
ರಾಮನಗರ (ಆ.09): ಸಿದ್ದರಾಮೋತ್ಸವದಿಂದ ಬಿಜೆಪಿಯವರಿಗೇನು ಭಯ ಆಗಿಲ್ಲ. ಕಾಂಗ್ರೆಸ್‌ನಲ್ಲಿರುವ ನಾಯಕರಿಗೆ ನಡುಕ ಬಂದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ ಟಾಂಗ್ ನೀಡಿದರು. ಮಾಗಡಿ ತಾಲೂಕು ಸಂಕೀಘಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಡುಕ ಹುಟ್ಟಿರುವುದು ಯಾರಿಗೆ ಅಂದರೆ ಅದು ಕಾಂಗ್ರೆಸ್ ನಾಯಕರಿಗೆ, ಅದರಲ್ಲೂ ವಿಶೇಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ನಲ್ಲಿರುವ ನಾಯಕರಿಗೆ ಸಿಎಂ ಕುರ್ಚಿ ಯಾರಿಗೆ ಅನ್ನುವ ನಡುಕ ಶುರುವಾಗಿದೆ. ಕಾಂಗ್ರೆಸ್ ಪಕ್ಷ ಅಂದ್ರೆ ಅದು ಸಿದ್ದರಾಮಯ್ಯ ಅನ್ನುವಂತೆ ಆಗಿದೆ. ಹಾಗಾಗಿ ಬೇರೆ ಜನಾಂಗದಲ್ಲಿರುವ ನಾಯಕರು ಆ ಪಕ್ಷದಲ್ಲಿ ಯಾಕೆ ಇರುತ್ತಾರೆ. ಕಾಂಗ್ರೆಸ್ ನಲ್ಲಿ ಭವಿಷ್ಯ ಇಲ್ಲ, ನಮಗೆ ಯಾಕಪ್ಪಾ ಈ ಪಕ್ಷ ಬರೀ ಸಿದ್ದರಾಮಯ್ಯ ಅನ್ನೋದಾದ್ರೆ ಅಂತ ಯೋಚಿಸುತ್ತಾರೆ ಎಂದರು. ಸಿದ್ದರಾಮಯ್ಯಗೆ ಜೈಕಾರ ಹಾಕಿದ ಕ್ಷಣವೇ ಡಿ.ಕೆ. ಶಿವಕುಮಾರ್ ಜೈ ಆಗಿ ಹೋದರು. ಅವರೇ ಸಿದ್ದರಾಮಯ್ಯ ಅವರಿಗೆ ಜೈ ಅಂದ ಮೇಲೆ ಇನ್ನೇನು ಉಳಿದಿದೆ. ಕಾಂಗ್ರೆಸ್ ಪಕ್ಷವನ್ನು ಎಲ್ಲೊ ಒಂದು ಕಡೆ ಸಿದ್ದರಾಮಯ್ಯ ಅವರಿಗೆ ಸೀಮಿತ ಮಾಡಿಕೊಂಡಂತಾಗಿದೆ.
ಅರ್ಹತೆ ಇದ್ದವರು ಸಿಎಂ ಆಗಲಿ: ಸಚಿವ ಅಶ್ವತ್ಥ್ ನಾರಾಯಣ್
ಪಾಪ ಸಿದ್ದರಾಮಯ್ಯ ಅವರಿಗೂ 75 ವರ್ಷ ವಯಸ್ಸಾಗಿದೆ. ಹಾಗಾಗಿ ಅವರೂ ಸಹ ಸಿಎಂ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿಯಾಗಿಲ್ಲ. ಆದರೂ ಸಹ ಕಾಂಗ್ರೆಸ್ ನವರಿಗೆ ಸಿದ್ದರಾಮಯ್ಯ ಅವರೇ ಗತಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಸ್ಥಿತಿ ಏನೂ ಅನ್ನೋದನ್ನು ಸಿದ್ದರಾಮೋತ್ಸವದಲ್ಲಿ ತೋರಿಸಿಕೊಂಡಿದ್ದಾರೆ. ಆ ಪಕ್ಷಕ್ಕೆ ಯಾವುದೇ ರೀತಿಯ ನೆಲೆ ಇಲ್ಲ, ಜನರ ಬೆಂಬಲವೂ ಇಲ್ಲ. ಕೇವಲ ಹಗಲು ಕನಸು ಕಾಣುವುದು ಕಾಂಗ್ರೆಸ್ ಸ್ಥಿತಿಯಾಗಿದೆ ಎಂದು ಅಶ್ವತ್ಥ ನಾರಾಯಣ ಟೀಕಿಸಿದರು.
