
ಬೆಂಗಳೂರು (ಜು.13): ‘ನನಗೂ ಸೇರಿದಂತೆ ನಾಡಿನ ಹಿರಿಯ ಸಾಹಿತಿಗಳು, ಚಿಂತಕರು, ಪ್ರತಿಪಕ್ಷದ ನಾಯಕರಿಗೆ ಪದೇ ಪದೇ ಜೀವ ಬೆದರಿಕೆ ಬರುತ್ತಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಗುಂಡಿಕ್ಕಬೇಕು ಎಂದು ಬಹಿರಂಗವಾಗಿ ಸುದ್ದಿವಾಹಿನಿಯಲ್ಲೇ ಹೇಳಿಕೆ ನೀಡಿದವರ ಬಗ್ಗೆ ಕನಿಷ್ಠ ಎಫ್‌ಐಆರ್ ಕೂಡ ದಾಖಲಿಸಿಲ್ಲ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಜೀವ ಬೆದರಿಕೆ ಹಾಕುತ್ತಿರುವವರನ್ನು ಶಿಕ್ಷೆಗೆ ಗುರಿಪಡಿಸಬೇಕು’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
‘ನಾಡಿನ ಬರಹಗಾರರು, ಚಿಂತಕರುಗಳಿಗೆ ಬಹಿರಂಗವಾಗಿ ಜೀವ ಬೆದರಿಕೆ ಪತ್ರಗಳನ್ನು ಬರೆದರೂ ಸರ್ಕಾರ ಸುಮ್ಮನಿದೆ ಎಂದರೆ ಭಿನ್ನಮತ ಮತ್ತು ಭಿನ್ನ ಧ್ವನಿಗಳನ್ನು ದಮನಿಸಲು ಸರ್ಕಾರವೂ ಪಯತ್ನಿಸುತ್ತಿದೆ ಅಥವಾ ಪೊಲೀಸ್ ವ್ಯವಸ್ಥೆ ಸಂಪೂರ್ಣ ನಿಷ್ಕಿ್ರಯವಾಗಿದೆ ಎಂದರ್ಥ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಿಎಸ್‌ವೈ ಜೈಲಿಗೆ ಕಳುಹಿಸಲು ನೀವು ಷಡ್ಯಂತ್ರ ಮಾಡಲಿಲ್ಲವೇ?: ಸಿದ್ದರಾಮಯ್ಯ
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಅನೇಕ ಬಾರಿ ನನ್ನ ಸಾಮಾಜಿಕ ಜಾಲತಾಣದ ಖಾತೆಗಳಿಗೂ ಬಂದು ಹೀನ ಮನೋವೃತ್ತಿ ತೋರುವವರಿದ್ದಾರೆ. ಜತೆಗೆ ನನಗೂ ಹಲವು ಬೆದರಿಕೆ ಪತ್ರಗಳು ಬಂದಿವೆ. ಈ ಬಗ್ಗೆ ಸ್ವತಃ ಡಿಜಿ ಅವರೊಂದಿಗೂ ನಾನು ಮಾತನಾಡಿದ್ದೆ. ಇತ್ತೀಚೆಗೆ ಸುದ್ದಿವಾಹಿನಿಯೊಂದರಲ್ಲಿ ವೀರೇಶ್ ಎಂಬಾತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ನನಗೆ (ಸಿದ್ದರಾಮಯ್ಯ) ಗುಂಡು ಹಾರಿಸಬೇಕು ಎಂದು ಹೇಳಿಕೆ ನೀಡಿದ್ದ. ಈ ಬಗ್ಗೆ ಹಲವು ದೂರುಗಳನ್ನು ನೀಡಿದ್ದರೂ ಈವರೆಗೂ ಕನಿಷ್ಠ ಎಫ್‌ಐಆರ್ ದಾಖಲಿಸಿಲ್ಲ’ ಎಂದು ಕಿಡಿಕಾರಿದ್ದಾರೆ.
ನಿರ್ಲಕ್ಷ್ಯ ಏಕೆ?: ‘ರಾಜ್ಯದ ಬರಹಗಾರರು, ಚಿಂತಕರು ಮತ್ತು ವಿರೋಧ ಪಕ್ಷಗಳ ಮುಖಂಡರುಗಳಿಗೆ ಬರುತ್ತಿರುವ ಜೀವ ಬೆದರಿಕೆ ಕರೆ ಹಾಗೂ ಪತ್ರಗಳನ್ನು ಸರ್ಕಾರ ನಿರ್ಲಕ್ಷಿಸಬಾರದು. ಜೀವ ಬೆದರಿಕೆಯ ಪತ್ರಗಳನ್ನು ದಾವಣಗೆರೆ, ಭದ್ರಾವತಿ, ಅಜ್ಜಂಪುರ ಮುಂತಾದ ಊರುಗಳಿಂದ ಪೋಸ್ಟ್ ಮಾಡಲಾಗುತ್ತಿದೆ. ತನ್ಮೂಲಕ ಸರ್ವಜನಾಂಗದ ಶಾಂತಿಯ ತೋಟದಂತಿರುವ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಲು ಯತ್ನಿಸುತ್ತಿದೆ’ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Karnataka Politics: ನಿರುದ್ಯೋಗ ಸಮಸ್ಯೆಗೆ ಕಾಂಗ್ರೆಸ್ ಹೊಸ ಸೂತ್ರ
‘ಕುಂ. ವೀರಭದ್ರಪ್ಪ ಅವರಿಗೆ 6, ಬಂಜಗೆರೆ ಜಯಪ್ರಕಾಶ್ ಅವರಿಗೆ 5, ಬಿ.ಟಿ. ಲಲಿತಾ ನಾಯಕ್, ಬಿ.ಎಲ್. ವೇಣು, ಚಂದ್ರಶೇಖರ್ ತಾಳ್ಯ ಅವರಿಗೆ ತಲಾ 2 ಪತ್ರ, ಎಸ್.ಜಿ ಸಿದ್ದರಾಮಯ್ಯ ಮತ್ತು ವಸುಂಧರ ಭೂಪತಿಯವರಿಗೆ ಒಂದೊಂದು ಬೆದರಿಕೆ ಪತ್ರ ಬರೆಯಲಾಗಿದೆ. ಇವರೆಲ್ಲರೂ ಪ್ರಜಾತಾಂತ್ರಿಕ ಮೌಲ್ಯ, ಸಂವಿಧಾನದ ಆಶಯಗಳನ್ನು ರಕ್ಷಿಸುವ ಸಲುವಾಗಿ ಹೋರಾಡುತ್ತಿದ್ದಾರೆ. ಹೀಗಾಗಿ ಹಲವು ಬಾರಿ ಸರ್ಕಾರದ ವಿರುದ್ಧ ಮಾತನಾಡಲೇಬೇಕಾಗುತ್ತದೆ. ಇಷ್ಟನ್ನೂ ಸಹಿಸದ ಕಿಡಿಗೇಡಿಗಳು ಜೀವ ಬೆದರಿಕೆ ಒಡ್ಡುವ ಹೀನ ಕೆಲಸ ಮಾಡುತ್ತಿದ್ದಾರೆ’ ಎಂದು ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.