
ನವದೆಹಲಿ : ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ಅಭಿವೃದ್ಧಿ ವಿಚಾರಗಳ ಕುರಿತು ಮಹತ್ವದ ಚರ್ಚೆ ನಡೆಸಿದರು. ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆಹಾನಿ, ಕಬ್ಬು ಬೆಳೆಗಾರರ ಸಮಸ್ಯೆ, ನೀರಾವರಿ ಸೇರಿ ಒಟ್ಟು 5 ಪ್ರಮುಖ ವಿಷಯಗಳ ಬಗ್ಗೆ ಅವರು ಪ್ರಧಾನಿಯವರ ಗಮನ ಸೆಳೆದಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರ ಜತೆ ಸಚಿವ ಕೃಷ್ಣ ಬೈರೇಗೌಡ ಇದ್ದರು.
ಪ್ರಧಾನಿ ಭೇಟಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಮೋದಿಯವರ ಜೊತೆ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಟ್ಟು 5 ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಅತಿವೃಷ್ಟಿಯಿಂದ ರಾಜ್ಯದಲ್ಲಿ ಒಟ್ಟು 14.58 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 19 ಲಕ್ಷ ರೈತರಿಗೆ ನಷ್ಟ ಉಂಟಾಗಿದೆ. ಆ ಕುರಿತು ನಾವು ಜಂಟಿ ಸಮೀಕ್ಷೆ ಮಾಡಿಸಿದ್ದೇವೆ. ರಾಜ್ಯದಲ್ಲಿ ಒಟ್ಟು 3,560 ಕೋಟಿ ರು. ನಷ್ಟವಾಗಿದ್ದು, ಮಳೆಯಿಂದಾಗಿ ಮೂಲಸೌಕರ್ಯಗಳಿಗೂ ಹಾನಿಯಾಗಿರುವ ಬಗ್ಗೆ ಪ್ರಧಾನಿಗೆ ಮನವರಿಕೆ ಮಾಡಿದ್ದೇವೆ. ಒಟ್ಟಾರೆ ರಾಜ್ಯದಲ್ಲಿ 10,700 ಕೋಟಿ ರು. ಹಾನಿ ಸಂಭವಿಸಿದೆ. ರಾಜ್ಯ ಸರ್ಕಾರ ಕೂಡ ಬೆಳೆಹಾನಿ ಪರಿಹಾರ ಕೊಡುತ್ತಿದ್ದು, ರೈತರಿಗೆ ಕೊಡಬೇಕಾದ ಪರಿಹಾರ 2,800 ಕೋಟಿ ರು. ಆಗುತ್ತದೆ. ಹೀಗಾಗಿ, ಕೇಂದ್ರದಿಂದ 2,136 ಕೋಟಿ ರು. ಪರಿಹಾರ ನೀಡುವಂತೆ ಕೇಳಿದ್ದೇನೆ ಎಂದರು.
ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆಯೂ ಪ್ರಧಾನಿಗೆ ಮಾಹಿತಿ ನೀಡಿದ್ದೇವೆ. ಎಫ್‌ಆರ್‌ಪಿ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಪ್ರತಿ ಟನ್ ಕಬ್ಬಿಗೆ 3,500 ರು. ಕೊಡಬೇಕು ಎಂಬುದು ರೈತರ ಬೇಡಿಕೆ. ರಾಜ್ಯದಲ್ಲಿ 81 ಸಕ್ಕರೆ ಕಾರ್ಖಾನೆಗಳಿವೆ. ರೈತ ಮುಖಂಡರು, ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿ ಪ್ರತಿ ಟನ್ ಕಬ್ಬಿಗೆ 3,300 ರು. ನಿಗದಿ ಮಾಡಿದ್ದೇವೆ. ಸರ್ಕಾರ ನಿಗದಿಪಡಿಸಿದ ದರ ಒಪ್ಪಿಕೊಂಡು ರೈತರು ಪ್ರತಿಭಟನೆ ಹಿಂಪಡೆದಿದ್ದಾರೆ. ಆದರೆ, ಸಕ್ಕರೆಗೆ ದರ ನಿಗದಿ ಮಾಡುವುದು ಸಹ ಕೇಂದ್ರ ಸರ್ಕಾರ. ಕೆ.ಜಿ. ಸಕ್ಕರೆಗೆ 41 ರು. ಮಾಡುವಂತೆ ಬೇಡಿಕೆ ಇದ್ದು, ಆ ಬಗ್ಗೆಯೂ ಪ್ರಧಾನಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.
