ಸಿಎಂ ಸ್ಥಾನ ಉಳಿಸಿಕೊಳ್ಳಬೇಕಾದ್ರೆ ಆರ್‌ಎಸ್‌ಎಸ್‌ ನಾಯಕರ ಪಾದ ಪೂಜೆ ಮಾಡಲೇಬೇಕು: ಸಿಎಂಗೆ ಸಿದ್ದು ಗುದ್ದು

Published : Oct 20, 2022, 12:30 AM IST
ಸಿಎಂ ಸ್ಥಾನ ಉಳಿಸಿಕೊಳ್ಳಬೇಕಾದ್ರೆ ಆರ್‌ಎಸ್‌ಎಸ್‌ ನಾಯಕರ ಪಾದ ಪೂಜೆ ಮಾಡಲೇಬೇಕು: ಸಿಎಂಗೆ ಸಿದ್ದು ಗುದ್ದು

ಸಾರಾಂಶ

ತನಿಖೆ ನಡೆಸುವ ಬದಲು ಕೇವಲ ವಿರೋಧಪಕ್ಷಗಳ ವಿರುದ್ಧ ಆರೋಪ ಮಾಡಿಕೊಂಡು ಕಾಲ ಕಳೆಯುತ್ತಾ ಮುಖ್ಯಮಂತ್ರಿ ಸ್ಥಾನದ ಮರ್ಯಾದೆ ಕಳೆಯಬೇಡಿ: ಸಿದ್ದರಾಮಯ್ಯ

ಬೆಂಗಳೂರು/ಮದ್ದೂರು(ಅ.20):  ‘ಪ್ರಸ್ತುತ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯೇ ಹೊರತು ರಾಹುಲ್‌ ಗಾಂಧಿ ಅಲ್ಲ. ನಮ್ಮ ಅವಧಿಯ ಅಕ್ರಮಗಳ ಕುರಿತು ರಾಹುಲ್‌ ಗಾಂಧಿ ತನಿಖೆ ನಡೆಸಿ ಶಿಕ್ಷೆ ನೀಡಬೇಕು ಎನ್ನುವುದಾದರೆ ಮೊದಲು ನೀವು ಹಾಗೂ ನರೇಂದ್ರ ಮೋದಿ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ನಿಮಗೆ ಧಮ್‌ ಇದ್ದರೆ ನಮ್ಮ ಅವಧಿಯ ಹಾಗೂ ನಿಮ್ಮ ಅವಧಿಯ ಅಕ್ರಮಗಳ ಬಗ್ಗೆ ಹೈಕೋರ್ಚ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಿ.’ - ಇದು ‘ಸಿದ್ದರಾಮಯ್ಯ ಅವಧಿಯ ಅಕ್ರಮದ ದಾಖಲೆಗಳನ್ನು ರಾಹುಲ್‌ ಗಾಂಧಿಗೆ ಕಳುಹಿಸಿ ಕ್ರಮಕ್ಕೆ ಒತ್ತಾಯಿಸುತ್ತೇನೆ’ ಎಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪರಿ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಕೊಟ್ಟ ಕುದುರೆ ಏರಲಿಕ್ಕಾಗದವನು ವೀರನೂ ಅಲ್ಲ, ಶೂರನೂ ಅಲ್ಲ ಎಂಬ ಗಾದೆಯನ್ನು ಮತ್ತೆ ಮತ್ತೆ ನಿಜ ಮಾಡಲು ಹೊರಟಿದ್ದೀರಿ. ತನಿಖೆ ನಡೆಸುವ ಬದಲು ಕೇವಲ ವಿರೋಧಪಕ್ಷಗಳ ವಿರುದ್ಧ ಆರೋಪ ಮಾಡಿಕೊಂಡು ಕಾಲ ಕಳೆಯುತ್ತಾ ಮುಖ್ಯಮಂತ್ರಿ ಸ್ಥಾನದ ಮರ್ಯಾದೆ ಕಳೆಯಬೇಡಿ. ಅಕ್ರಮಗಳು ಯಾರ ಕಾಲದಲ್ಲಿ ನಡೆದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳುತ್ತಾ ಬಂದಿದ್ದೇನೆ. ಇದಕ್ಕಾಗಿಯೇ ಹೈಕೋರ್ಟ್‌ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿಯೇ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

