10 ವರ್ಷದ ಬಳಿಕ ಮತ್ತೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞೆ ಬೋಧಿಸಲಿದ್ದಾರೆ.
ಬೆಂಗಳೂರು (ಮೇ.20): ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಅಭೂತಪೂರ್ವ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸ್ಸಿಗ ಸಿದ್ದರಾಮಯ್ಯ ಅವರು 2ನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮೊದಲ ಬಾರಿ ಉಪ ಮುಖ್ಯಮಂತ್ರಿಯಾಗಿ ಶನಿವಾರ ಮಧ್ಯಾಹ್ನ 12.30 ಗಂಟೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಪಾರ ಜನಸಾಗರದ ನಡುವೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. 2013ರ ಮೇ 13ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುವ ಸಂಪ್ರದಾಯವನ್ನು ಮುರಿದು ಕಂಠೀರವ ಕ್ರೀಡಾಂಗಣದಲ್ಲಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಿದ್ದರು.
10 ವರ್ಷದ ಬಳಿಕ ಮತ್ತೆ ಅದೇ ಜಾಗದಲ್ಲಿ ನಿಂತು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞೆ ಬೋಧಿಸಲಿದ್ದಾರೆ. ಸಚಿವ ಸಂಪುಟ ರಚನೆ ಪ್ರಕ್ರಿಯೆ ಮುಗಿದರೆ ಇಬ್ಬರ ಜತೆಗೆ ಕೆಲವು ಸಚಿವರೂ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ನಾರಾಯಣ ನೇತ್ರಾಲಯದ ಪ್ರಖ್ಯಾತ ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ಹೃದಯಾಘಾತದಿಂದ ನಿಧನ!
ಪದಗ್ರಹಣ ಸಮಾರಂಭಕ್ಕಾಗಿ ಈಗಾಗಲೇ ಕಂಠೀರವ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆಗಳನ್ನೂ ಪೂರ್ಣಗೊಳಿಸಲಾಗಿದೆ. ಕುರ್ಚಿಗಳು ಮತ್ತು ವೇದಿಕೆ, ರೆಡ್‌ಕಾರ್ಪೆಟ್, ಮ್ಯಾಟ್ ಜತೆಗೆ ಪ್ರತಿಯೊಂದನ್ನೂ ಅಳವಡಿಕೆ ಮಾಡಿದ್ದು, ಶುಕ್ರವಾರ ಸಂಜೆ ವೇಳೆಗೆ ಕ್ರೀಡಾಂಗಣಕ್ಕೆ ಹೊಸ ಸೊಬಗು ನೀಡಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ಸಿದ್ಧತೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1 ಲಕ್ಷಕ್ಕೂ ಹೆಚ್ಚು ಜನ ಭಾಗಿ: ಕ್ರೀಡಾಂಗಣದಲ್ಲಿ ಸುಮಾರು 35000 ಸೀಟುಗಳ ವ್ಯವಸ್ಥೆ ಇದೆ. ಇದರಲ್ಲಿ ಗಣ್ಯರು, ಜನಪ್ರತಿನಿಧಿಗಳು ಹಾಗೂ ಆಹ್ವಾನಿತರಿಗೆ ಅವಕಾಶ ನೀಡಿ ಉಳಿದ ಜಾಗದಲ್ಲಿ ಸಾರ್ವಜನಿಕರು ಕೂರಲು ವ್ಯವಸ್ಥೆ ಮಾಡಲಾಗುತ್ತದೆ. ಉಳಿದಂತೆ ಮೈದಾನಕ್ಕೆ ಮ್ಯಾಟ್ ಹಾಕಲಾಗುತ್ತಿದ್ದು, ಅಲ್ಲೂ ಕುರ್ಚಿ ವ್ಯವಸ್ಥೆ ಮಾಡುವ ಮೂಲಕ ಸುಮಾರು 1 ಲಕ್ಷ ಮಂದಿಗೆ ವ್ಯವಸ್ಥೆ ಕಲ್ಪಿಸುವ ನಿರೀಕ್ಷೆಯಲ್ಲಿ ಅಧಿಕಾರಿಗಳು ಇದ್ದಾರೆ.
