
ಬೆಂಗಳೂರು (ಜು.13): ‘ಬಿಜೆಪಿ ಸರ್ಕಾರದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದ್ದರೂ ಆ ಪಕ್ಷದ ದಲಿತ ನಾಯಕರು ಅನ್ಯಾಯ ವಿರುದ್ಧ ಧ್ವನಿ ಎತ್ತದೆ ದಲಿತರನ್ನು ಅನಾಥ ಶಿಶುಗಳನ್ನಾಗಿ ಮಾಡಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಸರ್ಕಾರದಲ್ಲಿ ಪರಿಶಿಷ್ಟರ ಕಲ್ಯಾಣಕ್ಕೆ ಜಾರಿಗೊಳಿಸಿದ್ದ ಯೋಜನೆಗಳನ್ನು ಸ್ಥಗಿತಗೊಳಿಸಿದ್ದು, ಅನುದಾನವನ್ನೂ ಕಡಿತಗೊಳಿಸಿದ್ದಾರೆ. ಬಿಜೆಪಿ ಅವಧಿಯಲ್ಲಿ ದಲಿತರಿಗೆ ಇಷ್ಟೆಲ್ಲಾ ಅನ್ಯಾಯವಾಗುತ್ತಿದ್ದರೂ ಧ್ವನಿ ಎತ್ತದ ಬಿಜೆಪಿಯ ನಾಯಕರು ತಮ್ಮ ಪಕ್ಷದವರನ್ನು ಮೆಚ್ಚಿಸಲು ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುತ್ತಿದ್ದಾರೆ. ದಲಿತರಿಗೆ ಅನ್ಯಾಯ ಮಾಡುತ್ತಾ ಆತ್ಮವಂಚನೆ ಮಾಡಿಕೊಳ್ಳುತ್ತಿರುವ ನಿಮಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ?’ ಎಂದು ಪ್ರಶ್ನಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವಿದೇಶಾಂಗ ಮಂತ್ರಿ ಉಸ್ತುವಾರಿ: ಏನಿದು ಬಿಜೆಪಿ ಪ್ಲಾನ್?
‘ಪ್ರತಿಯೊಬ್ಬ ವ್ಯಕ್ತಿಗೂ ಸ್ವಾಭಿಮಾನ ಇರಬೇಕು. ಸ್ವಾಭಿಮಾನ ಇಲ್ಲದವನ ಬದುಕು ಶೂನ್ಯ ಎಂದು ಅಂಬೇಡ್ಕರ್ ಅವರು ಹೇಳುತ್ತಾರೆ. ಆದರೆ ಬಿಜೆಪಿಯ ದಲಿತ ನಾಯಕರು ಸ್ವಾಭಿಮಾನ ಇಲ್ಲದೆ ಬೇರೊಬ್ಬರ ಕೈಗೊಂಬೆಗಳಂತೆ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಉದಾಹರಣೆ ಛಲವಾದಿ ನಾರಾಯಣ ಸ್ವಾಮಿ ಅವರು ತಲೆ ಮೇಲೆ ಚಡ್ಡಿ ಹೊತ್ತಿರುವುದು. ಅವರಿಗೆ ದಲಿತರು, ಶೇಷಿತರ ಬಗ್ಗೆ ಕಾಳಜಿ ಇದ್ದರೆ ಈ ಸರ್ಕಾರದ ಅನ್ಯಾಯದ ವಿರುದ್ಧ ಹೋರಾಡಬೇಕಿತ್ತೇ ಹೊರತು ಚಡ್ಡಿ ಹೊತ್ತು ಓಡಾಡಬೇಕಿರಲಿಲ್ಲ’ ಎಂದು ಕಿಡಿ ಕಾರಿದರು.
ಎಲ್ಲಿದ್ದಾರೆ ಶ್ರೀರಾಮುಲು?: ‘ಇನ್ನು ಸಚಿವ ಬಿ. ಶ್ರೀರಾಮುಲು ಅವರು ನಾಗಮೋಹನ್‌ದಾಸ್ ಅವರ ವರದಿ ಬಂದಾಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ವರದಿ ಜಾರಿಗೊಳಿಸಲಾಗುವುದು. ಇದನ್ನು ರಕ್ತದಲ್ಲಿ ಬರೆದುಕೊಡುತ್ತೇವೆ ಎಂದು ಹೇಳಿದ್ದರು. ಈಗ ಅವರೆಲ್ಲಿದ್ದಾರೆ? ಎಂದು ಪ್ರಶ್ನಿಸಿದರು.
ಯೋಜನೆಗಳಿಗೆ ಅನುದಾನ ಕಡಿತ: ‘ಹಿಂದೆ 2013ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಜನಸಂಖ್ಯೆ ಅನುಗುಣವಾಗಿ ಅನುದಾನ ನೀಡಲು ಎಸ್‌ಸಿಪಿ-ಟಿಎಸ್‌ಪಿ ಕಾಯಿದೆ ತಂದರು. ಬಿಜೆಪಿ ಸರ್ಕಾರ 2012-13ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಪರಿಶಿಷ್ಟರ ಕಲ್ಯಾಣಕ್ಕೆ 7200ಕೋಟಿ ರು. ಮಾತ್ರ ಅನುದಾನ ನೀಡಿತ್ತು. ಈ ಕಾಯ್ದೆ ಜಾರಿಯಾದ ನಂತರ ಕಾಂಗ್ರೆಸ್ ಸರ್ಕಾರ 2014-15ನೇ ಸಾಲಿನಲ್ಲಿ 15,834 ಕೋಟಿ ರು. ನೀಡಿದೆ. ಬಳಿಕ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಬಜೆಟ್ ಗಾತ್ರ ಹೆಚ್ಚಾದರೂ ಪರಿಶಿಷ್ಟರ ಅನುದಾನ ಹೆಚ್ಚಾಗಿಲ್ಲ’ ಎಂದು ಧ್ರುವನಾರಾಯಣ ದೂರಿದರು.
ಸಿದ್ದರಾಮೋತ್ಸವದಿಂದ ಬಿಜೆಪಿಗೆ ನಡುಕ, ಅದಕ್ಕೇ ಟೀಕೆ: ಎಂಬಿಪಾ
‘ಜತೆಗೆ ಎಸ್‌ಸಿಪಿ-ಟಿಎಸ್‌ಪಿಯ 7 ಸಾವಿರ ಕೋಟಿ ರು. ಅನುದಾನವನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ. ಯೋಜನೆಗಳು, ಸಬ್ಸಿಡಿಗಳನ್ನು ನಿಲ್ಲಿಸಿದ್ದಾರೆ. ಇಷ್ಟಲ್ಲದೆ, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಸಫಾಯಿ ಅಭಿವೃದ್ಧಿ ನಿಗಮ, ಬೋವಿ ಅಭಿವೃದ್ಧಿ ನಿಗಮ, ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮಗಳ ಅನುದಾನವನ್ನೂ ಕಡಿತಗೊಳಿಸಲಾಗಿದೆ. ಇಷ್ಟೆಲ್ಲಾ ಅನ್ಯಾಯವಾಗುತ್ತಿದ್ದರೂ ಸೊಲ್ಲೆತ್ತದ ಬಿಜೆಪಿಯ ದಲಿತ ಮಂತ್ರಿ ಹಾಗೂ ಶಾಸಕರಿಗೆ ಕಾಂಗ್ರೆಸ್ ಬಗ್ಗೆ ಟೀಕೆ ಮಾಡುವ ನೈತಿಕತೆ ಇಲ್ಲ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.