ಕಮಿಷನ್‌ ಆರೋಪ: ಜೆಡಿಎಸ್‌ ಶಾಸಕರಿಗೆ ಆಣೆ, ಪ್ರಮಾಣದ ಸುಮಲತಾ ಪಂಥಾಹ್ವಾನ

‘ಕಾಂಗ್ರೆಸ್‌ ನಾಯಕರ ಅಕ್ರಮಗಳ ಬಗ್ಗೆ ರಾಹುಲ್‌ ಗಾಂಧಿಯವರೇ ತನಿಖೆ ನಡೆಸಿ ಶಿಕ್ಷೆ ಕೊಡಬೇಕಾದರೆ ಮೊದಲು ಪ್ರಧಾನಿ ಮೋದಿ ಮತ್ತು ನೀವು ನಿಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ. ರಾಹುಲ್‌ ಗಾಂಧಿ ಅವರನ್ನು ಪ್ರಧಾನಮಂತ್ರಿ ಸ್ಥಾನದಲ್ಲಿ ನೀವು ಕಾಣ ಬಯಸಿದರೆ ನಮ್ಮದೇನೂ ಅಭ್ಯಂತರ ಇಲ್ಲ. ಆದರೆ ನಮ್ಮ ನಾಯಕರು ಜನಮತದ ಬೆಂಬಲದಿಂದಲೇ ಪ್ರಧಾನಿಯಾಗುವವರು. ನಿಮ್ಮ ಹಾಗೆ ಆಪರೇಷನ್‌ ಕಮಲದ ಮೂಲಕ ಆ ಸ್ಥಾನಕ್ಕೆ ಏರುವವರಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

ಖಾಲಿ ಡಬ್ಬದ ಸದ್ದಿಗೆ ಹೆದರಲ್ಲ:

‘ನಿಮ್ಮ ಖಾಲಿ ಡಬ್ಬದ ಸದ್ದಿಗೆ ಹೆದರುವವರು ಯಾರೂ ಇಲ್ಲ. ನಿಮ್ಮ ಧಮ್‌ -ತಾಕತ್‌ಗಳ ಮಾತುಗಳೆಲ್ಲವೂ ಸಾರ್ವಜನಿಕ ಸಭೆಗಳಿಗಷ್ಟೇ ಸೀಮಿತ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಬೇಕಾದರೆ ಮತ್ತೆ ನೀವು ಆರ್‌ಎಸ್‌ಎಸ್‌ ನಾಯಕರ ಮನೆಗೆ ತೆರಳಿ ಪಾದ ಪೂಜೆ ಮಾಡಲೇಬೇಕು. ಸಾರ್ವಜನಿಕ ಸಭೆಗಳಲ್ಲಿ ಅಬ್ಬರಿಸುತ್ತಿರುವ ನಿಮಗೆ, ನೀವು 2,500 ಕೋಟಿ ದುಡ್ಡು ಕೊಟ್ಟು ಮುಖ್ಯಮಂತ್ರಿಯಾಗಿದ್ದೀರಿ ಎಂದು ಆರೋಪ ಮಾಡುತ್ತಿರುವ ನಿಮ್ಮದೇ ಪಕ್ಷದ ಒಬ್ಬ ಶಾಸಕನ ವಿರುದ್ಧ ಸೊಲ್ಲೆತ್ತುವ ಧೈರ್ಯ ಇಲ್ಲ. ನಿಮ್ಮದು ಇದೆಂತಹ ಹೇಡಿತನ?’ ಎಂದು ಅವರು ಪ್ರಶ್ನಿಸಿದ್ದಾರೆ.

ಡಿಕೆಶಿ ಪ್ರಕರಣ ರಾಹುಲ್‌ಗೆ ಕಳಿಸಿ:

‘ಕಾಂಗ್ರೆಸ್‌ ನಾಯಕರ ಬಗ್ಗೆ ರಾಹುಲ… ಗಾಂಧಿ ಅವರಿಂದಲೇ ನೀವು ತನಿಖೆ ಮಾಡಿಸುವುದಾದರೆ ಡಿ.ಕೆ.ಶಿವಕುಮಾರ್‌ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಆದಾಯ ತೆರಿಗೆ ಇಲಾಖೆಗಳನ್ನು (ಐಟಿ) ಯಾಕೆ ಛೂ ಬಿಟ್ಟಿದ್ದೀರಿ? ಈ ಸಂಸ್ಥೆಗಳು ನಡೆಸುತ್ತಿರುವ ತನಿಖೆಯನ್ನು ನಿಲ್ಲಿಸಿ, ಆ ಪ್ರಕರಣಗಳನ್ನೆಲ್ಲ ರಾಹುಲ… ಗಾಂಧಿಯವರಿಗೆ ಕಳಿಸಿಬಿಡಿ’ ಎಂದು ಸಿದ್ದರಾಮಯ್ಯ ಛೇಡಿಸಿದ್ದಾರೆ.

