‘ನಮಗೇ ನೀರಿಲ್ಲ. ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಎಲ್ಲಿಂದ ನೀರು ಕೊಡೋದು?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಈ ಮೂಲಕ 30 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಆಗ್ರಹಿಸುತ್ತಿರುವ ತಮಿಳುನಾಡಿನ ಬೇಡಿಕೆಯನ್ನು ತಳ್ಳಿಹಾಕಿದ್ದಾರೆ.
ಮೈಸೂರು (ಆ.13): ‘ನಮಗೇ ನೀರಿಲ್ಲ. ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಎಲ್ಲಿಂದ ನೀರು ಕೊಡೋದು?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಈ ಮೂಲಕ 30 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಆಗ್ರಹಿಸುತ್ತಿರುವ ತಮಿಳುನಾಡಿನ ಬೇಡಿಕೆಯನ್ನು ತಳ್ಳಿಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಕಾವೇರಿ ನೀರು ಬಿಡುವಂತೆ ತಮಿಳುನಾಡು ಮತ್ತೆ ಕ್ಯಾತೆ ಆರಂಭಿಸಿದೆ. ಈ ಬಾರಿ ಕೇರಳದಲ್ಲಿ ನೀರಿಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ. ಕೊಡಗಿನಲ್ಲೂ ಮಳೆಯಾಗಿಲ್ಲ. ಹೀಗಾಗಿ ಈ ಸಂಕಷ್ಟವನ್ನು ಎರಡೂ ರಾಜ್ಯಗಳು ಹಂಚಿಕೆ ಮಾಡಿಕೊಳ್ಳಬೇಕಿದೆ. ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿ ತಜ್ಞರ ಜತೆಗೆ ಚರ್ಚಿಸುತ್ತೇನೆ ಎಂದು ಹೇಳಿದರು.
ಖಾಸಗಿ ಬಸ್, ಕ್ಯಾಬ್, ಆಟೋಗೆ ಪರಿಹಾರ ಪ್ಯಾಕೇಜ್?: ‘ಶಕ್ತಿ’ ಯೋಜನೆ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ರಾಜ್ಯದ ಖಾಸಗಿ ಸಾರಿಗೆ ಉದ್ಯಮ ಸಂಕಷ್ಟದಲ್ಲಿದ್ದು, ಅದಕ್ಕೆ ರಾಜ್ಯ ಸರ್ಕಾರದಿಂದ ಕೈಗೊಳ್ಳಬಹುದಾದ ಪರಿಹಾರ ಕ್ರಮಗಳು ಹಾಗೂ ಸಾರಿಗೆ ಉದ್ಯಮಕ್ಕಾಗಿರುವ ನಷ್ಟದ ಬಗ್ಗೆ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರಿಗೆ ಇಲಾಖೆಗೆ ಸೂಚಿಸಿದ್ದಾರೆ. ವರದಿ ಆಧರಿಸಿ ಅವರು ಪರಿಹಾರ ಘೋಷಣೆ ಮಾಡುವ ಸಾಧ್ಯತೆ ಇದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಕೊರೋನಾ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಖಾಸಗಿ ಸಾರಿಗೆ ಕ್ಷೇತ್ರ ನಷ್ಟದಲ್ಲಿದೆ. ಅದರ ಜತೆಗೆ ಇದೀಗ ‘ಶಕ್ತಿ’ ಯೋಜನೆ ಜಾರಿ ನಂತರ ಖಾಸಗಿ ಬಸ್, ಕ್ಯಾಬ್ ಮತ್ತು ಆಟೋಗಳಿಗೆ ಪ್ರಯಾಣಿಕರ ಕೊರತೆ ಉಂಟಾಗಿ ಮತ್ತಷ್ಟುಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಮರುಪರೀಕ್ಷೆ ನಡೆಸದೆ ನೇಮಕ ಮಾಡಿ: ಎಸ್‌ಐ ಅಭ್ಯರ್ಥಿಗಳು
ಹೀಗಾಗಿ ರಾಜ್ಯ ಸರ್ಕಾರ ತಮಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಖಾಸಗಿ ಬಸ್, ಕ್ಯಾಬ್ ಮತ್ತು ಆಟೋ ಸಂಘಟನೆಗಳು ಜುಲೈ 26ರಂದು ಸಾರಿಗೆ ಬಂದ್ ಮಾಡುವ ಕುರಿತು ಘೋಷಿಸಿದ್ದವು. ಆ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಂದ್‌ಗೆ ಕರೆ ನೀಡಿದ್ದ ಸಂಘಟನೆಗಳ ಮುಖಂಡರೊಂದಿಗೆ ಎರಡು ಬಾರಿ ಮಾತುಕತೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಆ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಚರ್ಚಿಸಿದ್ದರು. ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ರಾಮಲಿಂಗಾರೆಡ್ಡಿ ಅವರು ಸಾರಿಗೆ ಇಲಾಖೆಗೆ ಪರಿಹಾರ ಕ್ರಮಗಳ ಕುರಿತು ವರದಿ ನೀಡುವಂತೆ ತಿಳಿಸಿದ್ದಾರೆ. ಅದರಲ್ಲೂ ಸಾರಿಗೆ ಕ್ಷೇತ್ರಕ್ಕೆ ಆಗಿರುವ ನಷ್ಟದ ವರದಿ ನೀಡುವಂತೆಯೂ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿಕೆಶಿ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ: ವಿ.ಸೋಮಣ್ಣ
ಸಾರಿಗೆ ಬಂದ್‌ಗೆ 19ಕ್ಕೆ ಸಭೆ: ಸಾರಿಗೆ ಸಚಿವರು ಭರವಸೆ ನೀಡಿದಂತೆ ಯಾವುದೇ ಪರಿಹಾರ ಕ್ರಮಗಳನ್ನು ಘೋಷಿಸದ ಕಾರಣ, ಆಗಸ್ಟ್ 10ರಂದು ಮತ್ತೆ ಸಾರಿಗೆ ಬಂದ್ ಮಾಡುವುದಾಗಿ ಸಂಘಟನೆಗಳು ತಿಳಿಸಿದ್ದವು. ಆದರೆ, ಸಾರಿಗೆ ಸಚಿವರು ಸಂಘಟನೆಗಳ ಮುಖಂಡರೊಂದಿಗೆ ಅನೌಪಚಾರಿಕವಾಗಿ ಮಾತನಾಡಿ, ‘ಸಾರಿಗೆ ಉದ್ಯಮದ ಸಮಸ್ಯೆಯನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇನೆ. ಅವರು ಪರಿಹಾರ ಕ್ರಮಗಳ ಕುರಿತು ವರದಿ ಪಡೆಯುತ್ತಿದ್ದಾರೆ’ ಎಂದು ತಿಳಿಸಿದ್ದಾರೆ. ಹೀಗಾಗಿ ಆಗಸ್ಟ್ 18 ಅನ್ನು ಅಂತಿಮ ಗಡುವಾಗಿಸಿಕೊಂಡಿರುವ ಸಾರಿಗೆ ಸಂಘಟನೆಗಳು, ಆಗಸ್ಟ್ 19ಕ್ಕೆ ಸಭೆ ನಡೆಸಿ ಬಂದ್ ಕುರಿತು ನಿರ್ಧಾರ ತೆಗೆದುಕೊಳ್ಳಲಿವೆ.