ರಾಜೀನಾಮೆ: ಯಡಿಯೂರಪ್ಪ ಬಗ್ಗೆ ಅನುಕಂಪ ವ್ಯಕ್ತಪಡಿಸಿದ ಸಿದ್ದರಾಮಯ್ಯ

By Suvarna NewsFirst Published Jul 26, 2021, 3:48 PM IST
Highlights

* ಯಡಿಯೂರಪ್ಪ ರಾಜೀನಾಮೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ
* ಬಿಜೆಪಿ ವಿರುದ್ಧ ಕಿಡಿಕಾರಿದ ಮಾಜಿ ಸಿಎಂ ಸಿದ್ದರಾಮಯ್ಯ
* ಯಡಿಯೂರಪ್ಪನವರ ಬಗ್ಗೆ ನನಗೆ ಅನುಕಂಪ ವ್ಯಕ್ತಪಡಿಸಿದ ಮಾಜಿ ಸಿಎಂ

ಬೆಂಗಳೂರು, (ಜು.26): ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪನವರ ಬಗ್ಗೆ ನನಗೆ ಅನುಕಂಪವಿದೆ. ಅವರಿಗೆ ವಯಸ್ಸಾಯಿತೆಂದು ಅವರ ಪಕ್ಷದ ದೆಹಲಿ ನಾಯಕರೇ ಹೇಳುತ್ತಿದ್ದಾರೆ. ಅವರ ಮುಂದಿನ ಜೀವನ ಸುಖಕರವಾಗಿರಲಿ, ಅವರಿಗೆ ನೆಮ್ಮದಿ ಸಿಗಲಿ ಎಂದಷ್ಟೇ ನಾನು ಆಶಿಸುತ್ತೇನೆ ಎಂದಿದ್ದಾರೆ.

'ಆಡಿಯೋದ ಮಿಮಿಕ್ರೀ ಆರ್ಟಿಸ್ಟ್ ನಳಿನ್ ಕುಮಾರ್ ಕಟೀಲ್ ಎನ್ನುವುದು ಸಾಬೀತಾಯ್ತು'

ಬಿಎಸ್ ವೈ ರಾಜೀನಾಮೆ ನಿರೀಕ್ಷಿತವಾದುದು ಎಂದಿರುವ ಸಿದ್ದರಾಮಯ್ಯ, ಹಿಂದೆಯೇ ನಾನು ಹೇಳಿರುವುದು ನಿಜವಾಗಿದೆ. ಈ ಬಗ್ಗೆ ಸಂಭ್ರಮ ಪಡುವಂತಹದ್ದೇನೂ ಇಲ್ಲ. ಭ್ರಷ್ಟ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಿದಾಗಲೇ ನಾವು ಸಂಭ್ರಮಿಸುವುದು. ಆ ದಿನಗಳು ಸದ್ಯದಲ್ಲಿಯೇ ಬರಲಿದೆ ಎಂದು ನುಡಿದಿದ್ದಾರೆ. .

ಯಡಿಯೂರಪ್ಪನವರು ಹೋದರೂ, ಇನ್ನೊಬ್ಬರು ಬಂದರೂ ಅದರ ಭ್ರಷ್ಟತೆಯ ಆತ್ಮ ಬದಲಾಗುವುದಿಲ್ಲ. ದುಡ್ಡಿನ ಬಲದಿಂದ ನಡೆಸಿದ್ದ ಆಪರೇಷನ್ ಕಮಲ ಎಂಬ ಅನೈತಿಕ ಹಾದಿಯಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ತೊಲಗಿದಾಗಲೇ ಕರ್ನಾಟಕದ ಜನತೆಗೆ ನೆಮ್ಮದಿ ಎಂದು ಕುಟುಕಿದ್ದಾರೆ.

ಚುನಾವಣೆಯಲ್ಲಿ ಸೋತಾಗ ಮುಖ್ಯಮಂತ್ರಿ ರಾಜೀನಾಮೆ ಕೊಡುವುದು ಪ್ರಜಾಪ್ರಭುತ್ವದ ರೂಢಿ. ಆದರೆ ಶಾಸನ ಸಭೆಯಲ್ಲಿ ಬಹುಮತ ಹೊಂದಿದ್ದ ಪಕ್ಷದ ಮುಖ್ಯಮಂತ್ರಿ ರಾಜೀನಾಮೆ ನೀಡಿದಾಗ, ಅದಕ್ಕೆ ಕಾರಣವನ್ನು ನೀಡಬೇಕಾಗುತ್ತದೆ. ಬಿಎಸ್ ವೈ ರಾಜೀನಾಮೆಗೆ ಕಾರಣ ಅವರ ವಯಸ್ಸೇ ಇಲ್ಲವೇ ಅವರ ಸರ್ಕಾರದ ಭ್ರಷ್ಟಾಚಾರವೇ?

BJP ಎಂದರೆ ‘ಭ್ರಷ್ಟಾಚಾರ ಜಾರಿ ಪಾರ್ಟಿ’. ಬಿಎಸ್ ವೈ ಭ್ರಷ್ಟಾಚಾರದ ಬಗ್ಗೆ ಅವರ ಪಕ್ಷದ ಶಾಸಕರೇ ಬಾಯ್ತುಂಬ ಮಾತನಾಡಿದ್ದಾರೆ. 'ನಾ ಖಾವುಂಗಾ, ನಾ ಖಾನೆ ದೂಂಗಾ'ಎಂದು ಹೇಳುತ್ತಿರುವ ನರೇಂದ್ರ ಅವರಿಗೆ ಒಂದಿಷ್ಟು ಮರ್ಯಾದೆ ಇದ್ದರೆ, ಯಡಿಯೂರಪ್ಪನವರ ಮೇಲಿನ ಭ್ರಷ್ಟಾಚಾರದ ಆರೋಪದ ಬಗ್ಗೆ ತನಿಖೆಗೆ ಆದೇಶಿಸಲಿ ಎಂದು ಸವಾಲು ಹಾಕಿದ್ದಾರೆ.

click me!