ಸಿದ್ದು ಅವಧಿಯಲ್ಲಿ ನಡೆದ ಭ್ರಷ್ಟಾಚಾರ ದೇಶದಲ್ಲೆಲ್ಲೂ ನಡೆದಿಲ್ಲ: ಸಿಎಂ ಬೊಮ್ಮಾಯಿ

ತನಿಖೆ ನಡೆಸಲು ದಮ್‌ ಇಲ್ಲ:

ಈ ಮಧ್ಯೆ, ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದರು. ನೀವು ವಿಪಕ್ಷದಲ್ಲಿದ್ದಾಗಲೇ ಕರ್ನಾಟಕ, ಕಾಂಗ್ರೆಸ್‌ನ ಎಟಿಎಂ ಅಂತ ಏಕೆ ಹೇಳಲಿಲ್ಲ. ಅಧಿಕಾರಕ್ಕೆ ಬಂದು ಮೂರು ವರ್ಷವಾಯಿತು. ಆದರೂ, ಈ ಬಗ್ಗೆ ಏಕೆ ತನಿಖೆ ನಡೆಸಲಿಲ್ಲ. ಈಗ ನೀವು ಅಧಿಕಾರದಲ್ಲಿ ಇದ್ದೀರಿ. ಆಡಳಿತ ನಡೆಸುವವರ ಮೇಲೆ ಆರೋಪ ಬಂದರೆ ಜನರಿಗೆ ಸತ್ಯವನ್ನು ಹೇಳಬೇಕು. ನಿಮ್ಮ ಸರ್ಕಾರದಲ್ಲೂ ಭ್ರಷ್ಟಾಚಾರ ಇತ್ತು ಎಂದರೆ ಏನರ್ಥ. ಸರಿ, ಹಾಗಾದರೆ ನಿಮ್ಮದು-ನಮ್ಮದು ಎರಡನ್ನೂ ಸೇರಿಸಿ ತನಿಖೆ ಮಾಡಿಸಿ ಅಂತ ಹೇಳ್ತಿದ್ದೀವಲ್ಲಾ. ಏಕೆ ಮಾಡಿಸುತ್ತಿಲ್ಲ? ಅದಕ್ಕೆಲ್ಲಾ ದಮ್‌ ಮತ್ತು ನೈತಿಕತೆ ಬೇಕು. ನಿಮ್ಮ ಕೈಲಿ ಏನೂ ಆಗುವುದಿಲ್ಲ. ಭ್ರಷ್ಟಾಚಾರದ ತನಿಖೆ ನಡೆಸಲು ಸಿಎಂಗೆ ದಮ್‌ ಇಲ್ಲ. ಬೊಮ್ಮಾಯಿಯವರು ಈ ರಾಜ್ಯ ಕಂಡ ಅತ್ಯಂತ ದುರ್ಬಲ ಹಾಗೂ ಕಳಪೆ ಮುಖ್ಯಮಂತ್ರಿ ಎಂದು ಜರಿದರು.

ರಾಹುಲ್‌ ಪ್ರಧಾನಿ ಅಲ್ಲ

ದೇಶದ ಪ್ರಧಾನಿ ಮೋದಿಯೇ ಹೊರತು ರಾಹುಲ್‌ ಅಲ್ಲ. ರಾಹುಲ್‌ ಗಾಂಧಿಯೇ ತನಿಖೆ ನಡೆಸಬೇಕು ಅಂತಾದರೆ ಮೋದಿ ಮತ್ತು ನೀವು ನಿಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ. ನಿಮಗೆ ದಮ್‌ ಇದ್ದರೆ ನಮ್ಮ ಹಾಗೂ ನಿಮ್ಮ ಎರಡೂ ಅವಧಿಯ ಅಕ್ರಮಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.  
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ - ಸಿಎಂ ಡಿಸಿಎಂ