ ಪಂಚರಾಜ್ಯ ಚುನಾವಣೆಯಲ್ಲಿ(Election) 4 ರಾಜ್ಯಗಳಲ್ಲಿ ಮರಳಿ ಅಧಿಕಾರಕ್ಕೆ ಬಂದಿರುವ ಬಿಜೆಪಿ(BJP), ಇದೀಗ ಸಚಿವರ ಆಯ್ಕೆಗೆ ಭವಿಷ್ಯದ ಮಾಸ್ಟರ್ ಪ್ಲಾನ್ ಹೆಣೆದಿದೆ. 2024ರಲ್ಲೂ ಕೇಂದ್ರದಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುವಂತಾಗಬೇಕು ಎಂಬ ಉದ್ದೇಶದಿಂದ ಯುವ ನಾಯಕರಿಗೆ ಆದ್ಯತೆ ನೀಡುವುದೂ ಸೇರಿದಂತೆ 4 ರಾಜ್ಯಗಳ ಸಚಿವ ಸಂಪುಟ ರಚನೆಯನ್ನು ಬಹಳ ಲೆಕ್ಕಾಚಾರದಿಂದ ಮಾಡಲು ಯೋಜಿಸಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರೇ ಇದಕ್ಕೆ ರೂಪುರೇಷೆಗಳನ್ನು ಹಾಕಿಕೊಟ್ಟಿದ್ದು, ಅದರಂತೆಯೇ ಪ್ರಕ್ರಿಯೆ ಆರಂಭವಾಗಿದೆ ಎಂದು ರಾಷ್ಟ್ರಮಟ್ಟದ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಉತ್ತರಪ್ರದೇಶ, ಉತ್ತರಾಖಂಡ, ಗೋವಾ ಹಾಗೂ ಮಣಿಪುರದಲ್ಲಿ ನೂತನ ಸಚಿವರ ಆಯ್ಕೆ ವೇಳೆ ಜಾತಿ, ವಲಯವಾರು ಪ್ರಾತಿನಿಧ್ಯ, ಎಸ್‌ಸಿ/ಎಸ್‌ಟಿ, ಒಬಿಸಿಗೆ ಪ್ರಾತಿನಿಧ್ಯ, ಮಹಿಳೆಯರು, ಶೈಕ್ಷಣಿಕ ಹಿನ್ನೆಲೆ ಮತ್ತು ವಿಶೇಷವಾಗಿ ಯುವ ಸಮೂಹವನ್ನು ಗಮನದಲ್ಲಿಟ್ಟುಕೊಳ್ಳಲು ನಿರ್ಧರಿಸಲಾಗಿದೆ.
ನಮೋ ಹೊಗಳಿದ ಕಾಂಗ್ರೆಸ್ ಹಿರಿಯ ನಾಯಕ ತರೂರ್, ಯುಪಿ ಗೆಲುವಿನ ಕ್ರೆಡಿಟ್ ಮೋದಿಗೆ!
ಈ ಸಂಬಂಧ ಈಗಾಗಲೇ ಉತ್ತರಪ್ರದೇಶ, ಮಣಿಪುರ, ಉತ್ತರಾಖಂಡ ಮತ್ತು ಗೋವಾ ರಾಜ್ಯಗಳಲ್ಲಿ ಗೆದ್ದ ಎಲ್ಲಾ ಅಭ್ಯರ್ಥಿಗಳ ಪೂರ್ಣ ವಿವರ ರವಾನಿಸುವಂತೆ ದಿಲ್ಲಿ ನಾಯಕರು ನಾಲ್ಕೂ ರಾಜ್ಯಗಳ ಪಕ್ಷದ ಘಟಕಗಳಿಗೆ ಸೂಚಿಸಿದ್ದಾರೆ.
ಅದರಲ್ಲೂ, ‘ಸಂಪುಟಕ್ಕೆ ಯುವಕರ ಆಯ್ಕೆ ವೇಳೆ ಮುಂದಿನ 25 ವರ್ಷದಲ್ಲಿ ಅವರು ರಾಜ್ಯದಲ್ಲಿ ಪಕ್ಷದ ಹೊಸ ನಾಯಕತ್ವ ಒದಗಿಸುವಂಥ ಶಕ್ತಿ ಹೊಂದಿರಬೇಕು. ಅಂಥವರಿಗೆ ಆದ್ಯತೆ ನೀಡಬೇಕು’ ಎಂದು ಇತ್ತೀಚೆಗೆ ಈ ಕುರಿತು ನಡೆದ ಸಭೆಯಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದಲ್ಲಿ 20 ಹೊಸಬರು?:
ಬಿಜೆಪಿ ಪಾಲಿಗೆ ಮಹತ್ವವಾದ ಉತ್ತರಪ್ರದೇಶದಲ್ಲಿ(Uttar Pradesh) 60 ಸಚಿವರ ನೇಮಕಕ್ಕೆ ಅವಕಾಶವಿದೆ. ಈ ಹಿಂದಿನ ಸರ್ಕಾರದಲ್ಲಿದವರ ಪೈಕಿ 11 ಜನರು ಈಗ ಸೋತಿದ್ದಾರೆ, 4 ಜನರು ಪಕ್ಷ ಬದಲಾಯಿಸಿದ್ದಾರೆ. ಹೀಗಾಗಿ 15 ಹುದ್ದೆಗಳು ಖಾಲಿ ಇವೆ. ಇವರ ಜೊತೆ ಸೂಕ್ತವಾಗಿ ಕಾರ್ಯನಿರ್ವಹಿಸದ ಕೆಲವರನ್ನು ಬಿಟ್ಟರೆ ಅಂದಾಜು 20 ಹೊಸಬರಿಗೆ ಅವಕಾಶ ಸಿಗಲಿದೆ ಎಂದು ತಿಳಿದುಬಂದಿದೆ.
