ಪುತ್ತೂರಲ್ಲಿ ಬ್ಯಾನರ್ ಹಾಕಿ ಅವಹೇಳನ ಮಾಡಿದ ವಿಚಾರಕ್ಕೆ ಸಂಬಂಧಿಸಿ ಪೊಲೀಸರಿಂದ ಬಿಜೆಪಿ ಕಾರ್ಯಕರ್ತರಿಗೆ ಹೊಡೆಸಿದ್ದು ಬಿಜೆಪಿಯ ನಳಿನ್ ಕುಮಾರ್ ಮತ್ತು ಕಲ್ಲಡ್ಕ ಡಾ.ಪ್ರಭಾಕರ ಭಟ್ಟರು. ಅವರೇ ಪೊಲೀಸ್ ದೌರ್ಜನ್ಯಕ್ಕೆ ಕಾರಣ.
ಮಂಗಳೂರು (ಮೇ.20): ಪುತ್ತೂರಲ್ಲಿ ಬ್ಯಾನರ್ ಹಾಕಿ ಅವಹೇಳನ ಮಾಡಿದ ವಿಚಾರಕ್ಕೆ ಸಂಬಂಧಿಸಿ ಪೊಲೀಸರಿಂದ ಬಿಜೆಪಿ ಕಾರ್ಯಕರ್ತರಿಗೆ ಹೊಡೆಸಿದ್ದು ಬಿಜೆಪಿಯ ನಳಿನ್ ಕುಮಾರ್ ಮತ್ತು ಕಲ್ಲಡ್ಕ ಡಾ.ಪ್ರಭಾಕರ ಭಟ್ಟರು. ಅವರೇ ಪೊಲೀಸ್ ದೌರ್ಜನ್ಯಕ್ಕೆ ಕಾರಣ. ಲೋಕಸಭೆ ಸದಸ್ಯನಾಗಿ ತನ್ನದೇ ಕಾರ್ಯಕರ್ತರನ್ನು ಪೊಲೀಸರಿಗೆ ಹೇಳಿ ಹೊಡೆಸಿದ್ದಾರೆ ಎಂದರೆ ಏನರ್ಥ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಪ್ರಶ್ನೆ ಮಾಡಿದ್ದಾರೆ. ಮಂಗಳೂರಿನ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುವಾರ ಪುತ್ತೂರಿನಲ್ಲಿ ಕಲ್ಲಡ್ಕ ಡಾ.ಪ್ರಭಾಕರ ಭಟ್ಟರು ಮಾತನಾಡಿ, ಕಾರ್ಯಕರ್ತರಿಗೆ ಹೊಡೆಸಿದ್ದು ಕಾಂಗ್ರೆಸ್ ಸರ್ಕಾರ ಕಾರಣ ಎಂದಿದ್ದಾರೆ.
ನಮ್ಮ ಮುಖ್ಯಮಂತ್ರಿ ಇನ್ನಷ್ಟೇ ಪ್ರಮಾಣ ವಚನ ಸ್ವೀಕರಿಸಬೇಕು. ಕಾಂಗ್ರೆಸ್ ಸರ್ಕಾರ ಶನಿವಾರ ಅಸ್ತಿತ್ವಕ್ಕೆ ಬರುತ್ತಿದೆಯಷ್ಟೆ. ಈಗ ಉಸ್ತುವಾರಿ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಅವರೇ ಇದ್ದಾರೆ. ಆದರೆ ಡಾ.ಪ್ರಭಾಕರ ಭಟ್ಟರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿದ್ದಾರೆ. ಸಂಸದ ನಳಿನ್ ಕುಮಾರ್ ಮತ್ತು ಡಾ.ಪ್ರಭಾಕರ ಭಟ್ಟರು ಸೂಚನೆ ನೀಡಿ ಪೊಲೀಸರ ಮೂಲಕ ಹೊಡೆಸಿದ್ದಾರೆ. ಇದಕ್ಕೆ ಯಾರು ಜವಾಬ್ದಾರಿ? ಸಾಯುವ ಹಾಗೆ ಹೊಡೆಸಿದ್ದಾರೆ ಎಂದರೆ ಇವರಿಗೆ ಮಾನವೀಯತೆ ಇದೆಯೇ ಎಂದು ಅಭಯಚಂದ್ರ ಜೈನ್ ಪ್ರಶ್ನಿಸಿದರು.
ನಾರಾಯಣ ನೇತ್ರಾಲಯದ ಪ್ರಖ್ಯಾತ ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ಹೃದಯಾಘಾತದಿಂದ ನಿಧನ!