ಉತ್ತರ ಕರ್ನಾಟಕದ ಪ್ರಮುಖ ಯೋಜನೆಯಾದ ಮಹದಾಯಿ ಯೋಜನೆ ವಿಚಾರ ಕೇಂದ್ರ ಸರ್ಕಾರದ ಮುಂದೆ ಇದ್ದು, ಯೋಜನೆ ಜಾರಿಗೆ ಅನುಮತಿ ನೀಡಬೇಕು. ಇದಕ್ಕೆ ಅರಣ್ಯ, ವನ್ಯಜೀವಿ ಮತ್ತು ಪರಿಸರ ಇಲಾಖೆಯ ಒಪ್ಪಿಗೆ ಬೇಕಿದೆ. ಹೀಗಾಗಿ, ಆ ಬಗ್ಗೆಯೂ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದೇನೆ. ಇದೊಂದು ಕುಡಿಯುವ ನೀರಿನ ಯೋಜನೆಯಾಗಿದ್ದು, ಆದಷ್ಟು ಬೇಗ ಅನುಮತಿ ನೀಡುವಂತೆ ಕೋರಿದ್ದೇನೆ ಎಂದರು.
ಮೇಕೆದಾಟು ಯೋಜನೆ ಸಂಬಂಧ ತಮಿಳುನಾಡು ಅರ್ಜಿ ವಜಾ ಆಗಿದ್ದು, ಅನುಮತಿ ಕೊಡಿ ಎಂದು ಸಿಡಬ್ಲ್ಯುಸಿಗೆ (ಕೇಂದ್ರ ನೀರಾವರಿ ಆಯೋಗ) ಕೇಂದ್ರ ಸರ್ಕಾರ ಹೇಳಬೇಕು. ಕೋರ್ಟ್ ಅಡೆತಡೆ ಇಲ್ಲ, ಯೋಜನೆ ಮಾಡಲು ತೊಂದರೆ ಇಲ್ಲ. ಹೀಗಾಗಿ, 67 ಟಿಎಂಸಿ ನೀರು ಸಂಗ್ರಹ ಮಾಡುತ್ತೇವೆ. ತಮಿಳುನಾಡಿಗೆ ಸಹಜವಾಗಿ 177.25 ಟಿಎಂಸಿ ನೀರು ಕೊಡುತ್ತೇವೆ. ಅದರಲ್ಲೂ ಈ ಬಾರಿ ತಮಿಳುನಾಡಿಗೆ ಅತಿ ಹೆಚ್ಚು ನೀರು ಹೋಗಿದೆ. ಕುಡಿಯುವ ನೀರು ಯೋಜನೆ ಹಾಗೂ ವಿದ್ಯುತ್ ಉತ್ಪಾದನೆಯಿಂದ ತಮಿಳುನಾಡಿಗೂ ಹೆಚ್ಚು ಉಪಯೋಗ ಆಗಲಿದ್ದು, ಕರ್ನಾಟಕದ ಜೊತೆ ಜಗಳ ಆಡೋದು ತಪ್ಪುತ್ತದೆ ಎಂಬುದನ್ನು ಪ್ರಧಾನಿಗೆ ಮನವರಿಕೆ ಮಾಡಿದ್ದೇನೆ ಎಂದು ತಿಳಿಸಿದರು.