ಈ ಖಾಲಿ ಹುದ್ದೆಗಳ ಪೈಕಿ ಉತ್ತರಾಖಂಡ ರಾಜ್ಯಪಾಲ(Governor) ಹುದ್ದೆಗೆ ರಾಜೀನಾಮೆ ನೀಡಿ ಬಂದ ಬೇಬಿ ರಾಣಿ ಮೌರ್ಯಗೆ ಡಿಸಿಎಂ ಹುದ್ದೆ ಸಿಗುವ ಸಾಧ್ಯತೆ ಇದೆ. ಇನ್ನು ಮಾಯಾವತಿ ಅವರ ಬಿಎಸ್‌ಪಿಯಿಂದ(BSP) ಬಿಜೆಪಿ ಕಡೆಗೆ ವಾಲಿರುವ ಜಾಟವ್ ಸಮುದಾಯಕ್ಕೆ ಸಂಪುಟದಲ್ಲಿ ಆದ್ಯತೆ ನೀಡುವ ಸಾಧ್ಯತೆ ಇದೆ. ಇದಲ್ಲದೇ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ ಎಸ್.ಕೆ.ಶರ್ಮಾ, ಆಸೀಂ ಅರುಣ್, ರಾಜೇಶ್ವರ್ ಸಿಂಗ್‌ಗೆ ಸಚಿವ ಸ್ಥಾನ ಸಂಭವ ನಿಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.
Yogi Meet Modi ಪ್ರಧಾನಿ ಮೋದಿ ಭೇಟಿಯಾದ ಯೋಗಿ, ಇದೇ ವಾರದಲ್ಲಿ ಪ್ರಮಾಣವಚನ!
ಏನೇನು ಯೋಚನೆ?
1. ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರದಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ
2. ಈ 4 ರಾಜ್ಯಗಳಲ್ಲಿ ಸಂಪುಟ ರಚನೆ ವೇಳೆ ಜಾತಿ, ವಲಯವಾರು ಪ್ರಾತಿನಿಧ್ಯ ಹಂಚಿಕೆ
3. ಎಸ್ಸಿ-ಎಸ್ಟಿ, ಒಬಿಸಿ ಜತೆ ಸ್ತ್ರೀಯರು, ಉತ್ತಮ ಶೈಕ್ಷಣಿಕ ಹಿನ್ನೆಲೆ ಇರುವವರಿಗೂ ಆದ್ಯತೆ
4. ವಿಶೇಷವಾಗಿ ಯುವ ಸಮೂಹವನ್ನು ಗಮನದಲ್ಲಿಟ್ಟು ಸಂಪುಟ ರಚನೆಗೆ ತೀರ್ಮಾನ
5. 60 ಸದಸ್ಯರ ಉತ್ತರ ಪ್ರದೇಶ ಸಂಪುಟದಲ್ಲಂತೂ 20 ಜನ ಹೊಸಬರಿಗೆ ಸ್ಥಾನ ಸಾಧ್ಯತೆ
ರಾಜ್ಯ ಸಂಪುಟಕ್ಕೂ ಇಂಥದೇ ಸೂತ್ರ?
ಅನೇಕ ದಿನಗಳಿಂದ ಸದ್ದು ಮಾಡುತ್ತಿರುವ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ(Karnataka Cabinet Expansion) ಅಥವಾ ಪುನಾರಚನೆ ವೇಳೆಯೂ ಹೊಸ ಮುಖಗಳು, ಭವಿಷ್ಯದ ನಾಯಕರಾಗಬಲ್ಲವರಿಗೆ ಮಣೆ ಹಾಕುವ ಮೂಲಕ ಬಿಜೆಪಿ ಹೈಕಮಾಂಡ್(BJP High Command) ದೂರದೃಷ್ಟಿಯ ಸೂತ್ರ ಅಳವಡಿಸಿಕೊಳ್ಳುತ್ತದೆಯೇ ಎಂಬ ಕುತೂಹಲ ಗರಿಗೆದರಿದೆ. ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ(Assembly Elections) ನಡೆಯಲಿದೆ. ಅದಕ್ಕಾಗಿ ಪಕ್ಷ ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದೆ. ಹಾಲಿ ಬಜೆಟ್ ಅಧಿವೇಶನ(Budget Session) ನಡೆಯುತ್ತಿದ್ದು, ಮಾಸಾಂತ್ಯಕ್ಕೆ ಅದು ಮುಕ್ತಾಯಗೊಳ್ಳಲಿದೆ. ಆ ನಂತರ ಸಂಪುಟ ಕಸರತ್ತು ಚುರುಕಾಗುವ ನಿರೀಕ್ಷೆ ಇದ್ದು, ಕೆಲ ಹಿರಿಯರನ್ನು ಕೈಬಿಡುವ ಸಾಧ್ಯತೆ ಬಗ್ಗೆ ಈಗಾಗಲೇ ಗುಸುಗುಸು ದಟ್ಟವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.