
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡುವಿನ ಮಹತ್ವದ ದಿಲ್ಲಿ ಸಭೆ ಇಂದು ಅಂತ್ಯಗೊಂಡಿದೆ. ಸುಮಾರು ಒಂದು ಗಂಟೆ ನಡೆದ ಈ ಸಭೆಯಲ್ಲಿ ಸಂಪುಟ ವಿಸ್ತರಣೆ, ಖಾಲಿ ಸ್ಥಾನ ಭರ್ತಿ, ನಾಯಕತ್ವ ಸಂಬಂಧ ಚರ್ಚೆಗಳು ಸೇರಿದಂತೆ ಅನೇಕ ಪ್ರಮುಖ ರಾಜಕೀಯ ವಿಚಾರಗಳು ಚರ್ಚೆಗೆ ಬಂದಿವೆ ಎಂದು ವರದಿ ತಿಳಿಸಿದೆ.
ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸಂಪುಟ ವಿಸ್ತರಣೆಯ ಅಗತ್ಯತೆಯನ್ನು ಸ್ಪಷ್ಟವಾಗಿ ಒತ್ತಿಹೇಳಿದರೆ, ಖರ್ಗೆಯವರೂ ಈ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೆಂದು ಮೂಲಗಳು ತಿಳಿಸಿವೆ.
ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೇವಾಲ ಅವರ ಜೊತೆ ಒಮ್ಮೆ ಮಾತಾಡಿ ನಂತರ ಅಂತಿಮ ತೀರ್ಮಾನ ಮಾಡೋಣ. ನೀವು ಮತ್ತೊಮ್ಮೆ ದಿಲ್ಲಿಗೆ ಬರಬೇಕಾಗಿ ಬರುತ್ತದೆ. ನಾವು ಎಲ್ಲರೂ ಸೇರಿ ಚರ್ಚಿಸಿ ರಾಹುಲ್ ಗಾಂಧಿಗೆ ವರದಿ ಕೊಡುತ್ತೇವೆ. ಅಂತಿಮ ತೀರ್ಮಾನವನ್ನು ಅವರು ತೆಗೆದುಕೊಳ್ಳುತ್ತಾರೆ ಎಂದು ಖರ್ಗೆ ಹೇಳಿದ್ದಾರೆಂದು ತಿಳಿದುಬಂದಿದೆ. ಈ ಹೇಳಿಕೆಗಳು ಸಂಪುಟ ವಿಸ್ತರಣೆ ಸಾಧ್ಯತೆಯನ್ನು ಇನ್ನಷ್ಟು ಬಲಪಡಿಸಿದಂತಾಗಿದೆ.
ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಕನಿಷ್ಠವಾಗಿ ಖಾಲಿ ಇರುವ ಮಂತ್ರಿ ಸ್ಥಾನಗಳಾದರೂ ತಕ್ಷಣ ಭರ್ತಿ ಮಾಡುವಂತೆ ವಿನಂತಿಸಿದ್ದಾರಂತೆ. ಅಧಿವೇಶನದೊಳಗೆ ಈ ಹುದ್ದೆಗಳು ಭರ್ತಿ ಆಗಬೇಕು ಎಂದು ತಿಳಿಸಿದರು. ಮೂವರು ಹೊಸ ಹೆಸರುಗಳನ್ನು ಪ್ರಸ್ತಾಪಿಸಿರುವುದಾಗಿ ಮಾಹಿತಿ ಲಭ್ಯವಾಗಿದ್ದು, ಆದರೆ, ಈ ಹೆಸರುಗಳ ಕುರಿತು ಮಲ್ಲಿಕಾರ್ಜುನ ಖರ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲವಂತೆ.
ಸಭೆಯಲ್ಲಿ ನಾಯಕತ್ವ ಬದಲಾವಣೆ ಕುರಿತು ಕೆಲವು ಮಟ್ಟದಲ್ಲಿ ಚರ್ಚೆ ನಡೆದಿದ್ದು, ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಮಾತನಾಡಿದ್ದಾರಂತೆ. ನಾವು ಹೈಕಮಾಂಡ್ ಮಾತಿಗೆ ಶತಶಃ ಬದ್ದರಾಗಿದ್ದೇವೆ ಎಂದು ಹೇಳಿದ್ದಾರೆ. ಇದು ಪ್ರಸ್ತುತ ನೇತೃತ್ವದಲ್ಲಿ ಬದಲಾವಣೆಗೆ ಅವಕಾಶವಿಲ್ಲ ಎಂಬ ಸಂದೇಶವನ್ನೇ ನೀಡಿದಂತಾಗಿದೆ.
ನಿನ್ನೆ ನಡೆದ ಡಿಸಿಎಂ ಭೇಟಿ ಕೂಡ ಚರ್ಚೆಗೆ ಬಂದಿದ್ದು, ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿನ್ನೆ ನಡೆದ ಭೇಟಿ, ಪಕ್ಷದ ಆಂತರಿಕ ಸಮತೋಲನ, ಹಾಗೂ ಸರ್ಕಾರದ ಸ್ಥೈರ್ಯದ ವಿಚಾರಗಳ ಕುರಿತೂ ಚರ್ಚೆ ನಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.