ಬಿಜೆಪಿ ಸಾಂಸ್ಕೃತಿಕ ಭಯೋತ್ಪಾದನೆ ವಿರುದ್ಧ ಹೋರಾಟ ಅನಿವಾರ್ಯ: ಸಿದ್ದರಾಮಯ್ಯ

By Kannadaprabha News  |  First Published Jun 16, 2022, 5:31 AM IST

*  ತೀರ್ಥಹಳ್ಳಿ ಪಟ್ಟಣದ ಸಂಸ್ಕೃತಿ ಮಂದಿರ ಎದುರು ಕಾಂಗ್ರೆಸ್‌ ಪಾದಯಾತ್ರೆ ಸಭೆ
*  ಕನ್ನಡದ ಅಸ್ಮಿತೆಗೆ ಧಕ್ಕೆಯುಂಟಾಗುವ ಸಂದರ್ಭ ಎದುರಾದಾಗ ಪಕ್ಷಾತೀತವಾಗಿ ಹೋರಾಟ 
*  40 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಇವರಂತ ಅಸಮರ್ಥ ಗೃಹ ಸಚಿವರನ್ನು ನೋಡಿಲ್ಲಾ 
 


ತೀರ್ಥಹಳ್ಳಿ(ಜೂ.16):  ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಾಂಸ್ಕೃತಿಕ ಭಯೋತ್ಪಾದನೆ ನಡೆಯುತ್ತಿದ್ದು, ಇದರ ವಿರುದ್ಧ ಕನ್ನಡಿಗರು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರೋಹಿತ್‌ ಚಕ್ರವರ್ತಿ ನೇತೃತ್ವದ ಪಠ್ಯ ಪರಿಷ್ಕರಣ ಸಮಿತಿ ರಚಿಸಿರುವ ಪಠ್ಯಕ್ರಮವನ್ನು ವಜಾಗೊಳಿಸುವಂತೆ ಆಗ್ರಹಿಸಿ ಬುಧವಾರ ಕುಪ್ಪಳಿಯಿಂದ ತೀರ್ಥಹಳ್ಳಿವರೆಗೆ ನಡೆದ ಪಾದಯಾತ್ರೆಯಲ್ಲಿ ಪಟ್ಟಣದ ಸಂಸ್ಕೃತಿ ಮಂದಿರದ ಎದುರು ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

Tap to resize

Latest Videos

ಅಧಿಕಾರದ ಮದದಿಂದ ಬಿಜೆಪಿ ದುರ್ವರ್ತನೆ: ಸಿದ್ದು ಕಿಡಿ

ಕನ್ನಡದ ಅಸ್ಮಿತೆಗೆ ಧಕ್ಕೆಯುಂಟಾಗುವ ಸಂದರ್ಭ ಎದುರಾದಾಗ ಪಕ್ಷಾತೀತವಾಗಿ ಹೋರಾಟ ನಡೆಸಬೇಕಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ನೇತೃತ್ವದಲ್ಲಿ ನಡೆದಿರುವ ಈ ಪಾದಯಾತ್ರೆ ಇದಕ್ಕೆ ಮಾದರಿಯಾಗಿದೆ. ಇಂದಿಲ್ಲಿ ಆರಂಭಗೊಂಡಿರುವ ಹೋರಾಟ ನಿರಂತರವಾಗಿ ಮುಂದುವರಿಯಬೇಕಿದೆ ಎಂದರು.

ಸಂವಿಧಾನದ ಬಗ್ಗೆ ಗೌರವ ಇಲ್ಲದ ಮನುವಾದಿ ಸಂಘ ಪರಿವಾರದವರಿಗೆ ಸಮಾನತೆ, ಜಾತ್ಯತೀತತೆ, ಸಮಾನ ಅವಕಾಶಗಳು ಬೇಕಿಲ್ಲ. ಮಹಾಪುರುಷರ ಚರಿತೆಯನ್ನೇ ತಿರುಚಿ ಮಕ್ಕಳಿಗೆ ವಿಷ ಉಣಿಸುವ ಪ್ರಯತ್ನ ನಡೆದಿದೆ. ಪಠ್ಯ ಪರಿಷ್ಕರಣ ಸಮಿತಿಯನ್ನು ವಿಸರ್ಜನೆ ಮಾಡಿದರೆ ಸಾಲದು. ಪಠ್ಯಕ್ರಮವನ್ನೂ ಕೈ ಬಿಡಬೇಕು. ಮಕ್ಕಳಿಗೆ ವಿದ್ಯೆ ಕಲಿಸುವುದಕ್ಕೆ ಶಿಕ್ಷಣ ಸಚಿವ ನಾಗೇಶ್‌ ಯೋಗ್ಯರಲ್ಲಾ ಎಂದೂ ಹೇಳಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಅಜ್ಞಾನಿ ಎಂದು ಟೀಕಿಸಿದ ಮಾಜಿ ಸಿಎಂ, 40 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಇವರಂತ ಅಸಮರ್ಥ ಗೃಹ ಸಚಿವರನ್ನು ನೋಡಿಲ್ಲಾ. ಕಿಮ್ಮನೆ ರತ್ನಾಕರ್‌ ರಾಜ್ಯ ಕಂಡ ಕೆಲವೇ ರಾಜಕಾರಣಿಗಳಲ್ಲಿ ಒಬ್ಬ ಯೋಗ್ಯ ಮತ್ತು ಸಜ್ಜನ ರಾಜಕಾರಣಿಯಾಗಿದ್ದಾರೆ.ಗ್ರಾಪಂ ಸದಸ್ಯ ಕೂಡಾ ಅಧಿಕಾರ ಬಿಟ್ಟು ಕೊಡದ ಈ ಕಾಲದಲ್ಲಿ ತಮಗೆ ದೊರೆತಿದ್ದ ಸಚಿವ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು ಎಂದರು.