ದೇವರ ಹೆಸರಲ್ಲಿ ಬಿಜೆಪಿ ರಾಜಕೀಯ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲಿನ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದಲ್ಲಿ ಬಲಿಷ್ಠ ನಾಯಕತ್ವದ ಕೊರತೆ ಇದೆ. ಜತೆಗೆ ಬಿಜೆಪಿಯವರು ದೇವರ ಹೆಸರಿನಲ್ಲಿ ರಾಜಕೀಯ ಮಾಡಿದ್ದಾರೆ. ಜನತೆ ತಾತ್ಕಾಲಿಕ ಮರುಳಾಗಿರಬಹುದು. ಹಿಂದೆ 1985ರಲ್ಲಿ ಬಿಜೆಪಿಗೆ ಎರಡೇ ಸ್ಥಾನ ಇದ್ದಿದ್ದು, ಅಂತಹದ್ದೇ ಸ್ಥಿತಿಗೆ ಬಿಜೆಪಿ ಬರಲಿದೆ. ಕೋಮು ಭಾವನೆಯನ್ನು ಕೆರಳಿಸುವುದರಲ್ಲಿ ಬಿಜೆಪಿ ಯಶಸ್ವಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಜನ ಮತ ನೀಡಿದ್ದಾರೆ. ಒಳ್ಳೆಯ ಸರ್ಕಾರ ಬರಲಿದೆ, ಒಳ್ಳೆಯ ಆಡಳಿತ ನೀಡಲಿದ್ದಾರೆ ಎಂಬ ವಿಶ್ವಾಸ ಇದೆ. ಬಿಜೆಪಿಯವರು ಅಧಿಕಾರ ಸಿಕ್ಕಾಗ ಕಾಂಗ್ರೆಸ್ ಮುಕ್ತ ಎಂದು ಹೇಳಿಕೆ ನೀಡಿದ್ದರು. ಈಗ ಜನತೆ ಯಾರು ಮುಕ್ತ ಆಗಬೇಕು ಎಂದು ತೋರಿಸಿದ್ದಾರೆ ಎಂದರು. ಮುಖಂಡರಾದ ನೀರಜ್‌ಪಾಲ್, ಶುಭೋದಯ ಆಳ್ವ ಇದ್ದರು.
ಬಿ.ಕೆ.ಹರಿಪ್ರಸಾದ್ ಉಸ್ತುವಾರಿ ಸಚಿವರಾಗಲಿ: ದ.ಕ.ಜಿಲ್ಲೆಗೆ ಬಿ.ಕೆ.ಹರಿಪ್ರಸಾದ್ ಉಸ್ತುವಾರಿ ಸಚಿವರಾಗಬೇಕು. ಇಲ್ಲದಿದ್ದರೆ ಕೋಮುಸೂಕ್ಷ್ಮ ಪ್ರದೇಶವನ್ನು ನಿಯಂತ್ರಿಸಲು ಬೇರೆಯವರಿಗೆ ಸಾಧ್ಯವಾಗದು. ಯು.ಟಿ.ಖಾದರ್ ಅವರಿಗೆ ಒಳ್ಳೆಯ ಖಾತೆ ನೀಡಬೇಕು. ಖಾದರ್ ಉಸ್ತುವಾರಿ ಸಚಿವರಾದರೆ ಬಿಜೆಪಿಯವರಿಗೆ ಅವರ ಮೇಲೆ ಸುಲಭದಲ್ಲಿ ಆರೋಪ ಹೊರಿಸಲು ಸಾಧ್ಯವಾಗುತ್ತದೆ. ಖಾದರ್ ಮೃದು ಸ್ವಭಾವದ ವ್ಯಕ್ತಿ, ಹಾಗಾಗಿ ಅವರಿಗೆ ಇಲ್ಲಿನ ಉಸ್ತುವಾರಿ ಸಚಿವ ಸ್ಥಾನ ಬೇಡ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.
ಲೋಕಸಭಾ ಕ್ಷೇತ್ರದಲ್ಲಿ 25 ವರ್ಷಗಳಿಂದ ಹಿಂದುಳಿದವರಿಗೆ ಅವಕಾಶ ಸಿಕ್ಕಿಲ್ಲ: ಆನಂದ್ ಆಸ್ನೋಟಿಕರ್
ಬಿ.ಕೆ.ಹರಿಪ್ರಸಾದ್‌ಗೆ ಗೃಹ ಸಚಿವ ಸ್ಥಾನ ಕೊಟ್ಟರೆ ದಿಟ್ಟವಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಛಲದಂಕ ಮಲ್ಲ, ಪ್ರಬಲ ವ್ಯಕ್ತಿಯನ್ನು ಸಚಿವ ಸ್ಥಾನಕ್ಕೇರಿಸಬೇಕು. ಜಿಲ್ಲೆಯ ಅಭಿವೃದ್ಧಿಗಾಗಿ ಗಡುಸಾದ ವ್ಯಕ್ತಿ ಆಡಳಿತಕ್ಕೆ ಬರಬೇಕು. ಇಂದಿರಾ ಗಾಂಧಿ, ರಾಜೀವ ಗಾಂಧಿ ಒಡನಾಟ ಇದ್ದವರು ಹರಿಪ್ರಸಾದ್. ಆಡಳಿತದಲ್ಲಿ ಅನುಭವ ಇದ್ದವರು ಉಸ್ತುವಾರಿ ಸಚಿವ ಸ್ಥಾನಕ್ಕೇರಿದರೆ ಸಾಮರಸ್ಯ ಸಾಧ್ಯ ಎಂದು ಅಭಯಚಂದ್ರ ಜೈನ್ ಪುನರುಚ್ಚರಿಸಿದರು.