ಇನ್ನು, ಕೃಷ್ಣಾ ಜಲವಿವಾದ ನ್ಯಾಯಾಧಿಕರಣ-2 ಅಂತಿಮ ವರದಿ ಬಂದು 10 ವರ್ಷವಾದರೂ ಈವರೆಗೆ ಗೆಜೆಟ್ ನೋಟಿಫಿಕೇಷನ್ ಮಾಡಿಲ್ಲ. ಹೀಗಾಗಿ, ಶೀಘ್ರ ಆ ಬಗ್ಗೆ ಕ್ರಮ ವಹಿಸಲು ಒತ್ತಾಯಿಸಿದ್ದೇನೆ ಎಂದರು.
2023-24ರ ಬಜೆಟ್‌ನಲ್ಲಿ ಘೋಷಿಸಿರುವಂತೆ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರು.ಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿರುವುದಾಗಿ ತಿಳಿಸಿದರು.
ರಾಯಚೂರು ಏಮ್ಸ್:
ಅಲ್ಲದೆ, ಅತಿ ಹಿಂದುಳಿದ ಪ್ರದೇಶವಾದ ರಾಯಚೂರಿನಲ್ಲಿ ಏಮ್ಸ್ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ಸ್ಥಾಪನೆ ಬಗ್ಗೆ ಬಹು ವರ್ಷಗಳಿಂದ ಬೇಡಿಕೆ ಇದೆ. ಜಮೀನು ಕೊಡಲು ನಾವು ಸಿದ್ಧ ಇದ್ದೇವೆ. ಹೀಗಾಗಿ ರಾಯಚೂರಿಗೆ ಶೀಘ್ರವೇ ಏಮ್ಸ್ ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಜಲಜೀವನ ಮಿಷನ್:
ಜಲಜೀವನ ಮಿಷನ್ ಯೋಜನೆಯಡಿ 2025-26ರ ಅಂತ್ಯದವರೆಗೆ ರಾಜ್ಯಕ್ಕೆ ಕೊಡಬೇಕಾದ ಪಾಲಿನಲ್ಲಿ 13 ಸಾವಿರ ಕೋಟಿ ರು.ಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆದರೂ, ರಾಜ್ಯ ಮುಂಗಡವಾಗಿ 1,500 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ. ಪ್ರಸ್ತುತ 1,700 ಕೋಟಿ ರು. ಮೊತ್ತದ ಬಿಲ್‌ಗಳು ಪಾವತಿಗೆ ಬಾಕಿ ಇವೆ. ಜೊತೆಗೆ, 2,600 ಕೋಟಿ ರು.ಗಳ ಮೊತ್ತದ ಬಿಲ್‌ಗಳು ಸಲ್ಲಿಕೆಯಾಗಬೇಕಿವೆ. ಹೀಗಾಗಿ, ಜಲಜೀವನ ಮಿಷನ್ ಯೋಜನೆಯಡಿ ರಾಜ್ಯಕ್ಕೆ ಬಾಕಿ ಇರುವ ಹಣ ಬಿಡುಗಡೆಗೆ ಪ್ರಧಾನಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.