ಸಮಾರಂಭವನ್ನು ಉದ್ಘಾಟಿಸಿದ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪೊ› ಜಿ.ಎಸ್‌.ಸಿದ್ದರಾಮಯ್ಯ, ನೂರಾರು ವರ್ಷಗಳಿಂದ ಶಿಕ್ಷಣ ವಂಚಿತರಾಗಿರುವ ಹಳ್ಳಿಗಾಡಿನ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡುತ್ತಿರುವುದಕ್ಕೆ ಆಳುವವರು ನಾಚಿಕೆ ಪಡಬೇಕಿದೆ. ದೇಶ ಕಟ್ಟುವ ಮನಸ್ಸುಗಳಿಗೆ ದೇಶಪ್ರೇಮದ ಹೆಸರಿನಲ್ಲಿ ಮಾನಸಿಕ ಕೊಳಚೆಯಾದ ದ್ವೇಷವನ್ನು ಭಿತ್ತುವ ಪ್ರಯತ್ನ ಅಪಾಯಕಾರಿಯಾಗಿದೆ. ಕರ್ನಾಟಕದ ಸಾರ್ವಭೌಮತೆಯ ಅಸ್ಮಿತೆಯನ್ನು ಸಾರುವ ನಾಡಗೀತೆಯನ್ನೇ ಅಪಮಾನಗೊಳಿಸಿರುವ ವಿಕಾರ ಮನಸ್ಸಿನ ವ್ಯಕ್ತಿಯನ್ನು ಸಮರ್ಥಿಸಿಕೊಳ್ಳುವ ಈ ಸರ್ಕಾರಕ್ಕೆ ನಾಡಗೀತೆಯನ್ನು ಹಾಡುವ ನೈತಿಕತೆಯೂ ಇಲ್ಲವಾಗಿದೆ ಎಂದು ಹೇಳಿದರು.

ದಳಪತಿಗಳಿಗೆ ಮತ್ತೊಂದು ಶಾಕ್, ಜೆಡಿಎಸ್‌ಗೆ ರಾಜೀನಾಮೆ ನೀಡಿ ಸಿದ್ದರಾಮಯ್ಯ ಮನೆಗೆ ಹೋದ ಮಾಜಿ MLC

ಮಾಜಿ ಸಭಾಪತಿ ರಮೇಶ್‌ಕುಮಾರ್‌ ಮಾತನಾಡಿ, ನೇರವಾಗಿ ಸಂವಿಧಾನವನ್ನು ಮುಟ್ಟುವ ಧೈರ್ಯವಿಲ್ಲದ ಬಿಜೆಪಿ ಅನ್ಯಮಾರ್ಗದಿಂದ ಜನರ ಮನಸ್ಸನ್ನು ಕೆಡಿಸುವ ಕೆಲಸ ಮಾಡುತ್ತಿದೆ. ಮಾನವ ನಿರ್ಮಿತ ವಿನಾಶಕಾರಿ ಜಾತಿ ವ್ಯವಸ್ಥೆಯಲ್ಲಿ ವೈಚಾರಿಕ ದಾರಿದ್ರ್ಯದಿಂದ ನರಳುತ್ತಿರುವ ನಾವು ಈ ನೆಲದ ಕುವೆಂಪು, ಕಡಿದಾಳು ಮಂಜಪ್ಪ, ಶಾಂತವೇರಿ ಮುಂತಾದವರ ಹೆಸರು ಹೇಳುವ ಅರ್ಹತೆಯನ್ನು ಕಳೆದುಕೊಂಡಿದ್ದೇವೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯನವರು ಮಾತ್ರ ನಿರ್ಭಯವಾಗಿ ನೈತಿಕತೆಯ ಬಗ್ಗೆ ಮಾತನಾಡುವ ಅರ್ಹತೆಯನ್ನು ಉಳಿಸಿಕೊಂಡಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಆಯೋಜಕ ಕಿಮ್ಮನೆ ರತ್ನಾಕರ್‌ ಅವರು, ಪ್ರಗತಿಪರ ಚಿಂತಕರು, ಸಾಹಿತಿಗಳ ಸಹಕಾರದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಒಂದು ಕೋಟಿ ಮಕ್ಕಳ ಮನಸ್ಸನ್ನು ಕೆಡಿಸುವ ಈ ಪ್ರಕರಣದ ಬಗ್ಗೆ ನಾಡಿನ ಚಿಂತಕರು ಮುಂದಾದಲ್ಲಿ ಈ ಸರ್ಕಾರ ತಕ್ಕ ಬೆಲೆಯನ್ನು ನೀಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಕುವೆಂಪು ವಿಶ್ವಮಾನವ ವೇದಿಕೆ ಸಂಚಾಲಕ ಕಡಿದಾಳು ದಯಾನಂದ್‌, ಡಾ. ನಾ.ಡಿಸೋಜಾ, ಮಾಜಿ ಶಾಸಕ ವೈ.ಎಸ್‌.ವಿ. ದತ್ತ, ರೈತ ಮುಖಂಡರಾದ ಕೆ.ಟಿ.ಗಂಗಾಧರ್‌ ಹಾಗೂ ಬಸವರಾಜಪ್ಪ, ಶಿಕ್ಷಣ ತಜ್ಞ ನಿರಂಜನ ಆರಾಧ್ಯ, ಎಚ್‌.ಎಸ್‌. ಸುಂದರೇಶ್‌ ಮತ್ತಿತರರು ಇದ್ದರು.
 

click me!