ಆರ್‌ಎಸ್‌ಎಸ್‌ನ ನಾಗಪುರದ ಕಚೇರಿಯ ಮೇಲೆ ಕಳೆದ 52 ವರ್ಷಗಳಿಂದಲೂ ಸಹ ತ್ರಿವರ್ಣ ಧ್ವಜ ಹಾರಿಸದೇ ಭಗವಧ್ವಜ ಹಾರಿಸುತ್ತಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ನಾಯಕರು ಹರ್ ಘರ್ ತಿರಂಗ ಎಂದು ಮತ್ತೊಂದು ನಾಟಕವಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಂಜನಗೂಡು/ಮೈಸೂರು (ಆ.09): ಆರ್‌ಎಸ್‌ಎಸ್‌ನ ನಾಗಪುರದ ಕಚೇರಿಯ ಮೇಲೆ ಕಳೆದ 52 ವರ್ಷಗಳಿಂದಲೂ ಸಹ ತ್ರಿವರ್ಣ ಧ್ವಜ ಹಾರಿಸದೇ ಭಗವಧ್ವಜ ಹಾರಿಸುತ್ತಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ನಾಯಕರು ಹರ್ ಘರ್ ತಿರಂಗ ಎಂದು ಮತ್ತೊಂದು ನಾಟಕವಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ತಾಲೂಕಿನ ತಗಡೂರು ಗ್ರಾಮದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಿಜೆಪಿ, ಆರ್‌ಎಸ್‌ಎಸ್ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿಲ್ಲ, ಹೆಡಗೆವಾರ್, ಗೋವಾಲ್ಕರ್, ಸಾವರ್ಕರ್, ಬ್ರಿಟಿಷರ ವಿರುದ್ಧ ಯಾವುದೇ ಹೋರಾಟ ನಡೆಸುವುದಿಲ್ಲ ಎಂದು ಕೈಕಟ್ಟಿನಿಂತು ಮುಚ್ಚಳಿಕೆ ಬರೆದುಕೊಟ್ಟು ಜೈಲಿನಿಂದ ಬಿಡುಗಡೆ ಹೊಂದಿದವರು, ಅವರನ್ನು ಬಿಜೆಪಿ. ಆರ್‌ಎಸ್‌ಎಸ್, ವೀರ ಸಾವರ್ಕರ್ ಎಂದು ಕರೆಯುತ್ತಾರೆ. ಅಲ್ಲದೆ ತ್ರಿವರ್ಣಧ್ವಜವನ್ನು ರಾಷ್ಟ್ರೀಯ ಧ್ವಜವೆಂದು ಮಾನ್ಯತೆ ನೀಡಬಾರದು ಎಂಬುದು ಆರ್‌ಎಸ್‌ಎಸ್‌ನ ನಿಲುವಾಗಿತ್ತು. ಈ ಬಗ್ಗೆ ಆರ್‌ಎಸ್‌ಎಸ್ ಒಡೆತನದ ಪತ್ರಿಕೆ ಆರ್ಗನೈಸರ್ ವರದಿ ಮಾಡಿದೆ.
ಈ ದೇಶಕ್ಕೆ ಬಿಜೆಪಿ ಕೊಡುಗೆಯಾದರೂ ಏನು?: ಸಿದ್ದರಾಮಯ್ಯ ಪ್ರಶ್ನೆ
ಅಲ್ಲದೆ ಆರ್‌ಎಸ್‌ಎಸ್‌ನ ನಾಗಪುರದ ಕಚೇರಿಯ ಮೇಲೆ ಕಳೆದ 52 ವರ್ಷಗಳಿಂದಲೂ ಸಹ ತ್ರಿವರ್ಣಧ್ವಜ ಹಾರಿಸದೆ ಭಗವಾಧ್ವಜ ಹಾರಿಸುತ್ತಿದ್ದರು. ಈಗ ಪ್ರಧಾನಿ ಮೋದಿ, ಬಿಜೆಪಿ ನಾಯಕರು ದೇಶಭಕ್ತಿ ಹೆಸರಲಿನಲ್ಲಿ ಹರ್ ಘರ್ ತಿರಂಗವೆಂದು ನಾಟಕ ಪ್ರಾರಂಭಿಸಿದ್ದಾರೆ. ಈ ಕರೆ ನೀಡುವುದಕ್ಕೆ ನಾಚಿಕೆಯಾಗುವುದಿಲ್ಲವೇ? ಪ್ರಧಾನಿ ಮೋದಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಾಡುವ ಬದಲು ಸಬ್ ಕಾ ಸರ್ವನಾಶ್ ಮಾಡಲು ಹೊರಟಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು. ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಹೋರಾಟ ನಡೆಸಿದ ಪಕ್ಷ, ಕಾಂಗ್ರೆಸ್‌ನ ನಾಯಕರು ಜೈಲು ಸೇರಿ, ಪ್ರಾಣಹಾನಿ ಆಸ್ತಿ ಪಾಸ್ತಿಯನ್ನು ಕಳೆದುಕೊಂಡು ಹೋರಾಟ ನಡೆಸಿ ಬ್ರಿಟಿಷರ ಆಳ್ವಿಕೆಯನ್ನು ಕೊನೆಗಾಣಿಸಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ.