ರಾಜಕೀಯ ಚರ್ಚಿಸಿಲ್ಲ
ರಾಜ್ಯದ ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸಲು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ್ದೇನೆ. ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳು, ಅತಿವೃಷ್ಟಿ ಪರಿಹಾರ, ಕಬ್ಬು ಬೆಳೆಗಾರರ ಸಮಸ್ಯೆ ಸೇರಿ 5 ಪ್ರಮುಖ ಅಂಶಗಳ ಕುರಿತು ಪ್ರಧಾನಿಯವರ ಗಮನ ಸೆಳೆದಿದ್ದೇನೆ. ಭೇಟಿ ವೇಳೆ, ಯಾವುದೇ ರಾಜಕೀಯ ವಿಷಯವಾಗಿ ಚರ್ಚೆ ನಡೆಸಿಲ್ಲ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
- ಕಬ್ಬು ಬೆಳೆಗಾರರ ಹೋರಾಟ ತಾರಕಕ್ಕೇರಿದ್ದಾಗ ಭೇಟಿಗೆ ಅವಕಾಶ ನೀಡಿ ಪ್ರಧಾನಿಗೆ ಪತ್ರ ಬರೆದಿದ್ದ ಸಿಎಂ
- ಶನಿವಾರ ದೆಹಲಿಗೆ ಭೇಟಿ ನೀಡಿದಾಗ ಪ್ರಧಾನಿ ಕಚೇರಿಯಿಂದ ಸೋಮವಾರ ಸಂಜೆ ಭೇಟಿಗೆ ಅವಕಾಶ
- ಶನಿವಾರ ರಾತ್ರಿ ಬೆಂಗಳೂರಿಗೆ ಮರಳಿ, ಸೋಮವಾರ ಮತ್ತೆ ದೆಹಲಿಗೆ ಪ್ರಯಾಣ ಬೆಳೆಸಿದ್ದ ಮುಖ್ಯಮಂತ್ರಿ
- ಪ್ರಧಾನಿಗೆ ಕಬ್ಬು ಬೆಳೆಗಾರರ ಸಮಸ್ಯೆ, ನೀರಾವರಿ ಯೋಜನೆಗಳ ಬಗ್ಗೆ ಮನವಿ ಪತ್ರ ಸಲ್ಲಿಸಿದ ಸಿದ್ದರಾಮಯ್ಯ
- ಕಾಂಗ್ರೆಸ್ ಅಧ್ಯಕ್ಷರ ಜತೆ ಸಭೆ, ವಿವಿಧ ನಾಯಕರ ಜತೆ ಮಾತುಕತೆ ಮುಗಿಸಿ ರಾತ್ರಿಯೇ ಸಿಎಂ ಬೆಂಗಳೂರಿಗೆ
1. ಕಬ್ಬು ಬೆಳೆಗಾರರ ಎಫ್‌ಆರ್‌ಪಿ ದರ ನಿಗದಿ ಬಗ್ಗೆ ಮಾತುಕತೆ. ಸಕ್ಕರೆ ದರವನ್ನು ಕೇಜಿಗೆ 41 ರು.ಗೆ ಹೆಚ್ಚಿಸಲು ಮನವಿ
2. ಅತಿವೃಷ್ಟಿಯಿಂದ ರಾಜ್ಯದಲ್ಲಿ ಭಾರಿ ಹಾನಿ. ಕೇಂದ್ರ ಸರ್ಕಾರ 2136 ಕೋಟಿ ರು. ಪರಿಹಾರ ನೀಡಬೇಕೆಂದು ಆಗ್ರಹ
3. ಮಹದಾಯಿ, ಮೇಕೆದಾಟು ಯೋಜನೆಗೆ ಅನುಮತಿ, ಕೃಷ್ಣಾ ಗೆಜೆಟ್ ಅಧಿಸೂಚನೆ, ಭದ್ರಾ ಹಣ ಬಿಡುಗಡೆಗೆ ಒತ್ತಾಯ
4. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಜಮೀನು ಕೊಡಲು ಸಿದ್ಧ. ಶೀಘ್ರ ಏಮ್ಸ್ ಮಂಜೂರು ಮಾಡಿ ಎಂದು ಆಗ್ರಹ
5. ಜಲಜೀವನ ಮಿಷನ್ ಯೋಜನೆಯಡಿ ರಾಜ್ಯಕ್ಕೆ ಬಿಡುಗಡೆಯಾಗಬೇಕಿರುವ ಬಾಕಿ ಹಣ ಮಂಜೂರು ಮಾಡಲು ಮನವಿ--
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.