180 ಮನೆಗಳಿಗೆ ಹಾನಿ, 1.14 ಕೋಟಿ ಪರಿಹಾರ ವಿತರಣೆ: ಸತತ ಮಳೆಯಿಂದ ಜಿಲ್ಲೆಯಲ್ಲಿ 178 ಮನೆಗಳಿಗೆ ಹಾನಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 1.14 ಕೋಟಿ ರುಪಾಯಿ ಪರಿಹಾರ ವಿತರಿಸಲಾಗಿದೆ. ಜೊತೆಗೆ ಜಿಲ್ಲೆಯ 70 ಸಂತ್ರಸ್ತರಿಗೆ 15 ಲಕ್ಷ ರು. ಒದಗಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು. ಜಿಲ್ಲೆಯ ಹಲವು ನೆರೆಪೀಡಿತ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಮಾತನಾಡಿದ ಸಚಿವರು, ನೆರೆಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಹಣದ ಕೊರತೆ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 16 ಕೋಟಿ ರು. ಮತ್ತು ತಹಸೀಲ್ದಾರರ ಖಾತೆಯಲ್ಲಿ 2.50 ಕೋಟಿ ರು. ಹಣ ಇದೆ ಎಂದು ಸ್ಪಷ್ಟಪಡಿಸಿದರು.
ನಾಳೆಯಿಂದ ಪೋರ್ಟಲ್ ಪ್ರಾರಂಭ: ಸತತ ಮಳೆಯಿಂದಾಗಿ ರಾಮನಗರ ಜಿಲ್ಲೆಯಲ್ಲಿ ಮನೆ ಗೋಡೆ ಕುಸಿದು 2 ಮಕ್ಕಳು ಸಾವನ್ನಪ್ಪಿದರೆ, 2 ಮನೆಗಳು ಸಂಪೂರ್ಣವಾಗಿ ಮುಳುಗಿವೆ. ಸುಮಾರು 180 ಮನೆಗಳು ಶೇ.75ರಷ್ಟುಜಖಂಗೊಂಡು ಹಾನಿಗೊಂಡಿವೆ. 110 ಶಾಲೆಗಳು, 50 ಅಂಗನವಾಡಿ, 600 ವಿದ್ಯುತ್ ಕಂಬಗಳು, 300 ಟ್ರಾನ್ಸ್ ಫಾರ್ಮರ್ ನೀರು ಪಾಲಾಗಿವೆ. 2 ಕೆರೆಗಳ ಏರಿ ಒಡೆದಿವೆ, 100 ಕಿ.ಮೀ ರಸ್ತೆಗಳು , 14 ಸೇತುವೆಗಳು ಡ್ಯಾಮೇಜ್ ಆಗಿವೆ. 200 ಹೆಕ್ಟೇರ್ ತೋಟಗಾರಿಕೆ , 150 ಹೆಕ್ಟೇರ್ ಕೃಷಿ ಬೆಳೆ , 2 ಎಕರೆ ರೇಷ್ಮೆ ಕೃಷಿ ಹಾನಿಯಾಗಿದೆ ಎಂದು ತಿಳಿಸಿದರು.
ಮಳೆಯಿಂದ ಸಂಭವಿಸಿರುವ ನಷ್ಟಕ್ಕೆ ಪರಿಹಾರ ನೀಡುವ ಸಲುವಾಗಿ ನಾಳೆಯಿಂದಲೇ ಪೋರ್ಟಲ್ ಪ್ರಾರಂಭವಾಗಲಿದ್ದು, ಸಂತ್ರಸ್ತರು ಅರ್ಜಿಗಳನ್ನು ಸಲ್ಲಿಸಬೇಕು. ಮನೆ ಕಳೆದುಕೊಂಡವರು, ಬೆಳೆ ನಷ್ಟಅನುಭವಿಸಿದವರು ಸೇರಿದಂತೆ ಪ್ರತಿಯೊಬ್ಬ ಸಂತ್ರಸ್ತನಿಗೂ ಪರಿಹಾರ ವಿತರಿಸುವ ಕೆಲಸ ನಡೆಯಲಿದೆ ಎಂದು ಹೇಳಿದರು. ನೆರೆ ಸಂಬಂಧದ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇವಕ್ಕೆಲ್ಲ ಕೇಂದ್ರ ಸರ್ಕಾರದ ಸಹಾಯವೂ ಸಿಗಲಿದೆ. ಜಿಲ್ಲಾಡಳಿತ ವತಿಯಿಂದ ಸಂತ್ರಸ್ತರಿಗೆ ತ್ವರಿತವಾಗಿ ಸೂಕ್ತ ಪರಿಹಾರ ವಿತರಿಸಲಾಗುವುದು ಎಂದರು.
ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್‌ನಿಂದ ನಮ್ಮ ವರದಿ ಆಧಾರದ ಮೇಲೆ ಹಣ ರಾಜ್ಯಕ್ಕೆ ಬಿಡುಗಡೆಯಾಗುತ್ತದೆ. ಈ ಬಾರಿ ರೈತರ ಜಮೀನುಗಳು ಹಾನಿಯಾಗಿರುವುದರಿಂದ ಮುಖ್ಯಮಂತ್ರಿಗಳು ದುಪಟ್ಟು ನೆರವು ಮಾಡಿಕೊಟ್ಟು ರೈತರ ನೆರವಿಗೆ ಧಾವಿಸಿದ್ದಾರೆ ಎಂದು ತಿಳಿದರು. ಹಾನಿಯಾಗಿರುವ ಬಗ್ಗೆ ದಾಖಲೆಗಳನ್ನು ನೀಡಿ ಹೆಚ್ಚು ನೆರವು ಕೇಳಲಾಗಿದೆ ಇದರಲ್ಲಿ ಯಾವುದೇ ಅನುಮಾನ ಬೇಡ. ಮುಂಗಡವಾಗಿ ಬೇಕಾದ ನೆರವು ಪಡೆಯಲು ಅವಕಾಶವಿದೆ.ನೆರೆಯಿಂದ ಪರಿಹಾರ ನೀಡಿಲ್ಲ ಎಂದು ಕಾಂಗ್ರೆಸ್ ನವರು ಹೇಳಲಿ, ಕೊಡಿಸುವಂತಹ ಕೆಲಸ ಮಾಡಿ ಕಷ್ಟದಲ್ಲಿರುವವರ ನೆರವಿಗೆ ಬರಲಿ ಎಂದು ಹೇಳಿದರು.
ಡಿಕೆ ಸಹೋದರರ ಜತೆ ಆಡಿದ ಆಟ ನನ್ನ ಬಳಿ ನಡೆಯಲ್ಲ: ಎಚ್‌ಡಿಕೆ ಲೇವಡಿ
ಕೆರೆ - ನದಿಗಳ ಪಕ್ಕದಲ್ಲಿರುವ ಮನೆಗಳನ್ನು ವೀಕ್ಷಣೆ ಮಾಡಿ ಅವರನ್ನು ಸ್ಥಳಾಂತರಿಸುವ ಹಾಗೂ ಮನೆಗಳು ದುರಸ್ತಿ ಪಡಿಸಲಾಗುವುದು. ಸರ್ಕಾರಿ ಶಾಲೆಗಳ ಕಟ್ಟಡಕ್ಕೆ ಧಕ್ಕೆಯಾಗಿದ್ದರೆ ದುರಸ್ತಿ ಜತೆಗೆ ಹೊಸ ಕಟ್ಟಡ ನಿರ್ಮಿಸಿ ಕೊಡಲಾಗುವುದು ಎಂದರು. ಚನ್ನಪಟ್ಟಣ ತಾಲೂಕಿನ ಕೊಂಡಾಪುರ - ಬಾಣಗಳ್ಳಿಯ ಸಂಪರ್ಕ ಸೇತುವೆ ಮಾತ್ರವಲ್ಲದೆ ಕೆಲವೊಂದು ಸೇತುವೆಗಳು ಕಳಪೆ ಕಾಮಗಾರಿಯ ಕಾರಣ ಹಾನಿಗೊಂಡಿವೆ. ಈ ಬಗ್ಗೆ ಪರಿಶೀಲನೆ ನಡೆಸಿ ಕಳಪೆ ಕಾಮಗಾರಿ ಕಾರಣವಾಗಿದ್ದರೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಅಂಡರ್ ಪಾಸ್ ಗಳು ಜಲಾವೃತವಾಗಿದ್ದು ಹಾಗೂ ಸರ್ವಿಸ್ ರಸ್ತೆಗಳು ಗುಣಮಟ್ಟವಾಗಿಲ್ಲದಿರುವ ಕುರಿತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮುಂದಿನ 3 ತಿಂಗಳೊಳಗೆ ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದು ಅಶ್ವತ್ಥ ನಾರಾಯಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.