
ಬೆಂಗಳೂರು (ನ.17): ಬಿಹಾರದಲ್ಲಿ ನ್ಯಾಯ ಸಮ್ಮತವಾಗಿ ವಿಧಾನಸಭಾ ಚುನಾವಣೆ ನಡೆದಿಲ್ಲ. ಕಾಂಗ್ರೆಸ್ ಮತದಾರರನ್ನು ಉದ್ದೇಶಪೂರ್ವಕವಾಗಿ ಡಿಲೀಟ್ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಪಾದಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿಯವರು ಮೋಸಗಾರರು. ಸೋಲುವ ಭಯದಿಂದ ಅವರು ಕಾಂಗ್ರೆಸ್ ಮತದಾರರನ್ನು ಉದ್ದೇಶಪೂರ್ವಕವಾಗಿ ಡಿಲೀಟ್ ಮಾಡಿದ್ದಾರೆ. ಬಿಹಾರದಲ್ಲಿ 20 ವರ್ಷಗಳಿಂದ ನಿತೀಶ್ ಕುಮಾರ್ ಆಡಳಿತ, 14 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಮೊದಲು 47 ಲಕ್ಷ ಜನ ಮತದಾರರನ್ನು ಡಿಲೀಟ್ ಮಾಡಿದರು.
18 ಲಕ್ಷ ಮತದಾರರನ್ನು ಹೊಸದಾಗಿ ಚುನಾವಣೆ ವೇಳೆ ಸೇರಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಚುನಾವಣೆ ಸಂದರ್ಭದಲ್ಲಿ ಚುನಾವಣೆಗೂ ಮುಂಚೆ ಮಹಿಳೆಯರಿಗೆ 10 ಸಾವಿರ ಹಣ ಹಂಚಿ ಮತ ಖರೀದಿ ಮಾಡಿದ್ದಾರೆ. 1.25 ಕೋಟಿ ಲಕ್ಷ ಜನರಿಗೆ 10 ಸಾವಿರ ರು. ಸರ್ಕಾರ ಹಂಚಿದ್ದರೂ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಳ್ಳದೆ ಹೋಯಿತು. ಇದರಿಂದ ಕೇಂದ್ರ ಚುನಾವಣಾ ಆಯೋಗ ಬಿಜೆಪಿ ಜೊತೆ ಶಾಮೀಲಾಗಿದೆ ಎಂದು ಕಂಡುಬರುತ್ತಿದೆ ಎಂದು ಹೇಳಿದರು.
ತುರ್ತು ನಿರ್ಗಮನ ದ್ವಾರ ಪರಿಶೀಲಿಸದವರ ವಿರುದ್ಧ ಕ್ರಮ: ಸಾರ್ವಜನಿಕ ಸೇವಾ ವಾಹನಗಳಲ್ಲಿ ತುರ್ತು ನಿರ್ಗಮನ ದ್ವಾರ ಇಲ್ಲದಿದ್ದರೂ ನೋಂದಣಿ ಮತ್ತು ಅರ್ಹತಾ ಪತ್ರ ನೀಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದರು. ಸಾರ್ವಜನಿಕ ಸೇವೆ ನೀಡುವ ವಾಹನಗಳಲ್ಲಿ ತುರ್ತು ನಿರ್ಗಮನ ದ್ವಾರ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ವಾಹನಗಳ ನೋಂದಣಿ ಮತ್ತು ಅರ್ಹತಾ ಪತ್ರ ನೀಡುವ ಮುನ್ನ ತುರ್ತು ನಿರ್ಗಮನ ದ್ವಾರ ಅಳವಡಿಸಲಾಗಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು.
ಒಂದು ವೇಳೆ ತುರ್ತು ನಿರ್ಗಮನ ದ್ವಾರ ಇಲ್ಲದಿದ್ದರೂ ನೋಂದಣಿ ಮತ್ತು ಅರ್ಹತಾ ಪತ್ರ ನವೀಕರಣ ಮಾಡಿರುವುದು ಕಂಡು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಎಲ್ಲ ನೋಂದಣಿ ಪ್ರಾಧಿಕಾರಗಳಿಗೆ ಸುತ್ತೋಲೆ ಹೊರಡಿಸಬೇಕು ಎಂದು ಸಾರಿಗೆ ಆಯುಕ್ತರಿಗೆ ನಿರ್ದೇಶಿಸಿದರು. ಕೆಲ ವಾಹನಗಳು ಕಿಟಕಿ ಗಾಜುಗಳನ್ನೇ ತುರ್ತು ನಿರ್ಗಮನ ದ್ವಾರವೆಂದು ಅಳವಡಿಸಿರುವುದು ಕಂಡು ಬಂದಿದೆ. ಅದರ ಬಗ್ಗೆಯೂ ಪರಿಶೀಲನೆ ನಡೆಸಬೇಕು. ಪ್ರವರ್ತನ ಕಾರ್ಯ ನಡೆಸುವ ಸಿಬ್ಬಂದಿ, ಅಧಿಕಾರಿಗಳು ಈ ಕುರಿತು ವಾಹನಗಳನ್ನು ಪರಿಶೀಲಿಸುವಾಗ ಗಮನಿಸಬೇಕು ಎಂದರು.
ಸಾರ್ವಜನಿಕ ಸೇವೆ ನೀಡುವ ವಾಹನಗಳಲ್ಲಿ ನಿಗದಿಗಿಂತ ಹೆಚ್ಚಿನ ಸರಕು ಸಾಗಣೆ ಮಾಡುತ್ತಿರುವುದು ಕಂಡು ಬರುತ್ತಿದೆ. ಅದರ ಜತೆಗೆ ಹೊರರಾಜ್ಯಗಳಲ್ಲಿ ನೋಂದಣಿ ಮಾಡಿಕೊಂಡು ರಾಜ್ಯದ ತೆರಿಗೆ ಪಾವತಿಸದೇ ಸಂಚರಿಸುವ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಎಲ್ಲದರ ಕುರಿತು ನಿರಂತರವಾಗಿ ತಪಾಸಣೆ ನಡೆಸಬೇಕು. ನಿಯಮ ಉಲ್ಲಂಘಿಸುವ ಮತ್ತು ತೆರಿಗೆ ಪಾವತಿಸದ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲು ತಪಾಸಣೆ ಹೆಚ್ಚಿಸಬೇಕು. ಅದರಲ್ಲೂ ಶಾಲಾ ವಾಹನಗಳು ಅರ್ಹತಾ ಪತ್ರ ನವೀಕರಿಸಿವೆಯೇ ಎಂಬುದನ್ನು ಪರಿಶೀಲಿಸಬೇಕು. ಒಂದು ವೇಳೆ ಅರ್ಹತಾ ಪತ್ರ ನವೀಕರಿಸದಿದ್ದರೆ ವಾಹನ ಮಾಲೀಕರಿಗೆ ನೋಟಿಸ್ ನೀಡಿ ನಿಯಮದಂತೆ ಕ್ರಮ ಕೈಗೊಳ್ಳಬೇಕು ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.