ಜೊತೆಗೆ ದೇಶದ ಒಳಿತಿಗಾಗಿ ಕೆಲಸ ಮಾಡಿದ ಪಕ್ಷವಾಗಿದೆ. ಈ ದೇಶಕ್ಕೆ ಬಿಜೆಪಿ ಕೊಡುಗೆ ಏನು? ಈ ಮಹನೀಯರ ತ್ಯಾಗ ಬಲಿದಾನವನ್ನು ನೆನಪಿಸಿ, ಗೌರವ ಸಲ್ಲಿಸುವ ಸಲುವಾಗಿ ಮತ್ತು ಜನರಲ್ಲಿ ಜಾಗೃತಿ ಮೂಡಿಸಿವ ಸಲುವಾಗಿ ಎಐಸಿಸಿಯಿಂದ ದೇಶದೆಲ್ಲೆಡೆ ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು. ಜೆಡಿಎಸ್‌ನವರ ಬಗ್ಗೆ ಮಾತಾಡಲ್ಲ, ಅವರು ಒಂಥಾರ ಗಿರಾಕಿಗಳು. ನಾನು ಸ್ವಾತಂತ್ರ್ಯ ಬರುವುದಕ್ಕಿಂತ 12 ದಿನ ಮುಂಚೆ ಹುಟ್ಟಿದ್ದೇನೆ. ಹಾಗಂತ ಮೇಷ್ಟು್ರ ಬರೆದು ಕೊಂಡವ್ವನೇ, ಮೋದಿಯೂ ಕೂಡ ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ಗಿರಾಕಿ ಎಂದು ಅವರು ಹೇಳಿದರು.
ವರುಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್. ಧ್ರುವನಾರಾಯಣ್ ಮಾತನಾಡಿ, ಕಳೆದ 8 ವರ್ಷದ ಆಳ್ವಿಕೆಯಲ್ಲಿ ಬಿಜೆಪಿ ಕೊಡುಗೆ ಶೂನ್ಯವಾಗಿದೆ, ಬಡತನ ರೇಖೆ ಪಾತಾಳಕ್ಕಿಳಿದಿದೆ, ಹಸಿವಿನ ಪ್ರಮಾಣ ಹೆಚ್ಚಾಗಿದೆ ಎಂದ ಅವರು, ಸಿದ್ದರಾಮಯ್ಯರವರನ್ನು ಮುಖ್ಯಮಂತ್ರಿ ಮಾಡಿದ ವರುಣ ಕ್ಷೇತ್ರ ಪುಣ್ಯಭೂಮಿಯಾಗಿದೆ. ಈ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂದು ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದರು.
ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಾತನಾಡಿ, ಬಿಜೆಪಿ ಅದರ ಸಂಘ ಪರಿವಾರಗಳು ಹಿಂದೂ ಧರ್ಮದ ಹೆಸರಿನಲ್ಲಿ, ನಕಲಿ ದೇಶಭಕ್ತಿಯ ಹೆಸರಿನಲ್ಲಿ ಸಂವಿಧಾನದ ಆಶಯಗಳಿಗೆ ಭಂಗ ತಂದು ಸ್ವಾತಂತ್ರ್ಯಕ್ಕೆ ಗಂಡಾತರ ತರುವಂತಹ ಕೆಲಸ ಮಾಡುತ್ತಿದೆ. ಇಂತಹ ಕೋಮುಶಕ್ತಿ ವಿರುದ್ಧ ಜನರು ಜಾಗೃತಿಗೊಂಡು ಹೋರಾಟ ನಡೆಸಬೇಕಿದೆ. ಗಾಮೀಣ ಜನರ ಗಮನ ಸೆಳೆಯುವ ಸಲುವಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಶಾಸಕರಾದ ಪುಟ್ಟರಂಗಶೆಟ್ಟಿ, ಡಾ. ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು ಮಾತನಾಡಿದರು.
ಸಿದ್ದರಾಮೋತ್ಸವದ ಬಳಿಕ ಮಠಗಳಿಗೆ ಭೇಟಿ ನೀಡಿ ಸಿದ್ದರಾಮಯ್ಯ ಚುನಾವಣೆಗೆ ಸಜ್ಜಾದರಾ?
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ವಿಧಾನ ಪರಿಷತ್ ಸದಸ್ಯ ಡಾ. ತಿಮ್ಮಯ್ಯ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾವತಿ ಅಮರನಾಥ್, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಚ್.ಸಿ. ಬಸವರಾಜು, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಎಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಆರ್. ಮಹದೇವು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಮುಖಂಡರಾದ ಸುನೀಲ್ ಬೋಸ್, ಇಂಧನ್‌ಬಾಬು, ಲತಾಸಿದ್ದಶೆಟ್ಟಿ, ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ, ಗ್ರಾಪಂ ಅಧ್ಯಕ್ಷೆ ಸರಸ್ವತಿ ಮಹೇಶ್ ಸೇರಿದಂತೆ ಹಲವಾರು ಪ್ರಮುಖರು ಇದ್ದರು.