3,000ಕ್ಕೂ ಅಧಿಕ ಪೊಲೀಸರ ನಿಯೋಜನೆ: ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಅಂದಾಜಿಗಿಂತ ಹೆಚ್ಚು ಮಂದಿ ಆಗಮಿಸಿದರೆ ಎಂಬ ಕಾರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಕ್ರೀಡಾಂಗಣದ ಹೊರ ಭಾಗದಲ್ಲಿ ಟಿವಿ ಪರದೆಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಜತೆಗೆ ಭದ್ರತೆಗಾಗಿ 3 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಕೆಎಸ್‌ಆರ್‌ಪಿ, ಗೃಹರಕ್ಷಕ ದಳ, ಸಂಚಾರಿ ಪೊಲಸ್ ಸಿಬ್ಬಂದಿ ಸೇರಿ 3 ಸಾವಿರಕ್ಕೂ ಹೆಚ್ಚು ಮಂದಿಯನ್ನು ಈಗಾಗಲೇ ಭದ್ರತೆಗೆ ನಿಯೋಜಿಸಲಾಗಿದೆ. ವಿಶೇಷ ಪೊಲೀಸ್ ಆಯುಕ್ತ ಸಲೀಂ, ಕೇಂದ್ರ ಡಿಸಿಪಿ ಶ್ರೀನಿವಾಸಗೌಡ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗುತ್ತಿದೆ. ಪ್ರತಿಯೊಬ್ಬರನ್ನೂ ಮೆಟಲ್ ಡಿಟೆಕ್ಟರ್‌ನಲ್ಲಿ ಪರಿಶೀಲನೆ ನಡೆಸಿದ ಬಳಿಕವೇ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಪಕ್ಷಗಳ ಒಗ್ಗಟ್ಟಿಗೆ ಕರ್ನಾಟಕ ವೇದಿಕೆ?: ಬೆಂಗಳೂರು: ಸಿದ್ದರಾಮಯ್ಯ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಜೊತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ಭೂಪೇಶ್ ಬಾಘೇಲ್, ನಿತೀಶ್ ಕುಮಾರ್, ಸುಖ್ವಿಂದರ್ ಸಿಂಗ್ ಸುಖು, ಎನ್.ರಂಗಸ್ವಾಮಿ, ಎಂ.ಕೆ.ಸ್ಟಾಲಿನ್, ಹೇಮಂತ್ ಸೊರೇನ್ ಭಾಗಿಯಾಗಲಿದ್ದಾರೆ. ಹೀಗಾಗಿ ಈ ಸಮಾರಂಭವು ಬಿಜೆಪಿ ವಿರುದ್ಧ ವಿಪಕ್ಷಗಳು ಒಗ್ಗೂಡುವ ವೇದಿಕೆ ಎಂದು ಹೇಳಲಾಗುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಹಾಸನದಿಂದ ಸ್ಪರ್ಧಿಸಿದರೆ ಪ್ರಜ್ವಲ್ ನಿಲ್ಲಲ್ಲ: ಭವಾನಿ ರೇವಣ್ಣ
5 ಗ್ಯಾರಂಟಿಗಳು ಇಂದೇ ಜಾರಿಗೆ?: ಮೊದಲ ಸಚಿವ ಸಂಪುಟ ಸಭೆಯಲ್ಲೇ ಸಿದ್ದರಾಮಯ್ಯ ಸರ್ಕಾರ ತನ್ನ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಆದೇಶ ಹೊರಡಿಸುವ ಸಾಧ್ಯತೆಯಿದೆ.
1. ಗೃಹಜ್ಯೋತಿ: 200 ಯುನಿಟ್ ಉಚಿತ ವಿದ್ಯುತ್
2. ಗೃಹಲಕ್ಷ್ಮೀ: ಮನೆಯೊಡತಿಗೆ ಮಾಸಿಕ 2000 ರು.
3. ಅನ್ನಭಾಗ್ಯ 2.0: ಉಚಿತ ಅಕ್ಕಿ 10 ಕೇಜಿಗೆ ಏರಿಕೆ
4. ಸರ್ಕಾರಿ ಬಸ್‌ಗಳಲ್ಲಿ ಸ್ತ್ರೀಯರಿಗೆ ಉಚಿತ ಪ್ರಯಾಣ
5. ನಿರುದ್ಯೋಗಿ ಪದವೀಧರರಿಗೆ ಮಾಸಿಕ .3000, ಡಿಪ್ಲೊಮಾ ಓದಿದವರಿಗೆ .1500